Messi - Neymar - Ronaldo
Image Credit source: YT
ಫುಟ್‌ಬಾಲ್ ಜಗತ್ತಿನ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ! ಈ ಬಾರಿಯ ಫಿಫಾ ವಿಶ್ವಕಪ್ (FIFA World cup 2026) ಕೇವಲ ತಂಡಗಳ ಸಂಖ್ಯೆಯಿಂದ ಮಾತ್ರವಲ್ಲ, ಆಟದ ನಿಯಮಗಳಿಂದಲೂ ಜಾಗತಿಕ ಗಮನ ಸೆಳೆಯುತ್ತಿದೆ. ಇಂಟರ್ನ್ಯಾಷನಲ್ ಫುಟ್‌ಬಾಲ್ ಅಸೋಸಿಯೇಷನ್ ಬೋರ್ಡ್ (IFAB) ಈ ಬಾರಿ ಹೊಸ ನಿಯಮಗಳಿಗೆ ಅನುಮೋದನೆ ನೀಡಿದ್ದು, ಆ ನಿಯಮಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ವಿಎಆರ್ (VAR) ವ್ಯಾಪ್ತಿ ವಿಸ್ತರಣೆ:
ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ವ್ಯವಸ್ಥೆಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಮೈದಾನದಲ್ಲಿ ರೆಫರಿಗಳು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ, ಈ ಕೆಳಗಿನ ಸಂದರ್ಭಗಳಲ್ಲಿ VAR ಹಸ್ತಕ್ಷೇಪ ಮಾಡಬಹುದು:
- ಎರಡನೇ ಹಳದಿ ಕಾರ್ಡ್ ಪರಿಶೀಲನೆ: ರೆಫರಿ ತಪ್ಪಾಗಿ ಎರಡನೇ ಹಳದಿ ಕಾರ್ಡ್ ನೀಡಿ ಆಟಗಾರನನ್ನು ಹೊರಹಾಕುವುದನ್ನು ತಡೆಯಲು VAR ಮರುಪರಿಶೀಲನೆ ನಡೆಸಬಹುದು.
- ಕಾರ್ನರ್ ಕಿಕ್ ರದ್ದು: ಆಫ್-ಸೈಡ್ ಅಥವಾ ರೆಫರಿ ತಪ್ಪಿನಿಂದ ಎದುರಾಳಿ ತಂಡಕ್ಕೆ ಸಿಕ್ಕ ಕಾರ್ನರ್ ಕಿಕ್ ಅನ್ನು ರದ್ದುಗೊಳಿಸಬಹುದು.
- ಪ್ರೀ-ರಿಸ್ಟಾರ್ಟ್ ಫೌಲ್ಸ್: ಸೆಟ್-ಪೀಸ್ (ಫ್ರೀ-ಕಿಕ್ ಅಥವಾ ಕಾರ್ನರ್) ಆರಂಭವಾಗುವ ಮುನ್ನವೇ ಆಟಗಾರರು ಮಾಡುವ ಫೌಲ್‌ಗಳನ್ನು ಪತ್ತೆಹಚ್ಚಬಹುದು.
ಸಮಯ ವ್ಯರ್ಥ ಮಾಡುವ ತಂತ್ರಗಳಿಗೆ ಬ್ರೇಕ್:
ಪಂದ್ಯದ ನಿಗದಿತ ಸಮಯವನ್ನು ಕಾಪಾಡಿಕೊಳ್ಳಲು ಈ ಬಾರಿ ಕಟ್ಟುನಿಟ್ಟಾದ ಕೌಂಟ್‌ಡೌನ್ ನಿಯಮಗಳನ್ನು ತರಲಾಗಿದೆ. ಈ ನಿಯಮಗಳ ಮೂಲಕ ರೆಫರಿ ತೆಗೆದುಕೊಳ್ಳಲಿರುವ ಕ್ರಮಗಳ ಪಟ್ಟಿ ಈ ಕೆಳಗಿನಂತಿದೆ:
- 5 ಸೆಕೆಂಡ್ ರಿಸ್ಟಾರ್ಟ್ ಟೈಮರ್: ಗೋಲ್ ಕಿಕ್ ಮತ್ತು ಥ್ರೋ-ಇನ್ ಮಾಡುವಾಗ ರೆಫರಿಗಳು ಕೈ ಎತ್ತಿ 5 ಸೆಕೆಂಡುಗಳ ಕೌಂಟ್‌ಡೌನ್ ತೋರಿಸುತ್ತಾರೆ. ಥ್ರೋ-ಇನ್ ತಡವಾದರೆ ಚೆಂಡು ಎದುರಾಳಿ ತಂಡಕ್ಕೆ ಸಿಗುತ್ತದೆ. ಗೋಲ್ ಕಿಕ್ ತಡವಾದರೆ ಎದುರಾಳಿಗೆ ಕಾರ್ನರ್ ಕಿಕ್ ನೀಡಲಾಗುತ್ತದೆ.
