
ಸೆಪ್ಟೆಂಬರ್ 19, 2007.. ಅಂದರೆ ಇಂದಿಗೆ ಸರಿಯಾಗಿ 19 ವರ್ಷಗಳ ಹಿಂದೆ ಕ್ರಿಕೆಟ್ ಮೈದಾನದಲ್ಲಿ ಇತಿಹಾಸವೊಂದು ನಿರ್ಮಾಣವಾಗಿತ್ತು. ಆ ಇತಿಹಾಸ ನಿರ್ಮಿಸಿದ್ದು ಬೇರೆ ಯಾರೂ ಅಲ್ಲ, ಪ್ರಸ್ತುತ ಟಿ20 ಕ್ರಿಕೆಟ್ನಲ್ಲಿ ವಿಶ್ವದ ಅಪಾಯಕಾರಿ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಅಭಿಷೇಕ್ ಶರ್ಮಾರ ಗುರು ಯುವರಾಜ್ ಸಿಂಗ್. ಟೀಂ ಇಂಡಿಯಾ ಕಂಡ ಶ್ರೇಷ್ಠ ಆಲ್ರೌಂಡರ್ಗಳ ಪಟ್ಟಿಯಲ್ಲಿ ಯುವಿಗೂ ಸ್ಥಾನವಿದೆ. ಟೀಂ ಇಂಡಿಯಾ ಎರಡೆರಡು ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಪಾತ್ರ ಎಷ್ಟಿತ್ತು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. 2007 ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೇ ಯುವರಾಜ್. ಇಂಗ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ್ದ ಯುವಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಯಾರೂ ಸಾಧಿಸಲಾಗದ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದರು.
ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ನಡೆದ 2007 ರ ಟಿ20 ವಿಶ್ವಕಪ್ನ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ನ್ಯೂಜಿಲೆಂಡ್ ವಿರುದ್ಧದ ತನ್ನ ಮೊದಲ ಸೂಪರ್ 8 ಪಂದ್ಯವನ್ನು ಸೋತಿದ್ದ ಎಂಎಸ್ ಧೋನಿ ನಾಯಕತ್ವದ ಯುವ ತಂಡಕ್ಕೆ ಪಂದ್ಯಾವಳಿಯಲ್ಲಿ ತಮ್ಮ ಭರವಸೆಯನ್ನು ಜೀವಂತವಾಗಿಡಲು ಇಂಗ್ಲೆಂಡ್ ವಿರುದ್ಧದ ಗೆಲುವು ಅಗತ್ಯವಾಗಿತ್ತು. ಆ ಸಮಯದಲ್ಲಿ ಇಂಗ್ಲೆಂಡ್ನಂತಹ ಬಲಿಷ್ಠ ತಂಡವನ್ನು ಮಣಿಸುವುದು ಭಾರತದಂತಹ ಯುವ ತಂಡಕ್ಕೆ ಸುಲಭದ ಮಾತಾಗಿರಲಿಲ್ಲ. ಆದರೆ ಇಚ್ಚಶಕ್ತಿಯ ಮುಂದೆ ಯಾವುದು ಅಸಾಧ್ಯವಲ್ಲವೆಂಬುದನ್ನು ಸಾಭೀತುಪಡಿಸಿದ್ದ ಟೀಂ ಇಂಡಿಯಾ, ಆಂಗ್ಲರನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು.
ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭವೇ ಸಿಕ್ಕಿತ್ತು. ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಯಲ್ಲಿರಿಸಿದ್ದರು. 17ನೇ ಓವರ್ನ 4ನೇ ಎಸೆತದಲ್ಲಿ ಉತ್ತಪ್ಪ ವಿಕೆಟ್ ಪತನದಿಂದಾಗಿ ಯುವರಾಜ್ ಸಿಂಗ್ ಬ್ಯಾಟಿಂಗ್ಗೆ ಬರಬೇಕಾಯಿತು.ಆಂಡ್ರ್ಯೂ ಫ್ಲಿಂಟಾಫ್ ಎಸೆದ 18ನೇ ಓವರ್ನ ಕೊನೆಯ ಎರಡು ಎಸೆತಗಳನ್ನು ಯುವರಾಜ್ ಬೌಂಡರಿಗಟ್ಟಿದರು. ಇದರಿಂದ ಕೆರಳಿದ ಫ್ಲಿಂಟಾಫ್, ಯುವರಾಜ್ ಜೊತೆಗೆ ವಾಗ್ವಾದಕ್ಕಿಳಿದಿದ್ದರು. ಇಬ್ಬರ ನಡುವಿನ ವಾಗ್ವಾದ ತಾರಕ್ಕೇರಿ, ನಿನ್ನ ಕುತ್ತಿಗೆ ಸೀಳುತ್ತೇನೆ ಎಂದು ಫ್ಲಿಂಟಾಫ್, ಯುವರಾಜ್ಗೆ ಬೆದರಿಕೆ ಹಾಕಿದರು. ಫ್ಲಿಂಟಾಫ್ ಮಾತಿನಿಂದ ಮುನಿದ ಯುವರಾಜ್ 19ನೇ ಓವರ್ನಲ್ಲಿ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದರು.
