‘ನನಗೆ ನೀವು ಸಾರ್ವಕಾಲಿಕ ಶ್ರೇಷ್ಠ ಆಟಗಾರ’; ಕಣ್ಣೀರಿಟ್ಟ ರೊನಾಲ್ಡೊಗೆ ಭಾವನಾತ್ಮಕ ಸಂದೇಶ ಬರೆದ ಕೊಹ್ಲಿ

Virat Kohli: ನೀವು ಇಲ್ಲಿಯವರೆಗೆ ಕ್ರೀಡೆಗೆ ಮತ್ತು ಅಭಿಮಾನಿಗಳಿಗಾಗಿ ಮಾಡಿರುವುದನ್ನು ಕೇವಲ ಒಂದು ಶೀರ್ಷಿಕೆ ಅಥವಾ ಟ್ರೋಫಿಯಿಂದ ನಿರ್ಧರಿಸಲಾಗದು. ಯಾವುದೇ ಶೀರ್ಷಿಕೆಯಿಂದ ನೀವು ಜನರ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

‘ನನಗೆ ನೀವು ಸಾರ್ವಕಾಲಿಕ ಶ್ರೇಷ್ಠ ಆಟಗಾರ’; ಕಣ್ಣೀರಿಟ್ಟ ರೊನಾಲ್ಡೊಗೆ ಭಾವನಾತ್ಮಕ ಸಂದೇಶ ಬರೆದ ಕೊಹ್ಲಿ
ronaldo, kohli
Follow us
TV9 Web
| Updated By: ಪೃಥ್ವಿಶಂಕರ

Updated on:Dec 12, 2022 | 12:11 PM

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ (FIFA World Cup) ಅಚ್ಚರಿಯ ಫಲಿತಾಂಶಗಳು ಕಂಡುಬರುತ್ತಿವೆ. ಈಗಾಗಲೇ ಕ್ವಾರ್ಟರ್​ಫೈನಲ್​ನಲ್ಲಿ 5 ಬಾರಿಯ ವಿಶ್ವಚಾಂಪಿಯನ್​ ಬ್ರೆಜಿಲ್​ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ನೇತೃತ್ವದ ಬಲಿಷ್ಠ ಪೋರ್ಚುಗಲ್ ತಂಡ ಕೂಡ ಟೂರ್ನಿಯಿಂದ ಔಟಾಗಿದೆ. ಶನಿವಾರ ರಾತ್ರಿ ನಡೆದ ರೋಚಕ ಕ್ವಾರ್ಟರ್‌ ಫೈನಲ್​ನ ಪಂದ್ಯದಲ್ಲಿ ಮುನ್ಪಡೆ ಆಟಗಾರ ಯೂಸೆಫ್ ಎನ್-ನೆಸೈರಿ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಮೊರಾಕ್ಕೊ (Morocco vs Portugal) ತಂಡ ಫಿಫಾ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿತು. ಈ ಮೂಲಕ ಸೆಮೀಸ್ ತಲುಪಿದ ಮೊದಲ ಆಫ್ರಿಕನ್​ ರಾಷ್ಟ್ರ ಎಂಬ ದಾಖಲೆಯನ್ನೂ ಬರೆಯಿತು. ಇದರೊಂದಿಗೆ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತು. ಸೋಲಿನ ಆಘಾತದಲ್ಲಿ ಕಣ್ಣೀರಿಡುತ್ತಲೇ ಮೈದಾನದಿಂದ ಹೊರನಡೆದಿದ್ದ ರೊನಾಲ್ಡೊಗೆ ಇಡೀ ಕ್ರೀಡಾ ಪ್ರಪಂಚವೇ ಸಮಾಧಾನದ ಮಾತುಗಳನ್ನು ಹೇಳಿತ್ತು. ಈಗ ಅವರ ಸಾಲಿಗೆ ಕಿಂಗ್ ಕೊಹ್ಲಿ ಕೂಡ ಸೇರ್ಪಡೆಗೊಂಡಿದ್ದು, ರೊನಾಲ್ಡೊರನ್ನು ಕೊಹ್ಲಿ ‘ನನಗೆ ನೀವು ಸಾರ್ವಕಾಲಿಕ ಶ್ರೇಷ್ಠ ಆಟಗಾರ’ ಎಂದು ಬಣ್ಣಿಸಿದ್ದಾರೆ.

