
ಫಿಫಾ ವಿಶ್ವಕಪ್‌ನ 23ನೇ ಸೀಸನ್ಗೆ ಅದ್ಧೂರಿ ಚಾಲನೆ ದೊರೆತಿದೆ. ಮೆಕ್ಸಿಕೋದ ಪ್ರತಿಷ್ಠಿತ ಎಸ್ಟಾಡಿಯೋ ಅಝಟೆಕಾ ಕ್ರೀಡಾಂಗಣದಲ್ಲಿ ನಡೆದ ಮೆಕ್ಸಿಕೋ ಮತ್ತು ಸೌತ್ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯವು ಇದೀಗ ಇತಿಹಾಸ ಪುಟ ಸೇರಿದೆ. ಆದರೆ ಇದು ಆಟದಿಂದಲ್ಲ. ಬದಲಾಗಿ ರೆಡ್ ಕಾರ್ಡ್ನಿಂದಾಗಿ..!
ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ಸೌತ್ ಆಫ್ರಿಕಾವನ್ನು 2-0 ಗೋಲುಗಳಿಂದ ಮಣಿಸಿತು. ಆದರೆ, ಎಸ್ಟಾಡಿಯೋ ಅಝಟೆಕಾ ಕ್ರೀಡಾಂಗಣದಲ್ಲಿ ನಡೆದ ಈ ಹಣಾಹಣಿ ಫುಟ್‌ಬಾಲ್ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಹಾಗೂ ಕಠಿಣ ಪಂದ್ಯವಾಗಿ ದಾಖಲಾಗಿದೆ. ಇದಕ್ಕೆ ಮುಖ್ಯ ಕಾರಣ ಮೂವರು ಆಟಗಾರರು ರೆಡ್ ಕಾರ್ಡ್ ಪಡೆದಿರುವುದು.
ಈ ಪಂದ್ಯದಲ್ಲಿ ರೆಫರಿಯಾಗಿ ಕಾಣಿಸಿಕೊಂಡ ಬ್ರೆಝಿಲ್ನ ವಿಲ್ಟನ್ ಪೆರೇರಾ ಸಂಪಾಯೊ ಅವರು ದ್ವಿತೀಯಾರ್ಧದಲ್ಲಿ ಒಟ್ಟು 3 ನೇರ ರೆಡ್ ಕಾರ್ಡ್‌ಗಳನ್ನು ಪ್ರದರ್ಶಿಸಿ ಇತಿಹಾಸ ನಿರ್ಮಿಸಿದರು. ಅಂದರೆ ವಿಶ್ವಕಪ್ ಇತಿಹಾಸದಲ್ಲಿ ಉದ್ಘಾಟನಾ ಪಂದ್ಯವೊಂದರಲ್ಲೇ ಮೂವರು ಆಟಗಾರರು ಮೈದಾನದಿಂದ ಹೊರಹಾಕಲ್ಪಟ್ಟಿರುವುದು ಇದೇ ಮೊದಲು.
ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಂತಾರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ (IFAB) ಜಾರಿಗೆ ತಂದಿರುವ ಹೊಸ ಶಿಸ್ತಿನ ನಿಯಮಗಳೇ 3 ರೆಡ್ ಕಾರ್ಡ್ ಸಿಗಲು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ರೆಡ್ ಕಾರ್ಡ್ ಪಡೆದ ಆಟಗಾರ ತಕ್ಷಣವೇ ಮೈದಾನವನ್ನು ಬಿಟ್ಟು ಹೊರಹೋಗಬೇಕು. ಅವರು ಪಂದ್ಯದ ಉಳಿದ ಅವಧಿಯಲ್ಲಿ ಮೈದಾನದಲ್ಲಿ ಆಡುವಂತಿಲ್ಲ ಮತ್ತು ಸಬ್‌ಸ್ಟಿಟ್ಯೂಟ್ ಬೆಂಚ್‌ನಲ್ಲಿಯೂ ಕುಳಿತುಕೊಳ್ಳುವಂತಿಲ್ಲ.
ಹಾಗೆಯೇ ರೆಡ್ ಕಾರ್ಡ್ ಪಡೆದ ಆಟಗಾರನ ಬದಲಿಗೆ ಸಬ್‌ಸ್ಟಿಟ್ಯೂಟ್ ಆಗಿ ಮತ್ತೊಬ್ಬ ಆಟಗಾರನನ್ನು ಮೈದಾನಕ್ಕೆ ಇಳಿಸಲು ಅವಕಾಶವಿರುವುದಿಲ್ಲ. ಇದರಿಂದಾಗಿ ಆ ತಂಡವು ಉಳಿದ ಪಂದ್ಯವನ್ನು ಕೇವಲ 10 ಆಟಗಾರರೊಂದಿಗೆ ಆಡಬೇಕಾಗುತ್ತದೆ. ಇದು ತಂಡದ ಮೇಲೆ ಭಾರಿ ಒತ್ತಡವನ್ನು ಉಂಟುಮಾಡುವುದಲ್ಲದೆ, ಸೋಲಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಇನ್ನು ರೆಡ್ ಕಾರ್ಡ್ ಪಡೆದ ಆಟಗಾರನಿಗೆ ಕೇವಲ ಆ ಪಂದ್ಯ ಮಾತ್ರವಲ್ಲದೆ, ಅವರ ತಂಡ ಆಡುವ ಮುಂದಿನ ಕನಿಷ್ಠ ಒಂದು ಪಂದ್ಯದಲ್ಲಿ ಆಡದಂತೆ ನಿಷೇಧ ಹೇರಲಾಗುತ್ತದೆ. ತಪ್ಪು ತುಂಬಾ ಗಂಭೀರವಾಗಿದ್ದರೆ (ಉದಾಹರಣೆಗೆ ಮೈದಾನದಲ್ಲಿ ಹೊಡೆದಾಟ ನಡೆಸಿದ್ದರೆ), ಫಿಫಾ ಶಿಸ್ತು ಸಮಿತಿಯು ಈ ನಿಷೇಧವನ್ನು 3 ಪಂದ್ಯಗಳವರೆಗೆ ವಿಸ್ತರಿಸಬಹುದು.
ಇದನ್ನೂ ಓದಿ: ಬರೋಬ್ಬರಿ 27 ಪಂದ್ಯಗಳು… ಟೀಮ್ ಇಂಡಿಯಾದ ವಿಶ್ವಕಪ್ ಸಿದ್ಧತೆ ಶುರು!
2022ರ ಇಡೀ ಖತಾರ್ ವಿಶ್ವಕಪ್‌ನ ಒಟ್ಟು 64 ಪಂದ್ಯಗಳಲ್ಲಿ ಕೇವಲ 4 ರೆಡ್ ಕಾರ್ಡ್‌ಗಳನ್ನು ಮಾತ್ರ ನೀಡಲಾಗಿತ್ತು. ಆದರೆ, 2026ರ ವಿಶ್ವಕಪ್‌ನಲ್ಲಿ ಕೇವಲ ಉದ್ಘಾಟನಾ ದಿನವೇ 3 ರೆಡ್ ಕಾರ್ಡ್‌ಗಳು ಹೊರಬಿದ್ದಿರುವುದು ಟೂರ್ನಿಯು ಎಷ್ಟು ಆಕ್ರಮಣಕಾರಿ ಮತ್ತು ಕಟ್ಟುನಿಟ್ಟಾಗಿ ಸಾಗಲಿದೆ ಎಂಬುದಕ್ಕೆ ಮುನ್ಸೂಚನೆಯಾಗಿದೆ.