ಮಾಡಬಾರದನ್ನು ಮಾಡಿ ಚಿನ್ನದ ಪದಕ ಕಳೆದುಕೊಂಡ ಪ್ಯಾರಾ ಅಥ್ಲೀಟ್‌; ಭಾರತೀಯನಿಗೆ ಬಯಸದೆ ಬಂದ ಬಂಗಾರ

Paralympics 2024: ಸೆಪ್ಟೆಂಬರ್ 7 ರಂದು ನಡೆದ ಪುರುಷರ ಜಾವೆಲಿನ್ ಥ್ರೋ F41 ವಿಭಾಗದ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಇರಾನ್‌ನ ಪ್ಯಾರಾ ಅಥ್ಲೀಟ್​ ಸಡೆಗ್ ಬೀಟ್ ಸಯಾಹ್, ಪ್ಯಾರಾ ನಿಯಮಗಳಿಗೆ ವಿರುದ್ಧವಾದ ಕೆಲಸ ಮಾಡಿ ಚಿನ್ನದ ಪದಕ ಮಾತ್ರವಲ್ಲ, ಇಡೀ ಕ್ರೀಡಾಕೂಟದಿಂದಲೇ ಅನರ್ಹಗೊಂಡರು. ಅಷ್ಟಕ್ಕೂ ಈ ಇರಾನ್ ಅಥ್ಲೀಟ್‌ ಮಾಡಿದ ಕೆಲಸವೇನು ಎಂಬುದನು ಸಂಕ್ಷೀಪ್ತವಾಗಿ ನೋಡುವುದಾದರೆ...

ಮಾಡಬಾರದನ್ನು ಮಾಡಿ ಚಿನ್ನದ ಪದಕ ಕಳೆದುಕೊಂಡ ಪ್ಯಾರಾ ಅಥ್ಲೀಟ್‌; ಭಾರತೀಯನಿಗೆ ಬಯಸದೆ ಬಂದ ಬಂಗಾರ
ಸಡೆಗ್ ಬೀಟ್ ಸಯಾಹ್
Follow us
|

Updated on:Sep 08, 2024 | 3:00 PM

ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ 11ನೇ ದಿನಕ್ಕೆ ಕಾಲಿಟ್ಟಿದೆ. ಈ 11 ದಿನಗಳ ಪ್ರಯಾಣದಲ್ಲಿ ಭಾರತದಿಂದ ಅಮೋಘ ಪ್ರದರ್ಶನ ಕಂಡುಬಂದಿದ್ದು, ದೇಶವನ್ನು ಪ್ರತಿನಿಧಿಸಿದ್ದ ಪ್ಯಾರಾ ಅಥ್ಲೀಟ್‌ಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ಯಾರಾಲಿಂಪಿಕ್ ಇತಿಹಾಸದಲ್ಲೇ ಅತ್ಯಧಿಕ ಪದಕ ಗೆದ್ದ ಸಾಧನೆ ಮಾಡಿರುವ ಭಾರತೀಯ ಸ್ಪರ್ಧಿಗಳು ಇದುವರೆಗೆ 29 ಪದಕಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ, 13 ಕಂಚಿನ ಪದಕಗಳು ಸೇರಿವೆ. ವಾಸ್ತವವಾಗಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆ 6 ಇರಬೇಕಿತ್ತು. ಆದರೆ ನಿನ್ನೆ ನಡೆದ ಅಂದರೆ ಸೆಪ್ಟೆಂಬರ್ 7 ರಂದು ನಡೆದ ಪುರುಷರ ಜಾವೆಲಿನ್ ಥ್ರೋ F41 ವಿಭಾಗದ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಇರಾನ್‌ನ ಪ್ಯಾರಾ ಅಥ್ಲೀಟ್​ ಸಡೆಗ್ ಬೀಟ್ ಸಯಾಹ್, ಪ್ಯಾರಾ ನಿಯಮಗಳಿಗೆ ವಿರುದ್ಧವಾದ ಕೆಲಸ ಮಾಡಿ ಚಿನ್ನದ ಪದಕ ಮಾತ್ರವಲ್ಲ, ಇಡೀ ಕ್ರೀಡಾಕೂಟದಿಂದಲೇ ಅನರ್ಹಗೊಂಡರು. ಹೀಗಾಗಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ನವದೀಪ್ ಸಿಂಗ್​ಗೆ ಚಿನ್ನದ ಪದಕ ಲಭಿಸಿತು. ಅಷ್ಟಕ್ಕೂ ಈ ಇರಾನ್ ಅಥ್ಲೀಟ್‌ ಮಾಡಿದ ಕೆಲಸವೇನು ಎಂಬುದನು ಸಂಕ್ಷೀಪ್ತವಾಗಿ ನೋಡುವುದಾದರೆ…

