Paris Olympics 2024: ಭಾರತಕ್ಕೆ ಮೂರನೇ ಪದಕ ಗೆದ್ದು ಕೊಟ್ಟ ಸ್ವಪ್ನಿಲ್ ಕುಸಾಲೆ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಏರ್​ ಪಿಸ್ತೂಲ್​ ಶೂಟಿಂಗ್​ನಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದರು. ಇದರ ಬೆನ್ನಲ್ಲೇ ಮಿಶ್ರ ಏರ್ ಪಿಸ್ತೂಲ್​ ಮಿಶ್ರ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮನು ಭಾಕರ್ 2ನೇ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದರು. ಇದೀಗ ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಮೂರನೇ ಪದಕ ಗೆದ್ದುಕೊಟ್ಟಿದ್ದಾರೆ.

Paris Olympics 2024: ಭಾರತಕ್ಕೆ ಮೂರನೇ ಪದಕ ಗೆದ್ದು ಕೊಟ್ಟ ಸ್ವಪ್ನಿಲ್ ಕುಸಾಲೆ
Swapnil Kusale

Updated on: Aug 03, 2024 | 12:06 PM

ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ 50 ಮೀ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. 8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಮೂರನೇ ಕಂಚಿನ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಚೀನಾದ ಲಿಯು ಯುಕುನ್ 463.6 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದುಕೊಂಡರೆ, ಉಕ್ರೇನ್ ಸೆರ್ಹಿ ಕುಲಿಶ್ 461.3 ಪಾಯಿಂಟ್ಸ್​ನೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು 7ನೇ ಸ್ಥಾನದೊಂದಿಗೆ ಫೈನಲ್​ಗೆ ಪ್ರವೇಶಿಸಿದ್ದ ಸ್ವಪ್ನಿಲ್ ಕುಸಾಲೆ ಅಂತಿಮ ಸುತ್ತಿನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರು.

ಅಲ್ಲದೆ ಜೆಕ್ ರಿಪಬ್ಲಿಕ್​ನ ಶೂಟರ್​ ಜಿರಿ ಪ್ರೀವ್ರಾಟ್ಸ್ಕಿ (440.7 ಅಂಕಗಳು) ಅವರನ್ನು ಹಿಂದಿಕ್ಕಿ ಸ್ವಪ್ನಿಲ್ ಕುಸಾಲೆ ಮೂರನೇ ಸ್ಥಾನಕ್ಕೇರಿರು. ಈ ಮೂಲಕ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: Manu Bhaker: ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮನು ಭಾಕರ್

ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ  ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಇದಕ್ಕೂ ಮುನ್ನ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮಹಿಳಾ ಶೂಟರ್ ಮನು ಭಾಕರ್ ಭಾರತಕ್ಕೆ ಮೊದಲ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಆ ಬಳಿಕ ಸರಬ್ಜೋತ್ ಸಿಂಗ್ ಜೊತೆಗೂಡಿ ಮಿಶ್ರ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದರು. ಇದೀಗ ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀ ರೈಫಲ್ 3 ಪೊಸಿಷನ್ ಸುತ್ತಿನ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಸಫಲರಾಗಿದ್ದಾರೆ.

ಪದಕ ವಿಜೇತ ಸ್ವಪ್ನಿಲ್ ಕುಸಾಲೆ

ಸ್ವಪ್ನಿಲ್ ಕುಸಾಲೆ ಅವರ ಈ ಹಿಂದಿನ ಸಾಧನೆಗಳು:

  •  ವಿಶ್ವ ಚಾಂಪಿಯನ್‌ಶಿಪ್, ಕೈರೋ (2022) – 4ನೇ ಸ್ಥಾನ.
  • ಏಷ್ಯನ್ ಗೇಮ್ಸ್ (2022) – ಚಿನ್ನ ಪದಕ
  • ವಿಶ್ವಕಪ್, ಬಾಕು (2023) – ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ
  • ವಿಶ್ವಕಪ್, ಬಾಕು (2023) ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಲ್ಲಿ ಎರಡು ಬೆಳ್ಳಿ ಪದಕಗಳು.
  • ವಿಶ್ವ ಚಾಂಪಿಯನ್‌ಶಿಪ್, ಕೈರೋ (2022) – ತಂಡದ ಸ್ಪರ್ಧೆಯಲ್ಲಿ ಕಂಚಿನ ಪದಕ.
  • ವಿಶ್ವಕಪ್, ನವದೆಹಲಿ (2021) – ತಂಡದ ಸ್ಪರ್ಧೆಯಲ್ಲಿ ಚಿನ್ನದ ಪದಕ.

 

Published On - 1:49 pm, Thu, 1 August 24