
ನ್ಯೂಸ್9 ಮತ್ತು ಟಿವಿ9 ನೆಟ್‌ವರ್ಕ್, ಮಾಧ್ಯಮ ಸಮೂಹವಾಗಿ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವುದಲ್ಲದೆ, ಸಾಮಾಜಿಕ ಜಾಗೃತಿಯನ್ನು ಸಹ ಮೂಡಿಸುವ ಕೆಲಸವನ್ನು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಇದರ ಜೊತೆಗೆ ಕ್ರೀಡಾ ಕ್ಷೇತ್ರಕ್ಕೂ ಕೊಡುಗೆ ನೀಡುತ್ತ ಬಂದಿರುವ ಟಿವಿ9 ನೆಟ್‌ವರ್ಕ್ ಈ ಹಿಂದೆ ಕಾರ್ಪೊರೇಟ್ ಫುಟ್ಬಾಲ್ ಕಪ್ (Football) ಹಾಗೂ ಇಂಡಿಯನ್ ಟೈಗರ್ಸ್ ಮತ್ತು ಟೈಗ್ರೆಸ್ (Indian Tigers and Tigresses) ಫುಟ್ಬಾಲ್ ಟೂರ್ನಮೆಂಟ್ ಕ್ರೀಡಾಕೂಟವನ್ನು ಆಯೋಜಿಸಿ ಯಶಸ್ವಿಯಾಗಿತ್ತು. ಈ ಸ್ಪರ್ಧೆಯು ಅನೇಕ ಸೌಲಭ್ಯ ವಂಚಿತ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಒಂದು ವೇದಿಕೆಯನ್ನು ಸೃಷ್ಟಿಸಿತ್ತು. ಇದೀಗ ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2025 ಅನ್ನು ಆಯೋಜಿಸಿದ್ದು, ಈ ಕ್ರೀಡಾಕೂಟದಲ್ಲಿ ಹಲವು ಪ್ರಸಿದ್ಧ ಕಾರ್ಪೊರೇಟ್ ಕಂಪನಿಗಳು ಭಾಗವಹಿಸುತ್ತಿವೆ. ಹೀಗಾಗಿ ಈ ಸ್ಪರ್ಧೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿವರಗಳು ಇಲ್ಲಿವೆ.
ಪಂದ್ಯಾವಳಿಯನ್ನು ರೌಂಡ್-ರಾಬಿನ್ ಸ್ವರೂಪದಲ್ಲಿ ಆಡಲಾಗುತ್ತದೆ. ಅಂದರೆ ಪ್ರತಿ ನೋಂದಾಯಿತ ತಂಡವು ಇತರ ಪ್ರತಿಯೊಂದು ತಂಡದೊಂದಿಗೆ ಆಡುತ್ತದೆ. ಪೂರ್ವ-ನೋಂದಣಿ ಅಗತ್ಯವಿದ್ದು, ಕುತೂಹಲಕಾರಿ ಸಂಗತಿಯೆಂದರೆ, ಎರಡು ಕಾರ್ಪೊರೇಟ್ ಕಂಪನಿಗಳು ಒಟ್ಟಾಗಿ ಸೇರಿ ಸಂಯೋಜಿತ ತಂಡವನ್ನು ರಚಿಸಬಹುದು. ಈ ಕ್ರೀಡಾಕೂಟವು ಪುರುಷರ ಸಿಂಗಲ್ಸ್ ಮತ್ತು ಮಿಶ್ರ ಡಬಲ್ಸ್ ಅನ್ನು ಒಳಗೊಂಡಿರುತ್ತದೆ.
ಅಲ್ಲದೆ, ಮುಕ್ತ ವಿಭಾಗದಲ್ಲಿ, ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್ ಮತ್ತು ಮಿಶ್ರ ಡಬಲ್ಸ್ ಪಂದ್ಯಗಳು ನಡೆಯಲಿವೆ. ಪುರುಷರ ವಿಭಾಗದ ಅಡಿಯಲ್ಲಿ, 3 ರಿಂದ ಐದು ಆಟಗಾರರ ತಂಡವನ್ನು ರಚಿಸಬಹುದಾಗಿದ್ದು, ಪ್ರತಿ ಕಾರ್ಪೊರೇಟ್ ಸಂಸ್ಥೆಯು ಬಹು ತಂಡಗಳನ್ನು ನೋಂದಾಯಿಸಲು ಸ್ವಾಗತಾರ್ಹವಾಗಿದೆ. ಈ ಪಂದ್ಯಾವಳಿಯನ್ನು ಮೇ 9 ರಿಂದ 11 ರವರೆಗೆ ಹೈದರಾಬಾದ್‌ನ ಪಿ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಬ್ಯಾಡ್ಮಿಂಟನ್ ಅಕಾಡೆಮಿಯ ಅನುಭವಿಗಳಿಂದ ತರಬೇತಿ ನೀಡಲಾಗುವುದು.
ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಪ್ರಸಿದ್ಧ ಕಾರ್ಪೊರೇಟ್ ಕಂಪನಿಗಳು ಭಾಗಿ
ಪುರುಷ ವಿಭಾಗದಲ್ಲಿ ಅಗ್ರ 3 ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಅದರಂತೆ ಮೊದಲ ಸ್ಥಾನ ಪಡೆದವರಿಗೆ 1.5 ಲಕ್ಷ ರೂ., ಎರಡನೇ ಸ್ಥಾನ ಪಡೆದವರಿಗೆ ಅಂದರೆ ರನ್ನರ್ ಅಪ್ ಆದವರಿಗೆ 1 ಲಕ್ಷ ರೂ. ಬಹುಮಾನ ದೊರೆಯಲಿದೆ. ಮೂರನೇ ಸ್ಥಾನ ಪಡೆದ ಆಟಗಾರರಿಗೆ 50 ಸಾವಿರ ರೂಪಾಯಿ ಬಹುಮಾನ ಸಿಗಲಿದೆ. ಹಾಗೆಯೇ ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 25,000 ರೂ., ಎರಡನೇ ಸ್ಥಾನ ಪಡೆದವರಿಗೆ 15,000 ರೂ., ಮೂರನೇ ಸ್ಥಾನ ಪಡೆದವರಿಗೆ 5,000 ರೂ. ನಗದು ಬಹುಮಾನ ನೀಡಲಾಗುವುದು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕಾರ್ಪೊರೇಟ್ ಕಂಪನಿಗಳು www.news9corporatecup.com ಮತ್ತು corporatecup@tv9.com ಮೂಲಕ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಕೊನೆಯ ದಿನಾಂಕ ಮೇ 6.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:36 pm, Mon, 5 May 25