IPL 2026: ಆರ್‌ಸಿಬಿ ನಾಯಕನ ಈ ಎರಡು ಗುಣಗಳನ್ನು ಮನಸಾರೆ ಮೆಚ್ಚಿಕೊಂಡ ಶ್ರೇಯಸ್ ಅಯ್ಯರ್
Rajat Patidar's RCB Dominance: ಹಾಲಿ ಚಾಂಪಿಯನ್ ಆರ್‌ಸಿಬಿ ಈ ಐಪಿಎಲ್ ಆವೃತ್ತಿಯಲ್ಲೂ ಅಮೋಘ ಪ್ರದರ್ಶನ ನೀಡುತ್ತಿದೆ. ನಾಯಕ ರಜತ್ ಪಾಟಿದಾರ್ ಸಾರಥ್ಯದಲ್ಲಿ ತಂಡ 5ರಲ್ಲಿ 4 ಪಂದ್ಯ ಗೆದ್ದಿದೆ. ಕಳೆದ ಸೀಸನ್‌ನಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದ ಪಾಟಿದಾರ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಗುಣಗಳನ್ನು ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಜಿಯೋಹಾಟ್‌ಸ್ಟಾರ್ ಸಂದರ್ಶನದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪಾಟಿದಾರ್ ಅವರ ಯಶಸ್ಸು ಐಪಿಎಲ್‌ನಲ್ಲಿ ಸದ್ಯದ ದೊಡ್ಡ ಚರ್ಚೆ.

ಐಪಿಎಲ್ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ಆವೃತ್ತಿಯಲ್ಲೂ ತನ್ನ ಅಮೋಘ ಪ್ರದರ್ಶನವನ್ನು ಮುಂದುವರೆಸಿದೆ. ತಂಡ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ತಂಡ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ತಂಡದ ಈ ಯಶೋಗಾಥೆಯಲ್ಲಿ ತಂಡದ ನಾಯಕ ರಜತ್ ಪಾಟಿದಾರ್ (Rajat Patidar ) ಅವರ ಪಾತ್ರ ಅಪಾರವಾಗಿದೆ. ಕಳೆದ ಸೀಸನ್‌ನಲ್ಲಿ ಮೊದಲ ಬಾರಿಗೆ ತಂಡದ ನಾಯಕತ್ವವಹಿಸಿಕೊಂಡು ತಂಡವನ್ನು ಚಾಂಪಿಯನ್ ಮಾಡಿದ್ದ ಪಾಟಿದಾರ್ ಈ ಆವೃತ್ತಿಯಲ್ಲೂ ತಂಡವನ್ನು ಚಾಂಪಿಯನ್ ಮಾಡುವತ್ತ ಪ್ರಯತ್ನ ನಡೆಸುತ್ತಿದ್ದಾರೆ.
ರಜತ್ ಅವರ ನಾಯಕತ್ವದ ಗುಣಗಳು ಉಳಿದ ಐಪಿಎಲ್ ಫ್ರಾಂಚೈಸಿಗಳನ್ನು ಬೆರಗಾಗಿಸಿವೆ. ಇದಕ್ಕೆ ಉದಾಹರಣೆ ಎಂಬಂತೆ ಕಳೆದ ಆವೃತ್ತಿಯ ಫೈನಲ್ನಲ್ಲಿ ಇದೇ ಆರ್‌ಸಿಬಿ ವಿರುದ್ಧ ಸೋತಿದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರ ಈ ಎರಡು ಗುಣಗಳನ್ನು ಮೆಚ್ಚಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಅಯ್ಯರ್ಗೆ ಪಾಟಿದರ್ ಅವರ ಈ 2 ಗುಣ ಇಷ್ಟ
ಐಪಿಎಲ್ ಪ್ರಸಾರಕ ಜಿಯೋಹಾಟ್‌ಸ್ಟಾರ್, ಯೂಟ್ಯೂಬ್‌ನಲ್ಲಿ ಶ್ರೇಯಸ್ ಅಯ್ಯರ್ ಅವರೊಂದಿಗಿನ ಸಂದರ್ಶನವನ್ನು ಪೋಸ್ಟ್ ಮಾಡಿದೆ. ಈ ಸಂದರ್ಶನದಲ್ಲಿ, ಅವರಿಗೆ 20 ಪ್ರಶ್ನೆಗಳನ್ನು ಕೇಳಲಾಗಿದೆ. ಈ 20 ಪ್ರಶ್ನೆಗಳಲ್ಲಿ ಎರಡು ಪ್ರಶ್ನೆಗಳಿಗೆ ಉತ್ತರವಾಗಿ ಶ್ರೇಯಸ್ ಅಯ್ಯರ್ ಪಾಟಿದಾರ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ ಮೊದಲನೇ ಪ್ರಶ್ನೆ, ಐಪಿಎಲ್‌ನಲ್ಲಿ ಯಾವ ನಾಯಕನಿಂದ ಸಲಹೆ ಪಡೆಯಲು ಬಯಸುತ್ತೀರಿ ಎಂದು ಅಯ್ಯರ್ ಅವರನ್ನು ಕೇಳಲಾಗಿದೆ. ಇದಕ್ಕೆ ಅವರು ನೇರವಾಗಿ ರಜತ್ ಪಾಟಿದಾರ್ ಎಂದು ಹೆಸರಿಸಿದ್ದಾರೆ. ನಂತರ, ಪ್ರಸ್ತುತ ಪೀಳಿಗೆಯಲ್ಲಿ ಅತ್ಯಂತ ಸ್ಟೈಲಿಶ್ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಅಯ್ಯರ್ ಮತ್ತೊಮ್ಮೆ ಪಾಟಿದಾರ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.
IPL 2026: ಮೊದಲ ಬಾರಿಗೆ ಬದಲಾದ ಸಮಯದಲ್ಲಿ ಪಂದ್ಯವನ್ನಾಡಲಿದೆ ಆರ್‌ಸಿಬಿ
ನಾಯಕನಾಗಿ ಗೆದ್ದ ಪಾಟಿದಾರ್
ಪ್ರಸ್ತುತ ಪಾಟಿದಾರ್ ಅವರ ನಾಯಕತ್ವ ಮತ್ತು ಅವರ ಬ್ಯಾಟಿಂಗ್‌ನ ಯಶಸ್ಸನ್ನು ಪರಿಗಣಿಸಿದರೆ, ಅಯ್ಯರ್ ನೀಡಿದ ಉತ್ತರಗಳು ತಪ್ಪಾಗಿ ಕಾಣುತ್ತಿಲ್ಲ. ಕಳೆದ ವರ್ಷ, ರಜತ್ ಪಾಟಿದಾರ್ ಮೊದಲ ಬಾರಿಗೆ ಆರ್‌ಸಿಬಿಯ ಉಸ್ತುವಾರಿ ವಹಿಸಿಕೊಂಡು ಮೊದಲ ಸೀಸನ್‌ನಲ್ಲಿಯೇ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. 2022-23 ಸೀಸನ್‌ನಿಂದ, ರಜತ್ ಪಾಟಿದಾರ್ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಈ ಆವೃತ್ತಿಯಲ್ಲಿ ಪಾಟಿದಾರ್ ಕೇವಲ ಐದು ಪಂದ್ಯಗಳನ್ನಾಡಿದ್ದು 21 ಸಿಕ್ಸರ್‌ಗಳು ಸೇರಿದಂತೆ 222 ರ ಸ್ಟ್ರೈಕ್ ರೇಟ್‌ನಲ್ಲಿ 213 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




