ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup 2022) ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ನಿರೀಕ್ಷೆಯಂತೆ ಕೆಲವು ಬಲಿಷ್ಠ ತಂಡಗಳು ಈಗಾಗಲೇ 16ರ ಘಟ್ಟಕ್ಕೆ ಎಂಟ್ರಿಕೊಟ್ಟಿವೆ. ಇನ್ನುಳಿದಂತೆ ಈ ಕ್ರೀಡಾಕೂಟದಲ್ಲಿ ಕೆಲವು ಅಚ್ಚರಿ ಫಲಿತಾಂಶಗಳು ಹೊರಬಿದ್ದಿವೆ. ಈ ನಡುವೆ ಮೊದಲ ಬಾರಿಗೆ ಫಿಫಾ ವಿಶ್ವಕಪ್ಗೆ ಆತಿಥ್ಯ ವಹಿಸಿರುವ ಕತಾರ್ ಬಗ್ಗೆ ಬಹುದಿನಗಳಿಂದ ಕೇಳಿಬರುತ್ತಿರುವ ಆರೋಪವೊಂದಕ್ಕೆ ಅಂತಿಮ ತೆರೆ ಬಿದ್ದಿದೆ. ಡಿಸೆಂಬರ್ 2010ರಲ್ಲಿ ವಿಶ್ವಕಪ್ ಬಿಡ್ಡಿಂಗ್ ಗೆದ್ದ ಕತಾರ್ ಎನ್ನುವ ಪುಟ್ಟ ರಾಷ್ಟ್ರ ಈ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯಕ್ಕಾಗಿ ಸುಮಾರು 300 ಬಿಲಿಯನ್ ಡಾಲರ್ ಮೊತ್ತವನ್ನು ಖರ್ಚು ಮಾಡಿದೆ ಎಂಬುದು ವರದಿ. ಈ ನಡುವೆ ಈ ವಿಶ್ವಕಪ್ ಸಿದ್ಧತೆ ವೇಳೆ ಸಾವಿರಾರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿತ್ತು. ಆರಂಭದಲ್ಲಿ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದ ಕತಾರ್, ಇದೀಗ ಈ ಆರೋಪಗಳು ನಿಜ ಎಂದು ಎಪ್ಪಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಫಿಫಾ ವಿಶ್ವಕಪ್ ಮುಖ್ಯಸ್ಥ ಹಸನ್ ಅಲ್ ಥಾವಾರಿ (Hasan Al Thawari) ಸುಮಾರು 400 ರಿಂದ 500 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
ವಾಸ್ತವವಾಗಿ, ಕತಾರ್ ಒಂದು ಪುಟ್ಟ ರಾಷ್ಟ್ರ. ಅದರಲ್ಲೂ ಬೆಂಕಿಯ ಜ್ವಾಲೆಯನ್ನೇ ಉಗುಳುವಷ್ಟು ಬಿಸಿಲಿರುವ ಈ ದೇಶದಲ್ಲಿ ವಿಶ್ವಕಪ್ ಆಯೋಜನೆಯಾಗುತ್ತಿದೆ ಎಂಬುದನ್ನು ಕೇಳಿಸಿಕೊಂಡವರು ಮೊದ ಮೊದಲು ಅಚ್ಚರಿಗೊಳಗಾಗಿದ್ದರು. ಆದರೆ ನೈಸರ್ಗಿಕ ಸವಾಲನ್ನು ಮೆಟ್ಟಿನಿಂತಿದ್ದ ಕತಾರ್ ಅದ್ಧೂರಿಯಾಗಿ ಈ ಫಿಫಾ ವಿಶ್ವಕಪ್ ಆಯೋಜನೆ ಮಾಡಿದೆ. ಫಿಫಾ ವಿಶ್ವಕಪ್‌ಗಾಗಿ ಈ ಮರುಭೂಮಿ ದೇಶ ಭಾರಿ ವೆಚ್ಚದಲ್ಲಿ ಏಳು ಹೊಸ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಿದೆ.
ಇದನ್ನೂ ಓದಿ: ಮೆಸ್ಸಿ ಮೇಲಿನ ವ್ಯಾಮೋಹ; ಕೇರಳದಿಂದ ಕತಾರ್ಗೆ ತನ್ನ ಕಾರಿನಲ್ಲೇ ಪ್ರಯಾಣ ಬೆಳೆಸಿದ ಐದು ಮಕ್ಕಳ ತಾಯಿ..!
