Sania Mirza: ಟೆನಿಸ್ಗೆ ಸಾನಿಯಾ ಮಿರ್ಜಾ ವಿದಾಯ! ಮುಗುತಿ ಸುಂದರಿಯ ಕೊನೆಯ ಪಂದ್ಯ ಯಾವಾಗ ಗೊತ್ತಾ?
Sania Mirza Retirement: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ಕೊನೆಯ ಬಾರಿಗೆ ಟೆನಿಸ್ ಅಂಗಳಕ್ಕಿಳಿಯುವುದು ಯಾವಾಗ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.
ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ಕೊನೆಯ ಬಾರಿಗೆ ಟೆನಿಸ್ ಅಂಗಳಕ್ಕಿಳಿಯುವುದು ಯಾವಾಗ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. ಡಬ್ಲ್ಯುಟಿಎ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಸಾನಿಯಾ, ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯಲಿರುವ ಡಬ್ಲ್ಯುಟಿಎ 1000 ಈವೆಂಟ್ ( Dubai Tennis Championship) ತನ್ನ ಕೊನೆಯ ಪಂದ್ಯಾವಳಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ನನ್ನ ಸ್ವಂತ ನಿಯಮಗಳ ಮೇಲೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಹಾಗಾಗಿ ನಾನು ಗಾಯದ ಸಮಸ್ಯೆಯಿಂದ ಹೊರಗುಳಿಯಲು ಬಯಸದೆ ಇನ್ನು ತರಬೇತಿ ಪಡೆಯುತ್ತಿದ್ದೇನೆ. ಅಲ್ಲದೆ ದುಬೈನಲ್ಲಿ ನಡೆಯುವ ಟೆನಿಸ್ ಚಾಂಪಿಯನ್ಶಿಪ್ ಬಳಿಕ ನಾನು ವೃತ್ತಿ ಬದುಕಿಗೆ ವಿದಾಯ ಹೇಳುತ್ತಿರುವ ಕಾರಣವೂ ಇದೇ’ ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.
2022ರ ಕೊನೆಯಲ್ಲಿಯೇ ಟೆನಿಸ್ನಿಂದ ನಿವೃತ್ತಿ ಹೊಂದಲು ಬಯಸಿದ್ದ ಮಾಜಿ ವಿಶ್ವದ ನಂಬರ್ ಒನ್ ಡಬಲ್ಸ್ ಆಟಗಾರ್ತಿ ಸಾನಿಯಾಗೆ ಮೊಣಕೈ ಗಾಯದಿಂದಾಗಿ ಯುಎಸ್ ಓಪನ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಡಬಲ್ಸ್‌ನಲ್ಲಿ 6 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆಯಾಗಿರುವ ಸಾನಿಯಾ ಈ ತಿಂಗಳ ಅಂತ್ಯದಲ್ಲಿ ಆಸ್ಟ್ರೇಲಿಯನ್ ಓಪನ್ ಆಡಲಿದ್ದು, ಇದು ಅವರ ಕೊನೆಯ ಪ್ರಮುಖ ಟೂರ್ನಿಯಾಗಿದೆ. ಇದರ ನಂತರ, ಅವರು ಕೊನೆಯ ಬಾರಿಗೆ ದುಬೈನಲ್ಲಿ ನಡೆಯಲ್ಲಿರುವ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಕೋರ್ಟ್ಗಿಳಿಯಲ್ಲಿದ್ದಾರೆ.
‘ಮಿರ್ಜಾ ಮಲಿಕ್ ಶೋ’ ಪ್ರಚಾರಕ್ಕಾಗಿ ಡಿವೋರ್ಸ್ ನಾಟಕವಾಡಿದ್ರಾ ಸಾನಿಯಾ- ಶೋಯೆಬ್..?
