
ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಸಾಹಿಲ್ ಚೌಹಾನ್ ಹೆಸರಿನಲ್ಲಿದೆ. ಸೈಪ್ರಸ್ ವಿರುದ್ಧದ ಟಿ20 ಪಂದ್ಯದಲ್ಲಿ ಎಸ್ಟೋನಿಯಾ ಪರ ಕಣಕ್ಕಿಳಿದ ಸಾಹಿಲ್ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂಡಿಬಂದ ಅತೀ ವೇಗದ ಸೆಂಚುರಿ. ಇದಾಗ್ಯೂ ಟೀಮ್ ಇಂಡಿಯಾದ ಮಾಜಿ ಆಟಗಾರರೊಬ್ಬರು 20 ಎಸೆತಗಳಲ್ಲಿ ಶತಕ ಪೂರೈಸಿದ್ದರು ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ. ಆದರೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಲ್ಲ. ಬದಲಾಗಿ ಪ್ರತಿಷ್ಠಿತ ಕ್ಲಬ್ ಮ್ಯಾಚ್ನಲ್ಲಿ. ಹೀಗೆ ವಿಸ್ಫೋಟಕ ಸೆಂಚುರಿ ಸಿಡಿಸಿದ ಬ್ಯಾಟರ್ ಹೆಸರು ವೃದ್ಧಿಮಾನ್ ಸಾಹ.
2018 ರಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಆಯೋಜಿಸಿದ್ದ ಟಿ20 ಟೂರ್ನಿಯಲ್ಲಿ ವೃದ್ಧಿಮಾನ್ ಸಾಹ ಕೇವಲ 20 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಬಂಗಾಳ ನಾಗ್ಪುರ ರೈಲ್ವೇಸ್ ಹಾಗೂ ಮೋಹನ್ ಬಗಾನ್ ಕ್ರಿಕೆಟ್ ಕ್ಲಬ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೋಹನ್ ಬಗಾನ್ ಕ್ರಿಕೆಟ್ ಕ್ಲಬ್ ಪರ ಆರಂಭಿಕನಾಗಿ ಕಣಕ್ಕಿಳಿದ ವೃದ್ಧಿಮಾನ್ ಸಾಹ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಷ್ಟೇ ಅಲ್ಲದೆ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸುವ ಮೂಲಕ ಕೇವಲ 20 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಮೊದಲ ಎಸೆತದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ವೃದ್ಧಿಮಾನ್ ಸಾಹ ಈ ಪಂದ್ಯದಲ್ಲಿ ಸಿಡಿಸಿದ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 14. ಹಾಗೆಯೇ 4 ಫೋರ್ಗಳನ್ನು ಸಹ ಬಾರಿಸಿದ್ದರು. ಈ ಮೂಲಕ 20 ಎಸೆತಗಳಲ್ಲಿ ಅಜೇಯ 102 ರನ್ ಬಾರಿಸಿದ್ದರು.
ವೃದ್ಧಿಮಾನ್ ಸಾಹ ಅವರ ಈ ಸಿಡಿಲಬ್ಬರದ ಸೆಂಚುರಿ ನೆರವಿನೊಂದಿಗೆ ಮೋಹನ್ ಬಗಾನ್ ಕ್ರಿಕೆಟ್ ಕ್ಲಬ್ ತಂಡವು ಬಂಗಾಳ ನಾಗ್ಪುರ ರೈಲ್ವೇಸ್ ನೀಡಿದ 152 ರನ್ಗಳ ಗುರಿಯನ್ನು ಕೇವಲ 7 ಓವರ್ಗಳಲ್ಲಿ ಚೇಸ್ ಮಾಡಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. 7 ವರ್ಷಗಳ ಹಿಂದೆ ವೃದ್ಧಿಮಾನ್ ಸಾಹ ಬಾರಿಸಿದ ಈ ವಿಸ್ಫೋಟಕ ಶತಕ ದೇಶೀಯ ಅಂಗಳದಲ್ಲಿ ಮೂಡಿಬಂದ ಅತ್ಯಂತ ವೇಗದ ಸೆಂಚುರಿ ಎಂದು ಪರಿಗಣಿಸಲಾಗಿದೆ.
2010 ರಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ವೃದ್ಧಿಮಾನ್ ಸಾಹ 40 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ 56 ಇನಿಂಗ್ಸ್ ಆಡಿರುವ ಅವರು 3 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಒಟ್ಟು 1353 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ: ಸಿಕ್ಸ್ ಸಿಡಿಸಿಯೇ ಭರ್ಜರಿ ದಾಖಲೆ ಬರೆದ ಫಿಲ್ ಸಾಲ್ಟ್
ಹಾಗೆಯೇ ಭಾರತದ ಪರ 9 ಏಕದಿನ ಪಂದ್ಯಗಳಲ್ಲೂ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿರುವ ಸಾಹ ಕೇವಲ 41 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ 2014 ರ ಬಳಿಕ ಅವರಿಗೆ ಭಾರತ ಏಕದಿನ ತಂಡದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಈ ವರ್ಷದ ಆರಂಭದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ವೃದ್ಧಿಮಾನ್ ಸಾಹ ಇದೀಗ ಬಂಗಾಳ ಅಂಡರ್-23 ತಂಡದ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.