IPL 2025: ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್
IPL 2025: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2025 ಪಂದ್ಯವು ರೋಮಾಂಚಕ ಸೂಪರ್ ಓವರ್‌ನಲ್ಲಿ ಕೊನೆಗೊಂಡಿತು. ಡೆಲ್ಲಿ ಮೊದಲು ಬ್ಯಾಟ್ ಮಾಡಿ 188 ರನ್ ಗಳಿಸಿತು. ರಾಜಸ್ಥಾನ ಕೂಡ ಅಷ್ಟೇ ರನ್ ಗಳಿಸಿದ್ದರಿಂದ ಸೂಪರ್ ಓವರ್ ಅಗತ್ಯವಾಯಿತು. ಸೂಪರ್ ಓವರ್‌ನಲ್ಲಿ ಡೆಲ್ಲಿ ಗೆಲುವು ಸಾಧಿಸಿತು. ಕೆ.ಎಲ್. ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಅದ್ಭುತ ಪ್ರದರ್ಶನ ಡೆಲ್ಲಿಗೆ ಗೆಲುವು ತಂದುಕೊಟ್ಟಿತು.

ತೀವ್ರ ರೋಚಕತೆಯಿಂದ ಕೂಡಿದ್ದ 2025 ರ ಐಪಿಎಲ್ನ (IPL 2025) 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ (DC vs RR) ತಂಡವನ್ನು ಸೂಪರ್ ಓವರ್‌ನಲ್ಲಿ ಮಣಿಸಿ ಅಮೋಘ ಗೆಲುವು ದಾಖಲಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 188 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ಕೂಡ ಅಷ್ಟೇ ಮೊತ್ತವನ್ನು ಪೇರಿಸಿತು. ಹೀಗಾಗಿ ಪಂದ್ಯ ಸೂಪರ್ ಓವರ್‌ನತ್ತ ಸಾಗಿತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 11 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಇನ್ನು 2 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು. ಸೂಪರ್ ಓವರ್‌ನಲ್ಲಿ ದೆಹಲಿ ಪರವಾಗಿ ಕೆಎಲ್ ರಾಹುಲ್ (KL Rahul) ಮತ್ತು ಟ್ರಿಸ್ಟಾನ್ ಸ್ಟಬ್ಸ್ ಕ್ರಮವಾಗಿ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಡೆಲ್ಲಿ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ರಾಜಸ್ಥಾನ್ಗೆ ಸತತ 3ನೇ ಸೋಲು ಎದುರಾಯಿತು.
ಪೊರೆಲ್- ರಾಹುಲ್ ಜೊತೆಯಾಟ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ಅಭಿಷೇಕ್ ಪೊರೆಲ್ ಮತ್ತು ಕೆಎಲ್ ರಾಹುಲ್ ಅವರ ಅದ್ಭುತ ಜೊತೆಯಾಟದ ಸಹಾಯದಿಂದ 189 ರನ್‌ಗಳ ಗುರಿ ನೀಡಿತು. ಡೆಲ್ಲಿ ಪರ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗದಿದ್ದರೂ, ಅಲ್ಪ ಕಾಣಿಕೆ ನೀಡುವಲ್ಲಿ ಯಶಸ್ವಿಯಾದರು. ಪೊರೆಲ್ ಅತ್ಯಧಿಕ 49 ರನ್ ಗಳಿಸಿದರೆ, ಕೆಎಲ್ ರಾಹುಲ್ 38 ರನ್ ಕಲೆಹಾಕಿದರು.
ಆರಂಭಿಕರಾದ ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್ ಮತ್ತು ಪೊರೆಲ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಜೋಫ್ರಾ ಆರ್ಚರ್ ಒಂಬತ್ತು ರನ್‌ಗಳಿಗೆ ಮೆಕ್‌ಗುರ್ಕ್ ಅವರನ್ನು ಔಟ್ ಮಾಡಿದರು. ಇದಾದ ಸ್ವಲ್ಪ ಸಮಯದ ನಂತರ, ಕರುಣ್ ನಾಯರ್ ಖಾತೆ ತೆರೆಯದೆಯೇ ರನೌಟ್ ಆದರು. ಐಪಿಎಲ್‌ನಲ್ಲಿ ಕರುಣ್ ಶೂನ್ಯಕ್ಕೆ ಪೆವಿಲಿಯನ್‌ಗೆ ಮರಳಿದ್ದು ಇದು ನಾಲ್ಕನೇ ಬಾರಿ. ಎರಡು ವಿಕೆಟ್‌ಗಳ ಪತನದ ನಂತರ ಜೊತೆಯಾದ ರಾಹುಲ್ ಮತ್ತು ಪೊರೆಲ್ ಮೂರನೇ ವಿಕೆಟ್‌ಗೆ 63 ರನ್‌ಗಳನ್ನು ಸೇರಿಸಿದರು.
188 ರನ್ ಕಲೆಹಾಕಿದ ಡೆಲ್ಲಿ
ರಾಹುಲ್ ಔಟಾದ ನಂತರ, ಪೊರೆಲ್ ಕೂಡ ಮುಂದಿನ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡು ಅರ್ಧಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು. ನಂತರ ಕ್ರೀಸ್ಗೆ ಬಂದ ನಾಯಕ ಅಕ್ಷರ್ ಪಟೇಲ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ 14 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 34 ರನ್ ಗಳಿಸಿ ಔಟಾದರು. ಕೊನೆಯ ಓವರ್‌ಗಳಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಶುತೋಷ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಸ್ಕೋರ್ ಅನ್ನು 180 ರನ್ ದಾಟಿಸಿದರು. ಸ್ಟಬ್ಸ್ 18 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 34 ರನ್ ಗಳಿಸಿ ಅಜೇಯರಾಗಿ ಉಳಿದರೆ, ಅಶುತೋಷ್ 11 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ 15 ರನ್ ಗಳಿಸಿ ಅಜೇಯರಾಗಿ ಉಳಿದರು. ರಾಜಸ್ಥಾನ ಪರ ಆರ್ಚರ್ ಎರಡು ವಿಕೆಟ್ ಪಡೆದರೆ, ಮಹೇಶ್ ತೀಕ್ಷಣ ಮತ್ತು ವನಿಂದು ಹಸರಂಗ ತಲಾ ಒಂದು ವಿಕೆಟ್ ಪಡೆದರು.
ರಾಜಸ್ಥಾನ್ಗೆ ಉತ್ತಮ ಆರಂಭ
ಗುರಿ ಬೆನ್ನಟ್ಟಿದ ರಾಜಸ್ಥಾನ್ ಉತ್ತಮ ಆರಂಭವನ್ನು ಪಡೆಯಿತು. ಆದರೆ ನಾಯಕ ಸಂಜು ಸ್ಯಾಮ್ಸನ್ 19 ಎಸೆತಗಳಲ್ಲಿ 31 ರನ್ ಗಳಿಸಿದ ನಂತರ ಗಾಯಗೊಂಡು ನಿವೃತ್ತರಾದರು. ಆ ಬಳಿಕ ಬಂದ ರಿಯಾನ್ ಪರಾಗ್ ಎಂಟು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ನಂತರ ಜೊತೆಯಾದ ಯಶಸ್ವಿ ನಿತೀಶ್ ಹಾಗೂ ರಾಣಾ ಜೊತೆಗೂಡಿ 50+ ರನ್‌ಗಳ ಜೊತೆಯಾಟವನ್ನು ಮಾಡಿದರು. ಈ ವೇಳೆ ಯಶಸ್ವಿ ಈ ಸೀಸನ್ನ ಎರಡನೇ ಅರ್ಧಶತಕ ಬಾರಿಸಿದರು. ಅಂತಿಮವಾಗಿ 37 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 51 ರನ್ ಗಳಿಸಿ ಔಟಾದರು.
IPL 2025: Wd,Wd,Wd,Wd,Nb,4,6; ಕೊನೆಯ ಓವರ್‌ನಲ್ಲಿ ಎಡವಿದ ಸಂದೀಪ್ ಶರ್ಮಾ
ಗೆಲ್ಲುವ ಪಂದ್ಯ ಕೈಚೆಲ್ಲಿದ ಸಂಜು ಪಡೆ
ಇದಾದ ನಂತರ, ನಿತೀಶ್ ರಾಣಾ ಜವಾಬ್ದಾರಿ ವಹಿಸಿಕೊಂಡು 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಿತೀಶ್ ಕೂಡ ಹೆಚ್ಚು ಹೊತ್ತು ಆಟ ಮುಂದುವರಿಸಲು ಸಾಧ್ಯವಾಗದೆ 28 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 51 ರನ್ ಗಳಿಸಿ ಔಟಾದರು. ರಾಜಸ್ಥಾನ ಪರ ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಕ್ರೀಸ್‌ನಲ್ಲಿದ್ದು ಸೆಟ್ ಆಗಿದ್ದರು. ಕೊನೆಯ ಓವರ್‌ನಲ್ಲಿ ರಾಜಸ್ಥಾನ ಗೆಲ್ಲಲು ಒಂಬತ್ತು ರನ್‌ಗಳ ಅಗತ್ಯವಿತ್ತು. ಆದರೆ ಮಿಚೆಲ್ ಸ್ಟಾರ್ಕ್ ಅದ್ಭುತ ಬೌಲಿಂಗ್ ಮಾಡಿ ಕೇವಲ ಎಂಟು ರನ್‌ಗಳನ್ನು ನೀಡಿದರು. ಕೊನೆಯ ಎಸೆತದಲ್ಲಿ ಎರಡು ರನ್‌ಗಳು ಬೇಕಾಗಿದ್ದವು. ಜುರೆಲ್ ಶಾಟ್ ಹೊಡೆದು ಎರಡು ರನ್ ಓಡಲು ಯತ್ನಿಸಿದರು, ಆದರೆ ಎರಡನೇ ರನ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಜುರೆಲ್ 17 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳ ಸಹಾಯದಿಂದ 24 ರನ್ ಗಳಿಸಿ ಔಟಾದರೆ, ಹೆಟ್ಮೆಯರ್ 15 ರನ್ ಗಳಿಸಿ ಅಜೇಯರಾಗುಳಿದರು. ರಾಜಸ್ಥಾನ ಪರ ಮಿಚೆಲ್ ಸ್ಟಾರ್ಕ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:04 am, Thu, 17 April 25