Milkha Singh: ಸಕಲ ಸರ್ಕಾರಿ ಗೌರವಗಳೊಂದಿಗೆ ಮಿಲ್ಖಾ ಸಿಂಗ್ ಅಂತ್ಯಕ್ರಿಯೆ; ಕ್ರೀಡಾ ಸಚಿವ, ಪಂಜಾಬ್ ರಾಜ್ಯಪಾಲರ ಉಪಸ್ಥಿತಿ
Milkha Singh: ಶ್ರೇಷ್ಠ ಕ್ರೀಡಾಪಟುವಿನ ಗೌರವಾರ್ಥ ಪಂಜಾಬ್ ಸರ್ಕಾರ ಈ ಹಿಂದೆ ರಾಜ್ಯ ಶೋಕಾಚರಣೆಯ ದಿನ ಮತ್ತು ಸಾರ್ವಜನಿಕ ರಜಾದಿನವನ್ನು ಘೋಷಿಸಿತ್ತು.
ಭಾರತದ ಶ್ರೇಷ್ಠ ಓಟಗಾರ ಮತ್ತು ಫ್ಲೈಯಿಂಗ್ ಸಿಖ್ ಎಂದು ಜನಪ್ರಿಯವಾಗಿದ್ದ ಮಿಲ್ಖಾ ಸಿಂಗ್ ಅವರಿಗೆ ಶನಿವಾರ ಸಕಲ ರಾಜ್ಯ ಗೌರವಗಳೊಂದಿಗೆ ಅಂತಿಮ ವಿದಾಯ ನೀಡಲಾಯಿತು. ಕೋವಿಡ್ -19 ರ ಕಾರಣದಿಂದಾಗಿ ಮಿಲ್ಖಾ ಸಿಂಗ್ ಅವರು ತಮ್ಮ 91 ನೇ ವಯಸ್ಸಿನಲ್ಲಿ ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ನಿಧನರಾದರು. ಇದು ದೇಶಾದ್ಯಂತ ಶೋಕಾಚರಣೆಗೆ ಕಾರಣವಾಯಿತು. ಮಿಲ್ಖಾ ಸಿಂಗ್ ಅವರನ್ನು ಚಂಡೀಗಡದ ಸೆಕ್ಟರ್ 25 ರಲ್ಲಿರುವ ಸ್ಮಶಾನದಲ್ಲಿ ಪೂರ್ಣ ರಾಜ್ಯ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಇದರಲ್ಲಿ ಪೊಲೀಸ್ ತಂಡವು ಶ್ರೇಷ್ಠ ಕ್ರೀಡಾಪಟುವಿಗೆ ಗನ್ ಸೆಲ್ಯೂಟ್ ನೀಡಿತು. ಅವರ ಮಗ ಮತ್ತು ಅಂತರರಾಷ್ಟ್ರೀಯ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ರಾಜ್ಯ ಶೋಕಾಚರಣೆಯ ದಿನ ಮತ್ತು ಸಾರ್ವಜನಿಕ ರಜಾದಿನ ಪಂಜಾಬ್ ರಾಜ್ಯಪಾಲ ವಿ.ಪಿ. ಸಿಂಗ್ ಬದ್ನೋರ್, ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಈ ಹಿಂದೆ ಸೆಕ್ಟರ್ 8 ರಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಶ್ರೇಷ್ಠ ಕ್ರೀಡಾಪಟುವಿನ ಗೌರವಾರ್ಥ ಪಂಜಾಬ್ ಸರ್ಕಾರ ಈ ಹಿಂದೆ ರಾಜ್ಯ ಶೋಕಾಚರಣೆಯ ದಿನ ಮತ್ತು ಸಾರ್ವಜನಿಕ ರಜಾದಿನವನ್ನು ಘೋಷಿಸಿತ್ತು. ಮಿಲ್ಖಾ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಪಂಜಾಬ್ ಸರ್ಕಾರ ನಡೆಸಲಿದೆ ಎಂದು ಅಮರಿಂದರ್ ಸಿಂಗ್ ಘೋಷಿಸಿದ್ದರು.
