Tokyo Olympics 2020: ಪುರುಷರ ಆರ್ಚರಿಯಲ್ಲಿ ಭಾರತಕ್ಕೆ ನಿರಾಸೆ: ದೀಪಿಕಾಗೆ 9ನೇ ಸ್ಥಾನ
ಪುರುಷರ ಆರ್ಚರಿಯಲ್ಲಿ ಪ್ರವೀಣ್ ಜಾಧವ್ 31ನೇ ಸ್ಥಾನ ಪಡೆದುಕೊಂಡಿದ್ದರೆ, ಭರವಸೆ ಮೂಡಿಸಿದ್ದ ಅತನು ದಾಸ್ 35ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇನ್ನೂ ತರುಣ್‌ದೀಪ್ ರಾಯ್ 37ನೇ ