ರಿಯೊ ಒಲಿಂಪಿಕ್ಸ್: ಖ್ಯಾತನಾಮರು ಫೇಲ್; ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಇಬ್ಬರು ಹೆಣ್ಣುಮಕ್ಕಳು

Rio Olympics 2016: 2016 ರ ಒಲಿಂಪಿಕ್ಸ್ ಬ್ರೆಜಿಲ್‌ನ ರಿಯೊದಲ್ಲಿ ನಡೆದಿತ್ತು. ಈ ಆವೃತ್ತಿಯಲ್ಲಿ ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಭಾಗವಹಿಸಿದ್ದರು. ಆ ಸಮಯದವರೆಗೆ, ಭಾರತದಿಂದ ಒಲಿಂಪಿಕ್ಸ್‌ಗೆ ಹೋದ ಕ್ರೀಡಾಪಟುಗಳ ಅತಿದೊಡ್ಡ ಗುಂಪು ಇದು. ಇದರ ಹೊರತಾಗಿಯೂ, ಭಾರತ ಕೇವಲ 2 ಪದಕಗಳನ್ನು ಗೆಲ್ಲಲು ಸಾಧ್ಯವಾಯಿತ್ತು.

ರಿಯೊ ಒಲಿಂಪಿಕ್ಸ್: ಖ್ಯಾತನಾಮರು ಫೇಲ್; ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಇಬ್ಬರು ಹೆಣ್ಣುಮಕ್ಕಳು
ಪಿವಿ ಸಿಂಧು ಮತ್ತು ಸಾಕ್ಷಿ ಮಲಿಕ್
Follow us
|

Updated on:Jul 21, 2024 | 3:59 PM

1900 ರಲ್ಲಿ ನಡೆದ ಒಲಿಂಪಿಕ್ಸ್​ನ ಮೊದಲ ಆವೃತ್ತಿಗೆ ಇದೇ ಪ್ಯಾರಿಸ್‌ ಆತಿಥ್ಯವಹಿಸಿತ್ತು. ಇದೀಗ 124 ವರ್ಷಗಳ ನಂತರ ಪ್ಯಾರಿಸ್‌ನಲ್ಲಿ ಮತ್ತೊಮ್ಮೆ ಈ ಮಹಾ ಕ್ರೀಡಾಕೂಟ ಆಯೋಜನೆಗೊಳ್ಳುತ್ತಿದೆ. ಈ ಬಾರಿ ಭಾರತದಿಂದ 117 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದರಲ್ಲಿ 47 ಮಹಿಳಾ ಮತ್ತು 70 ಪುರುಷ ಕ್ರೀಡಾಪಟುಗಳು ಸೇರಿದ್ದಾರೆ. ಇದರ ಹಿಂದಿನ ಆವೃತ್ತಿಯಲ್ಲಿ ಅಂದರೆ ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ, ಭಾರತದಿಂದ ದಾಖಲೆಯ 123 ಕ್ರೀಡಾಪಟುಗಳು ಭಾಗವಹಿಸಿದ್ದರು. ಅಷ್ಟೇ ಅಲ್ಲ, ಇದು ಭಾರತಕ್ಕೆ ಯಶಸ್ವಿ ಒಲಿಂಪಿಕ್ಸ್ ಕೂಡ ಆಗಿತ್ತು. ಈ ಆವೃತ್ತಿಯಲ್ಲಿ ಭಾರತ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕಗಳನ್ನು ಗೆದ್ದಿತ್ತು. ಇದಕ್ಕೂ ಮುನ್ನ ಅಂದರೆ 2016 ರಲ್ಲಿ ನಡೆದ ರಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಪ್ರದರ್ಶನ ಹೇಗಿತ್ತು? ಆ ಆವೃತ್ತಿಯಲ್ಲಿ ಯಾರೆಲ್ಲಾ ಖ್ಯಾತನಾಮರು ಭಾಗವಹಿಸಿದ್ದರು? ಅವರ ಪ್ರದರ್ಶನ ಹೇಗಿತ್ತು? ಅಂತಿಮವಾಗಿ ಭಾರತ ಎಷ್ಟು ಪದಕಗಳನ್ನು ಗೆದ್ದಿತ್ತು?ಎಂಬುದರ ಬಗ್ಗೆ ಪೂರ್ಣ ವಿವರ ಇಲ್ಲಿದೆ.