ಆಧುನಿಕ ಕ್ರೀಡಾಂಗಣಗಳ ನಿರ್ಮಾಣ
ಅಲ್ಲದೆ ಇಲ್ಲಿನ ತಾಪಮಾನಕ್ಕೆ ಹೊಂದಾಣಿಕೆಯಾಗುವಂತೆ ಪ್ರತಿ ಕ್ರೀಡಾಂಗಣ, ತರಬೇತಿ ಸೌಲಭ್ಯ ಮತ್ತು ಫ್ಯಾನ್ ವಲಯಗಳಲ್ಲಿ ಸೌರ-ಚಾಲಿತ ಕೂಲಿಂಗ್ ತಂತ್ರಜ್ಞಾನವನ್ನು ಅಳವಡಿಸಿ ತಾಪಮಾನವನ್ನು 27 ಡಿಗ್ರಿ ಸೆಲ್ಸಿಯಸ್ ಇರುವಂತೆ ಏರ್ಪಾಟು ಮಾಡಲಾಗಿದೆ. ಎಲ್ಲಾ ಕ್ರೀಡಾಂಗಣಗಳು ಪರಿಸರ ಸ್ನೇಹಿಯಾಗಿದ್ದು, ಅವುಗಳ ತಾಪಮಾನವನ್ನು ನಿಯಂತ್ರಿಸಬಹುದಾಗಿದೆ.
ವಿಶ್ವಕಪ್‌ಗಾಗಿ ಇಂತಹ ಆಧುನಿಕ ಕ್ರೀಡಾಂಗಣವನ್ನು ನಿರ್ಮಿಸಲು ಕತಾರ್ ರಕ್ತದ ನದಿಯನ್ನು ಸುರಿಸಿದೆ ಎಂದು ಹೊರ ಜಗತ್ತು ಹೇಳಿಕೊಂಡಿತ್ತು. ಆದರೆ ಕತಾರ್ ಸರ್ಕಾರ ಮಾತ್ರ ಈ ಆರೋಪವನ್ನು ಇಲ್ಲಿಯವರೆಗೆ ನಿರಾಕರಿಸಿತ್ತು. ಆದರೆ ಈ ಬಾರಿ ಒತ್ತಡಕ್ಕೆ ಮಣಿದಿರುವ ಕತಾರ್ ಸರ್ಕಾರ, ತೀವ್ರವಾದ ಶಾಖದಲ್ಲಿ ಕ್ರೀಡಾಂಗಣವನ್ನು ನಿರ್ಮಿಸುವಾಗ 500 ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಂಡಿದೆ. ಆದರೆ ಕ್ರೀಡಾಂಗಣ ನಿರ್ಮಾಣದ ವೇಳೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹಲವರು ಹೇಳುತ್ತಾರೆ. ಹಾಗೆಯೇ ಸತ್ತವರ ಕುಟುಂಬಗಳಿಗೆ ಕತಾರ್ ಸರ್ಕಾರ ಪರಿಹಾರ ನೀಡಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
400 ರಿಂದ 500 ಕಾರ್ಮಿಕರು ಸಾವನ್ನಪ್ಪಿರಬಹುದು
ಟಾಕ್‌ಟಿವಿಯ ಪಿಯರ್ಸ್ ಮೋರ್ಗಾನ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ವಿಶ್ವಕಪ್ ಮುಖ್ಯಸ್ಥ ಹಸನ್ ಅಲ್ ಥಾವಾರಿ, ಸಾವನ್ನಪ್ಪಿದವರ ಸಂಖ್ಯೆ 400 ಆಗಿರಬಹುದು. ಅಥವಾ 400 ರಿಂದ 500ರ ಒಳಗೆ ಇರಬಹುದು. ಸತ್ತ ಕಾರ್ಮಿಕರೆಷ್ಟು ಎಂಬುದು ನನಗೆ ನಿಖರವಾಗಿ ಗೊತ್ತಿಲ್ಲ. ಅಲ್ಲದೆ ಸ್ಟೇಡಿಯಂ ನಿರ್ಮಿಸುವಾಗ ಕೇವಲ ಮೂವರು ಕಾರ್ಮಿಕರಷ್ಟೇ ಪ್ರಾಣ ಕಳೆದುಕೊಂಡಿದ್ದರು. ಉಳಿದ ಕಾರ್ಮಿಕರು ಮೂಲಸೌಕರ್ಯ ಕೆಲಸ ಮಾಡುವಾಗ ಸಾವನ್ನಪ್ಪಿದ್ದಾರೆ ಎಂಬ ಶಾಕಿಂಗ್ ಮಾಹಿತಿಯನ್ನು ಹೊರಹಾಕಿದ್ದಾರೆ.
ಕಳೆದ 12 ವರ್ಷಗಳಿಂದ ವಿಶ್ವಕಪ್ ಆತಿಥ್ಯ ವಹಿಸಲು ಕತಾರ್ ಸಾಕಷ್ಟು ಹಣವನ್ನು ಖರ್ಚು ಮಾಡಿದೆ. ಕ್ರೀಡಾಂಗಣವನ್ನು ನಿರ್ಮಿಸಲು ಏಷ್ಯಾದಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಕರೆತರಲಾಯಿತು. ಮುಖ್ಯವಾಗಿ ನಿರ್ಮಾಣಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಹೆಚ್ಚುವರಿ ಹಣವನ್ನು ದೈನಂದಿನ ಕೂಲಿಯಾಗಿ ನೀಡಲಾಗುತ್ತಿತ್ತು. ಆದರೆ 50 ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡಲು ಬಲವಂತ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಕತಾರ್ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂಬ ಆರೋಪವನ್ನು ಸಹ ಎದುರಿಸುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Thu, 1 December 22