ನೀವು ದೇವರು ನೀಡಿದ ಉಡುಗೊರೆ

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಕೊಹ್ಲಿ ಅದರಲ್ಲಿ, ನೀವು ಇಲ್ಲಿಯವರೆಗೆ ಕ್ರೀಡೆಗೆ ಮತ್ತು ಅಭಿಮಾನಿಗಳಿಗಾಗಿ ಮಾಡಿರುವುದನ್ನು ಕೇವಲ ಒಂದು ಶೀರ್ಷಿಕೆ ಅಥವಾ ಟ್ರೋಫಿಯಿಂದ ನಿರ್ಧರಿಸಲಾಗದು. ಯಾವುದೇ ಶೀರ್ಷಿಕೆಯಿಂದ ನೀವು ಜನರ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಲು ಸಾಧ್ಯವಿಲ್ಲ. ನಾನು ಸೇರಿದಂತೆ ಪ್ರಪಂಚದ ಎಲ್ಲಾ ಅಭಿಮಾನಿಗಳು ನಿಮ್ಮ ಆಟವನ್ನು ನೋಡಿ ಆನಂಧಿಸಿದ್ದೇವೆ. ನೀವು ದೇವರು ನೀಡಿದ ಉಡುಗೊರೆ. ನಿಮ್ಮ ಸಾಧನೆ ಏನೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಶ್ಲಾಘಿಸಿದ್ದಾರೆ.

ಭಾವನಾತ್ಮಕ ಪೋಸ್ಟ್ ಬರೆದ ರೊನಾಲ್ಡೊ

ಮೊರಾಕ್ಕೊ ವಿರುದ್ಧದ ಸೋಲಿನೊಂದಿಗೆ ಪೋರ್ಚುಗಲ್ ಪರ ವಿಶ್ವಕಪ್ ಗೆಲ್ಲುವ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕನಸು ಕೂಡ ಚೂರುಚೂರಾಯಿತು. ಈ ಸೋಲಿನ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಸಂದೇಶ ಬರೆದಿದ್ದ ರೊನಾಲ್ಡೊ, ಪೋರ್ಚುಗಲ್‌ಗಾಗಿ ವಿಶ್ವಕಪ್ ಗೆಲ್ಲುವುದು ನನ್ನ ವೃತ್ತಿಜೀವನದ ಅತಿದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಕನಸು. ಅದೃಷ್ಟವಶಾತ್, ನಾನು ಪೋರ್ಚುಗಲ್ ಸೇರಿದಂತೆ ಅಂತರರಾಷ್ಟ್ರೀಯ ಆಯಾಮದ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಅಲ್ಲದೆ ನಮ್ಮ ದೇಶದ ಹೆಸರನ್ನು ವಿಶ್ವದ ಉನ್ನತ ಮಟ್ಟದಲ್ಲಿ ಇಡುವುದು ನನ್ನ ದೊಡ್ಡ ಕನಸಾಗಿತ್ತು.

Cristiano Ronaldo: ಪೋರ್ಚುಗಲ್ ಔಟ್: ಮೈದಾನದಿಂದಲೇ ಕಣ್ಣೀರಿಡುತ್ತಾ ತೆರಳಿದ ಕ್ರಿಸ್ಟಿಯಾನೊ ರೊನಾಲ್ಡೊ

ನಾನು ಈ ಕನಸಿಗಾಗಿಯೇ ಹೋರಾಡಿದೆ. ಆದರೆ ಆ ಕನಸು ನನಸಾಗಲಿಲ್ಲ. ನನ್ನ ಈ 16 ವರ್ಷಗಳ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ನನ್ನ ಕೋಟ್ಯಾಂತರ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಎಂದಿಗೂ ಹೋರಾಟಕ್ಕೆ ಬೆನ್ನು ತೋರಿದವನ್ನಲ್ಲ. ನಾನು ಆ ಕನಸನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಇನ್ನೇನು ಹೆಚ್ಚಿಗೆ ಹೇಳಲಾರೆ, ಎಲ್ಲರಿಗೂ ಧನ್ಯವಾದಗಳು ಎಂದು ರೊನಾಲ್ಡೊ ಬರೆದುಕೊಂಡಿದ್ದಾರೆ.

ಪಂದ್ಯ ಹೀಗಿತ್ತು

ಕತಾರ್​ನ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಪೋರ್ಚುಗಲ್ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸಿತು. ಯೂಸುಫ್ ಅನ್ನಸ್ರಿ ಮೊರೊಕ್ಕೊ ಪರವಾಗಿ ಏಕೈಕ ಗೋಲು ದಾಖಲಿಸಿ ಐತಿಹಾಸಿಕ ಜಯಕ್ಕೆ ಕಾರಣರಾದರು. 42ನೇ ನಿಮಿಷದಲ್ಲಿ ಮೊರೊಕ್ಕೊ ಗೋಲು ದಾಖಲಿಸಿ ಸಂಭ್ರಮಿಸಿತು. ಕಳೆದ ಬಾರಿ ಕ್ವಾರ್ಟರ್ ಫೈನಲ್​ನಲ್ಲಿ ಕೋಚ್ ಬೆಂಚು ಕಾಯಿಸಿದ್ದರಿಂದ ಅಸಮಾಧಾನದ ನಡುವೆಯೂ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದರೂ ಪಂದ್ಯವನ್ನು ಗೆಲ್ಲಿಸಲು ವಿಫಲರಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:09 pm, Mon, 12 December 22