FIFA World Cup 2026: ನಾಕೌಟ್ ರೌಂಡ್​ಗೆ ಬ್ರೆಝಿಲ್ ಎಂಟ್ರಿ

FIFA World Cup 2026: ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹೆಗ್ಗಳಿಕೆ ಹೊಂದಿರುವ ಬ್ರೆಝಿಲ್ ತಂಡ ಇದೀಗ ಆರನೇ ಬಾರಿ ಟ್ರೋಫಿ ಎತ್ತಿ ಹಿಡಿಯಲು ದಾಂಗುಡಿಯಿಟ್ಟಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ಬ್ರೆಝಿಲ್ ತಂಡವು ರೌಂಡ್ ಆಫ್ 32 ಸುತ್ತಿಗೆ ಪ್ರವೇಶಿಸಿದೆ.

FIFA World Cup 2026: ನಾಕೌಟ್ ರೌಂಡ್​ಗೆ ಬ್ರೆಝಿಲ್ ಎಂಟ್ರಿ
Brazil

Updated on: Jun 25, 2026 | 10:07 AM

ಫಿಫಾ ವಿಶ್ವಕಪ್ 2026ರ 49ನೇ ಪಂದ್ಯದಲ್ಲಿ ಬ್ರೆಝಿಲ್ ತಂಡ ಭರ್ಜರಿ ಜಯ ಸಾಧಿಸಿದೆ. ಮಿಯಾಮಿ ನಗರದ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬ್ರೆಝಿಲ್ ಹಾಗೂ ಸ್ಕಾಟ್​ಲ್ಯಾಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಹಿಂದಿನ ಪಂದ್ಯದಂತೆ ಈ ಮ್ಯಾಚ್​ನಲ್ಲೂ ಸಾಂಪ್ರದಾಯಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಬ್ರೆಝಿಲ್ ಮೊದಲಾರ್ಧದಲ್ಲೇ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು.

ಅದರಲ್ಲೂ ವೇಗದೊಂದಿಗೆ ಮುನ್ನುಗ್ಗಿ ಆಡಿದ ಸ್ಟಾರ್ ಫಾರ್ವರ್ಡ್ ಆಟಗಾರ ವಿನೀಸಿಯಸ್ ಜೂನಿಯರ್ ಪಂದ್ಯದ ಆರಂಭದಲ್ಲೇ (7ನೇ ನಿಮಿಷದಲ್ಲಿ) ಮೊದಲ ಗೋಲು ಬಾರಿಸಿದರು. ನಂತರ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ (ಇಂಜುರಿ ಟೈಮ್) ಮತ್ತೊಂದು ಆಕರ್ಷಕ ಹೆಡರ್ ಮೂಲಕ 2ನೇ ಗೋಲು ದಾಖಲಿಸಿದರು.

ಇನ್ನು ದ್ವಿತೀಯಾರ್ಧದ 60ನೇ ನಿಮಿಷದಲ್ಲಿ ಬ್ರೂನೋ ಗಿಮರೈಸ್ ನೀಡಿದ ಅದ್ಭುತ ಪಾಸ್ ಅನ್ನು ಮ್ಯಾಥ್ಯೂಸ್ ಕುನ್ಹಾ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಬ್ರೆಝಿಲ್ ತಂಡವು  3-0 ಅಂತರದ ಜಯವನ್ನು ಖಚಿತಪಡಿಸಿಕೊಂಡಿತು.

ನೇಮರ್ ಕಂಬ್ಯಾಕ್:

ಈ ಪಂದ್ಯದ ಮೂಲಕ ಬ್ರೆಝಿಲ್​ನ ಸಾರ್ವಕಾಲಿಕ ಗರಿಷ್ಠ ಗೋಲುಗಾರ ನೇಮರ್ ಜೂನಿಯರ್ ಕಂಬ್ಯಾಕ್ ಮಾಡಿದ್ದಾರೆ.. ಬಲಗಾಲಿನ ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿದ್ದ ಅವರು ಈ ಹಿಂದಿನ ಎರಡು ಮ್ಯಾಚ್​ಗಳಲ್ಲಿ ಕಣಕ್ಕಿಳಿದಿರಲಿಲ್ಲ. ಆದರೆ ಸ್ಕಾಟ್​ಲ್ಯಾಂಡ್ ವಿರುದ್ಧದ  ಪಂದ್ಯದ 76ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದರು. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ನೇಮರ್ ಜೂನಿಯರ್ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.

ನಾಕೌಟ್ ಹಂತಕ್ಕೆ ಬ್ರೆಝಿಲ್ ಎಂಟ್ರಿ:

ಈ ಗೆಲುವಿನೊಂದಿಗೆ ಬ್ರೆಝಿಲ್ ಒಟ್ಟು 7 ಅಂಕಗಳನ್ನು ಗಳಿಸಿ, ಉತ್ತಮ ಗೋಲುಗಳ ವ್ಯತ್ಯಾಸದ ಆಧಾರದ ಮೇಲೆ ಮೊರಾಕೊ ತಂಡವನ್ನು ಹಿಂದಿಕ್ಕಿ ಗ್ರೂಪ್ ‘ಸಿ’ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದರೊಂದಿಗೆ ಸಾಂಬಾ ಪಡೆ ಮುಂದಿನ ಹಂತಕ್ಕೇರಿದೆ. ಅಂದರೆ 32 ತಂಡಗಳ ನಡುವಣ ನಾಕೌಟ್ ರೌಂಡ್​ನಲ್ಲಿ ಬ್ರೆಝಿಲ್ ಕಣಕ್ಕಿಳಿಯಲಿದೆ.

ಇದನ್ನೂ ಓದಿ: ಧೈರ್ಯವಿದ್ದರೆ ನೇರವಾಗಿ ಹೇಳಿ: ಆಯ್ಕೆ ಸಮಿತಿ ವಿರುದ್ಧ ಮಂಜ್ರೇಕರ್ ವಾಗ್ದಾಳಿ

ಬ್ರೆಝಿಲ್ ಎದುರಾಳಿ ಯಾರು?

ಲೀಗ್​ ಹಂತದಲ್ಲಿ ಗ್ರೂಪ್ ‘ಸಿ’ ಅಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿರುವ ಬ್ರೆಝಿಲ್, ಜೂನ್ 29 ರಂದು ತನ್ನ ಮೊದಲ ನಾಕೌಟ್ ಪಂದ್ಯವನ್ನು ಆಡಲಿದೆ.  ಈ ಪಂದ್ಯದಲ್ಲಿ ಬ್ರೆಝಿಲ್ ಪಾಲಿಗೆ ಎದುರಾಳಿಯಾಗಿ ಗ್ರೂಪ್ ‘ಎಫ್’ ನ ರನ್ನರ್ ಅಪ್ ತಂಡ ಸಿಗಲಿದೆ. ಅಂದರೆ ನೆದರ್ಲ್ಯಾಂಡ್ಸ್ ಅಥವಾ ಜಪಾನ್ ಅಥವಾ ಸ್ವೀಡನ್ ತಂಡದೊಂದಿಗೆ ಬ್ರೆಝಿಲ್ ಸೆಣಸಲಿದೆ.

 

 

Follow Us