ಪದಾರ್ಪಣೆಯ ಟೆಸ್ಟ್​ನಲ್ಲಿ ಫೇಲಾಗಿ ಹತಾಷನಾಗಿದ್ದ ನನ್ನಲ್ಲಿ ಅನುಷ್ಕಾ ಮತ್ತು ವಿರಾಟ್​ ಆತ್ಮವಿಶ್ವಾಸ ತುಂಬಿದರು: ಕೆ ಎಲ್​ ರಾಹುಲ್

ರಾಹುಲ್ ಅಪ್ಪಟ ಪ್ರತಿಭಾವಂತ ಅನ್ನುವುದರಲ್ಲಿ ಎರಡು ಮಾತಿಲ್ಲ. ನೀವೊಂದು ಅಂಶ ಗಮನಿಸರಬಹುದು. ಒಬ್ಬ ಬ್ಯಾಟ್ಸ್​ಮನ್​ನಲ್ಲಿ ಪ್ರತಿಭೆ ಹೇರಳವಾಗಿದ್ದರೆ, ಅವನು ಯಾವುದೇ ಫಾರ್ಮಾಟ್​ಗೆ ಒಗ್ಗಿಕೊಳ್ಳುತ್ತಾನೆ ಮತ್ತು ಮೂರು ಆವೃತ್ತಿಗಳಲ್ಲೂ ಸರಾಗವಾಗಿ ರನ್ ಗಳಿಸುತ್ತಾನೆ. ರಾಹುಲ ಅಂಥ ಆಟಗಾರರರಲ್ಲಿ ಒಬ್ಬರಾಗಿದ್ದಾರೆ

ಪದಾರ್ಪಣೆಯ ಟೆಸ್ಟ್​ನಲ್ಲಿ ಫೇಲಾಗಿ ಹತಾಷನಾಗಿದ್ದ ನನ್ನಲ್ಲಿ ಅನುಷ್ಕಾ ಮತ್ತು ವಿರಾಟ್​ ಆತ್ಮವಿಶ್ವಾಸ ತುಂಬಿದರು: ಕೆ ಎಲ್​ ರಾಹುಲ್
ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮ ಮತ್ತು ಕೆಎಲ್ ರಾಹುಲ್
ಅರುಣ್​ ಕುಮಾರ್​ ಬೆಳ್ಳಿ

Updated on: Jul 05, 2021 | 4:44 PM

ಟೆಸ್ಟ್​ ಕ್ರಿಕೆಟ್​ ಆಡಲು ತಮ್ಮ ರಾಷ್ಟ್ರೀಯ ತಂಡ ಆಯ್ಕೆಯಾಗುವ ಆಟಗಾರರು ಪದಾರ್ಪಣೆಯ ಟೆಸ್ಟ್​ನಲ್ಲಿ ಮಿಂಚಿದ ಉದಾಹರಣೆಗಳು ಜಾಸ್ತಿಯಿಲ್ಲ. ಚೊಚ್ಚಲು ಟೆಸ್ಟ್​ನಲ್ಲೇ ಶತಕ ಬಾರಿಸಿದ ಅಥವಾ 5 ವಿಕೆಟ್ ಪಡೆಯುವ ಸಾಧನೆ ಮಾಡಿದ ಆಟಗಾರರು ಬೆರಳಣಿಕೆಯಷ್ಟು ಮಾತ್ರ. ಹಾಗೆಯೇ, ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕುದುರಿಕೊಂಡ ಆಟಗಾರರೆಲ್ಲ ತಾವಾಡುವ ಪ್ರತಿ ಪಂದ್ಯದಲ್ಲಿ ಮಿಂಚಲಾರರು. ಆಟಗಾರನೊಬ್ಬ ಎಷ್ಟೇ ಪ್ರತಿಭಾವಂತನಾಗಿದ್ದರೂ, ಅವನ ಕರೀಯರ್​ನಲ್ಲಿ ಏರಿಳಿತಗಳಿರುತ್ತವೆ. ಬ್ಯಾಟ್ಸ್​ಮನ್​ಗಳ ಸಾಧನೆಗಳನ್ನೇ ಒಮ್ಮೆ ಗಮನಿಸಿ. ಕೇವಲ ಬ್ಯಾಟಿಂಗ್ ಪಿತಾಮಹ ಡಾನ್ ಬ್ರಾಡ್ಮನ್​ಗೆ ಮಾತ್ರ ಟೆಸ್ಟ್ ಕ್ರಿಕೆಟ್​ನಲ್ಲಿ ಹೆಚ್ಚು ಕಡಿಮೆ 100 ರಷ್ಟು (99.96) ಸರಾಸರಿ ಕಾಯ್ದುಕೊಳ್ಳಲು ಸಾಧ್ಯವಾಯಿತು. ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಕೆಲವೇ ಕೆಲ ಬ್ಯಾಟ್ಸ್​ಮನ್​ಗಳನ್ನು ಬಿಟ್ಟರೆ, ಗ್ರೇಟ್​, ಲೆಜೆಂಡರಿ ಅಂಕ ಕರೆಸಿಕೊಂಡ ಬ್ಯಾಟ್ಸ್​ಮನ್​ಗಳ ಕರೀಯರ್ ಸರಾಸರಿ 50ರಿಂದ 58 ರನ್ ಇದೆ. ಇದನ್ನೆಲ್ಲ ಹೇಳುವ ಹಿಂದಿನ ತಾತ್ಪರ್ಯವೆಂದರೆ, ಬ್ಯಾಟ್ಸ್​ಮನ್​ಗಳ ಸಾಮರ್ಥ್ಯ ಏನೇ ಆಗಿದ್ದರೂ ವೃತ್ತಿಬದುಕಿನಲ್ಲಿ ಸತತವಾಗಿ ರನ್​ಗಳಿಸುತ್ತಾ ಸಾಗುವುದು ಸಾಧ್ಯವಾಗುವುದಿಲ್ಲ.

