ಏಷ್ಯನ್ ಗೇಮ್ಸ್​ನಲ್ಲಿ ಹೊಸ ಇತಿಹಾಸ ಬರೆದ ಕನ್ನಡತಿ: ಪ್ರಣವಿ ಅರಸ್​ಗೆ ಚಿನ್ನದ ಪದಕ!

ಏಷ್ಯನ್ ಗೇಮ್ಸ್​ನ ಗಾಲ್ಫ್ ಅಂಗಳದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಈ ಇತಿಹಾಸ ಬರೆದಿರುವುದು ಕರ್ನಾಟಕದ ಕುವರಿ ಎಂಬುದು ವಿಶೇಷ. ಮೈಸೂರಿನ ಪ್ರಣವಿ ಅರಸ್ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಏಷ್ಯನ್ ಗೇಮ್ಸ್​ನಲ್ಲಿ ಹೊಸ ಇತಿಹಾಸ ಬರೆದ ಕನ್ನಡತಿ: ಪ್ರಣವಿ ಅರಸ್​ಗೆ ಚಿನ್ನದ ಪದಕ!
Pranavi Urs
Image Credit source: x.com

Updated on: Oct 03, 2026 | 10:17 AM

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ಮಹಿಳಾ ವೈಯಕ್ತಿಕ ಗಾಲ್ಫ್ ಸ್ಪರ್ಧೆಯಲ್ಲಿ ಕನ್ನಡತಿ ಪ್ರಣವಿ ಅರಸ್ ಅವರು ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ಬರೆದಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಮಹಿಳಾ ಗಾಲ್ಫ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ರೋಚಕ ಅಂತ್ಯ ಮತ್ತು ಪ್ರಣವಿ ಸಾಹಸ:

23 ವರ್ಷದ ಪ್ರಣವಿ ಅರಸ್ ಅವರು ನಾಲ್ಕು ದಿನಗಳ ಮಹಿಳಾ ವೈಯಕ್ತಿಕ ಸ್ಟ್ರೋಕ್ ಪ್ಲೇ ಸ್ಪರ್ಧೆಯಲ್ಲಿ ಒಟ್ಟಾರೆ 15-ಅಂಡರ್-ಪಾರ್ 265 ಸ್ಕೋರ್ ಮಾಡುವ ಮೂಲಕ ಅಗ್ರಸ್ಥಾನ ಪಡೆದರು. ಈ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಅಂದರೆ, ಮೂರನೇ ದಿನದ ಮುಕ್ತಾಯಕ್ಕೆ ಮೂರು ಸ್ಟ್ರೋಕ್‌ಗಳ ಮುನ್ನಡೆಯಲ್ಲಿದ್ದ ಪ್ರಣವಿ ಅವರಿಗೆ ಅಂತಿಮ ದಿನದ ಮೂರನೇ ಹೋಲ್‌ನಲ್ಲಿ ‘ಟ್ರಿಪಲ್ ಬೋಗಿ’ ಭಾರಿ ಹಿನ್ನಡೆ ತಂದಿಟ್ಟಿತು. ಆದರೆ, ಧೃತಿಗೆಡದ ಮೈಸೂರಿನ ಈ ಪ್ರತಿಭೆ ಅದ್ಭುತವಾಗಿ ಪುಟಿದೆದ್ದು, ಮೂರು ಅಮೂಲ್ಯ ‘ಬರ್ಡಿ’ಗಳನ್ನು ಬಾರಿಸುವ ಮೂಲಕ ಕೇವಲ ಒಂದು ಸ್ಟ್ರೋಕ್‌ನ ಜಿದ್ದಾಜಿದ್ದಿನ ಅಂತರದಲ್ಲಿ ವಿಶ್ವದ 6ನೇ ಶ್ರೇಯಾಂಕದ ಚೀನಾದ ಪ್ರಬಲ ಆಟಗಾರ್ತಿ ರುಯೋನಿಂಗ್ ಯಿನ್ ವಿರುದ್ಧ ರೋಚಕ ಜಯ ಸಾಧಿಸಿದರು.

ಪ್ರಣವಿ ಅರಸ್​ ಅವರ ಈ ಭರ್ಜರಿ ಪ್ರದರ್ಶನವು ಭಾರತದ ಮಹಿಳಾ ತಂಡಕ್ಕೂ ದೊಡ್ಡ ಬಲ ನೀಡಿತು. ಒಲಿಂಪಿಯನ್ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರನ್ನೊಳಗೊಂಡ ಭಾರತ ತಂಡವು 14-ಅಂಡರ್ 546 ಸ್ಕೋರ್‌ನೊಂದಿಗೆ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿತು.

ಗಾಲ್ಫ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು:

ಭಾರತೀಯ ಗಾಲ್ಫ್ ಇತಿಹಾಸದಲ್ಲಿ ಇದೊಂದು ಅತ್ಯಂತ ಮಹತ್ವದ ಕ್ಷಣವಾಗಿದೆ. ಈ ಹಿಂದೆ ಏಷ್ಯನ್ ಗೇಮ್ಸ್ ಮಹಿಳಾ ಗಾಲ್ಫ್‌ನಲ್ಲಿ ಭಾರತಕ್ಕೆ ಸಿಕ್ಕಿದ್ದ ಅತ್ಯುತ್ತಮ ಫಲಿತಾಂಶವೆಂದರೆ ಕಳೆದ ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ಅದಿತಿ ಅಶೋಕ್ ಗೆದ್ದಿದ್ದ ಬೆಳ್ಳಿ ಪದಕ ಮಾತ್ರ. ಆದರೆ, ಈಗ ಪ್ರಣವಿ ಅರಸ್ ಅವರು ನೇರವಾಗಿ ಚಿನ್ನದ ಪದಕಕ್ಕೆ ಮುತ್ತಿಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲದೆ, 2002 ರಲ್ಲಿ ಶಿವ ಕಪೂರ್ ಅವರು ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದ ನಂತರ, ಏಷ್ಯನ್ ಗೇಮ್ಸ್ ಗಾಲ್ಫ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ವೈಯಕ್ತಿಕ ಬಂಗಾರದ ಪದಕ ಇದಾಗಿದೆ.

ಇದನ್ನೂ ಓದಿ: ರನೌಟ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹೀಗೆ ಔಟ್ ಇಲ್ಲ!

ಮೈಸೂರಿನ ಗಲ್ಲಿಗಳಿಂದ ಶುರುವಾದ ಪ್ರಣವಿ ಅವರ ಗಾಲ್ಫ್ ಪಯಣ, ಇದೀಗ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡುವ ಉತ್ತುಂಗಕ್ಕೆ ಬಂದು ನಿಂತಿದೆ. ಕಠಿಣ ಪರಿಶ್ರಮ ಮತ್ತು ಅಚಲ ನಿರ್ಧಾರವಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಈ ಮೈಸೂರು ಹುಡುಗಿ ಸಾಬೀತುಪಡಿಸಿದ್ದಾರೆ. ದೇಶದ ಕೋಟ್ಯಂತರ ಯುವ ಕ್ರೀಡಾಪಟುಗಳಿಗೆ ಪ್ರಣವಿ ಅವರ ಈ ಐತಿಹಾಸಿಕ ಸಾಧನೆ ಸದಾ ದಾರಿದೀಪವಾಗಲಿ. ಅವರ ಈ ಸುವರ್ಣ ಪಯಣ ಹೀಗೆಯೇ ಮುಂದುವರಿಯಲಿ ಎಂದು ಆಶಿಸೋಣ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us