Cristiano Ronaldo: ಹೊಸ ಕ್ಲಬ್ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ; ವರ್ಷಕ್ಕೆ 1770 ಕೋಟಿ ಸಂಬಳ!
Cristiano Ronaldo: ವರದಿಗಳ ಪ್ರಕಾರ, ಸುಮಾರು 200 ಮಿಲಿಯನ್ ಯುರೋಗೂ ಅಧಿಕ ಮೊತ್ತ ಒಪ್ಪಂದಕ್ಕೆ ರೊನಾಲ್ಡೊ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಫಿಫಾ ವಿಶ್ವಕಪ್ನಿಂದ (Fifa World Cup) ಬರಿಗೈಯಲ್ಲಿ ವಾಪಸ್ಸಾಗಿದ್ದ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಜೇಬಿಗೆ ಇದೀಗ ದಾಖಲೆಯ ಹಣ ಬಂದು ಬಿದ್ದಿದೆ. ವಾಸ್ತವವಾಗಿ ವಿಶ್ವಕಪ್ ಆರಂಭಕ್ಕೂ ಮುನ್ನ ಮ್ಯಾಂಚೆಸ್ಟರ್ ಯುನೈಟೆಡ್ (Manchester United) ಕ್ಲಬ್ ತೊರೆದಿದ್ದ ರೊನಾಲ್ಡೊ ಹೊಸ ಕ್ಲಬ್‌ನ ಹುಡುಕಾಟದಲ್ಲಿದ್ದರು. ಕ್ಲಬ್ ತೊರೆದ ಬಳಿಕ ರೊನಾಲ್ಡೊ ಸೌದಿ ಅರೇಬಿಯಾ ಮೂಲದ ಕ್ಲಬ್ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿತ್ತು. ಇದೀಗ ಆ ಸುದ್ದಿಗೆ ಅಧಿಕೃತ ಮುದ್ರೆ ಬಿದ್ದಿದ್ದು, ಈ ಪೋರ್ಚುಗೀಸ್ ತಾರೆ ಸೌದಿ ಅರೇಬಿಯಾದ ಕ್ಲಬ್ ಅಲ್ ನಾಸ್ರ್ (Al Nassr) ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಬಗ್ಗೆ ಕ್ಲಬ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಈ ಹಿಂದೆ, ರೊನಾಲ್ಡೊ ಇಂಗ್ಲೆಂಡ್‌ನ ಫುಟ್‌ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದರು. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ನೀಡಿದ ಸಂದರ್ಶನದಲ್ಲಿ ರೊನಾಲ್ಡೊ ಕ್ಲಬ್ ಮೇಲೆ ಆರೋಪಗಳ ಸುರಿಮಳೆಗೈದಿದ್ದರು. ಆ ನಂತರ ಸಹಮತದಿಂದ ರೊನಾಲ್ಡೊ ಮ್ಯಾಂಚೆಸ್ಟರ್ ಕ್ಲಬ್ ತೊರೆದಿದ್ದರು. ಈಗಿನ ಹೊಸ ಒಪ್ಪಂದದ ಪ್ರಕಾರ ರೊನಾಲ್ಡೊ 2025 ರವರೆಗೆ ಅಲ್ ನಾಸ್ರ್ ಪರ ಆಡಲಿದ್ದಾರೆ.
ವರದಿಗಳ ಪ್ರಕಾರ, ಸುಮಾರು 200 ಮಿಲಿಯನ್ ಯುರೋಗೂ ಅಧಿಕ ಮೊತ್ತದ ಒಪ್ಪಂದಕ್ಕೆ ರೊನಾಲ್ಡೊ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ನೋಡಿದರೆ ವರ್ಷಕ್ಕೆ ಸುಮಾರು 1770 ಕೋಟಿಗೂ ಅಧಿಕ ಮೊತ್ತವನ್ನು ರೊನಾಲ್ಡೊ ಸಂಬಳದ ರೂಪದಲ್ಲಿ ಪಡೆಯಲ್ಲಿದ್ದಾರೆ. ಈ ದಾಖಲೆಯ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ರೊನಾಲ್ಡೊ ಫುಟ್ಬಾಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಏಷ್ಯನ್ ಕ್ಲಬ್‌ನೊಂದಿಗೆ ಟೈ ಅಪ್ ಆಗಿದ್ದಾರೆ.
