Paris Olympics 2024: ವಿನೇಶ್ ಫೋಗಟ್ ಅನರ್ಹ; ಐಒಎ ಅಧ್ಯಕ್ಷೆ ಪಿಟಿ ಉಷಾ ಮೊದಲ ಪ್ರತಿಕ್ರಿಯೆ
Paris Olympics 2024: ವಿನೇಶ್ರನ್ನು ಭೇಟಿಯಾಗಿದ್ದ ಐಒಎ ಅಧ್ಯಕ್ಷೆ ಪಿಟಿ ಉಷಾ ಮಾತನಾಡಿ, ವಿನೇಶ್ ಅವರ ಅನರ್ಹತೆ ಆಘಾತಕಾರಿಯಾಗಿದೆ. ನಾನು ಸ್ವಲ್ಪ ಸಮಯಕ್ಕೂ ಮುಂಚೆ ಒಲಿಂಪಿಕ್ ವಿಲೇಜ್ ಪಾಲಿಕ್ಲಿನಿಕ್‌ನಲ್ಲಿ ವಿನೇಶ್ ಅವರನ್ನು ಭೇಟಿಯಾಗಿದ್ದೆ ಮತ್ತು ಅವರಿಗೆ ಭಾರತೀಯ ಒಲಿಂಪಿಕ್ ಸಂಸ್ಥೆ, ಭಾರತ ಸರ್ಕಾರ ಮತ್ತು ಇಡೀ ದೇಶದಿಂದ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದೇನೆ ಎಂದಿದ್ದಾರೆ.
ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಭಾರತದ ಮೊದಲ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಂಡಿದೆ. ವಿನೇಶ್ ಫೋಗಟ್ ಕೇವಲ 100 ಗ್ರಾಂ ತೂಕ ಹೆಚ್ಚಿದ್ದ ಕಾರಣದಿಂದ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ. ಈ ನಡುವೆ ನಿರ್ಜಲೀಕರಣದಿಂದಾಗಿ ಬಳಲುತ್ತಿರುವ ವಿನೇಶ್ ಅವರನ್ನು ಪ್ಯಾರಿಸ್ನ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿರುವ ಕ್ಲಿನಿಕ್ನಲ್ಲಿ ದಾಖಲಿಸಲಾಗಿದೆ. ಇದೀಗ ವಿನೇಶ್ರನ್ನು ಭೇಟಿಯಾಗಿದ್ದ ಐಒಎ ಅಧ್ಯಕ್ಷೆ ಪಿಟಿ ಉಷಾ ಮಾತನಾಡಿ, ‘ವಿನೇಶ್ ಅವರ ಅನರ್ಹತೆ ಆಘಾತಕಾರಿಯಾಗಿದೆ. ನಾನು ಸ್ವಲ್ಪ ಸಮಯಕ್ಕೂ ಮುಂಚೆ ಒಲಿಂಪಿಕ್ ವಿಲೇಜ್ ಪಾಲಿಕ್ಲಿನಿಕ್‌ನಲ್ಲಿ ವಿನೇಶ್ ಅವರನ್ನು ಭೇಟಿಯಾಗಿದ್ದೆ ಮತ್ತು ಅವರಿಗೆ ಭಾರತೀಯ ಒಲಿಂಪಿಕ್ ಸಂಸ್ಥೆ, ಭಾರತ ಸರ್ಕಾರ ಮತ್ತು ಇಡೀ ದೇಶದಿಂದ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದೇನೆ. ನಾವು ವಿನೇಶ್‌ಗೆ ಎಲ್ಲಾ ರೀತಿಯ ವೈದ್ಯಕೀಯ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ವಿನೇಶ್ ಫೋಗಟ್ ಅವರ ಅನರ್ಹತೆಯ ಬಗ್ಗೆ ಮಾತನಾಡಿರುವ ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಮತ್ತು ತಂಡದ ವೈದ್ಯ ಪದ್ರಿವಾಲಾ, ‘ವಿನೇಶ್ ಫೋಗಟ್ ಅನರ್ಹತೆಯ ವಿರುದ್ಧ ಭಾರತೀಯ ಒಲಿಂಪಿಕ್ ಸಂಸ್ಥೆ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಡಬ್ಲ್ಯುಎಫ್‌ಐ ಕೂಡ ಒಲಿಂಪಿಕ್ ಸಮಿತಿಗೆ ಪತ್ರ ಬರೆದು ವಿನೇಶ್ ಅವರನ್ನು ಹೊರಗಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದಿದ್ದಾರೆ. ಇದರ ಜೊತೆಗೆ ವಿನೇಶ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಇವರು, ‘ವಿನೇಶ್ ಅವರ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಸದ್ಯ ಆಕೆ ಆರೋಗ್ಯವಾಗಿದ್ದಾರೆ. ವಿನೇಶ್ ದೈಹಿಕವಾಗಿ ಚೆನ್ನಾಗಿದ್ದಾರೆ ಆದರೆ ಮಾನಸಿಕವಾಗಿ ಅವರು ತುಂಬಾ ಕುಗ್ಗಿದ್ದಾರೆ ಎಂದು ಹೇಳಿದ್ದಾರೆ.
#WATCH On Vinesh Phogat’s disqualification, President of the Indian Olympic Association (IOA) PT Usha says, “Vinesh’s disqualification is very shocking. I met Vinesh at the Olympic village polyclinic a short while ago and assured her complete support of the Indian Olympic… pic.twitter.com/hVgsPUb03y
— ANI (@ANI) August 7, 2024
ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ
ಇನ್ನು ತೂಕ ಹೆಚ್ಚಳದ ಬಗ್ಗೆ ಮಾಹಿತಿ ನೀಡಿರುವ ವೈದ್ಯ ಪರ್ದಿವಾಲಾ, ‘ಕೆಲವೊಮ್ಮೆ ನಿರಂತರ ಪಂದ್ಯಗಳಿಂದ ಹೆಚ್ಚು ನೀರು ಕುಡಿಯಬೇಕಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ತೂಕ ಹೆಚ್ಚಾಗುತ್ತದೆ. ರಾತ್ರಿ ವಿನೇಶ್‌ನ ತೂಕ ಹೆಚ್ಚಾದಾಗ ಅದನ್ನು ಕಡಿಮೆ ಮಾಡಲು ವೈದ್ಯಕೀಯ ತಂಡ ಅನೇಕ ಪ್ರಯತ್ನಗಳನ್ನು ಮಾಡಿತು, ಅವರ ಕೂದಲನ್ನು ಸಹ ಕತ್ತರಿಸಲಾಯಿತು. ಆದರೆ ಬೆಳಿಗ್ಗೆ 7 ಗಂಟೆಗೆ ಅವರನ್ನು ತೂಕ ಮಾಡಿದಾಗ, ಅವರು ನಿಗದಿಗಿಂತ 100 ಗ್ರಾಂ ಹೆಚ್ಚು ತೂಕ ಇರುವುದು ಕಂಡುಬಂದಿತ್ತು ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Wed, 7 August 24