- 10 ಸೆಕೆಂಡ್ ಸಬ್‌ಸ್ಟಿಟ್ಯೂಷನ್: ಮೈದಾನದಿಂದ ಹೊರಹೋಗುವ ಆಟಗಾರ 10 ಸೆಕೆಂಡುಗಳ ಒಳಗೆ ಹತ್ತಿರದ ಬೌಂಡರಿ ಲೈನ್ ದಾಟಬೇಕು. ತಡ ಮಾಡಿದರೆ, ಹೊಸ ಆಟಗಾರ ಮೈದಾನಕ್ಕೆ ಬರಲು 1 ನಿಮಿಷ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ಆ ತಂಡ 10 ಆಟಗಾರರೊಂದಿಗೆ ಆಡಬೇಕಾಗುತ್ತದೆ.
ಕಠಿಣ ಶಿಸ್ತು ಕ್ರಮಗಳು:
ಆಟಗಾರರು ಮೈದಾನದಲ್ಲಿ ತೋರುವ ಅಸಭ್ಯ ವರ್ತನೆಯನ್ನು ತಡೆಗಟ್ಟಲು ಈ ಬಾರಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಆ ನಿಯಮಗಳು ಯಾವುದೆಂದರೆ:
- ಬಾಯಿ ಮುಚ್ಚಿಕೊಳ್ಳುವುದಕ್ಕೆ ನಿಷೇಧ: ರೆಫರಿ ಅಥವಾ ಎದುರಾಳಿ ಆಟಗಾರರೊಂದಿಗೆ ವಾಗ್ವಾದ ನಡೆಸುವಾಗ ಯಾವುದೇ ಆಟಗಾರ ಕೈ ಅಥವಾ ಜರ್ಸಿಯಿಂದ ಬಾಯಿ ಮುಚ್ಚಿಕೊಳ್ಳುವಂತಿಲ್ಲ. ಜನಾಂಗೀಯ ಅಥವಾ ನಿಂದನಾತ್ಮಕ ಪದಗಳನ್ನು ಮರೆಮಾಚುವುದನ್ನು ತಡೆಯಲು ಈ ನಿಯಮ ತರಲಾಗಿದ್ದು, ಇದನ್ನು ಉಲ್ಲಂಘಿಸಿದರೆ ನೇರ ‘ರೆಡ್ ಕಾರ್ಡ್’ ನೀಡಲಾಗುತ್ತದೆ.
- ಕ್ಯಾಪ್ಟನ್-ಓನ್ಲಿ ನಿಯಮ: ಕೇವಲ ತಂಡದ ನಾಯಕ ಮಾತ್ರ ರೆಫರಿ ಬಳಿ ಬಂದು ನಿರ್ಧಾರಗಳನ್ನು ಪ್ರಶ್ನಿಸಬಹುದು. ಉಳಿದ ಆಟಗಾರರು ರೆಫರಿಯನ್ನು ಮುತ್ತುವರಿದರೆ ತಕ್ಷಣ ಹಳದಿ ಕಾರ್ಡ್ ನೀಡಲಾಗುತ್ತದೆ.
ಆಟಗಾರರಿಗೆ ಕಡ್ಡಾಯ ಬ್ರೇಕ್:
ಈ ಬಾರಿಯ ಫಿಫಾ ವಿಶ್ವಕಪ್ ನಡೆಯುತ್ತಿರುವುದು ಬೇಸಿಗೆಯಲ್ಲಿ. ಪಂದ್ಯಗಳನ್ನು ಆಯೋಜಿಸಲಿರುವ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಕೆಲವು ನಗರಗಳಲ್ಲಿ ತಾಪಮಾನವು 38°C (100°F) ಗಿಂತಲೂ ಹೆಚ್ಚಿರುತ್ತದೆ. ಹೀಗಾಗಿ ಕಡ್ಡಾಯ ಬ್ರೇಕ್ ನಿಯಮ ಜಾರಿಗೆ ತರಲಾಗಿದೆ. ಅದರಂತೆ ಈ ಬಾರಿ ಆಟಗಾರರಿಗೆ ಈ ಕೆಳಗಿನ ನಿಯಮಗಳು ಅನ್ವಯವಾಗಲಿದೆ:
- ಕಡ್ಡಾಯ ಹೈಡ್ರೇಶನ್ ಬ್ರೇಕ್: ಹವಾಮಾನ ಹೇಗಿದ್ದರೂ ಪಂದ್ಯದ ಪ್ರತಿ ಅರ್ಧದ 22ನೇ ನಿಮಿಷದಲ್ಲಿ ಆಟಗಾರರಿಗೆ 3 ನಿಮಿಷಗಳ ಕಡ್ಡಾಯ ಡ್ರಿಂಕ್ಸ್ ಬ್ರೇಕ್ ವಿರಾಮ ನೀಡಲಾಗುತ್ತದೆ.
- ಹೊರ ಹೊಗಲೇಬೇಕು: ಗಾಯದ ನೆಪದಲ್ಲಿ ಆಟವನ್ನು ನಿಲ್ಲಿಸುವ ಔಟ್‌ಫೀಲ್ಡ್ ಆಟಗಾರರು ಮೈದಾನದ ಹೊರಗೆ ಕನಿಷ್ಠ 60 ಸೆಕೆಂಡುಗಳ ಕಾಲ ಚಿಕಿತ್ಸೆ ಪಡೆಯಬೇಕು. ತಲೆಗೆ ಪೆಟ್ಟಾದಾಗ ಅಥವಾ ಗೋಲ್‌ಕೀಪರ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
48 ತಂಡಗಳ ಟೂರ್ನಮೆಂಟ್:
ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 48 ತಂಡಗಳು ಕಣಕ್ಕಿಳಿಯಲಿವೆ. ಕಳೆದ ಬಾರಿ ಅಂದರೆ, ಖತಾರ್ ವಿಶ್ವಕಪ್‌ನಲ್ಲಿ 32 ತಂಡಗಳು ಕಣಕ್ಕಿಳಿದಿದ್ದವು. ಇದೀಗ ತಂಡಗಳ ಸಂಖ್ಯೆ ಹೆಚ್ಚಳದೊಂದಿಗೆ ಟೂರ್ನಿಯ ಸ್ವರೂಪ ಬದಲಾಗಿದೆ. ಅದರಂತೆ ಈ ಬಾರಿ ಈ ಕೆಳಗಿನ ಸ್ವರೂಪದಲ್ಲಿ ಟೂರ್ನಿ ನಡೆಯಲಿದೆ..
- 12 ಗ್ರೂಪ್: ಕಣಕ್ಕಿಳಿಯುವ 48 ತಂಡಗಳನ್ನು ಒಟ್ಟು 12 ಗುಂಪುಗಳಾಗಿ (Group A ರಿಂದ Group L) ವಿಂಗಡಿಸಲಾಗಿದೆ.
- 4 ತಂಡಗಳ ಗ್ರೂಪ್: ಪ್ರತಿಯೊಂದು ಗುಂಪಿನಲ್ಲೂ ತಲಾ 4 ತಂಡಗಳು ಇರಲಿವೆ. ಪ್ರತಿ ತಂಡವು ತನ್ನ ಗುಂಪಿನ ಉಳಿದ ಮೂರು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು ಆಡಲಿದೆ.
- ಟಾಪ್ 2 ತಂಡಗಳು: ಪ್ರತಿ 12 ಗುಂಪುಗಳಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ಒಟ್ಟು 24 ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತವೆ.
- 3ನೇ ಸ್ಥಾನದ ತಂಡ ಕ್ಕೂ ಚಾನ್ಸ್: ಎಲ್ಲಾ 12 ಗುಂಪುಗಳಲ್ಲಿ 3ನೇ ಸ್ಥಾನ ಪಡೆದ ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ 8 ತಂಡಗಳಿಗೆ ಮುಂದಿನ ಹಂತಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ. ಈ ತಂಡಗಳ ಪಾಯಿಂಟ್ಸ್, ಗಳಿಸಿದ ಗೋಲು, ಗೋಲುಗಳ ವ್ಯತ್ಯಾಸವನ್ನು ಪರಿಗಣಿಸಿ ಈ 8 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
- ನಾಕೌಟ್ಗೆ 32 ತಂಡಗಳು: ಮೊದಲ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಒಟ್ಟು 32 ತಂಡಗಳು (24 + 8) ನಾಕೌಟ್ ಹಂತಕ್ಕೆ ಪ್ರವೇಶಿಸುತ್ತವೆ.
