
2026ರ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ವಿಶ್ವದ ನಂ. 1 ಟೆನಿಸ್ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್ ಕೋರ್ಟ್ನಲ್ಲಿ ಭಾನುವಾರ (ಜುಲೈ 12, 2026) ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆಫ್ ಅವರನ್ನು ಮಣಿಸಿ, ಸತತ ಎರಡನೇ ಬಾರಿಗೆ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ನಾಲ್ಕು ಸೆಟ್‌ಗಳ ಕಾಲ ನಡೆದ ಈ ರೋಚಕ ಹೋರಾಟದಲ್ಲಿ ಯಾನಿಕ್ ಸಿನ್ನರ್ 6–7(7), 7–6(2), 6–3, 6–4 ಸೆಟ್‌ಗಳಿಂದ ಝ್ವೆರೆಫ್ ವಿರುದ್ಧ ಜಯಭೇರಿ ಬಾರಿಸಿದರು.
ಸುಮಾರು 3 ಗಂಟೆ 46 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ, ಮೊದಲ ಸೆಟ್ ಸೋತರೂ ಅದ್ಭುತವಾಗಿ ಪುನರಾಗಮನ ಮಾಡಿದ ಸಿನ್ನರ್, ಝ್ವೆರೆಫ್ ವಿರುದ್ಧ ಸತತ 10ನೇ ಜಯ ದಾಖಲಿಸಿದರು.
ಫ್ರೆಂಚ್ ಓಪನ್‌ನಲ್ಲಿ ಬೇಗನೆ ಹೊರಬಿದ್ದಿದ್ದ ಯಾನಿಕ್ ಸಿನ್ನರ್, ಈ ಬಾರಿ ಯಾವುದೇ ಗ್ರಾಸ್-ಕೋರ್ಟ್ ಅಭ್ಯಾಸ ಪಂದ್ಯಗಳನ್ನು ಆಡದೆ ನೇರವಾಗಿ ವಿಂಬಲ್ಡನ್‌ಗೆ ಬಂದಿದ್ದರು. ಆರಂಭಿಕ ಸುತ್ತಿನಲ್ಲಿ ಮಿಯೋಮಿರ್ ಕೆಕ್ಮನೋವಿಕ್ ವಿರುದ್ಧ 5 ಸೆಟ್‌ಗಳ ಕಠಿಣ ಹೋರಾಟ ಎದುರಿಸಿದ ಅವರು, ಸೆಮಿಫೈನಲ್‌ನಲ್ಲಿ 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.
ಇದನ್ನೂ ಓದಿ: ಗೆಳೆತಿಯನ್ನು ಸೋಲಿಸಿ ವಿಂಬಲ್ಡನ್ ಕಿರೀಟ ಗೆದ್ದ ಲಿಂಡಾ ನೊಸ್ಕೋವಾ!
ಇತ್ತ ನೊವಾಕ್ ಜೊಕೊವಿಚ್ ಅವರಿಗೆ ಸೋಲುಣಿಸಿದ ಉತ್ಸಾಹದಲ್ಲೇ ಕಣಕ್ಕಿಳಿದಿದ್ದ ಯಾನಿಕ್ ಸಿನ್ನರ್ ಮೊದಲ ಸೆಟ್ ಅನ್ನು ಹೊರತುಪಡಿಸಿ, ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಪರಿಣಾಮ ಮೊದಲ ಸೆಟ್ ಸೋತರೂ, ಆ ಬಳಿಕ ಬ್ಯಾಕ್ ಟು ಬ್ಯಾಕ್ 3 ಸೆಟ್ಗಳನ್ನು ಗೆದ್ದು 2ನೇ ಬಾರಿ ವಿಂಬಲ್ಡನ್ ಅಂಗಳದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
Published On - 7:37 am, Mon, 13 July 26