Neeraj Chopra: ಪ್ಯಾರಿಸ್ ಡೈಮಂಡ್ ಲೀಗ್ ಗೆದ್ದ ನೀರಜ್ ಚೋಪ್ರಾ
Neeraj Chopra: ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬರೋಬ್ಬರಿ 90.23 ಮೀಟರ್ ಭರ್ಜಿ ಎಸೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದರು. ಪ್ಯಾರಿಸ್ ಡೈಮಂಡ್ ಲೀಗ್ ಗೆದ್ದ ಪ್ರಶಸ್ತಿ ಗೆಲ್ಲುವ ಮೂಲಕ ನೀರಜ್ ಮೊತ್ತೊಂದು ಸಾಧನೆ ಮಾಡಿದ್ದಾರೆ.

ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ (Neeraj Chopra) ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಪ್ರಶಸ್ತಿಗೆ ಮುಡಿಗೇರಿಸಿಕೊಂಡಿದ್ದಾರೆ. ಅದು ಕೂಡ ಜರ್ಮನಿಯ ಚಾಂಪಿಯನ್ ಜಾವೆಲಿನ್ ಎಸೆತಗಾರ ಜೂಲಿಯನ್ ವೆಬರ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. 2023 ರಲ್ಲಿ ಲೌಸಾನ್ನೆ ನಂತರ ಡೈಮಂಡ್ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ನೀರಜ್ ಚೋಪ್ರಾ ಇದೀಗ ಮತ್ತೊಮ್ಮೆ ಡೈಮಂಡ್ ಲೀಗ್‌ನಲ್ಲಿ ಎಲ್ಲರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ಯಾರಿಸ್‌ನಲ್ಲಿ ಶುಭಾರಂಭ:
ನೀರಜ್ ಚೋಪ್ರಾ 2025ರ ಮೊದಲ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ವಿಶೇಷ ಎಂದರೆ ನೀರಜ್ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು 8 ವರ್ಷಗಳ ಬಳಿಕ. ಅಂದರೆ ಕೊನೆಯ ಬಾರಿ ಅವರು ಪ್ಯಾರಿಸ್‌ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದರು.
ಎಂಟು ವರ್ಷಗಳ ಬಳಿಕ ಪ್ಯಾರಿಸ್ ಡೈಮಂಡ್ ಲೀಗ್ಗೆ ಮರಳಿದ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 88.16 ಮೀಟರ್ ಎಸೆತದೊಂದಿಗೆ ಶುಭಾರಂಭ ಮಾಡಿದ್ದರು. ಈ ಎಸೆತವೇ ಇತರ ಸ್ಪರ್ಧಿಗಳಿಗೆ ಗುರಿಯಾಗಿ ಮಾರ್ಪಟ್ಟಿತ್ತು.
ಇತ್ತ ನೀರಜ್ ಚೋಪ್ರಾ ಎರಡನೇ ಪ್ರಯತ್ನದಲ್ಲಿ 85.10 ಮೀಟರ್ ದೂರ ಎಸೆದಿದ್ದರು. ಆದರೆ ಕಠಿಣ ಪ್ರತಿ ಸ್ಪರ್ಧಿ ವೆಬರ್ ಈ ವೇಳೆ 87.88 ಮೀಟರ್ ತಲುಪಿದ್ದರು. ಇದಾದ ಬಳಿಕ ಲಯ ತಪ್ಪಿದ ನೀರಜ್ ಸತತ ಮೂರು ಫೌಲ್ ಎಸೆತಗಳನ್ನು ಎಸೆದರು. ಅತ್ತ ಹವಾಮಾನ ಬದಲಾದಂತೆ, ಇತರ ಸ್ಪರ್ಧಿಗಳಿಗೂ ಥ್ರೋಗಳು ಕಠಿಣವಾದವು.
ಕೈ ಹಿಡಿದ ಮೊದಲ ಎಸೆತ:
ನೀರಜ್ ಚೋಪ್ರಾ ತನ್ನ ಅಂತಿಮ ಪ್ರಯತ್ನದಲ್ಲಿ 82.89 ಮೀಟರ್ ದೂರಕ್ಕೆ ಎಸೆಯಲಷ್ಟೇ ಶಕ್ತರಾಗಿದ್ದರು. ಇದರ ನಡುವೆ ಮೌರಿಸಿಯೊ ಲೂಯಿಜ್ ಡ ಸಿಲ್ವಾ 86.62 ಮೀಟರ್ ದೂರಕ್ಕೆ ಎಸೆದು ಪೈಪೋಟಿಗೆ ಇಳಿದರು. ಅತ್ತ ಜೂಲಿಯನ್ ವೆಬರ್ ಸತತ ಪ್ರಯತ್ನ ನಡೆಸಿದರೂ, ನೀರಜ್ ಚೋಪ್ರಾ ಅವರ 88.16 ಮೀಟರ್ ಗುರಿಯನ್ನು ದಾಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನೀರಜ್ ಚೋಪ್ರಾ ಮೊದಲ ಎಸೆತದಲ್ಲಿ ಕ್ರಮಿಸಿದ 88.16 ಮೀಟರ್ ಮೊದಲ ಸ್ಥಾನವನ್ನು ಪಡೆದುಕೊಂಡಿತು.
ಇದನ್ನೂ ಓದಿ: KKR ಫ್ರಾಂಚೈಸಿ ತಂಡಕ್ಕೆ ಇಬ್ಬರು ಪಾಕಿಸ್ತಾನ್ ಆಟಗಾರರು ಆಯ್ಕೆ..!
ನೀರಜ್ ಚೋಪ್ರಾ ಮುಂದಿನ ಗುರಿ:
ನೀರಜ್ ಚೋಪ್ರಾ ಅವರ ಜೂನ್ 24 ರಂದು ಜೆಕ್ ಗಣರಾಜ್ಯದ ಒಸ್ಟ್ರಾವಾದಲ್ಲಿ ನಡೆಯುವ ಗೋಲ್ಡನ್ ಸ್ಪೈಕ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅದಾದ ನಂತರ, ಜುಲೈ 4 ರಂದು ನೀರಜ್ ಚೋಪ್ರಾ ಅವರ ಕ್ಲಾಸಿಕ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಎರಡು ಸ್ಪರ್ಧೆಗಳಿಗೂ ಮುನ್ನ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿನ ಗೆಲುವು ನೀರಜ್ ಚೋಪ್ರಾ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.