WTC 2025 final: 138 ರನ್​ಗಳಿಗೆ ಆಫ್ರಿಕಾ ಆಲೌಟ್; ಆಸೀಸ್​ಗೆ 74 ರನ್​ಗಳ ಮುನ್ನಡೆ

WTC 2025 final: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾವನ್ನು 212 ರನ್ ಗಳಿಗೆ ಆಲೌಟ್ ಮಾಡಿದ್ದ ದಕ್ಷಿಣ ಆಫ್ರಿಕಾ ಕೇವಲ 138 ರನ್‌ಗಳಿಗೆ ಆಲೌಟ್ ಆಗಿದೆ. ಪ್ಯಾಟ್ ಕಮ್ಮಿನ್ಸ್ 6 ವಿಕೆಟ್‌ಗಳನ್ನು ಪಡೆದು ಆಸ್ಟ್ರೇಲಿಯಾಕ್ಕೆ 74 ರನ್‌ಗಳ ಮುನ್ನಡೆ ಒದಗಿಸಿದರು. ಆಫ್ರಿಕಾ ತಂಡದ ಬ್ಯಾಟಿಂಗ್ ಸಂಪೂರ್ಣ ವಿಫಲವಾಯಿತು.

WTC 2025 final: 138 ರನ್​ಗಳಿಗೆ ಆಫ್ರಿಕಾ ಆಲೌಟ್; ಆಸೀಸ್​ಗೆ 74 ರನ್​ಗಳ ಮುನ್ನಡೆ
Aus Vs Sa

Updated on: Jun 12, 2025 | 7:17 PM

ಕ್ರಿಕೆಟ್ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಫೈನಲ್ (World Test Championship Final) ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 212 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡ ಹೀನಾಯ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಮಾರಕ ದಾಳಿಗೆ ಬೆದರಿದ ಆಫ್ರಿಕಾ ತಂಡ ಕೇವಲ 138 ರನ್‌ಗಳಿಗೆ ಆಲೌಟ್ ಆಗಿದೆ. ಹೀಗಾಗಿ ಕಾಂಗರೂ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 74 ರನ್‌ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಪರ ಕಮ್ಮಿನ್ಸ್ (Pat Cummins) ಆರು ವಿಕೆಟ್‌ಗಳನ್ನು ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ ಎರಡು ಮತ್ತು ಜೋಶ್ ಹೇಜಲ್‌ವುಡ್ ಒಂದು ವಿಕೆಟ್ ಪಡೆದರು. ಇತ್ತ ಆಫ್ರಿಕಾ ಪರ ನಾಲ್ವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು.

ಕುಸಿದ ಆಫ್ರಿಕಾ ಬ್ಯಾಟಿಂಗ್ ವಿಭಾಗ

ದಕ್ಷಿಣ ಆಫ್ರಿಕಾ ಪರ ಡೇವಿಡ್ ಬೆಡಿಂಗ್‌ಹ್ಯಾಮ್ ಅತ್ಯಧಿಕ 45 ರನ್ ಗಳಿಸಿದರೆ, ನಾಯಕ ಟೆಂಬಾ ಬವುಮಾ 36 ರನ್ ಗಳಿಸಿ ಔಟಾದರು. ರಯಾನ್ ರಿಕಲ್ಟನ್ 16 ಮತ್ತು ಕೈಲ್ ವೆರ್ರೆಯ್ನ್ 13 ರನ್‌ಗಳ ಕೊಡುಗೆ ನೀಡಿದರು. ಮೊದಲ ದಿನದಾಟದಂತ್ಯಕ್ಕೆ 43 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾದ ಇನ್ನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ನಾಯಕ ಬವುಮಾ ಮತ್ತು ಬೆಡಿಂಗ್ಹ್ಯಾಮ್ ಐದನೇ ವಿಕೆಟ್‌ಗೆ 64 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ಈ ಪಾಲುದಾರಿಕೆ ಮುರಿದ ತಕ್ಷಣ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಕುಸಿಯಿತು. ದಕ್ಷಿಣ ಆಫ್ರಿಕಾ ಪರ, ವಿಯಾನ್ ಮುಲ್ಡರ್ ಆರು, ಟ್ರಿಸ್ಟಾನ್ ಸ್ಟಬ್ಸ್ ಎರಡು, ಕೇಶವ್ ಮಹಾರಾಜ್ ಏಳು ಮತ್ತು ಕಗಿಸೊ ರಬಾಡ ಒಂದು ರನ್ ಗಳಿಸಿದರೆ ಐಡೆನ್ ಮಾರ್ಕ್ರಾಮ್ ಮತ್ತು ಮಾರ್ಕೊ ಯಾನ್ಸೆನ್​ಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ.

WTC 2025 final: ಹಿಂದೆಂದೂ ಸಂಭವಿಸದ ಅಪರೂಪದ ಘಟನೆಗೆ ಸಾಕ್ಷಿಯಾದ ಡಬ್ಲ್ಯುಟಿಸಿ ಫೈನಲ್

ಕಮ್ಮಿನ್ಸ್ ಮಾರಕ ದಾಳಿ

ಇತ್ತ ಆಸ್ಟ್ರೇಲಿಯಾ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ನಾಯಕ ಪ್ಯಾಟ್ ಕಮ್ಮಿನ್ಸ್ 6 ವಿಕೆಟ್‌ ಉರುಳಿಸಿದರು. ಈ ಮೂಲಕ ಕಮ್ಮಿನ್ಸ್ ಈ ಆವೃತ್ತಿಯಲ್ಲಿ ಆರನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಅಷ್ಟೇ ಅಲ್ಲ, ಕಮ್ಮಿನ್ಸ್ ಪ್ರಸ್ತುತ ಡಬ್ಲ್ಯೂಟಿಸಿ ಸೈಕಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ. ಅವರು 2023-25ರ ಆವೃತ್ತಿಯಲ್ಲಿ ಇದುವರೆಗೆ 79 ವಿಕೆಟ್‌ಗಳನ್ನು ಕಬಳಿಸಿದ್ದು ಈ ಮೂಲಕ ಭಾರತದ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Thu, 12 June 25