‘ನನಗೆ ನೀವು ಸಾರ್ವಕಾಲಿಕ ಶ್ರೇಷ್ಠ ಆಟಗಾರ’; ಕಣ್ಣೀರಿಟ್ಟ ರೊನಾಲ್ಡೊಗೆ ಭಾವನಾತ್ಮಕ ಸಂದೇಶ ಬರೆದ ಕೊಹ್ಲಿ
ಸಂತಸ ವ್ಯಕ್ತಪಡಿಸಿದ ರೊನಾಲ್ಡ್
ಕ್ಲಬ್‌ನೊಂದಿಗೆ ಸಹಿ ಹಾಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರೊನಾಲ್ಡೊ, “ಹೊಸ ಫುಟ್ಬಾಲ್ ಲೀಗ್ ಅನ್ನು ಬೇರೆ ದೇಶದಲ್ಲಿ ಆಡಲು ನಾನು ಸಿದ್ಧನಿದ್ದೇನೆ. ಸೌದಿ ಅರೇಬಿಯಾದಲ್ಲಿ ಪುರುಷ ಮತ್ತು ಮಹಿಳೆಯರ ಫುಟ್‌ಬಾಲ್‌ಗಾಗಿ ಅಲ್ ನಾಸ್ರ್ ಕ್ಲಬ್ ಮಾಡುತ್ತಿರುವ ಕಾರ್ಯವು ತುಂಬಾ ಸ್ಪೂರ್ತಿದಾಯಕವಾಗಿದೆ. ಈ ದೇಶವು ಫುಟ್‌ಬಾಲ್‌ಗಾಗಿ ದೊಡ್ಡ ಗುರಿಗಳನ್ನು ಹೊಂದಿದೆ ಮತ್ತು ಸಾಕಷ್ಟು ಪ್ರತಿಭೆಗಳನ್ನು ಹೊಂದಿದೆ ಎಂಬುದನ್ನು ಸೌದಿ ಅರೇಬಿಯಾದ ಇತ್ತೀಚಿನ ವಿಶ್ವಕಪ್ ಪ್ರದರ್ಶನದಿಂದ ನಾವು ನೋಡಬಹುದಾಗಿದೆ.
ನಾನು ಯುರೋಪಿಯನ್ ಫುಟ್‌ಬಾಲ್‌ನಲ್ಲಿ ಎಲ್ಲ ಪ್ರಶಸ್ತಿಗಳನ್ನು ಗೆದ್ದಿರುವುದು ನನ್ನ ಅದೃಷ್ಟ. ಈಗ ಏಷ್ಯಾದಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ನನ್ನ ಹೊಸ ತಂಡದ ಸದಸ್ಯರನ್ನು ಭೇಟಿ ಮಾಡಲು ನಾನು ಉತ್ಸುಕನಾಗಿದ್ದೇನೆ. ಅವರೊಂದಿಗೆ ಸೇರಿ ನಾನು ಕ್ಲಬ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತೇನೆ ಎಂದಿದ್ದಾರೆ.
History in the making. This is a signing that will not only inspire our club to achieve even greater success but inspire our league, our nation and future generations, boys and girls to be the best version of themselves. Welcome @Cristiano to your new home @AlNassrFC pic.twitter.com/oan7nu8NWC
— AlNassr FC (@AlNassrFC_EN) December 30, 2022
ಈ ಮೊದಲು ಈ ಕ್ಲಬ್‌ಗಳ ಪರ ಆಡಿದ್ದ ರೊನಾಲ್ಡೊ
ತಮ್ಮ ವೃತ್ತಿಜೀವನವನ್ನು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನೊಂದಿಗೆ ಆರಂಭಿಸಿದ ರೊನಾಲ್ಡೊ, ಇದರ ನಂತರ ಸ್ಪೇನ್‌ನ ಲೆಜೆಂಡರಿ ಕ್ಲಬ್ ರಿಯಲ್ ಮ್ಯಾಡ್ರಿಡ್ ಪರ ಕಣಕ್ಕಿಳಿದಿದ್ದರು. 2009 ರಿಂದ 2018 ರವರೆಗೆ ಈ ಕ್ಲಬ್ ಪರ ಆಡಿದ್ದ ರೊನಾಲ್ಡೊ, ಬಳಿಕ ಇಟಲಿಯ ಕ್ಲಬ್ ಜುವೆಂಟಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. 2021 ರವರೆಗೆ ಈ ಕ್ಲಬ್ ಪರ ಆಡಿದ್ದ ರೊನಾಲ್ಡೊ ಬಳಿಕ ಮ್ಯಾಂಚೆಸ್ಟರ್‌ಗೆ ಹಿಂತಿರುಗಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:44 am, Sat, 31 December 22