19 YEARS SINCE YUVRAJ SINGH SMASHED 6 SIXES IN AN OVER AGAINST ENGLAND. 🇮🇳 pic.twitter.com/bkkOOuAVLn
— Mufaddal Vohra (@mufaddal_vohra) September 19, 2026
ಫ್ಲಿಂಟಾಫ್ ಮತ್ತು ಯುವರಾಜ್ ನಡುವಿನ ಜಗಳದಲ್ಲಿ ಬಲಿಪಶುವಾಗಿದ್ದು 21 ವರ್ಷದ ಯುವ ವೇಗಿ ಸ್ಟುವರ್ಟ್ ಬ್ರಾಡ್. ನಾಯಕ ಪಾಲ್ ಕಾಲಿಂಗ್‌ವುಡ್ ಆಣತಿಯಂತೆ ಬೌಲಿಂಗ್ ಮಾಡಲು ಬಂದ ಸ್ಟುವರ್ಟ್ ಬ್ರಾಡ್ನ ದುಃಸ್ವಪ್ನವಾಗಿ ಕಾಡಿದ್ದು ಯುವರಾಜ್. ಬ್ರಾಡ್ ಎಸೆದ ಮೊದಲ ಎಸೆತವನ್ನು ಮಿಡ್-ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದ ಯುವಿ, ಎರಡನೇ ಎಸೆತವನ್ನು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ಗಟ್ಟಿದರು. ನಂತರ ಯುವರಾಜ್ ಮೂರನೇ ಎಸೆತವನ್ನು ಡೀಪ್ ಎಕ್ಸ್‌ಟ್ರಾ ಕವರ್ ಮೇಲೆ, ನಾಲ್ಕನೇ ಎಸೆತವನ್ನು ಬ್ಯಾಕ್‌ವರ್ಡ್ ಪಾಯಿಂಟ್ ದಿಕ್ಕಿನಲ್ಲಿ ಸಿಕ್ಸರ್ಗಟ್ಟಿದರು. ಐದನೇ ಎಸೆತವನ್ನು ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ಗಟ್ಟಿದ ಯುವಿ, ಕೊನೆಯ ಎಸೆತವನ್ನು ಲಾಂಗ್-ಆನ್ ಮೇಲೆ ಸಿಕ್ಸರ್ ಬಾರಿಸಿದರು.
‘ನನಗಿಂತ ಉತ್ತಮವಾಗಿದೆ’; ವೈಭವ್ ಬೌಲಿಂಗ್ ಹೊಗಳಿದ ಯುವರಾಜ್
ಈ ಮೂಲಕ ಯುವರಾಜ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, 16 ಎಸೆತಗಳಲ್ಲಿ 362.50 ಸ್ಟ್ರೈಕ್ ರೇಟ್‌ನಲ್ಲಿ 58 ರನ್ ಕಲೆಹಾಕಿದರು. ಈ ಇನ್ನಿಂಗ್ಸ್‌ನಲ್ಲಿ, ಯುವರಾಜ್ 7 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳನ್ನು ಬಾರಿಸಿದರು. ಯುವರಾಜ್ ಜೊತೆಗೆ, ಗೌತಮ್ ಗಂಭೀರ್ (58) ಮತ್ತು ವೀರೇಂದ್ರ ಸೆಹ್ವಾಗ್ (68) ಕೂಡ ಅರ್ಧಶತಕಗಳ ಇನ್ನಿಂಗ್ಸ್ ಆಡಿದರು. ಈ ಮೂವರ ಆಟದಿಂದಾಗಿ ಟೀಂ ಇಂಡಿಯಾ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 218 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಇಂಗ್ಲೆಂಡ್ 200 ರನ್ ಕಲೆಹಾಕಲಷ್ಟೇ ಶಕ್ತವಾಗಿ ಪಂದ್ಯವನ್ನು 18 ರನ್‌ಗಳಿಂದ ಸೋತಿತು.
Published On - 6:06 pm, Sat, 19 September 26