ಕತಾರ್ (Qutar) ದೇಶದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಟೂರ್ನಿ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ನವೆಂಬರ್ 20 ರಿಂದ ಇಲ್ಲಿಯವರೆಗೆ ನಡೆದ ಪಂದ್ಯಗಳಲ್ಲಿ ಒಂದಿಲ್ಲೊಂದು ವಿಶೇಷಗಳಿದ್ದವು. ವಿಶೇಷವಾಗಿ ಏಷ್ಯಾ ಖಂಡದ ತಂಡಗಳೂ ಈ ಬಾರಿ ತಮ್ಮ ಶಕ್ತಿ ಮೆರೆದವು. ಜಪಾನ್, ದಕ್ಷಿಣ ಕೋರಿಯಾ ಮತ್ತು ಸೌದಿ ಅರೇಬಿಯಾ (Saudi Arabia) ತಂಡಗಳು ವಿಶ್ವದ ಘಟಾನುಘಟಿ ತಂಡಗಳಿಗೇ ಸೋಲಿನ ರುಚಿ ತೋರಿಸಿದ್ದು ಎಲ್ಲರ ದಂಗಾಗುವಂತೆ ಮಾಡಿದವು. ಇದೀಗ ಶುಕ್ರವಾರದಿಂದ ಕ್ವಾರ್ಟರ್ ಫೈನಲ್ ಹೋರಾಟ ಆರಂಭಗೊಳ್ಳಲಿದ್ದು ವಿಶ್ವದ ಬಲಿಷ್ಠ ಎಂಟು ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ.
ಬ್ರೆಜಿಲ್ vs ಕ್ರೊವೇಷ್ಯಾ:
ಕ್ವಾರ್ಟರ್ ಫೈನಲ್ನ ಮೊದಲ ದಿನವೇ ರೋಚಕ ಕಾದಾಟ ನಡೆಯಲಿದೆ. ಬ್ರೆಜಿಲ್ ತಂಡವು ಕ್ರೊವೇಷ್ಯಾವನ್ನು ಹಾಗೂ ನೆದರ್ಲೆಂಡ್ಸ್ ತಂಡವು ಅರ್ಜೆಂಟೀನವನ್ನು ಎದುರಿಸಲಿದೆ. ಇದರ ನಡುವೆ ಕ್ರೊವೇಷ್ಯಾ ತಂಡದ ಕೋಚ್ ಜ್ಲಾಟ್ಕೊ ಡಾಲಿಚ್ ಕ್ವಾರ್ಟರ್ ಫೈನಲ್‌ನಲ್ಲಿ ನಮ್ಮ ಎದುರಾಳಿಯಾಗಿರುವ ಬ್ರೆಜಿಲ್ ತಂಡ ಭಯ ಹುಟ್ಟಿಸುವಂತಿದೆ ಎಂದು ಹೇಳಿದ್ದಾರೆ. ಬ್ರೆಜಿಲ್ ತಂಡದಲ್ಲಿ ಗಾಯದ ಸಮಸ್ಯೆಯಿಂದ ಬಳಲಿದ್ದ ಎಲ್ಲ ಆಟಗಾರರೂ ಚೇತರಿಸಿಕೊಂಡಿದ್ದಾರೆ. ಲೆಫ್ಟ್ ಬ್ಯಾಕ್‌ನಲ್ಲಿ ಆಡುವ ಡಿಫೆಂಡರ್ ಅಲೆಕ್ಸ್ ಸ್ಯಾಂಡ್ರೊ ಅವರು ಕ್ರೊವೇಷ್ಯಾ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಿದ್ದು ಇದರಿಂದ ಕ್ರೊವೇಷ್ಯಾ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ. ಅಲ್ಲದೆ ಗಾಯದ ಕಾರಣ ಎರಡು ಲೀಗ್ ಪಂದ್ಯಗಳಿಂದ ಹೊರಗುಳಿದಿದ್ದ ನೇಮರ್ ಮತ್ತು ಡ್ಯಾನಿಲೊ ಅವರು ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಆಡಿದ್ದರು. ನೇಮರ್ ಅಂಗಳದಲ್ಲಿ ಇದ್ದ 80 ನಿಮಿಷಗಳಲ್ಲೂ ಮಾರಕವಾಗಿದ್ದರು.
