ಗೆಲುವಿನ ಸ್ಪರ್ಶ ಕಂಡುಕೊಂಡ ಸಿಂಧು ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ಸೆಮಿಫೈನಲ್ ಪ್ರವೇಶ!
ಮೊದಲ ಗೇಮನ್ನು 16-21 ರಿಂದ ಸೋತ ನಂತರ ಪಂದ್ಯದಲ್ಲಿ ಅಮೋಘ ಕಮ್ಬ್ಯಾಕ್ ಮಾಡಿದ ಸಿಂಧು ನಂತರದ ಎರಡು ಗೇಮ್ಗಳನ್ನು 21-16 21-19 ಅಂತರದಿಂದ ಗೆದ್ದರು. ಈ ಪಂದ್ಯ 1 ಗಂಟೆ ಮತ್ತು 16 ನಿಮಿಷಗಳ ಕಾಲ ನಡೆಯಿತು.
ಭಾರತದ ಏಸ್ ಮಹಿಳಾ ಶಟ್ಲರ್ ಪಿವಿ ಸಿಂಧು ಗೆಲುವಿನ ಸ್ಪರ್ಶವನ್ನು ಪುನಃ ಕಂಡುಕೊಂಡಿದ್ದಾರೆ. ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಸಿಂಧು ಇಂದು ಜಪಾನಿನ ಅಗ್ರಮಾನ್ಯ ಆಟಗಾರ್ತಿ ಅಕನೆ ಯಮಗುಚಿ ಅವರನ್ನು ಸೋಲಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿದರು.
ಮೊದಲ ಗೇಮನ್ನು 16-21 ರಿಂದ ಸೋತ ನಂತರ ಪಂದ್ಯದಲ್ಲಿ ಅಮೋಘ ಕಮ್ಬ್ಯಾಕ್ ಮಾಡಿದ ಸಿಂಧು ನಂತರದ ಎರಡು ಗೇಮ್ಗಳನ್ನು 21-16, 21-19 ಅಂತರದಿಂದ ಗೆದ್ದರು. ಈ ಪಂದ್ಯ 1 ಗಂಟೆ ಮತ್ತು 16 ನಿಮಿಷಗಳ ಕಾಲ ನಡೆಯಿತು. ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಸಿಂಧು ಎರಡನೇ ಬಾರಿ ಸೆಮಿಫೈನಲ್ ಹಂತ ಪ್ರವೇಶಿಸಿದ್ದಾರೆ.
‘ಅವರ ವಿರುದ್ಧ ಬಹಳ ದಿನಗಳ ನಂತರ ಆಡಿದೆ. ಕೊನೆಯ ಬಾರಿ ನಾವಿಬ್ಬರು ಎದುರಾಳಿಗಳಾಗಿದ್ದು 2019 ನಲ್ಲಿರಬೇಕು. ಅವರೂ ಭಾರೀ ಪ್ರಮಾಣದ ತಯಾರಿ ಮಾಡಿಕೊಂಡಿದ್ದಿರಬಹುದು. ಇವತ್ತಿನ ಪಂದ್ಯ ಕಠಿಣ ಮತ್ತು ಸುದೀರ್ಘವಾಗಿತ್ತು,’ ಎಂದು ಪಂದ್ಯದ ನಂತರ ಸಿಂಧು ಹೇಳಿದರು.
‘ಮೊದಲ ಗೇಮ್ನಲ್ಲಿ ನಾನು ಬಹಳ ತಪ್ಪುಗಳನ್ನು ಮಾಡಿದೆ ಮತ್ತು ನನ್ನ ಸ್ಮ್ಯಾಶ್ಗಳು ಕೊರ್ಟ್ ಹೊರಗಡೆ ಬೀಳುತ್ತಿದ್ದವು. ಎರಡನೇ ಗೇಮ್ನಲ್ಲಿ ಡ್ರೀಫ್ಟ್ ನನ್ನ ಪರವಾಗಿತ್ತು. ಬಹಳಷ್ಟು ಱಲಿಗಳನ್ನು ನಾವು ಆಡಿದೆವು, ಎರಡನೇ ಗೇಮನ್ನು ನಾನು ಗೆಲ್ಲಲೇಬೇಕಿತ್ತು.’
‘ಮೂರನೇ ಗೇಮ್ ನಿರ್ಣಾಯಕವಾಗಿತ್ತು ಮತ್ತು ನನ್ನ ಕೋಚ್ ನೀಡಿದ ಸಲಹೆಗಳು ಅಮೂಲ್ಯವಾಗಿದ್ದವು. ನಾನು ಶಟಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅವರು ಹೇಳಿದರು. ಪ್ರತಿಯೊಂದು ಪಾಯಿಂಟ್ ಬಹಳ ಮುಖ್ಯವಾಗಿತ್ತು. ಕೊನೆಯ ಗೇಮ್ನಲ್ಲಿ ಇಬ್ಬರಿಗೂ ಗೆಲ್ಲುವ ಅವಕಾಶವಿತ್ತು. ನಾನು ಗೆದ್ದಿದ್ದು ಅತೀವ ಸಂತಸ ಮೂಡಿಸಿದೆ,’ ಎಂದು ಸಿಂಧು ಹೇಳಿದರು.
ಸೆಮಿಫೈನಲ್ನಲ್ಲಿ ಅವರು 11ನೇ ಶ್ರೇಯಾಂಕದ ಥೈಲ್ಯಾಂಡ್ನ ಪಾಂಪವೀ ಚೊಚುವಾಂಗ್ ಅವರನ್ನು ಎದುರಿಸಲಿದ್ದು ಅವರ ವಿರುದ್ದ 4-1 ಗೆಲುವಿನ ಲೀಡ್ ಹೊಂದಿದ್ದಾರೆ.