
2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ (WTC Final 2025) ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗುತ್ತಿವೆ. ಕ್ರಿಕೆಟ್ ಜಗತ್ತಿಗೆ ಹೊಸ ಟೆಸ್ಟ್ ಚಾಂಪಿಯನ್ ಸಿಗುತ್ತದೆಯೇ ಅಥವಾ ಆಸ್ಟ್ರೇಲಿಯಾ ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆಲ್ಲುತ್ತದೆಯೇ ಎಂಬುದು ಜೂನ್ 16 ರಂದು ಗೊತ್ತಾಗಲಿದೆ. ಆದರೆ ಅದಕ್ಕೂ ಮುನ್ನ ಐಸಿಸಿ (ICC) ಈ ಸ್ಪರ್ಧೆಯ ಬಹುಮಾನದ ಮೊತ್ತವನ್ನು ಘೋಷಿಸಿದೆ. ಆ ಪ್ರಕಾರ ವಿಜೇತ ತಂಡಕ್ಕೆ ಸುಮಾರು 30 ಕೋಟಿ ರೂ. ಬಹುಮಾನ ಸಿಕ್ಕರೆ, ರನ್ನರ್ ಅಪ್ ತಂಡಕ್ಕೆ 18 ಕೋಟಿ ರೂ. ಸಿಗಲಿದೆ. ಫೈನಲಿಸ್ಟ್ ತಂಡಗಳಿಗೆ ಹೊರತಾಗಿ ಇತರ ತಂಡಗಳಿಗೂ ಐಸಿಸಿಯಿಂದ ಬಹುಮಾನ ದೊರಕಲಿದೆ. ಅಂದರೆ ಈ ಸೀಸನ್ನ ಫೈನಲ್ಗೇರುವಲ್ಲಿ ವಿಫಲವಾದ ಟೀಂ ಇಂಡಿಯಾಕ್ಕೂ (Team India) 10 ಕೋಟಿ ಗೂ ಅಧಿಕ ಮೊತ್ತ ಬಹುಮಾನವಾಗಿ ಸಿಗಲಿದೆ.
ವಾಸ್ತವವಾಗಿ ಸತತ ಮೂರನೇ ಬಾರಿಗೆ ಫೈನಲ್ಗೇರುವ ಅವಕಾಶ ಟೀಂ ಇಂಡಿಯಾಕ್ಕಿತ್ತು. ಆದರೆ ಸತತ ಎರಡು ಸರಣಿಗಳನ್ನು ಸೋತ ಭಾರತದ ಡಬ್ಲ್ಯುಟಿಸಿ ಫೈನಲ್ ಕನಸು ಭಗ್ನವಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಯನ್ನು 3-0 ಅಂತರದಿಂದ ಸೋತಿದ್ದ ಭಾರತ ಆ ಬಳಿಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಸೋತಿತ್ತು. ಹೀಗಾಗಿ 50 ರಷ್ಟು ಗೆಲುವಿನ ಶೇಕಡಾವಾರುವಿನೊಂದಿಗೆ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದಾಗ್ಯೂ ಟೀಂ ಇಂಡಿಯಾ ಐಸಿಸಿಯಿಂದ ಬಹುಮಾನದ ಹಣವನ್ನು ಪಡೆಯಲಿದೆ. ಭಾರತ ಮಾತ್ರವಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಪ್ರತಿಯೊಂದು ತಂಡಕ್ಕೂ ಐಸಿಸಿ ಬಹುಮಾನದ ಹಣವನ್ನು ಘೋಷಿಸಿದೆ.
ಆ ಪ್ರಕಾರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವುದು ಭಾರತಕ್ಕೆ 1.4 ಮಿಲಿಯನ್ ಅಮೆರಿಕನ್ ಡಾಲರ್‌ಗಳು, ಅಂದರೆ 12 ಕೋಟಿ 85 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಹಾಗೆಯೇ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡವು 1.2 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 10 ಕೋಟಿ 26 ಲಕ್ಷ ರೂ.ಗಳನ್ನು ಪಡೆಯಲಿದೆ. ಐದನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡವು 8.21 ಕೋಟಿ ರೂ, ಆರನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡವು 7.18 ಕೋಟಿ ರೂ, ಏಳನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡವು 6.15 ಕೋಟಿ ರೂ ಮತ್ತು ಎಂಟನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡವು 5.13 ಕೋಟಿ ರೂ. ಹಣವನ್ನು ಪಡೆಯಲಿದೆ. ಕೊನೆಯ ಸ್ಥಾನದಲ್ಲಿರುವ ಪಾಕಿಸ್ತಾನ ತಂಡವು 480,000 ಅಮೆರಿಕನ್ ಡಾಲರ್ ಪಡೆಯಲಿದೆ.
WTC Final 2025: ಡಬ್ಲ್ಯುಟಿಸಿ ಫೈನಲ್ ವಿಜೇತರಿಗೆ ದಾಖಲೆ ಮೊತ್ತದ ಬಹುಮಾನ; ಜಯ್ ಶಾ ಘೋಷಣೆ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮೂರನೇ ಆವೃತ್ತಿಯಲ್ಲಿ ಟೀಂ ಇಂಡಿಯಾ ಒಟ್ಟು 19 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 9 ಪಂದ್ಯಗಳಲ್ಲಿ ಗೆದ್ದು ಎಂಟು ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇನ್ನು ಪಾಕಿಸ್ತಾನದ ಬಗ್ಗೆ ಹೇಳುವುದಾದರೆ, ಆಡಿದ ಒಟ್ಟು 14 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದು, 9 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಹೀಗಾಗಿ ಮೂರನೇ ಸ್ಥಾನದಲ್ಲಿರುವ ಭಾರತಕ್ಕೆ 12 ಕೋಟಿ 85 ಲಕ್ಷ ರೂ. ಬಹುಮಾನ ಸಿಕ್ಕರೆ ಕೊನೆಯ ಸ್ಥಾನದಲ್ಲಿರುವ ಪಾಕಿಸ್ತಾನಕ್ಕೆ ಕೇವಲ 4 ಕೋಟಿ 11 ಲಕ್ಷ ರೂ. ಹಣ ಸಿಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Thu, 15 May 25