ದೇಶಕ್ಕಾಗಿ ಆಡುವ ಉತ್ಸಾಹವೇ ಇಲ್ಲ, ಇದುವೇ ಸೋಲಿಗೆ ಕಾರಣ: ಮದನ್ ಲಾಲ್
ಇತ್ತ ಅನುಭವಿಗಳಾದ ಲುಕಾ ಮಾಡ್ರಿಚ್, ಡೆಜಾನ್ ಲೊವ್ರೆನ್, ಇವಾನ್ ಪೆರಿಸಿಚ್ ಮತ್ತು ಮಾರ್ಸೆಲೊ ಬ್ರೊಜೊವಿಚ್ ಅವರನ್ನೊಳಗೊಂಡ ಕ್ರೊವೇಷ್ಯಾ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ. ಬ್ರೆಜಿಲ್ ತಂಡ ವಿಶ್ವದ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು, ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಹೀಗಿದ್ದರೂ ನಾವು ಕೂಡಾ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯುವೆವು ಎಂದು ಕೋಚ್ ಜ್ಲಾಟ್ಕೊ ಡಾಲಿಚ್ ಹೇಳಿದ್ದಾರೆ. ಬ್ರೆಜಿಲ್ ಮತ್ತು ಕ್ರೊವೇಷ್ಯಾ ಒಟ್ಟಾರೆ ಐದು ಬಾರಿ ಮುಖಾಮುಖಿಯಾಗಿದ್ದು ಬ್ರೆಝಿಲ್ ಮೂರು ಬಾರಿ ಗೆಲುವು ಸಾಧಿಸಿದೆ. ಇನ್ನೆರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು.
ನೆದರ್ಲೆಂಡ್ಸ್ vs ಅರ್ಜೆಂಟೀನಾ:
ಇಂದು ದೋಹಾದ ಲುಸೈಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್ ಹಾಗೂ ಅರ್ಜೆಂಟೀನ ಮುಖಾಮುಖಿ ಆಗಲಿದೆ. ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರಿಗೆ ಬಹುತೇಕ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗಿದೆ. ಅರ್ಜೆಂಟೀನಾ ತಂಡದ ಏಂಜೆಲ್ ಡಿ ಮರಿಯಾ ಗಾಯದಿಂದ ಚೇತರಿಸಿಕೊಂಡಿದ್ದರೂ, ಕ್ವಾರ್ಟರ್ ಫೈನಲ್‌ನಲ್ಲಿ ಆಡುವುದು ಖಚಿತವಾಗಿಲ್ಲ. ತೊಡೆಯ ಗಾಯಕ್ಕೆ ಒಳಗಾಗಿದ್ದ ಅವರು ಆಸ್ಟ್ರೇಲಿಯಾ ವಿರುದ್ಧ ಆಡಿರಲಿಲ್ಲ. ಇತ್ತ ಕಳೆದ ವರ್ಷ ಯೂರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಸೋತ ಬಳಿಕ ಆಡಿದ 19 ಪಂದ್ಯಗಳಲ್ಲಿ ಅಜೇಯ ದಾಖಲೆಯನ್ನು ಹೊಂದಿರುವ ನೆದರ್ಲೆಂಡ್ಸ್ ತಂಡವು ಕೋಡಿ ಗಾಕ್ಪೊ ಮತ್ತು ಮೆಂಫಿಸ್ ಡೆಪೆ ಮೇಲೆ ಭರವಸೆಯಿಟ್ಟಿದೆ. ವಿಶ್ವಕಪ್ ಟೂರ್ನಿ ಸೇರಿದಂತೆ ಒಟ್ಟಾರೆಯಾಗಿ ಇವೆರಡು ತಂಡಗಳು ಒಂಬತ್ತು ಸಲ ಮುಖಾಮುಖಿಯಾಗಿದ್ದು, ನೆದರ್ಲೆಂಡ್ಸ್ ತಂಡ ನಾಲ್ಕು ಗೆಲುವುಗಳನ್ನು ಪಡೆದು ಮೇಲುಗೈ ಹೊಂದಿದೆ.
ನೇರ ಪ್ರಸಾರ:
ಭಾರತದಲ್ಲಿ ಸ್ಪೋರ್ಟ್ಸ್ 18 ವಾಹಿನಿ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರ ಒದಗಿಸುತ್ತಿದೆ. ಮೊಬೈಲ್‌ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಷನ್ ಮೂಲಕ ಲೈವ್ ವೀಕ್ಷಿಸಬಹುದಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:58 am, Fri, 9 December 22