AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ!

Vaibhav Sooryavanshi: ಇಂಡಿಯನ್ ಪ್ರೀಮಿಯರ್ ಲೀಗ್​ 2026ರ ಸೀಸನ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಭರ್ಜರಿ ಲಾಭ ತಂದು ಕೊಟ್ಟಿದ್ದಾರೆ. ಅದು ಕೂಡ ಬರೋಬ್ಬರಿ 33.70 ಕೋಟಿ ರೂ. ಲಾಭ ತಂದು ಕೊಡುವ ಮೂಲಕ ಎಂಬುದು ವಿಶೇಷ.

ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ!
Vaibhav Sooryavanshi Image Credit source: IPL/vecteezy
ಝಾಹಿರ್ ಯೂಸುಫ್
|

Updated on:Jun 03, 2026 | 8:37 AM

Share

ವೈಭವ್ ಸೂರ್ಯವಂಶಿ… ವಯಸ್ಸು ಕೇವಲ 15, ಹರಾಜಿನಲ್ಲಿ ಸಿಕ್ಕಿದ್ದು 1.10 ಕೋಟಿ ರೂ, ಆದರೆ ಮೈದಾನದಲ್ಲಿ ಸೃಷ್ಟಿಸಿದ ಸಿಸಿಲಬ್ಬರದ ಮೌಲ್ಯ ಬರೋಬ್ಬರಿ 34.97 ಕೋಟಿ ರೂ.! ಹೌದು, ಇದು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿರುವ ವೈಭವ್ ಸೂರ್ಯವಂಶಿಯ ಈ ಬಾರಿ ಐಪಿಎಲ್​ ಮೌಲ್ಯ.

2025 ರಲ್ಲಿ 14 ವರ್ಷ ವರ್ಷದ ಅನ್‌ಕ್ಯಾಪ್ಡ್ ಆಟಗಾರ ವೈಭವ್ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 1.1 ಕೋಟಿ ರೂ.ಗೆ ಖರೀದಿಸಿದಾಗ ಇದೊಂದು ಸಾಮಾನ್ಯ ಹೂಡಿಕೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಈ ಸೀಸನ್‌ನಲ್ಲಿ ವೈಭವ್ ಸೃಷ್ಟಿಸಿದ ಸುನಾಮಿ, ಕ್ರಿಕೆಟ್ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹರಾಜು ಲಾಭವಾಗಿ ದಾಖಲಾಗಿದೆ.

ಅಂದರೆ ಸ್ಪೋರ್ಟ್ಸ್ ಡೇಟಾ ಅನಾಲಿಟಿಕ್ಸ್ ಮತ್ತು ಬಾಲ್-ಬೈ-ಬಾಲ್ ಇಂಪ್ಯಾಕ್ಟ್ ಮಾಡೆಲ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ವೈಭವ್ ಈ ಸೀಸನ್‌ನಲ್ಲಿ ನೀಡಿದ ಆನ್-ಫೀಲ್ಡ್ ಪ್ರದರ್ಶನದ ನಿಜವಾದ ಮೌಲ್ಯ ಬರೋಬ್ಬರಿ ₹34.97 ಕೋಟಿ ರೂ. ಅಂದರೆ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಹೂಡಿದ ಹಣಕ್ಕಿಂತ ಶೇ. 3000ಕ್ಕೂ ಹೆಚ್ಚು ಲಾಭವನ್ನು ಈ ಯುವ ಆಟಗಾರ ತಂದುಕೊಟ್ಟಿದ್ದಾನೆ.

ಕೋಟಿಗೆ ಕೋಟಿಗಳ ಲಾಭ:

  • ಈ ಬಾರಿಯ ಐಪಿಎಲ್​ನಲ್ಲಿ 16 ಇನಿಂಗ್ಸ್ ಆಡಿರುವ ವೈಭವ್ ಸೂರ್ಯವಂಶಿ ಬರೀಬ್ಬರಿ 776 ರನ್ ಚಚ್ಚಿದ್ದರು.
  • ವೈಭವ್ ಸೂರ್ಯವಂಶಿ ಈ ಬಾರಿ ಆರ್ಭಟಿಸಿದ್ದು 237.30ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ.
  • 237.30 ರ ಸ್ಟ್ರೈಕ್ ರೇಟ್​ನಲ್ಲಿ 700+ ರನ್ ಕಲೆಹಾಕಿದ ಆರೆಂಜ್ ಕ್ಯಾಪ್ ಗೆದ್ದ ಮೊದಲ ಆಟಗಾರ ವೈಭವ್.
  • ಕೇವಲ 16 ಇನಿಂಗ್ಸ್​ಗಳಲ್ಲಿ ವೈಭವ್ ಬ್ಯಾಟ್​ನಿಂದ ಸಿಡಿದ ಸಿಕ್ಸರ್​ ಸಂಖ್ಯೆ ಬರೋಬ್ಬರಿ 72

