ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಕಾಮನ್‌ವೆಲ್ತ್ ಗೇಮ್ಸ್-2022 ರ (CWG 2022) ಪದಕ ವಿಜೇತರನ್ನು ಶನಿವಾರ ತಮ್ಮ ನಿವಾಸದಲ್ಲಿ ಭೇಟಿ ಮಾಡಿದರು. ಬರ್ಮಿಂಗ್ ಹ್ಯಾಮ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಒಟ್ಟು 61 ಪದಕಗಳನ್ನು ಗೆದ್ದುಕೊಂಡು ವಿಶೇಷ ಸಾಧನೆ ಮಾಡಿತ್ತು. ಅಷ್ಟೇ ಅಲ್ಲದೆ ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನ ಗಳಿಸಿ ಹಿಂತಿರುಗಿತ್ತು. ಹೀಗೆ ಭಾರತದ ತ್ರಿವರ್ಣ ಪತಾಕೆಯನ್ನು ಹಾರಿಸಿದ ಕ್ರೀಡಾಪಟುಗಳನ್ನು ಪ್ರಧಾನಿ ಭೇಟಿಯಾಗಿ ವಿಶೇಷ ಕುಶಲೋಪರಿ ನಡೆಸಿದರು.
ಈ ವೇಳೆ ಮಾತನಾಡಿದ ಮಾನ್ಯ ಪ್ರಧಾನಿ, ಕ್ರೀಡೆಗಳಲ್ಲಿ ಭಾರತದ ಯಶಸ್ಸು ದೊಡ್ಡ ಸಾಧನೆ ಎಂದು ಬಣ್ಣಿಸಿದರು. ಆಟಗಾರರೊಂದಿಗೆ ಸಂವಾದ ನಡೆಸಿದ ಬಳಿಕ ಮೋದಿ ಅವರು ‘ಮೀಟ್ ದಿ ಚಾಂಪಿಯನ್’ ಅಭಿಯಾನವನ್ನು ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಕಳೆದ ಬಾರಿ ದೇಶದ 75 ಶಾಲೆಗಳು, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದೆ. ಇದೇ ಅಭಿಯಾನವನ್ನು ಮುಂದುವರೆಸಬೇಕು. ಈ ಮೂಲಕ ಸಾಧನೆಗೈದ ಕ್ರೀಡಾಪಟುಗಳು ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಬೇಕೆಂದು ಮನವಿ ಮಾಡಿದರು.
ಕಳೆದ ಕೆಲವು ವಾರಗಳಲ್ಲಿ ಭಾರತವು ಕ್ರೀಡಾ ಕ್ಷೇತ್ರದಲ್ಲಿ ಎರಡು ದೊಡ್ಡ ಸಾಧನೆಗಳನ್ನು ಮಾಡಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದರೆ, ಇತ್ತ ದೇಶವು ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಅನ್ನು ಆಯೋಜಿಸಿದೆ. ನೀವೆಲ್ಲರೂ ಅಲ್ಲಿ ಸ್ಪರ್ಧಿಸುತ್ತಿದ್ದರೆ, ಹಲವು ಭಾರತೀಯರು ಇಲ್ಲಿ ಪ್ರದರ್ಶನ ನೀಡುತ್ತಿದ್ದರು ಎಂದು ಇದೇ ಮೊದಲ ಬಾರಿಗೆ ಭಾರತ ಚೆಸ್ ಒಲಿಂಪಿಯಾಡ್ಗೆ ಆತಿಥ್ಯವಹಿಸಿದ್ದನ್ನು ಪ್ರಧಾನಿ ಸ್ಮರಿಸಿದರು.
