IND vs ENG: ಯಾರೇ ಕೂಗಾಡಲಿ, ಊರೇ ಹೋರಾಡಲಿ… ಜೋಫ್ರಾ ಆರ್ಚರ್ ನಿದ್ರೆಗೆ ಭಂಗವಿಲ್ಲ
India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ 8 ಪಂದ್ಯಗಳ ಸರಣಿ ಮುಗಿದಿದೆ. ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಮೂಲಕ ಆಂಗ್ಲರ ವಿರುದ್ಧ ಎರಡೂ ಸರಣಿಯಲ್ಲೂ ಭಾರತೀಯರು ಪಾರುಪತ್ಯ ಮೆರೆದಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಮುಗಿದಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ 4 ವಿಕೆಟ್ಗಳ ಜಯ ಸಾಧಿಸಿದ್ದ ಟೀಮ್ ಇಂಡಿಯಾ, ದ್ವಿತೀಯ ಪಂದ್ಯವನ್ನು ಸಹ ನಾಲ್ಕು ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಇನ್ನು ಮೂರನೇ ಮ್ಯಾಚ್ನಲ್ಲಿ ಭಾರತ ತಂಡ 142 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು.
ಆದರೆ ಬಟ್ಲರ್ ಅವರ ನಿರ್ಧಾರ ತಪ್ಪು ಎಂಬುದನ್ನು ಮೊದಲ 10 ಓವರ್ಗಳಲ್ಲೇ ಟೀಮ್ ಇಂಡಿಯಾ ಬ್ಯಾಟರ್ಗಳು ಸಾರಿ ಹೇಳಿದ್ದರು. ಏಕೆಂದರೆ ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್, ಆ ಬಳಿಕ ಬಂದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಗಿಲ್ 112 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 52 ರನ್ ಗಳಿಸಿದರು. ಇನ್ನು ಶ್ರೇಯಸ್ ಅಯ್ಯರ್ 78 ರನ್ ಚಚ್ಚಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್ಗಳಲ್ಲಿ 356 ರನ್ ಕಲೆಹಾಕಿತು.
357 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮೊದಲ 10 ಓವರ್ಗಳಲ್ಲಿ 84 ರನ್ ಬಾರಿಸಿದ್ದರು. ಆದರೆ ಆ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾದರು. ಪರಿಣಾಮ ಆಂಗ್ಲರು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು.
ಅತ್ತ ಇಂಗ್ಲೆಂಡ್ ಬ್ಯಾಟರ್ಗಳು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರೆ, ಇತ್ತ ಡಗೌಟ್ನಲ್ಲಿ ಜೋಫ್ರಾ ಆರ್ಚರ್ ಗಾಢ ನಿದ್ದೆಗೆ ಜಾರಿದ್ದರು. ಅದರಲ್ಲೂ ಅಹಮದಾಬಾದ್ನಂತಹ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಹರ್ಷೋದ್ಘಾರ ಮುಗಿಲು ಮುಟ್ಟಿದ್ದರೂ ಆರ್ಚರ್ ಅವರ ನಿದ್ರೆಗೆ ಮಾತ್ರ ಭಂಗ ಬರಲಿಲ್ಲ. ಇದೀಗ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ನಿದ್ದೆ ಮಾಡುತ್ತಿರುವ ಆರ್ಚರ್ ಅವರ ವಿಡಿಯೋ ವೈರಲ್ ಆಗಿದೆ.
ಜೋಫ್ರಾ ಆರ್ಚರ್ ನಿದ್ರೆ ಮಾಡುತ್ತಿರುವ ವಿಡಿಯೋ:
Jofra archer 😂 pic.twitter.com/3Ej7PCF2Dz
— Zsports (@_Zsports) February 13, 2025
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 357 ರನ್ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 34.2 ಓವರ್ಗಳಲ್ಲಿ 214 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 142 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇದನ್ನೂ ಓದಿ: ಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್ ಮತ್ತೆ ಆಯ್ಕೆ… ಆದರೆ
ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದಕ್ಕೂ ಮುನ್ನ ನಡೆದ ಟ5 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ.