ಇವೆಲ್ಲಾ ರಾಜಸ್ಥಾನ್ ರಾಯಲ್ಸ್ ಪಾಲಿಗೆ ಕೋಟಿ ಲೆಕ್ಕದಲ್ಲಿ ಲಾಭ ತಂದು ಕೊಟ್ಟಿದೆ. ಅಂದರೆ ರಿಟರ್ನ್ ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ವೈಭವ್​ನಿಂದ ಆರ್​ಆರ್ ಫ್ರಾಂಚೈಸಿ ಬರೋಬ್ಬರಿ ಶೇ 3000 ದಷ್ಟು ಲಾಭ ಪಡೆದುಕೊಂಡಿದೆ.

ಏನಿದು ಇಂಪ್ಯಾಕ್ಟ್ ಮಾಡೆಲ್?

‘ರಿಟರ್ನ್ ಇಂಪ್ಯಾಕ್ಟ್ ಮಾಡೆಲ್’  ಅಥವಾ ‘ಪ್ಲೇಯರ್ ಇಂಪ್ಯಾಕ್ಟ್ ಮೆಟ್ರಿಕ್’ ಎನ್ನುವುದು ಐಪಿಎಲ್ ಮುಗಿದ ತಕ್ಷಣ ಆಟಗಾರರ ಪ್ರದರ್ಶನವನ್ನು ಮುಂದಿಟ್ಟು ಮಾಡುವ ಮೌಲ್ಯಧಾರಿತ ಲೆಕ್ಕಾಚಾರ. ಅಂದರೆ ಇಲ್ಲಿ ಆಟಗಾರ ಕಲೆಹಾಕಿದ ರನ್ ಅಥವಾ ಪಡೆದ ವಿಕೆಟ್‌ಗಳ ಆಧಾರದ ಮೇಲಲ್ಲದೆ, ಆತ ಮೈದಾನದಲ್ಲಿ ಆಡಿದ ಪ್ರತಿ ಚೆಂಡಿನ ಮೂಲಕ ಪಂದ್ಯದ ಮೇಲೆ ಬೀರಿದ ನೈಜ ಪ್ರಭಾವವನ್ನು ಹಣದ ಮೌಲ್ಯಕ್ಕೆ ಪರಿವರ್ತಿಸಿ ಲೆಕ್ಕಾಚಾರ ಮಾಡಲಾಗುತ್ತದೆ.

ಇದರೊಂದು ಸುಧಾರಿತ ಸ್ಪೋರ್ಟ್ಸ್ ಡೇಟಾ ಅನಾಲಿಟಿಕ್ಸ್ ವ್ಯವಸ್ಥೆಯಾಗಿದ್ದು, ಈ ಮೂಲಕ ಪ್ರತಿ ಸೀಸನ್​ನಲ್ಲಿ ಆಟಗಾರನಿಗೆ ನೀಡಲಾದ ಮೊತ್ತ ಹಾಗೂ ಆತನಿದಂದ ಫ್ರಾಂಚೈಸಿಗೆ ಆದ ಲಾಭವನ್ನು ಲೆಕ್ಕ ಮಾಡಲಾಗುತ್ತದೆ. ಬ್ಯಾಟರ್​ಗಳ ವಿಚಾರದಲ್ಲಿ ಇದನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಎಂದರೆ…