ಕೀರ್ತಿ ಪತಾಕೆ ಹಾರಿಸಿದ ಮಹಿಳಾ ಕ್ರೀಡಾಪಟುಗಳು

2016 ರ ಒಲಿಂಪಿಕ್ಸ್ ಬ್ರೆಜಿಲ್‌ನ ರಿಯೊದಲ್ಲಿ ನಡೆದಿತ್ತು. ಈ ಆವೃತ್ತಿಯಲ್ಲಿ ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಭಾಗವಹಿಸಿದ್ದರು. ಆ ಸಮಯದವರೆಗೆ, ಭಾರತದಿಂದ ಒಲಿಂಪಿಕ್ಸ್‌ಗೆ ಹೋದ ಕ್ರೀಡಾಪಟುಗಳ ಅತಿದೊಡ್ಡ ಗುಂಪು ಇದು. ಇದರ ಹೊರತಾಗಿಯೂ, ಭಾರತ ಕೇವಲ 2 ಪದಕಗಳನ್ನು ಗೆಲ್ಲಲು ಸಾಧ್ಯವಾಯಿತ್ತು. ಅಚ್ಚರಿಯೆಂದರೆ ಈ ಎರಡೂ ಪದಕಗಳನ್ನು ಮಹಿಳಾ ಕ್ರೀಡಾಪಟುಗಳು ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಒಲಂಪಿಕ್ಸ್‌ನ ಇತಿಹಾಸದಲ್ಲಿ ಭಾರತದ ಪರ ಮಹಿಳೆಯರೇ ಪದಕ ಗೆದ್ದಿದ್ದು ಅದೇ ಮೊದಲು. 1992 ರ ಬಾರ್ಸಿಲೋನಾ ಒಲಿಂಪಿಕ್ಸ್ ನಂತರ ಮೊದಲ ಬಾರಿಗೆ, ಭಾರತವು ಬರಿಗೈಯಲ್ಲಿ ಮರಳುವ ಹೊಸ್ತಿಲಿನಲ್ಲಿತ್ತು. ಆದರೆ ಪಿವಿ ಸಿಂಧು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಸಾಕ್ಷಿ ಮಲಿಕ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದು ಭಾರತವನ್ನು ಬರಿಗೈಯಲ್ಲಿ ಹಿಂದಿರುಗದಂತೆ ರಕ್ಷಿಸಿತು.

ಮಹಿಳಾ ಹಾಕಿ ಪುನರಾಗಮನ

2016 ರ ರಿಯೊ ಒಲಿಂಪಿಕ್ಸ್ ಮಹಿಳಾ ಹಾಕಿ ದೃಷ್ಟಿಕೋನದಿಂದ ಐತಿಹಾಸಿಕವಾಗಿದೆ. ಏಕೆಂದರೆ ಭಾರತದ ಮಹಿಳಾ ಹಾಕಿ ತಂಡ ಮೂರನೇ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು. ಮಹಿಳಾ ಹಾಕಿ ತಂಡವು 1980 ರ ನಂತರ ಅಂದರೆ 44 ವರ್ಷಗಳ ನಂತರ ಈ ಮಹಾ ಕ್ರೀಡಾಕೂಟದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿತ್ತು.

ಕೈ ಜಾರಿದ್ದವು 5 ಪದಕಗಳು

ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಅದನ್ನು ವಾಸ್ತವಕ್ಕೆ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅನೇಕ ಕ್ರೀಡಾಪಟುಗಳು ಪದಕದ ಸಮೀಪಕ್ಕೆ ಬಂದು ಎಡವಿದರು. ಭಾರತದ ನಿರೀಕ್ಷೆಯ ನಡುವೆಯೇ ಸಾಕ್ಷಿ ಮಲಿಕ್ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಖಾತೆ ತೆರೆದರು. ಆದರೆ ಮತ್ತೊಂದು ಪದಕದ ಭರವಸೆಯಾಗಿದ್ದ ವಿನೇಶ್ ಫೋಗಟ್ ಗಾಯದ ಕಾರಣದಿಂದಾಗಿ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇಲ್ಲೊಂದು ಪದಕ ಸಿಗುವ ಅವಕಾಶ ಕೈತಪ್ಪಿತು.