ಹೆಚ್ಚುವರಿ ನಾಕೌಟ್ ಹಂತ:
ಇಷ್ಟು ವರ್ಷ ಫಿಫಾ ವಿಶ್ವಕಪ್‌ನಲ್ಲಿ ಗುಂಪು ಹಂತ ಮುಗಿದ ತಕ್ಷಣ ‘ರೌಂಡ್ ಆಫ್ 16’ (ಪ್ರೀ-ಕ್ವಾರ್ಟರ್ ಫೈನಲ್) ನಡೆಯುತ್ತಿತ್ತು. ಆದರೆ ಈ ಬಾರಿ ಮೊಟ್ಟಮೊದಲ ಬಾರಿಗೆ ‘ರೌಂಡ್ ಆಫ್ 32’ ಹಂತವನ್ನು ಪರಿಚಯಿಸಲಾಗಿದೆ. ಅದರಂತೆ ಈ ಬಾರಿಯ ದ್ವಿತೀಯ ಸುತ್ತಿನಲ್ಲಿ ಪ್ರೀ-ಕ್ವಾರ್ಟರ್ ಫೈನಲ್ ಬದಲಿಗೆ 32 ತಂಡಗಳ ನಡುವೆ ನಾಕೌಟ್ ಪಂದ್ಯಗಳು ನಡೆಯಲಿವೆ.
- 16 ಪಂದ್ಯಗಳು: ನಾಕೌಟ್ ಸುತ್ತಿನಲ್ಲಿ 32 ತಂಡಗಳ ನಡುವೆ ಒಟ್ಟು 16 ಪಂದ್ಯಗಳು ನಡೆಯಲಿವೆ.
- ಡೈರೆಕ್ಟ್ ಔಟ್: ಈ ಹಂತದಲ್ಲಿ ಸೋತ 16 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.
ಪ್ರೀ-ಕ್ವಾರ್ಟರ್ ಫೈನಲ್:
ನಾಕೌಟ್ ಸುತ್ತಿನಲ್ಲಿ ಗೆದ್ದ 16 ತಂಡಗಳು ರೌಂಡ್ ಆಫ್-16 ಅಥವಾ ಪ್ರೀ-ಕ್ವಾರ್ಟರ್ ಫೈನಲ್ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.
ಕ್ವಾರ್ಟರ್ ಫೈನಲ್:
ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಗೆಲ್ಲುವ 8 ತಂಡಗಳು ಕ್ವಾರ್ಟರ್ ಫೈನಲ್ಗೆ ತಲುಪಲಿದೆ. ಕ್ವಾರ್ಟರ್ ಫೈನಲ್ನಲ್ಲಿ ಗೆಲ್ಲುವ ನಾಲ್ಕು ತಂಡಗಳು ಸೆಮಿಫೈನಲ್ಗೇರಲಿದೆ.
ಸೆಮಿ ಫೈನಲ್:
ಕ್ವಾರ್ಟರ್ ಫೈನಲ್ನಲ್ಲಿ ಗೆಲ್ಲುವ 4 ತಂಡಗಳು ಜುಲೈ 14, 2026 (ಮೊದಲ) ರಂದು ಮತ್ತ ಜುಲೈ 15, 2026 ರಂದು (ಎರಡನೇ) ಸೆಮಿಫೈನಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಫೈನಲ್ಗೇರಲಿದೆ. ಇನ್ನು ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ಕಂಚಿನ ಪದಕಕ್ಕಾಗಿ ಜುಲೈ 18, 2026 ರಂದು ಮುಖಾಮುಖಿಯಾಗಲಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್ಗೆ 33.87 ಕೋಟಿ ರೂ. ಲಾಭ!
ಫೈನಲ್ ಮ್ಯಾಚ್:
ಈ ಬಾರಿಯ ಫಿಫಾ ವಿಶ್ವಕಪ್ನ ಫೈನಲ್ ಪಂದ್ಯವು ಜುಲೈ 19, 2026 ರಂದು ಅಮೆರಿಕದ ಅತ್ಯಂತ ಪ್ರಸಿದ್ಧ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಜರುಗಲಿದೆ.