ಫುಟ್ಬಾಲ್ ಪಂದ್ಯದ ವೇಳೆ ಫ್ಯಾನ್ಸ್ ವಾರ್..! ಕಾಲ್ತುಳಿತಕ್ಕೆ 56 ಜೀವಗಳು ಬಲಿ; ಸತ್ತವರಲ್ಲಿ ಹೆಚ್ಚಿನವರು ಚಿಕ್ಕ ಮಕ್ಕಳು
Football Fan Violence: ದಕ್ಷಿಣ ಗಿನಿಯಾದಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವಿನ ಘರ್ಷಣೆಯಿಂದ ಭೀಕರ ಕಾಲ್ತುಳಿತ ಸಂಭವಿಸಿ 56 ಜನರು ಸಾವನ್ನಪ್ಪಿದ್ದಾರೆ. ರೆಫರಿಯ ನಿರ್ಧಾರದಿಂದ ಉಂಟಾದ ವಿವಾದ, ಹಿಂಸಾಚಾರಕ್ಕೆ ಕಾರಣವಾಗಿದೆ. ಈ ಅವಘಡದಲ್ಲಿ ಅನೇಕರು ಗಾಯಗೊಂಡಿದ್ದು, ಸರ್ಕಾರ ತನಿಖೆಗೆ ಆದೇಶಿಸಿದೆ.
ಕ್ರಿಕೆಟ್ ಆಗಿರಲಿ ಅಥವಾ ಫುಟ್ಬಾಲ್ ಆಗಿರಲಿ, ಈ ಎರಡು ಕ್ರೀಡೆಗಳಲ್ಲಿ ಫ್ಯಾನ್ಸ್ ವಾರ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಮೈದಾನದಲ್ಲಿ ಪಂದ್ಯ ನಡೆಯುವ ವೇಳೆ ಎರಡೂ ತಂಡಗಳ ಅಭಿಮಾನಿಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಬಡಿದಾಡಿಕೊಂಡಿರುವುದನ್ನು ನಾವು ನೋಡಿದ್ದೇವೆ. ಆದರೆ ಅಭಿಮಾನಿಗಳ ಈ ಅತಿರೇಕದಿಂದಾಗಿ ಪಂದ್ಯ ವೀಕ್ಷಿಸಲು ಬಂದಿದ್ದ ಇತರ ಅಮಾಯಕ ಜೀವಗಳು ಉಸಿರು ಚೆಲ್ಲಿರುವ ಹೃದಯ ವಿದ್ರಾವಕ ಘಟನೆ ಆಫ್ರಿಕಾದಲ್ಲಿ ನಡೆದಿದೆ. ಆಫ್ರಿಕಾದ ದಕ್ಷಿಣ ಗಿನಿಯಾದಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಎರಡು ತಂಡಗಳ ಅಭಿಮಾನಿಗಳ ನಡುವೆ ಉಂಟಾದ ಗಲಭೆಯಿಂದ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತದಲ್ಲಿ 56 ಅಮಾಯಕ ಜೀವಗಳು ಬಲಿಯಾಗಿವೆ ಎಂದು ವರದಿಯಾಗಿದೆ.
56 ಜೀವಗಳು ಬಲಿ
ವರದಿಗಳ ಪ್ರಕಾರ, ದಕ್ಷಿಣ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್ಜೆರಕೋರ್‌ನಲ್ಲಿ ನಡೆಯುತ್ತಿರುವ ಫುಟ್‌ಬಾಲ್ ಪಂದ್ಯಾವಳಿಯ ವೇಳೆ, ಎರಡು ತಂಡಗಳ ಅಭಿಮಾನಿಗಳ ನಡುವೆ ಭೀಕರ ಘರ್ಷಣೆ ಸಂಭವಿಸಿದೆ. ಇದರಿಂದಾಗಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿದ್ದು ಈ ಅವಘಡದಲ್ಲಿ 56 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಫುಟ್‌ಬಾಲ್ ಪಂದ್ಯದ ವೇಳೆ ಸಂಭವಿಸಿದ ಈ ಅವಘಡದಲ್ಲಿ ಇಲ್ಲಿಯವರೆಗೆ 56 ಜನರು ಸಾವನ್ನಪ್ಪಿದ್ದಾರೆ ಎಂದು ದಕ್ಷಿಣ ಗಿನಿಯಾ ಸರ್ಕಾರ ಮಾಹಿತಿ ನೀಡಿದೆ, ಆದರೆ ಡಜನ್‌ಗಟ್ಟಲೆ ಜನರ ಸ್ಥಿತಿ ಚಿಂತಾಜನಕವಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ವಾಸ್ತವವಾಗಿ ಎರಡು ತಂಡಗಳ ಅಭಿಮಾನಿಗಳ ನಡುವೆ ಘರ್ಷಣೆ ಆರಂಭವಾಗಲು ತೀರ್ಪುಗಾರರು ನೀಡಿದ ವಿವಾದಾತ್ಮಕ ನಿರ್ಧಾರ ಕಾರಣವಾಗಿದ್ದು, ಆ ನಂತರ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸ್ವಲ್ಪ ಸಮಯದಲ್ಲೇ ಈ ಸಂಘರ್ಷ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂದರೆ ಮೈದಾನದಲ್ಲಿ ಕಾಲ್ತುಳಿತ ಉಂಟಾಗಿ ಜನರು ಪ್ರಾಣ ಉಳಿಸಿಕೊಳ್ಳಲು ಓಡಲಾರಂಭಿಸಿದ್ದಾರೆ. ಇದರಿಂದ ಕಾಲ್ತುಳಿತ ಮತ್ತಷ್ಟು ಹೆಚ್ಚಾಗಿದ್ದು, ಅಮಾಯಕರ ಜೀವ ಹೋಗಿದೆ. ಇನ್ನು ಈ ಅವಘಡದ ಬಗ್ಗೆ ಮಾಹಿತಿ ನೀಡಿರುವ ದೇಶದ ಸಂಪರ್ಕ ಸಚಿವರು, ಈ ಅವಘಡದ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
100's Killed in Rivalry between Two soccer Team Fans in Guinea #soccer #Guinea@Mrgunsngear pic.twitter.com/GJlImuQsFZ
— The Global South Post (@INdEptHGlobal) December 2, 2024
ವಿವಾದಾತ್ಮಕ ತೀರ್ಪಿನಿಂದ ಹುಟ್ಟಿಕೊಂಡ ಜಗಳ
ಮಾಧ್ಯಮ ವರದಿಗಳ ಪ್ರಕಾರ, ದೇಶದ ಮಿಲಿಟರಿ ಸರ್ವಾಧಿಕಾರಿ ಮತ್ತು ಹಂಗಾಮಿ ಅಧ್ಯಕ್ಷ ಮಮಡಿ ಡುಂಬೊಯಾ ಅವರ ಗೌರವಾರ್ಥ ಆಯೋಜಿಸಲಾದ ಪಂದ್ಯಾವಳಿಯ ಫೈನಲ್ ಪಂದ್ಯದ ವೇಳೆ ಈ ಭೀಕರ ಘಟನೆ ನಡೆದಿದೆ. ಲೆಬಾ ಮತ್ತು ಎನ್ಜೆರಕೋರ್ ತಂಡಗಳ ನಡುವಿನ ಫೈನಲ್ ಪಂದ್ಯದ ವೇಳೆ, ರೆಫರಿಯ ನಿರ್ಧಾರದ ಬಗ್ಗೆ ವಿವಾದ ಉಂಟಾಗಿದೆ. ಇತ್ತಂಡಗಳ ನಡುವೆ ಆರಂಭವಾದ ವಿವಾದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳಿಗೂ ತಲುಪಿ ಜಗಳ ಆರಂಭವಾಗಿದೆ. ಹೀಗಾಗಿ ಎರಡೂ ಕಡೆಯ ಅಭಿಮಾನಿಗಳು ಪರಸ್ಪರ ಕಲ್ಲು ತೂರಾಟ ಆರಂಭಿಸಿದ್ದಾರೆ. ಈ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಗುಂಡುಗಳನ್ನು ಹಾರಿಸಿದ್ದಾರೆ. ಆ ನಂತರ ಉಂಟಾದ ಗೊಂದಲದಿಂದ ಪ್ರೇಕ್ಷಕರು ಮೈದಾನದಿಂದ ಓಡಲಾರಂಭಿಸಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Warning Graphic V: It's still unclear how many people died on Sunday at a football match b/n rival fans in #Guinea. But locals say the number is over 100. Images & videos circulating on SM have shown many dead bodies in a hospital. The authorities have called for calm. #football pic.twitter.com/8E3tvSDUov
— Baillor Jalloh (@baillorjah) December 2, 2024
ಸತ್ತವರಲ್ಲಿ ಹೆಚ್ಚಿನವರು ಚಿಕ್ಕ ಮಕ್ಕಳು
ಇನ್ನು ಕಾಲ್ತುಳಿತದಿಂದ ಸತ್ತವರಲ್ಲಿ ಹೆಚ್ಚಿನವರು ಚಿಕ್ಕ ಮಕ್ಕಳು ಎಂದು ವರದಿಯಾಗಿದ್ದು, ಸಾವನ್ನಪ್ಪಿದ್ದ ಅಪ್ರಾಪ್ತರನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಅಹಿತಕರ ಘಟನೆಯ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಮೃತ ದೇಹಗಳು ಮತ್ತು ಗಾಯಗೊಂಡ ಅಭಿಮಾನಿಗಳು ಮೈದಾನದಲ್ಲೇ ನರಳಾಡುತ್ತಿರುವುದನ್ನು ಕಾಣಬಹುದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Mon, 2 December 24