#WATCH | Delhi: Prime Minister Narendra Modi interacted with the Indian contingent that participated in #CWG22, today. Union Sports Minister Anurag Thakur and MoS Sports Nisith Pramanik were also present at the occasion. #CommonwealthGames2022
(Source: PMO) pic.twitter.com/IpP9N9NaHJ
— ANI (@ANI) August 13, 2022
ಇನ್ನು ಕ್ರೀಡಾಕೂಟಗಳಲ್ಲಿ ಭಾರತೀಯ ಸಾಧನೆಯನ್ನು ಕೊಂಡಾಡಿದ ಪ್ರಧಾನಿಯವರು, ಈ ಬಾರಿ ಭಾರತ ಹಲವು ಕ್ರೀಡೆಗಳಲ್ಲಿ ಮೊದಲ ಬಾರಿಗೆ ಪದಕ ಗೆದ್ದಿದೆ. ತಡರಾತ್ರಿಯವರೆಗೂ ನಿಮ್ಮ ಪ್ರತಿಯೊಂದು ಪ್ರದರ್ಶನಗಳನ್ನು ದೇಶವಾಸಿಗಳು ಎದುರು ನೋಡುತ್ತಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನಾವು 4 ಹೊಸ ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದೇವೆ. ಲಾನ್ ಬೌಲ್‌ಗಳಿಂದ ಹಿಡಿದು ಅಥ್ಲೆಟಿಕ್ಸ್‌ವರೆಗೆ ಅದ್ಬುತ ಪ್ರದರ್ಶನವನ್ನು ನೀಡಿದ್ದೇವೆ. ಈ ಪ್ರದರ್ಶನದಿಂದ ದೇಶದಲ್ಲಿ ಹೊಸ ಕ್ರೀಡೆಗಳತ್ತ ಯುವಕರ ಒಲವು ಹೆಚ್ಚಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ದೇಶದ ಹೆಣ್ಣುಮಕ್ಕಳ ಸಾಧನೆಯನ್ನು ಹೊಗಳಿದ ಮೋದಿ, ಕ್ರೀಡಾಕೂಟಗಳಲ್ಲಿ ಭಾರತೀಯ ಹೆಣ್ಣುಮಕ್ಕಳ ಸಾಧನೆ ಅದ್ಭುತವಾಗಿದೆ. ಭಾರತದ ಲಾನ್ ಬೌಲ್ ಮಹಿಳಾ ತಂಡ ಚೊಚ್ಚಲ ಬಾರಿಗೆ ಪದಕ ಗೆದ್ದಿರುವುದು ವಿಶೇಷ. ಅದೇ ಸಮಯದಲ್ಲಿ, ನಿಖಾತ್ ಜರೀನ್, ನೀತು ಬಾಕ್ಸಿಂಗ್ನಲ್ಲಿ ಪದಕಗಳನ್ನು ಗೆದ್ದು ಕೊಟ್ಟರು. ಹಾಗೆಯೇ ಸುಶೀಲಾ ದೇವಿ ಜೂಡೋದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ದಿವ್ಯಾ ಕಕ್ರಾನ್ ಮತ್ತು ವಿನೇಶ್ ಫೋಗಟ್ ಅವರಂತಹ ಆಟಗಾರರು ಕುಸ್ತಿಯಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಬಾಕ್ಸಿಂಗ್, ಜೂಡೋ, ಕುಸ್ತಿ ಇರಲಿ, ಹೆಣ್ಣುಮಕ್ಕಳು ಮೇಲುಗೈ ಸಾಧಿಸಿದ ರೀತಿ ಅದ್ಭುತವಾಗಿದೆ ಎಂದು ಅವರು ಹೇಳಿದರು.
Elated to interact with our CWG 2022 contingent. Entire nation is proud of their outstanding achievements. https://t.co/eraViqKcnl
— Narendra Modi (@narendramodi) August 13, 2022
ಕ್ರೀಡಾ ಪಟುಗಳು ಪದಕಗಳನ್ನು ಗಳಿಸಿ ದೇಶದ ಜನರು ತಮ್ಮ ಯಶಸ್ಸಿನ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದಾರೆ. ನೀವೆಲ್ಲರೂ ದೇಶಕ್ಕೆ ಪದಕ ಗೆದ್ದಿದ್ದಷ್ಟೇ ಅಲ್ಲ, ಸಂಭ್ರಮಿಸಲು, ಹೆಮ್ಮೆ ಪಡಲು ಅವಕಾಶವನ್ನು ಸೃಷ್ಟಿಸಿದ್ದೀರಿ. ಈ ಮೂಲಕ ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಮನೋಭಾವವನ್ನು ಬಲಪಡಿಸಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.