Khelo India University Games: ಹಾಕಿಯಲ್ಲಿ ಬೆಂಗಳೂರು ಸಿಟಿ ಯೂನಿವರ್ಸಿಟಿ ಚಾಂಪಿಯನ್
Khelo India University Games: ಅಥ್ಲೆಟಿಕ್ಸ್‌ನಲ್ಲಿ ಕೆಲವು ಅದ್ಭುತ ಫಲಿತಾಂಶಗಳು ಸಹ ಕಂಡುಬಂದವು. ಮಹಿಳೆಯರ 3000 ಮೀಟರ್ಸ್ ಹರ್ಡಲ್ಸ್ (ಸ್ಟೀಪಲ್ ಚೇಸ್)ನಲ್ಲಿ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದ ಅಥ್ಲೀಟ್ ಕೋಮಲ್ ಜಗದಾಳೆ ಚಿನ್ನದ ಪದಕ ಗೆದ್ದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ (Khelo India University Games) 8 ದಿನಗಳನ್ನು ಪೂರ್ಣಗೊಳಿಸಿದೆ. ಆತಿಥೇಯ ಜೈನ್ ವಿಶ್ವವಿದ್ಯಾಲಯವು ಮೊದಲ ವಾರದಲ್ಲಿ ಪದಕ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ಮೇ 1 ರ ಭಾನುವಾರದಂದು ಕ್ರೀಡಾಕೂಟದ ಎಂಟನೇ ದಿನದ ಅಂತ್ಯದ ವೇಳೆಗೆ, ಜೈನ್ ವಿಶ್ವವಿದ್ಯಾಲಯವು 17 ಚಿನ್ನದೊಂದಿಗೆ ಮೊದಲ ಸ್ಥಾನವನ್ನು ಮುಂದುವರೆಸಿದೆ. ಭಾನುವಾರ ನಡೆದ ಪುರುಷರ ಹಾಕಿಯಲ್ಲಿ ಬೆಂಗಳೂರು ಸಿಟಿ ಯೂನಿವರ್ಸಿಟಿ (ಬಿಸಿಯು) ಚಿನ್ನದ ಪದಕ ಗೆದ್ದುಕೊಂಡಿದೆ. ಹಾಗೆಯೇ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ (SPPU) ಯೋಗಾಸನದಲ್ಲಿ ಮಹಿಳಾ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದೆ.
ಭಾನುವಾರವೂ ಕ್ರೀಡಾಕೂಟಗಳಲ್ಲಿ ಹಲವು ಪದಕಗಳ ಸ್ಪರ್ಧೆಗಳು ನಡೆದಿದ್ದು, ಹಾಕಿ, ಯೋಗದ ಹೊರತಾಗಿ ಬಿಲ್ಲುಗಾರಿಕೆ, ಜೂಡೋ, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಫೈನಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಪುರುಷರ ಹಾಕಿ ಫೈನಲ್ ಏಕಪಕ್ಷೀಯವಾಗಿತ್ತು. ಇದರಲ್ಲಿ ಆತಿಥೇಯ ಬೆಂಗಳೂರಿನ ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯವು ಫೈನಲ್‌ನಲ್ಲಿ ಪಂಜಾಬ್‌ನ ಗುರುನಾನಕ್ ದೇವ್ ವಿಶ್ವವಿದ್ಯಾಲಯವನ್ನು 3-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಆರ್ಚರಿಯಲ್ಲಿ ಹ್ಯಾಟ್ರಿಕ್: ಪುರುಷ ರಿಕರ್ವ್ ಬಿಲ್ಲುಗಾರ ಸಂದೀಪ್ ಗುಪ್ತಾ ಕುರುಕ್ಷೇತ್ರ ವಿಶ್ವವಿದ್ಯಾಲಯಕ್ಕೆ ಮೂರು ಚಿನ್ನ ಗೆದ್ದರು. ಬೆಳಗ್ಗಿನ ಅವಧಿಯಲ್ಲಿ ಗುಪ್ತಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯಶದೀಪ್ ಭೋಗೆ ಅವರನ್ನು 6-4ರಿಂದ ಸೋಲಿಸಿ ಚಿನ್ನದ ಪದಕ ಪಡೆದರು. ಒಂದು ಗಂಟೆಯ ನಂತರ, ಅವರು ಕೀರ್ತಿಯೊಂದಿಗೆ ಮಿಶ್ರ ರಿಕರ್ವ್ ಅನ್ನು ಗೆದ್ದರು. ಅಂತಿಮವಾಗಿ ಪುರುಷರ ತಂಡ ರಿಕರ್ವ್‌ನಲ್ಲೂ ಚಿನ್ನ ಗೆದ್ದರು.
ಕೋಮಲ್ ದಾಖಲೆ: ಅಥ್ಲೆಟಿಕ್ಸ್‌ನಲ್ಲಿ ಕೆಲವು ಅದ್ಭುತ ಫಲಿತಾಂಶಗಳು ಸಹ ಕಂಡುಬಂದವು. ಮಹಿಳೆಯರ 3000 ಮೀಟರ್ಸ್ ಹರ್ಡಲ್ಸ್ (ಸ್ಟೀಪಲ್ ಚೇಸ್)ನಲ್ಲಿ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದ ಅಥ್ಲೀಟ್ ಕೋಮಲ್ ಜಗದಾಳೆ ಚಿನ್ನದ ಪದಕ ಗೆದ್ದರು. ಕ್ರೀಡಾಕೂಟದ ಮೊದಲ ಆವೃತ್ತಿಯಲ್ಲೂ ಅವರು ಚಿನ್ನ ಗೆದ್ದಿದ್ದರು. ಅಷ್ಟೇ ಅಲ್ಲ, ಅವರು ಈ ಪಂದ್ಯಗಳಲ್ಲಿ 10:13.49 ನಿಮಿಷಗಳನ್ನು ತೆಗೆದುಕೊಳ್ಳುವ ಮೂಲಕ 10:26.63 ನಿಮಿಷಗಳ ತಮ್ಮ ಹಿಂದಿನ ದಾಖಲೆಯನ್ನು ಮುರಿದರು. ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೆ.ಎಲ್.ಲಕ್ಷ್ಮಿ ಚಿನ್ನ ಗೆದ್ದಿದ್ದಾರೆ. 10,000 ಮೀಟರ್ ಓಟವನ್ನು 35:49:23 ನಿಮಿಷಗಳಲ್ಲಿ ಪೂರ್ಣಗೊಳಿಸುವ ಮೂಲಕ ಅವರು ಈ ಸ್ಪರ್ಧೆಯ ಚಿನ್ನದ ಪದಕವನ್ನು ಗೆದ್ದರು.
ಮಹಿಳೆಯರ ಯೋಗಾಸನದ ವಿಭಾಗದಲ್ಲಿ ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯವು ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇನ್ನು ಪದಕ ಪಟ್ಟಿಯಲ್ಲಿ ಜೈನ್ ವಿಶ್ವವಿದ್ಯಾಲಯ 17 ಚಿನ್ನ ಸೇರಿದಂತೆ ಒಟ್ಟು 28 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಮತ್ತೊಂದೆಡೆ, ಪಂಜಾಬ್‌ನ ಎಲ್‌ಪಿಯು 13 ಚಿನ್ನದೊಂದಿಗೆ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಪಂಜಾಬ್ ವಿಶ್ವವಿದ್ಯಾಲಯ 12 ಚಿನ್ನದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