ವಿಶ್ವವಿದ್ಯಾಲಯಕ್ಕೆ ಗೌರವ ಸಿಗಲಿದೆ ಶ್ರೇಷ್ಠ ಕ್ರೀಡಾಪಟುವಿನ ನೆನಪಿಗಾಗಿ ಪಟಿಯಾಲಾದ ಮಹಾರಾಜ ಭೂಪಿಂದರ್ ಸಿಂಗ್ ಪಂಜಾಬ್ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಮಿಲ್ಖಾ ಸಿಂಗ್ ಚೇರ್ ಅನ್ನು ಮುಖ್ಯಮಂತ್ರಿ ಘೋಷಿಸಿದರು. ಮಿಲ್ಖಾ ಸಿಂಗ್ ಅವರ ಸಾವು ಇಡೀ ದೇಶಕ್ಕೆ ದೊಡ್ಡ ನಷ್ಟ ಮತ್ತು ಎಲ್ಲರಿಗೂ ದುಃಖದ ಕ್ಷಣವಾಗಿದೆ ಎಂದು ಅವರು ಹೇಳಿದರು. ಮಿಲ್ಖಾ ಸಿಂಗ್ ಅವರ 400 ಮೀಟರ್ ರಾಷ್ಟ್ರೀಯ ದಾಖಲೆಯನ್ನು 38 ವರ್ಷಗಳ ಕಾಲ ಯಾರು ಮುರಿಯಾಗಲಿಲ್ಲ. ಇದನ್ನು 1998 ರಲ್ಲಿ ದೇಶೀಯ ಸ್ಪರ್ಧೆಯಲ್ಲಿ ಪರಮ್ಜಿತ್ ಸಿಂಗ್ ಮುರಿದರು. ಸಿಂಗ್ ಅವರಿಗೆ ಮೂವರು ಪುತ್ರಿಯರಾದ ಡಾ. ಮೋನಾ ಸಿಂಗ್, ಅಲಿಜಾ ಗ್ರೋವರ್, ಸೋನಿಯಾ ಸಾನ್ವಾಲ್ಕಾ ಮತ್ತು ಮಗ ಜೀವ್ ಮಿಲ್ಖಾ ಸಿಂಗ್ ಇದ್ದಾರೆ. 14 ಬಾರಿ ಅಂತರರಾಷ್ಟ್ರೀಯ ಚಾಂಪಿಯನ್ ಆಗಿರುವ ಗಾಲ್ಫ್ ಜೀವ್ ಅವರ ತಂದೆಯಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಜೂನ್ 3 ರಂದು ಆಸ್ಪತ್ರೆಗೆ ದಾಖಲು ಮಿಲ್ಖಾ ಸಿಂಗ್ ಅವರನ್ನು ಜೂನ್ 3 ರಂದು ಪಿಜಿಐಗೆ ದಾಖಲಿಸಲಾಯಿತು. ಈ ಹಿಂದೆ ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಆಮ್ಲಜನಕದ ಮಟ್ಟ ಕಡಿಮೆ ಇದ್ದುದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಅವರನ್ನು ಕೋವಿಡ್ ಐಸಿಯುನಿಂದ ಸಾಮಾನ್ಯ ಐಸಿಯುಗೆ ಸ್ಥಳಾಂತರಿಸಲಾಯಿತು. ಆದರೆ ಈ ಕಾಯಿಲೆಯಿಂದ ಉಂಟಾದ ತೊಂದರೆಗಳಿಂದಾಗಿ ಅವರ ಸ್ಥಿತಿ ಗಂಭೀರವಾಗಿತ್ತು. ಐದು ದಿನಗಳ ಹಿಂದೆ ಮಿಲ್ಖಾ ಅವರ ಪತ್ನಿ, ಭಾರತದ ಮಾಜಿ ವಾಲಿಬಾಲ್ ನಾಯಕಿ ನಿರ್ಮಲ್ ಕೌರ್ ಕೂಡ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದರು.
ಪ್ರಧಾನಿ ದುಃಖ ವ್ಯಕ್ತಪಡಿಸಿದರು ಮಿಲ್ಖಾ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಮಿಲ್ಖಾ ಸಿಂಗ್ ಜಿ ಅವರ ನಿಧನದೊಂದಿಗೆ, ಅಸಂಖ್ಯಾತ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದ ಒಬ್ಬ ಮಹಾನ್ ಕ್ರೀಡಾಪಟುವನ್ನು ನಾವು ಕಳೆದುಕೊಂಡಿದ್ದೇವೆ. ಅವರ ಸ್ಪೂರ್ತಿದಾಯಕ ವ್ಯಕ್ತಿತ್ವದಿಂದ ಲಕ್ಷಾಂತರ ಜನರು ಅವರನ್ನು ಪ್ರೀತಿಸುತ್ತಿದ್ದರು. ಅವರ ಸಾವಿನಿಂದ ನನಗೆ ನೋವುಂಟಾಗಿದೆ ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದರು.
ಮಿಲ್ಖಾ ವೃತ್ತಿ ಜೀವನ ಮಿಲ್ಖಾ ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ ಮತ್ತು 1958 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅವರು 1956 ಮತ್ತು 1964 ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು 1959 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಮಿಲ್ಖಾ ಸಿಂಗ್ ಅವರ ಮೇಲೆ ಬಾಲಿವುಡ್ ಚಿತ್ರವೊಂದನ್ನು ಸಹ ಮಾಡಲಾಗಿದೆ, ಇದರಲ್ಲಿ ಅವರ ಪಾತ್ರವನ್ನು ಫರ್ಹಾನ್ ಅಖ್ತರ್ ನಿರ್ವಹಿಸಿದ್ದಾರೆ.