ವಿನೇಶ್ ಫೋಗಟ್ ಹೊರತುಪಡಿಸಿ, ಭಾರತವು ರಿಯೊ ಒಲಿಂಪಿಕ್ಸ್‌ನಲ್ಲಿ ಇನ್ನೂ ಐದು ಪದಕಗಳನ್ನು ಕಳೆದುಕೊಂಡಿತ್ತು. ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ, ದೀಪಾ ಕರ್ಮಾಕರ್, ಕಿಡಂಬಿ ಶ್ರೀಕಾಂತ್, ವಿಕಾಸ್ ಕೃಷ್ಣನ್ ಮತ್ತು ಭಾರತ ಪುರುಷರ ಹಾಕಿ ತಂಡವು ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿತ್ತಾದರೂ, ಕ್ವಾರ್ಟರ್ ಫೈನಲ್ ಅಥವಾ ಸೆಮಿಫೈನಲ್‌ನಲ್ಲಿ ಸೋತು, ಪದಕದ ರೇಸ್​ನಿಂದ ಹೊರಬಿದ್ದಿದ್ದರು.

ಸಾನಿಯಾ, ಬೋಪಣ್ಣ ಪದಕ ವಂಚಿತ

ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಟೆನಿಸ್‌ನಲ್ಲಿ ಪದಕ ಗೆಲ್ಲುವ ಫೆವರೇಟ್ ಎನಿಸಿಕೊಂಡಿದ್ದರು. ಇಬ್ಬರೂ ರಿಯೊ ಒಲಿಂಪಿಕ್ಸ್‌ನಲ್ಲಿ ಡಬಲ್ಸ್​ನಲ್ಲಿ ಸೆಮಿಫೈನಲ್‌ಗೆ ತಲುಪಿದರು. ಆದರೆ ಅವರು ಅಮೆರಿಕನ್ ಜೋಡಿ ಎದುರು ಸೋಲನ್ನು ಎದುರಿಸಬೇಕಾಯಿತು. ಇದರ ಹೊರತಾಗಿಯೂ ಕಂಚಿನ ಪದಕ ಗೆಲ್ಲುವ ಅವಕಾಶ ಪಡೆದಿದ್ದ ಈ ಜೋಡಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜೆಕ್ ಗಣರಾಜ್ಯ ಜೋಡಿ ವಿರುದ್ಧ ಸೋತಿತು.

ಇವರ ಹೊರತಾಗಿ ಭಾರತ ಪುರುಷರ ಹಾಕಿ ತಂಡದಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಈ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರಿದ್ದರು. ನಿರೀಕ್ಷೆಯಂತೆ ಗುಂಪು ಹಂತದಲ್ಲಿ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರೂ, ತಂಡವು ಅಂತಿಮವಾಗಿ ಬೆಲ್ಜಿಯಂ ವಿರುದ್ಧ ಸೋತಿತು.

ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ ನಂಬರ್ 1 ಸ್ಥಾನದಲ್ಲಿದ್ದ ಕಿಡಂಬಿ ಶ್ರೀಕಾಂತ್ ಅವರಿಂದ ಪದಕ ನಿರೀಕ್ಷಿಸಲಾಗಿತ್ತು. ಆದರೆ ಅವರು ಚೀನಾದ ಶಟ್ಲರ್ ವಿರುದ್ಧ ಸೋತು ನಿರಾಸೆ ಅನುಭವಿಸಿದರು. ಅದೇ ರೀತಿ ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ತನ್ನ ಎರಡು ಪಂದ್ಯಗಳನ್ನು ಗೆದ್ದ ನಂತರ ಉಜ್ಬೇಕಿಸ್ತಾನಿ ಬಾಕ್ಸರ್ ವಿರುದ್ಧ ಸೋತರು. ಇವರಿಬ್ಬರನ್ನು ಹೊರತುಪಡಿಸಿ, ಜಿಮ್ನಾಸ್ಟ್ ದೀಪಾ ಕರ್ಮಾಕರ್ 52 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಹತೆ ಪಡೆಯುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಆದರೆ ಅಂತಿಮವಾಗಿ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ನಿರಾಸೆ ಮೂಡಿಸಿದ ಸ್ಟಾರ್ ಆಟಗಾರರು

