IND vs PAK: ಮಿಂಚಿದ ಅರುಂಧತಿ, ಶ್ರೇಯಾಂಕ; ಭಾರತಕ್ಕೆ 106 ರನ್​ಗಳ ಗೆಲುವಿನ ಗುರಿ ನೀಡಿದ ಪಾಕಿಸ್ತಾನ

|

Updated on: Oct 06, 2024 | 5:28 PM

Women's T20 World Cup 2024: ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಹಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 105 ರನ್ ಕಲೆಹಾಕಿದೆ.

IND vs PAK: ಮಿಂಚಿದ ಅರುಂಧತಿ, ಶ್ರೇಯಾಂಕ; ಭಾರತಕ್ಕೆ 106 ರನ್​ಗಳ ಗೆಲುವಿನ ಗುರಿ ನೀಡಿದ ಪಾಕಿಸ್ತಾನ
ಭಾರತ- ಪಾಕಿಸ್ತಾನ
Follow us on

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಹಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 105 ರನ್ ಕಲೆಹಾಕಿದೆ. ಇದರೊಂದಿಗೆ ಟೀಂ ಇಂಡಿಯಾಗೆ ಗೆಲ್ಲಲು 106 ರನ್​ಗಳ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಅರುಂಧತಿ ರೆಡ್ಡಿ ಪ್ರಮುಖ 3 ವಿಕೆಟ್ ಕಬಳಿಸಿದರೆ, ಕನ್ನಡತಿ ಶ್ರೇಯಾಂಕ ಪಾಟೀಲ್ 2 ವಿಕೆಟ್ ಪಡೆದರು. ಉಳಿದಂತೆ ರೇಣುಕಾ, ದೀಪ್ತಿ, ಆಶಾ ತಲಾ ಒಂದೊಂದು ವಿಕೆಟ್ ಪಡೆದರು.

ಮೊದಲ ಓವರ್​ನಲ್ಲೇ ಆಘಾತ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್​ನಲ್ಲೇ ರೇಣುಕಾ ಸಿಂಗ್, ಗುಲ್ ಫಿರೋಜಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗಟ್ಟಿದರು.  ನಂತರ ಎರಡನೇ ವಿಕೆಟ್​ಗೆ 24 ರನ್​ಗಳ ಜೊತೆಯಾಟ ಕಂಡುಬಂತು ಈ ವೇಳೆ ದಾಳಿಗಿಳಿದ ದೀಪ್ತಿ, ಸಿದ್ರಾ ಅಮೀನ್ ಅವರನ್ನು 8 ರನ್​ಗಳಿಗೆ ಬಲಿ ಪಡೆದರು. ಆ ನಂತರವೂ ನಿಯಮಿತ ಅಂತರದಲ್ಲಿ ಪಾಕ್ ತಂಡದ ವಿಕೆಟ್​ಗಳು ಪತನವಾಗುತ್ತಲೇ ಇದ್ದವು.

ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಾಜಿ ನಾಯಕಿ ನಿದಾ ದರ್ ಗರಿಷ್ಠ 28 ರನ್​ಗಳ ಇನ್ನಿಂಗ್ಸ್ ಆಡಿದರು. ನಿದಾ ಅವರು ವಿಕೆಟ್​ನಲ್ಲಿ ನಿಲ್ಲದೆ ಹೋಗಿದ್ದರೆ, ಪಾಕ್ ತಂಡ ಶತಕದ ಗಡಿಯನ್ನೂ ಸಹ ದಾಟುತ್ತಿರಲಿಲ್ಲ.  ನಿದಾಗೆ ಸಾಥ್ ನೀಡಿದ ನಾಯಕಿ ಫಾತಿಮಾ 13 ರನ್​ಗಳ ಕಾಣಿಕೆ ನೀಡಿದರೆ, ಕೊನೆಯಲ್ಲಿ ಸೈಯದಾ ಅರೂಬ್ ಶಾ 14 ರನ್​ಗಳ ಇನ್ನಿಂಗ್ಸ್ ಆಡಿದರು.

ಮಿಂಚಿದ ಅರುಂಧತಿ, ಶ್ರೇಯಾಂಕ

ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಅರುಂಧತಿ ರೆಡ್ಡಿ 4 ಓವರ್​ಗಳಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರೆ,  ಪಂದ್ಯದುದ್ದಕ್ಕೂ ರನ್​ಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಿದ ಕನ್ನಡತಿ ಶ್ರೇಯಾಂಕ ಪಾಟೀಲ್ ತಮ್ಮ ಖೋಟಾದ 4 ಓವರ್​ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇದರಲ್ಲಿ 1 ಮೇಡನ್ ಓವರ್​ ಕೂಡ ಸೇರಿತ್ತು.

ಉಭಯ ತಂಡಗಳು

ಪಾಕಿಸ್ತಾನ ತಂಡ: ಮುನಿಬಾ ಅಲಿ (ವಿಕೆಟ್ ಕೀಪರ್), ಗುಲ್ ಫಿರೋಜಾ, ಸಿದ್ರಾ ಅಮೀನ್, ಒಮಯಾ ಸೊಹೈಲ್, ನಿದಾ ದಾರ್, ತುಬಾ ಹಸನ್, ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಅರುಬ್ ಶಾ, ನಶ್ರ್ ಸಂಧು, ಸಾದಿಯಾ ಇಕ್ಬಾಲ್.

ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಎಸ್ ಸಜ್ನಾ, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ರೇಣುಕಾ ಠಾಕೂರ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Sun, 6 October 24