  • ಗೆಲುವಿನ ಸಂಭವನೀಯತೆ: ಒಬ್ಬ ಬ್ಯಾಟರ್ ಕ್ರೀಸ್‌ಗೆ ಬಂದಾಗ ತಂಡದ ಗೆಲುವಿನ ಶೇಕಡಾವಾರು ಎಷ್ಟಿತ್ತು? ಅವರು ಔಟಾಗಿ ಹೋಗುವಾಗ ಅಥವಾ ಪಂದ್ಯ ಮುಗಿಸುವಾಗ ಆ ಗೆಲುವಿನ ಅವಕಾಶ ಎಷ್ಟು ಹೆಚ್ಚಾಯಿತು? ಎಂಬುದನ್ನು ಪ್ರತಿ ಬಾಲ್‌ನಲ್ಲೂ ಲೆಕ್ಕ ಹಾಕಲಾಗುತ್ತದೆ.
  • ರನ್ ಗಳಿಸಿದ ವೇಗ: ಕಠಿಣ ಓವರ್‌ಗಳಲ್ಲಿ ಅಥವಾ ಪವರ್‌ಪ್ಲೇ ಅವಧಿಯಲ್ಲಿ ಎಷ್ಟು ವೇಗವಾಗಿ ರನ್ ಗಳಿಸಿದರು? ಎಂಬುದನ್ನು ಇಲ್ಲಿ ಪರಿಗಣಿಸಲಾಗುತ್ತದೆ.
  • ಪರಿಸ್ಥಿತಿಯ ಗಂಭೀರತೆ: ವಿಕೆಟ್‌ಗಳು ಬಿದ್ದಾಗ ಅಥವಾ ಒತ್ತಡದ ನಾಕೌಟ್ ಪಂದ್ಯಗಳಲ್ಲಿ ರನ್ ಬಂದಿವೆಯೇ? ಎಂಬುದನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
  • ಬೌಂಡರಿಗಳ ಕೊಡುಗೆ: ಎಷ್ಟು ಎಸೆತರಗಳಲ್ಲಿ ಬೌಂಡರಿ ಬಾರಿಸಿದ್ದಾರೆ, ಎಷ್ಟು ಡಾಟ್ ಬಾಲ್‌ಗಳನ್ನು ಆಡಿದ್ದಾರೆ ಎಂಬುದು ಕೂಡ ಪರಿಗಣನೆ ಬರುತ್ತದೆ.

ವೈಭವ್​ ಸೂರ್ಯವಂಶಿಯಿಂದ ಸಿಕ್ಕ ಲಾಭವೇನು?

ವೈಭವ್ ಸೂರ್ಯವಂಶಿಗೆ ರಾಜಸ್ಥಾನ್ ರಾಯಲ್ಸ್ ಹೂಡಿಕೆ ಮಾಡಿರುವುದು 1.1 ಕೋಟಿ ರೂ. ಅಂದರೆ ಅವರಿಗೆ ಈ ಬಾರಿ ಆರ್​ಆರ್ ಫ್ರಾಂಚೈಸಿ ನೀಡಿರುವ ಸಂಭಾವನೆ ಎಷ್ಟು ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಈ ಸಂಭಾವನೆಯನ್ನು ವೈಭವ್ ಆಡಿದ 16 ಪಂದ್ಯಗಳಿಗೆ ಹಂಚಿದರೆ, ಪ್ರತಿ ಪಂದ್ಯಕ್ಕೆ ಅವರ ಮೇಲೆ ಫ್ರಾಂಚೈಸಿ ಮಾಡಿದ ಖರ್ಚು ₹6.88 ಲಕ್ಷ.ಗಳಿಸಿದ ಮೌಲ್ಯ. ಆದರೆ ಅದೇ ವೈಭವ್ ಆಡಿದ ಇನಿಂಗ್ಸ್​ಗಳ ಮೌಲ್ಯ ಫ್ರಾಂಚೈಸಿ ಮಾಡಿದ ಖರ್ಚಿಗಿಂತ ಹೆಚ್ಚಿತ್ತು.

ಉದಾಹರಣೆಗೆ, ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿದ್ದರು. ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದಲೇ ರಾಜಸ್ಥಾನ್ ರಾಯಲ್ಸ್ ತಂಡ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ಆ 29 ಎಸೆತಗಳ ಒಂದೇ ಇನಿಂಗ್ಸ್‌ನ ಮೌಲ್ಯ ಬರೋಬ್ಬರಿ ₹5.22 ಕೋಟಿ ಎಂದು ಅಂದಾಜಿಸಲಾಯಿತು!