ನಮ್ಮ ಹುಡುಗ ಕೆ ಎಲ್ ರಾಹುಲ್ ಅಪ್ಪಟ ಪ್ರತಿಭಾವಂತ ಅನ್ನುವುದರಲ್ಲಿ ಎರಡು ಮಾತಿಲ್ಲ. ನೀವೊಂದು ಅಂಶ ಗಮನಿಸರಬಹುದು. ಒಬ್ಬ ಬ್ಯಾಟ್ಸ್​ಮನ್​ನಲ್ಲಿ ಪ್ರತಿಭೆ ಹೇರಳವಾಗಿದ್ದರೆ, ಅವನು ಯಾವುದೇ ಫಾರ್ಮಾಟ್​ಗೆ ಒಗ್ಗಿಕೊಳ್ಳುತ್ತಾನೆ ಮತ್ತು ಮೂರು ಆವೃತ್ತಿಗಳಲ್ಲೂ ಸರಾಗವಾಗಿ ರನ್ ಗಳಿಸುತ್ತಾನೆ. ರಾಹುಲ ಅಂಥ ಆಟಗಾರರರಲ್ಲಿ ಒಬ್ಬರಾಗಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಅವರಿಗೆ ವಿಪುಲ ಅವಕಾಶಗಳು ಸಿಗುತ್ತಿಲ್ಲವಾದರೂ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಅವರು ಟೀಮಿನ ಖಾಯಂ ಸದಸ್ಯ.

ಅವರ ಟೆಸ್ಟ್ ಕರೀಯರ್ ಹೇಗೆ ಆರಂಭವಾಯಿತೆನ್ನುವುದು ನಿಮಗೆ ನೆನಪಿದೆಯಾ? 2014 ರಲ್ಲಿ ಭಾರತ ಡೌನ್ ಅಂಡರ್ ಪ್ರವಾಸ ಹೋಗಿದ್ದಾಗ ಮೆಲ್ಬರ್ನ್ (ಎಮ್​ಸಿಜಿ) ಟೆಸ್ಟ್​ನಲ್ಲಿ ಅವರು ಡೆಬ್ಯೂ ಮಾಡಿದರು. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂಕ್ಕಿಂತ ಮೊದಲು ಎಮ್​ಸಿಜಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಿತ್ತು. ಈ ಟೆಸ್ಟ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ ರಾಹುಲ್ ರನ್ ಗಳಿಸಲು ವಿಫಲಾಗಿ ತೀವ್ರ ಹತಾಷೆಗೊಳಗಾಗಿದ್ದರು.

ಮುಂದಿನ ಟೆಸ್ಟ್​ಗೆ ಸೆಲಕ್ಟ್​ ಆಗಲಾರೆ, ತನ್ನ ಕರೀಯರ್ ಇನ್ನು ಮುಗೀತು, ಅಂತ ಖಿನ್ನರಾಗಿ ರಾಹುಲ್ ಹೋಟೆಲ್​ನ ತಮ್ಮ ರೂಮಿನಲ್ಲಿ ಕೂತಿದ್ದಾಗ ಅಲ್ಲಿಗೆ ಅಗಮಿಸಿದ ಅನುಷ್ಕಾ ಶರ್ಮ (ಆಗ ಅವರನ್ನೂ ವಿರಾಟ್ ಕೊಹ್ಲಿಯವರ ಗರ್ಲ್ ಫ್ರೆಂಡ್​ಮಾತ್ರ ಆಗಿದ್ದರು) ತನ್ನ ಮತ್ತು ವಿರಾಟ್ ಜೊತೆ ಡಿನ್ನರ್ ಮಾಡುವುದಕ್ಕೆ ಆಹ್ವಾನಿಸಿದರು.

ಮುಂದಿನ ಕತೆಯನ್ನು ರಾಹುಲ್ ಅವರ ಬಾಯಿಂದಲೇ ಕೇಳಿ.

