ನವದೆಹಲಿ: 44ನೇ ಚೆಸ್ ಒಲಿಂಪಿಯಾಡ್‌ನ ಟಾರ್ಚ್ ರಿಲೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು. ರಾಷ್ಟ್ರ ರಾಜಧಾನಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಅವರು ಒಲಿಂಪಿಯಾಡ್ ಜ್ಯೋತಿಯನ್ನು ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಿದರು. ಆ ಬಳಿಕ ಜ್ಯೋತಿಯನ್ನು ಪ್ರಧಾನಿ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೆ ಹಸ್ತಾಂತರಿಸಿ, ಅವರಿಂದ ಒಲಿಂಪಿಯಾಡ್ ಜ್ಯೋತಿ ಬೆಳಗಿಸಿದರು. ಇದೇ ವೇಳೆ ಚೆಸ್ ಪಟು ಕೋನೇರು ಹಂಪಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ವಿಶೇಷ ಎಂದರೆ ಒಲಿಂಪಿಕ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ನಲ್ಲೂ ಟಾರ್ಚ್ ರಿಲೇಗೆ ಚಾಲನೆ ನೀಡಲಾಗಿದೆ.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಪ್ರಧಾನಿ ಮೋದಿ, ಚೆಸ್ ಒಲಿಂಪಿಯಾಡ್ನಲ್ಲಿ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನಡೆಯುತ್ತಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ. ಅದನ್ನು ಭಾರತ ಆಯೋಜಿಸುತ್ತಿರುವುದು ಹೆಮ್ಮೆ ವಿಷಯ. ಭಾರತವು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯತ್ತ ಮುನ್ನುಗ್ಗುತ್ತಿದೆ. ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಮತ್ತು ಪ್ಯಾರಾಒಲಿಂಪಿಕ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದಾಗ್ಯೂ ನಾವು ಚೆಸ್ನಲ್ಲಿ ಈ ಹಿಂದೆಯೇ ಮೇಲುಗೈ ಸಾಧಿಸಿದ್ದೆವು. ವಿಶ್ವನಾಥನ್ ಆನಂದ್, ಕೊನೇರು ಹಂಪಿಯಂತಹ ಚೆಸ್ಪಟುಗಳು ವಿಶ್ವದಲ್ಲೇ ಗಮನ ಸೆಳೆದಿದ್ದರು. ಇದೀಗ ಚೆಸ್ನಲ್ಲಿ ಒಲಿಂಪಿಯಾಡ್ ಟಾರ್ಚ್ ರಿಲೇ ಅನ್ನು ಭಾರತದಿಂದಲೇ ಆರಂಭಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು. ಇದೇ ವೇಳೆ ಬಾರಿ ಚೆಸ್ ಒಲಿಂಪಿಯಾಡ್ನಲ್ಲಿ ಭಾಗವಹಿಸುತ್ತಿರುವ ಎಲ್ಲಾ ಸ್ಪರ್ಧಾಳುಗಳಿಗೂ ಪ್ರಧಾನಿ ಮೋದಿ ಶುಭಕೋರಿದರು.
ಒಲಿಂಪಿಯಾಡ್ ಟಾರ್ಚ್ ರಿಲೇ ಯಾವಾಗಲೂ ಭಾರತದಿಂದ ಪ್ರಾರಂಭವಾಗುತ್ತದೆ. ಕ್ರೀಡೆಯು ಹುಟ್ಟಿಕೊಂಡ ಭೂಮಿ ಮತ್ತು ಆತಿಥೇಯ ನಗರವನ್ನು ತಲುಪುವ ಮೊದಲು ಎಲ್ಲಾ ಖಂಡಗಳಲ್ಲಿ ಪ್ರಯಾಣಿಸುತ್ತದೆ. ಅಂತಿಮವಾಗಿ ಆಯಾ ವರ್ಷ ಒಲಿಂಪಿಯಾಡ್ ಚೆಸ್ ಟೂರ್ನಿ ಎಲ್ಲಿ ನಡೆಯಲಿದೆಯೋ ಆ ನಗರದಲ್ಲಿ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಈ ಬಾರಿ ಭಾರತದಲ್ಲಿ ಟೂರ್ನಿ ನಡೆಯಲಿದ್ದು, ಇದಾಗ್ಯೂ ಸಮಯದ ಕೊರತೆಯಿಂದಾಗಿ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ ದೇಶದ ಪ್ರಮುಖ ನಗರಗಳಲ್ಲಿ ಮಾತ್ರ ಸಂಚರಿಸಲಿದೆ ಎಂದು ಭಾರತೀಯ ಚೆಸ್ ಫೆಡರೇಶನ್ (ಎಐಸಿಎಫ್) ತಿಳಿಸಿದೆ.
ಒಲಿಂಪಿಕ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ನಲ್ಲಿ ಟಾರ್ಚ್ ರಿಲೇ ಪ್ರದರ್ಶಿಸಲಾಗುತ್ತಿದ್ದು, ಇದನ್ನು ದೇಶದ 75 ನಗರಗಳಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲದೆ ಪ್ರತಿ ಸ್ಥಳದಲ್ಲಿ, ರಾಜ್ಯದ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳು ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ. ಅದರಂತೆ ಲೇಹ್, ಶ್ರೀನಗರ, ಜೈಪುರ, ಸೂರತ್, ಮುಂಬೈ, ಭೋಪಾಲ್, ಪಾಟ್ನಾ, ಕೋಲ್ಕತ್ತಾ, ಗ್ಯಾಂಗ್ಟಾಕ್, ಹೈದರಾಬಾದ್, ಬೆಂಗಳೂರು, ತ್ರಿಶೂರ್, ಪೋರ್ಟ್ ಬ್ಲೇರ್ ಮತ್ತು ಕನ್ಯಾಕುಮಾರಿ ಸೇರಿದಂತೆ ಭಾರತದ 75 ನಗರಗಳಲ್ಲಿ ಒಲಿಂಪಿಯಾಡ್ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಅಂತಿಮವಾಗಿ ಚೆಸ್ ಟೂರ್ನಿ ನಡೆಯಲಿರುವ ಮಹಾಬಲಿಪುರಂನಲ್ಲಿ ಒಲಿಂಪಿಯಾಡ್ ಜ್ಯೋತಿ ತಲುಪಲಿದೆ.
44ನೇ ಚೆಸ್ ಒಲಿಂಪಿಯಾಡ್ ಈ ಬಾರಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್ 10 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ 187 ದೇಶಗಳ ಮುಕ್ತ ಸ್ಪರ್ಧಿಗಳು ಮತ್ತು ಮಹಿಳಾ ವಿಭಾಗದಲ್ಲಿ 343 ತಂಡಗಳು ಈಗಾಗಲೇ ಟೂರ್ನಿಗೆ ಪ್ರವೇಶಿಸಿವೆ. ವಿಶೇಷ ಎಂದರೆ ಮಹಿಳಾ ವಿಭಾಗದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ತಂಡಗಳು ಭಾಗವಹಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಐಸಿಎಫ್ ಅಧ್ಯಕ್ಷ ಸಂಜಯ್ ಕಪೂರ್ ಮತ್ತು ಎಐಸಿಎಫ್ ಕಾರ್ಯದರ್ಶಿ ಮತ್ತು ಒಲಿಂಪಿಯಾಡ್ ನಿರ್ದೇಶಕ ಭರತ್ ಸಿಂಗ್ ಚೌಹಾಣ್ ಉಪಸ್ಥಿತರಿದ್ದರು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:15 pm, Sun, 19 June 22