ಕಳೆದ ವರ್ಷ, ಸಾನಿಯಾ ಅವರ ತಂದೆ ಇಮ್ರಾನ್ ಮಿರ್ಜಾ ಅವರು ವಿಂಬಲ್ಡನ್ ಅವರ ಕೊನೆಯ ಪಂದ್ಯ ಎಂದು ಹೇಳಿದ್ದರು. ಆದರೆ ಮಿಶ್ರ ಡಬಲ್ಸ್‌ನ ಸೆಮಿ-ಫೈನಲ್‌ನಲ್ಲಿ ಸೋಲನುಭವಿಸಿದ್ದ ಸಾನಿಯಾ ಟೂರ್ನಿಯಿಂದ ಬರಿಗೈಯಲ್ಲಿ ವಾಪಸ್ಸಾಗಿದ್ದರು. ಬಳಿಕ ನಿವೃತ್ತಿ ನಿರ್ಧಾರದಿಂದ ಯು ಟರ್ನ್ ತೆಗೆದುಕೊಂಡಿದ್ದ ಸಾನಿಯಾ ಗಾಯದ ಕಾರಣ ನೀಡಿ ಸ್ವಲ್ಪ ಸಮಯದವರೆಗೆ ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದೂಡಲು ನಿರ್ಧರಿಸಿದ್ದರು.
ಅಕಾಡೆಮಿಯತ್ತ ಸಾನಿಯಾ ಚಿತ್ತ
ಇನ್ನು ನಿವೃತ್ತಿಯ ನಂತರ ಸಾನಿಯಾ ಮಿರ್ಜಾ ಏನು ಮಾಡಲಿದ್ದೇನೆ ಎಂಬುದಕ್ಕೂ ಸ್ಪಷ್ಟನೆ ನೀಡಿದ್ದು, ‘ನಿವೃತ್ತಿಯ ನಂತರ ದುಬೈನಲ್ಲಿರುವ ತನ್ನ ಅಕಾಡೆಮಿಯತ್ತ ಗಮನ ಹರಿಸಲು ಬಯಸುತ್ತೇನೆ ಎಂದಿದ್ದಾರೆ. ಇನ್ನು ತನ್ನ ವೃತ್ತಿ ಬದುಕಿನಲ್ಲಿ ಸಾನಿಯಾ ಡಬಲ್ಸ್‌ನಲ್ಲಿ 3 ಮತ್ತು ಮಿಶ್ರ ಡಬಲ್ಸ್‌ನಲ್ಲಿ 3 ಗ್ರ್ಯಾಂಡ್‌ಸ್ಲಾಮ್‌ಗಳನ್ನು ಗೆದ್ದಿದ್ದಾರೆ. ಹಾಗೆಯೇ 2016 ರ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದು, ಒಲಂಪಿಕ್ಸ್ನಲ್ಲಿ ಸಾನಿಯಾ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ವೈವಾಹಿಕ ಬದುಕಿನಲ್ಲಿ ಬಿರುಗಾಳಿ
ಐದು ತಿಂಗಳ ಡೇಟಿಂಗ್ ನಂತರ 2010 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವರಿಸಿದ್ದ ಸಾನಿಯಾ ಮಿರ್ಜಾ ದಂಪತಿಗಳಿಗೆ 30 ಅಕ್ಟೋಬರ್ 2018 ರಂದು ಇಝಹಾನ್ ಮಿರ್ಜಾ ಮಲಿಕ್ ಎಂಬ ಮಗನೂ ಜನಿಸಿದ್ದ. ಇದೀಗ ಬರೋಬ್ಬರಿ 12 ವರ್ಷಗಳ ಈ ದಂಪತಿಗಳ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಕೆಲವು ತಿಂಗಳುಗಳಿಂದ ಈ ಸ್ಟಾರ್ ಜೋಡಿ ವಿಚ್ಛೇದನ ಪಡೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಈ ಇಬ್ಬರೂ ಕೂಡ ಇಲ್ಲಿಯವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:11 am, Sat, 7 January 23