‘ಅವರಿಬ್ಬರ (ಅನುಷ್ಕಾ ಮತ್ತು ವಿರಾಟ್) ಒಳ್ಳೆಯತನವನ್ನು ನಾನ್ಯಾವತ್ತೂ ಮರೆಯಲಾರೆ. ಅವರ ನನಗೆ ಮಾಡಿದ ಉಪಕಾರದ ಕತೆಯನ್ನು ನಿಮಗೆ ಹೇಳಬೇಕಿದೆ. ಮೆಲ್ಬರ್ನ್​ ಪಂದ್ಯ ನೋಡಲು ಅನುಷ್ಕಾ ಬಂದಿದ್ದರು. ಸದರಿ ಟೆಸ್ಟ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ ಫೇಲಾದ ನಂತರ ನಾನು ಹತಾಷಗೊಳಗಾಗಿರುವುದನ್ನು ಆಕೆ ಗಮನಿಸಿದ್ದರು. ನನ್ನ ಟೆಸ್ಟ್ ಕರೀಯರ್​ ಮಗೀತು ಅಂತ ನಾನು ಯೋಚಿಸುತ್ತಾ ರೂಮಿನಲ್ಲಿ ಕೂತಿದ್ದಾಗ ಆಕೆ ಅಲ್ಲಿಗೆ ಬಂದು, ನೀವು ಹೀಗೆ ತಲೆ ಮೇಲೆ ಕೈ ಹೊತ್ತು ಕೂರೋದನ್ನು ನಾನು ನೋಡಲಾರೆ. ದಿನವಿಡೀ ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುವುದು ಸರಿಯಲ್ಲ. ನಾನು ಮತ್ತು ವಿರಾಟ್​ ರಾತ್ರಿ ಊಟಕ್ಕೆ ನಿಮ್ಮನ್ನು ಹೊರಗೆ ಕರೆದೊಯ್ಯಲು ನಿರ್ಧರಿಸಿದ್ದೇವೆ, ಬೇಗ ರೆಡಿಯಾಗಿ ಅಂತ ಹೇಳಿದರು,’ ಎಂದು ರಾಹುಲ್ ಓಪನ್ ಹೌಸ್​ ವಿದ್ ರೆನಿಲ್ ಕಾರ್ಯಕ್ರಮದಲ್ಲಿ ರಾಹುಲ್ ಹೇಳಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಜೊತೆ ಸಮಯ ಕಳೆದ ನಂತರ ತನ್ನಲ್ಲಿ ಮನೆ ಮಾಡಿದ್ದ ಹತಾಷೆ ಮಾಯವಾಯಿತು ಎಂದು ಅವರು ಹೇಳಿದ್ದಾರೆ.

ನಿಮಗೆ ನೆನಪಿರಬಹುದು, ಮುಂದಿನ ಟೆಸ್ಟ್​ನಲ್ಲೇ ರಾಹುಲ್ ಅಮೋಘ ಶತಕ ಬಾರಿಸಿದರು. ಅದಾಗಿ ಈಗ ಹೆಚ್ಚು ಕಡಿಮೆ 6 ವರ್ಷ ಕಳೆದಿವೆ. ರಾಹುಲ್ ಇದುವರೆಗೆ 36 ಟೆಸ್ಟ್​ಗಳಲ್ಲಿ ಭಾರತವನ್ನು ಪ್ರತಿನಿಧಿಸಿ 5 ಶತಕ ಮತ್ತು 11 ಅರ್ಧ ಶತಕಗಳೊಂದಿಗೆ 2000 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈಗ ಇಂಗ್ಲೆಂಡ್​ ಪ್ರವಾಸದಲ್ಲಿರುವ ಭಾರತ 5 ಟೆಸ್ಟ್​ ಪಂದ್ಯಗಳನ್ನಾಡಲಿದ್ದು, ರಾಹುಲ್ ಟೀಮಿನ ಭಾಗವಾಗಿದ್ದರೆ, ಆರಂಭ ಆಟಗಾರ ಶುಭ್ಮನ್ ಗಿಲ್​ಗೆ ಗಾಯದ ಸಮಸ್ಯೆ ಕಾಡುತ್ತಿರವುದರಿಂದ ಕನ್ನಡಿಗ ಆಡುವ ಎಲೆವೆನ್​ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸುಲಭ ಸೋಲನ್ನಪ್ಪಿದ ನಂತರ ತೀವ್ರ ಸ್ವರೂಪದ ಟೀಕೆಗೆ ಗುರಿಯಗಿರುವ ವಿರಾಟ್​ ಕೊಹ್ಲಿ ಮತ್ತು ಟೀಮ್ ಕೆರಳಿದ ಸಿಂಹಗಳಂತಾಗಿದ್ದ್ದಾರೆ. ಇಂಗ್ಲೆಂಡ್​ ವಿರುದ್ಧ ನಡೆಯುವ ಸರಣೆಯಲ್ಲಿ ಟೀಮ್ ಪುಟಿದೇಳುವ ಸಾಧ್ಯತೆಯಂತೂ ಇದ್ದೇ ಇದೆ.

ಇದನ್ನೂ ಓದಿ: Virat Kohli, Anushka Sharma: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಬಳಿ ಇರುವ 4 ಅತಿ ದುಬಾರಿ ವಸ್ತುಗಳಿವು!

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us