ಚಿನ್ನ ಗೆದ್ದಿದ್ದ ಇರಾನ್ ಅಥ್ಲೀಟ್

ಶನಿವಾರ ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಪ್ಯಾರಾಲಿಂಪಿಕ್​ನ ಪುರುಷರ ಜಾವೆಲಿನ್ ಥ್ರೋ ಎಫ್41 ಸ್ಪರ್ಧೆಯ ಫೈನಲ್‌ನಲ್ಲಿ ಇರಾನ್​ನ ಸಡೆಗ್ ಬೀಟ್ ಸಯಾಹ್ ತನ್ನ ಐದನೇ ಪ್ರಯತ್ನದಲ್ಲಿ 47.64 ಮೀಟರ್ ದೂರ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದಲ್ಲದೆ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಆದರೆ ಚಿನ್ನದ ಪದಕ ಗೆದ್ದ ಸಂಭ್ರಮದಲ್ಲಿ ನಿಯಮಗಳನ್ನು ಮರೆತ ಸಡೆಗ್ ಬೀಟ್, ವಿವಾದಾತ್ಮಕ ಧ್ವಜ ಹಿಡಿದು ಸಂಭ್ರಮಿಸಿದರು. ಹೀಗಾಗಿ ಅವರನ್ನು ಕ್ರೀಡಾಕೂಟದಿಂದ ಅನರ್ಹಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಸಡೆಗ್ ಅವರನ್ನು ಏಕೆ ಅನರ್ಹಗೊಳಿಸಲಾಯಿತು ಎಂಬುದಕ್ಕೆ ಪ್ಯಾರಿಸ್ ಪ್ಯಾರಾಲಿಂಪಿಕ್ ಸಮಿತಿಯು ನಿಖರವಾದ ಕಾರಣವನ್ನು ಇದುವರೆಗೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ವಿವಾದಾತ್ಮಕ ಧ್ವಜ ಪ್ರದರ್ಶಿಸಿದಕ್ಕೆ ಅನರ್ಹ

ಆದರೆ ಸಡೆಗ್ ಹಿಡಿದಿದ್ದ ಧ್ವಜ ಕಪ್ಪು ಬಣ್ಣದಲ್ಲಿದ್ದು, ಅದರ ಮೇಲೆ ಕೆಂಪು ಬಣ್ಣದಲ್ಲಿ ಅರೇಬಿಕ್ ಸಂದೇಶಗಳನ್ನು ಬರೆಯಲಾಗಿತ್ತು. ಇದನ್ನು ಗಮನಿಸಿದ ಪ್ಯಾರಾಲಿಂಪಿಕ್ ನಿಯಂತ್ರಣ ಸಮಿತಿ, ನೀತಿ ಸಂಹಿತೆ ಮತ್ತು ನೀತಿಸಂಹಿತೆಯೊಂದಿಗೆ ವ್ಯವಹರಿಸುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಿಯಮಗಳು ಮತ್ತು ನಿಬಂಧನೆಗಳ ನಿಯಮ 8.1 ರ ಅಡಿಯಲ್ಲಿ ಚಿನ್ನ ಗೆದ್ದಿದ್ದ ಸಡೆಗ್ ಬೀಟ್ ಅವರನ್ನು ಕ್ರೀಡಾಕೂಟದಿಂದ ಅನರ್ಹಗೊಳಿಸುವ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ನಿಯಮದ ಪ್ರಕಾರ ಕ್ರೀಡಾಕೂಟದಲ್ಲಿ ಪದಕ ಗೆದ್ದವರು ದೇಶದ ಧ್ವಜ ಹಿಡಿದು ಸಂಭ್ರಮಿಸುವುದಕ್ಕೆ ಮಾತ್ರ ಅನುಮತಿ ಇದೆ. ಅದನ್ನು ಹೊರತುಪಡಿಸಿ ಯಾವುದೇ ವಿವಾದಾತ್ಮಕ ಹೇಳಿಕೆ ಇರುವ ಅಥವಾ ರಾಜಕೀಯಗೊಳಿಸುವ ಧ್ವಜವನ್ನು ಪ್ರದರ್ಶಿಸುವಂತಿಲ್ಲ.