ಲಿಯಾಂಡರ್ ಪೇಸ್, ​​ರೋಹನ್ ಬೋಪಣ್ಣ, ಜ್ವಾಲಾ ಗುಟ್ಟಾ, ಯೋಗೇಶ್ವರ್ ದತ್, ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ ಮತ್ತು ಶರತ್ ಕಮಲ್ ಅವರಂತಹ ಅನುಭವಿ ಮತ್ತು ಪ್ರಸಿದ್ಧ ಆಟಗಾರರು ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಈ ಎಲ್ಲಾ ಆಟಗಾರರು ಸಾಕಷ್ಟು ಅನುಭವವ ಹೊಂದಿದಲ್ಲದೆ ಇವರಲ್ಲಿ ಕೆಲವರು ಹಿಂದೆ ಒಲಿಂಪಿಕ್ ಪದಕಗಳನ್ನು ಗೆದ್ದಿದ್ದರು. ಇದರ ಹೊರತಾಗಿಯೂ ಅವರು ಯಾವುದೇ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.

2015 ರಲ್ಲಿ ವಿಶ್ವದ ನಂಬರ್ 1 ಆಗಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಆದರೆ 2016 ರಲ್ಲಿ ಗ್ರೂಪ್ ಸ್ಟೇಜ್​ನಿಂದಲೇ ಹೊರಬಿದ್ದರು. ಅದೇ ರೀತಿ ಬ್ಯಾಡ್ಮಿಂಟನ್‌ನಲ್ಲಿ ಜೋಡಿಯಾಗಿ ಆಡಿದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಗ್ರೂಪ್ ಹಂತದಲ್ಲಿ 3 ಪಂದ್ಯಗಳನ್ನು ಸೋತು ಹೊರಬಿದ್ದರು.

ಟೇಬಲ್ ಟೆನಿಸ್​ನಲ್ಲಿ ನಿರಾಸೆ

ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಮತ್ತು ಟೆನಿಸ್ ಡಬಲ್ಸ್ ಆಟಗಾರರಾದ ರೋಹನ್ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಕೂಡ ಮೊದಲ ಸುತ್ತನ್ನು ದಾಟಿ ಹೋಗಲು ಸಾಧ್ಯವಾಗಲಿಲ್ಲ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಯೋಗೇಶ್ವರ್ ದತ್ ಕೂಡ ಕುಸ್ತಿಯಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಇದಲ್ಲದೇ ಖ್ಯಾತ 100 ಮೀಟರ್ ಓಟಗಾರ್ತಿ ದ್ಯುತಿ ಚಂದ್ ಕೂಡ ನಿರಾಸೆ ಮೂಡಿಸಿದ್ದರು.

ಶೂಟಿಂಗ್​ನಲ್ಲೂ ನಿರಾಸೆ

ಶೂಟಿಂಗ್​ನಲ್ಲಿ ಭಾರತವೇ ಹೆಮ್ಮೆ ಪಡುವಂತೆ ಮಾಡಿದ್ದ ಅಭಿನವ್ ಬಿಂದ್ರಾ, ಗಗನ್ ನಾರಂಗ್, ಜಿತು ರೈ, ಹೀನಾ ಸಿಧು ರಿಯೊ ಒಲಿಂಪಿಕ್ಸ್​ನಿಂದ ಖಾಲಿ ಕೈಯಲ್ಲಿ ಹಿಂದಿರುಗಬೇಕಾಯಿತು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದಿದ್ದರು. ಇತ್ತ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಗಗನ್ ನಾರಂಗ್ ಕಂಚಿನ ಪದಕ ಗೆದ್ದಿದ್ದರು. ಇದಲ್ಲದೆ, ಜಿತು ರೈ ಮತ್ತು ಹೀನಾ ಸಿಧು ಶೂಟಿಂಗ್‌ನಲ್ಲಿ ವಿಶ್ವದ ನಂಬರ್ ಒನ್ ಆಗಿದ್ದರು. ಆದರೆ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Sun, 21 July 24