Paris Olympics 2024: ಪಿವಿ ಸಿಂಧುಗೆ ಭರ್ಜರಿ ಜಯ
Paris Olympics 2024: ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಪಿವಿ ಸಿಂಧು ಕಡೆಯಿಂದ ಈ ಬಾರಿ ಕೂಡ ಪದಕವನ್ನು ನಿರೀಕ್ಷಿಸಬಹುದು. ಏಕೆಂದರೆ 2022 ರಲ್ಲಿ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಿವಿ ಸಿಂಧು ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಭಾರತೀಯ ಬ್ಯಾಡ್ಮಿಂಟನ್ ತಾರೆಯಿಂದ ಪದಕವನ್ನು ಎದುರು ನೋಡಲಾಗುತ್ತಿದೆ.
ಪ್ಯಾರಿಸ್ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ಭರ್ಜರಿ ಜಯ ಸಾಧಿಸಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಈ ಪಂದ್ಯದಲ್ಲಿ ಎಸ್ಟೋನಿಯಾದ ಕ್ರಿಸ್ಟಿನ್ ಕೂಬ ಮಣಿಸಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಮುಂದಿನ ಹಂತಕ್ಕೇರಿದ್ದಾರೆ. ಆರಂಭದಿಂದಲೇ ಉತ್ತಮ ನಿಯಂತ್ರಣ ಪ್ರದರ್ಶಿಸಿದ್ದ ಸಿಂಧು, ಮೊದಲ ಸೆಟ್ನಲ್ಲೇ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಮೊದಲ ಸೆಟ್ ಅನ್ನು 21-9 ಅಂಕಗಳ ಅಂತರದಿಂದ ಗೆದ್ದುಕೊಂಡರು.
ಇನ್ನು ದ್ವಿತೀಯ ಸೆಟ್ನ ಆರಂಭದಲ್ಲಿ ಕ್ರಿಸ್ಟಿನ್ ಕೂಬ ಕಡೆಯಿಂದ ಉತ್ತಮ ಪೈಪೋಟಿ ಕಂಡು ಬಂತು. ಆದರೆ ಅನುಭವಿ ಆಟಗಾರ್ತಿಯಾಗಿರುವ ಪಿವಿ ಸಿಂಧು ಚಾಣಾಕ್ಷ ಆಟದೊಂದಿಗೆ ಆರಂಭಿಕ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು. ಪರಿಣಾಮ ಕೂಬ 6 ಅಂಕಗಳನ್ನು ಕಲೆಹಾಕುವಷ್ಟರಲ್ಲಿ ಭಾರತೀಯ ತಾರೆ 15 ಪಾಯಿಂಟ್ಸ್ ಗಳಿಸಿದ್ದರು.
ಇದರ ನಡುವೆ ಲಯ ಕಳೆದುಕೊಂಡ ಕ್ರಿಸ್ಟಿನ್ ಕೂಬ ಸತತ ತಪ್ಪುಗಳನ್ನು ಎಸೆಗಿದರೆ, ಭಾರತೀಯ ತಾರೆ ಆಕ್ರಮಣಕಾರಿ ಆಟ ಮುಂದುವರೆಸಿದರು. ಪರಿಣಾಮ ದ್ವಿತೀಯ ಸೆಟ್ ಅನ್ನು ಸಿಂಧು 21-10 ಅಂಕಗಳ ಅಂತರದಿಂದ ಗೆದ್ದುಕೊಂಡರು. ಈ ಗೆಲುವಿನೊಂದಿಗೆ ಪಿವಿ ಸಿಂಧು ಪ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: Manu Bhaker: ಒಲಿಂಪಿಕ್ಸ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮನು ಭಾಕರ್
ಸಿಂಧು ಮೇಲೆ ನಿರೀಕ್ಷೆ:
ಈ ಬಾರಿಯ ಒಲಿಂಪಿಕ್ಸ್ನಲ್ಲಿ ಪಿವಿ ಸಿಂಧು ಕಡೆಯಿಂದ ಪದಕವನ್ನು ನಿರೀಕ್ಷಿಸಬಹುದು. ಏಕೆಂದರೆ ಕಳೆದ ಎರಡು ಒಲಿಂಪಿಕ್ಸ್ಗಳಲ್ಲಿ ಅವರು ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದ್ದರು. 2016 ರಲ್ಲಿ ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದರು. ಹೀಗಾಗಿ ಈ ಬಾರಿ ಕೂಡ ಪಿವಿ ಸಿಂಧು ಕಡೆಯಿಂದ ಪದಕ ನಿರೀಕ್ಷಿಸಲಾಗುತ್ತಿದೆ.
ಪಿವಿ ಸಿಂಧು ಸಾಧನೆಗಳು:
- 2013 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಗುವಾಂಗ್‌ಝೌ, ಚೀನಾ)- ಕಂಚು
- 2014 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಡೆನ್ಮಾರ್ಕ್)- ಕಂಚು
- 2014 ಕಾಮನ್ವೆಲ್ತ್ ಗೇಮ್ಸ್ (ಸ್ಕಾಟ್ಲೆಂಡ್)- ಕಂಚು
- 2014 ಏಷ್ಯನ್ ಚಾಂಪಿಯನ್‌ಶಿಪ್ (ಸೌತ್ ಕೊರಿಯಾ)- ಕಂಚು
- 2016 ರಿಯೊ ಒಲಿಂಪಿಕ್ಸ್ 2016 (ಬ್ರೆಝಿಲ್)- ಬೆಳ್ಳಿ
- 2017 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಸ್ಕಾಟ್ಲೆಂಡ್)- ಬೆಳ್ಳಿ
- 2018 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಚೀನಾ)- ಬೆಳ್ಳಿ
- 2018 ಕಾಮನ್‌ವೆಲ್ತ್ ಗೇಮ್ಸ್ (ಆಸ್ಟ್ರೇಲಿಯಾ)- ಬೆಳ್ಳಿ
- 2018 ಏಷ್ಯನ್ ಗೇಮ್ಸ್ (ಇಂಡೋನೇಷ್ಯಾ)- ಬೆಳ್ಳಿ
- 2019 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಸ್ವಿಟ್ಜರ್ಲೆಂಡ್)- ಚಿನ್ನ
- 2020 ಟೋಕಿಯೋ ಒಲಿಂಪಿಕ್ಸ್ 2020 (ಜಪಾನ್)- ಕಂಚು
- 2022 ಏಷ್ಯನ್ ಚಾಂಪಿಯನ್‌ಶಿಪ್ (ಫಿಲಿಪೈನ್ಸ್)- ಕಂಚು
- 2022 ಕಾಮನ್ವೆಲ್ತ್ ಗೇಮ್ಸ್ (ಇಂಗ್ಲೆಂಡ್)- ಚಿನ್ನ
Published On - 1:48 pm, Wed, 31 July 24