ನಿಬಂಧನೆಗಳ ನಿಯಮ 8.1 ಏನನ್ನು ಹೇಳುತ್ತದೆ?

ಅಷ್ಟಕ್ಕೂ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ರಚಿಸಿರುವ ನಿಬಂಧನೆಗಳ ನಿಯಮ 8.1 ಏನನ್ನು ಹೇಳುತ್ತದೆ ಎಂಬುದನ್ನು ನೋಡುವುದಾದರೆ.. ‘ಪ್ಯಾರಾ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಸಮಗ್ರತೆ, ನೈತಿಕತೆ ಮತ್ತು ನಡವಳಿಕೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ಅಥ್ಲೀಟ್‌ಗಳು, ತರಬೇತುದಾರರು, ಅಧಿಕಾರಿಗಳು ಮತ್ತು ನಿರ್ವಾಹಕರು ಸೇರಿದಂತೆ ಕ್ರೀಡೆಯಲ್ಲಿ ಭಾಗವಹಿಸುವವರೆಲ್ಲರೂ ಈ ಮಾನದಂಡಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ಕ್ರೀಡೆಯನ್ನು ನ್ಯಾಯಯುತ, ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ’ ಎಂಬುದಾಗಿದೆ.

ಚಿನ್ನದ ಪದಕದ ರೇಸ್ ಹೇಗಿತ್ತು?

ಚಿನ್ನದ ಪದಕ ಗೆದ್ದಿದ್ದ ಸಡೆಗ್ ಬೀಟ್ ಅನರ್ಹಗೊಂಡ ಕಾರಣದಿಂದಾಗಿ ಬೆಳ್ಳಿ ಪದಕ ವಿಜೇತರಾಗಿದ್ದ ಭಾರತದ ನವದೀಪ್ ಸಿಂಗ್ ಚಿನ್ನದ ಪದಕಕ್ಕೆ ಭಾಜನರಾದರು. ನವದೀಪ್ ತನ್ನ ಎರಡನೇ ಪ್ರಯತ್ನದಲ್ಲಿ 46.39 ಮೀಟರ್ ಜಾವೆಲಿನ್ ಎಸೆದು, ಚಿನ್ನದ ಪದಕದ ರೇಸ್​ನಲ್ಲಿದ್ದ ಇರಾನ್​ನ ಸಡೆಗ್ ಬೀಟ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ಮೊದಲ ಸ್ಥಾನಕ್ಕೇರಿದರು. ಆದರೆ ಸಡೆಗ್ ಬೀಟ್ ನಂತರದ ಪ್ರಯತ್ನದಲ್ಲಿ 46.84 ಮೀಟರ್ ಜಾವೆಲಿನ್ ಎಸೆದು ಮತ್ತೊಮ್ಮೆ ಮೊದಲ ಸ್ಥಾನವನ್ನು ಪಡೆದುಕೊಂಡರು. ನಂತರದ ಎಸೆತದಲ್ಲಿ ಪುನರಾಗಮನ ಮಾಡಿದ ನವದೀಪ್ 47.32 ಮೀಟರ್‌ ದೂರ ಎಸೆದು ಮತ್ತೆ ಮೊದಲ ಸ್ಥಾನ ಪಡೆದರು. ಆದರೆ ಪಂದ್ಯದ ಐದನೇ ಸುತ್ತಿನಲ್ಲಿ ದಾಖಲೆಯ ಎಸೆತ ಎಸೆದ ಸಡೆಗ್ ಬೀಟ್ 47.64 ಮೀಟರ್ಸ್ ಎಸೆದು ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು. ಆದರೆ ಕ್ರೀಡಾಕೂಟದ ನಿಯಮಗಳನ್ನು ಮುರಿದಿದಕ್ಕಾಗಿ ಸಡೆಗ್ ಬೀಟ್​ಗೆ ಯಾವ ಪದಕವೂ ಸಿಗದಂತ್ತಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Sun, 8 September 24