ಅಂದರೆ ಆಟಗಾರನಿಗೆ ನೀಡುತ್ತಿರುವ ಸಂಭಾವನೆ ಹಾಗೂ ಆತ ಆಡುತ್ತಿರುವ ಆಟ, ಪಂದ್ಯದ ಮೇಲೆ ಬೀರುತ್ತಿರುವ ಪ್ರಭಾವ, ಗೆಲುವಿನ ಕೊಡುಗೆಗಳಲ್ಲೆವೂ ಇಂಪ್ಯಾಕ್ಟ್ ಮಾಡೆಲ್​ನಲ್ಲಿ ಅಳೆಯಲಾಗುತ್ತದೆ. ಹೀಗೆ ಪ್ರತಿಯೊಂದನ್ನು ಪರಿಗಣಿಸುವ ಮೂಲಕ ಆತನ ಒಟ್ಟು ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಅದರಂತೆ ವೈಭವ್ ಸೂರ್ಯವಂಶಿಯ ಇಂಪ್ಯಾಕ್ಟ್ ಮಾಡೆಲ್​ ಅನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗಿದೆ…

  • ವೈಭವ್ ಸೂರ್ಯವಂಶಿಗೆ ಹೂಡಿಕೆ ಮಾಡಲಾದ ಒಟ್ಟು ಮೊತ್ತ ₹1.1 ಕೋಟಿ  (ಹರಾಜು ಮೊತ್ತ).
  • ವೈಭವ್ ಸೂರ್ಯವಂಶಿ ಪ್ರದರ್ಶನದ ಮೌಲ್ಯ ₹34.97 ಕೋಟಿ
  • ಫ್ರಾಂಚೈಸಿಗೆ ಸಿಕ್ಕ ನಿವ್ವಳ ಲಾಭ: ₹34.80 ಕೋಟಿ – ₹1.10 ಕೋಟಿ = ₹33.87 ಕೋಟಿ

ಅಂದರೆ ವೈಭವ್ ಸೂರ್ಯವಂಶಿ ₹30 ಕೋಟಿಗೂ ಅಧಿಕ ಮೌಲ್ಯದ ಪ್ರದರ್ಶನ ನೀಡಿದ್ದಾರೆ. ಅಂದರೆ ₹30 ಕೋಟಿ ಸಂಭಾವನೆ ಪಡೆಯುವ ಆಟಗಾರನಿಂದ ಸಿಗುವ ಪ್ರದರ್ಶನವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಕೇವಲ ₹1.10 ಕೋಟಿಯ ಹೂಡಿಕೆಯಲ್ಲೇ ಪಡೆದು ಕೊಂಡಿದೆ.

ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ರಾಜಸ್ಥಾನ್ ರಾಯಲ್ಸ್ ವೈಭವ್​ ಮೇಲೆ ಹೂಡಿದ ಪ್ರತಿ 1 ರೂಪಾಯಿಗೆ ₹31.79 ರಷ್ಟು ಮೌಲ್ಯದ ಆಟ ಮರಳಿ ಸಿಕ್ಕಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ₹1.1 ಕೋಟಿ ಹೂಡಿಕೆಯಿಂದ ಬರೋಬ್ಬರಿ ₹33.87 ಕೋಟಿ ಮೌಲ್ಯಾಧಾರಿತ ಲಾಭ ಪಡೆದುಕೊಂಡಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

ಇನ್ನೂ ಸರಳವಾಗಿ ಹೇಳಬೇಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ನೀಡಿದ ಪ್ರದರ್ಶನದ ಮೌಲ್ಯ 34.97 ಕೋಟಿ ರೂ.  ಇದನ್ನು ಬಿಡ್ಡಿಂಗ್ ಲೆಕ್ಕಾಚಾರದಲ್ಲಿ  ಪರಿಗಣಿಸಿದರೆ ವೈಭವ್ ಕನಿಷ್ಠ 30 ಕೋಟಿ ರೂ.ಗೆ ಹರಾಜಾಗಬಹುದಾದ ಆಟಗಾರ. ಹೀಗಾಗಿ ವೈಭವ್ ಸೂರ್ಯವಂಶಿ ಮುಂಬರುವ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಖರೀದಿಗಾಗಿ ಕೋಟಿಗಳ ಸುರಿಮಳೆಯಾಗುವುದು ಖಚಿತ ಎಂದೇ ಹೇಳಬಹುದು.

Published On - 8:33 am, Wed, 3 June 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More