ದಾಖಲೆ ವಿಶ್ವ ದಾಖಲೆ… ಟೀಮ್ ಇಂಡಿಯಾದ ವರ್ಲ್ಡ್ ರೆಕಾರ್ಡ್ ಚೇಸಿಂಗ್
India vs New Zealand: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ ಕೇವಲ 10 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಚೇಸಿಂಗ್ನೊಂದಿಗೆ ಭರ್ಜರಿ ವಿಶ್ವ ದಾಖಲೆ ನಿರ್ಮಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
Updated on: Jan 26, 2026 | 6:54 AM

ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಕೇವಲ 10 ಓವರ್ಗಳ ಮೂಲಕ. ಅಂದರೆ ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 10 ಓವರ್ಗಳಲ್ಲಿ ಪಂದ್ಯ ಮುಗಿಸಿ ಭಾರತ ತಂಡ ಹೊಸ ಇತಿಹಾಸ ನಿರ್ಮಿಸಿದೆ.

ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿದ್ದರು.

154 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 20 ಎಸೆತಗಳನ್ನು ಎದುರಿಸಿದ ಅಭಿಷೇಕ್ 68 ರನ್ ಬಾರಿಸಿದರೆ, ಸೂರ್ಯಕುಮಾರ್ 26 ಎಸೆತಗಳಲ್ಲಿ 57 ರನ್ ಚಚ್ಚಿದರು.

ಈ ಇಬ್ಬರ ಸಿಡಿಲಬ್ಬರ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ ಕೇವಲ 10 ಓವರ್ಗಳಲ್ಲಿ 155 ರನ್ ಬಾರಿಸಿ 8 ವಿಕೆಟ್ಗಳ ವಿಜಯ ಸಾಧಿಸಿತು. ಈ ಗೆಲುವಿನೊಂದಿಗೆ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ಅತೀ ಕಡಿಮೆ ಎಸೆತಗಳಲ್ಲಿ 150+ ರನ್ಗಳನ್ನು ಚೇಸ್ ಮಾಡಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಯಿತು.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು. 2024 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾ 13.5 ಓವರ್ಗಳಲ್ಲಿ 150+ ಸ್ಕೋರ್ ಬೆನ್ನತ್ತಿ ಗೆಲುವು ದಾಖಲಿಸಿದ್ದರು. ಈ ಮೂಲಕ 37 ಎಸೆತಗಳನ್ನು ಬಾಕಿಯಿರಿಸಿ 150 ಕ್ಕಿಂತ ಹೆಚ್ಚು ರನ್ಗಳನ್ನು ಚೇಸ್ ಮಾಡಿದ ವಿಶ್ವ ದಾಖಲೆ ಬರೆದಿದ್ದರು.

ಇದೀಗ ಟೀಮ್ ಇಂಡಿಯಾ ಬರೋಬ್ಬರಿ 60 ಎಸೆತಗಳನ್ನು ಬಾಕಿಯಿರಿಸಿ 150+ ರನ್ ಚೇಸಿಂಗ್ ಮಾಡಿ ಗೆದ್ದಿದೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಓವರ್ಗಳಲ್ಲಿ 150 ಕ್ಕಿಂತ ಹೆಚ್ಚಿನ ಸ್ಕೋರ್ ಬೆನ್ನತ್ತಿ ಗೆದ್ದ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.
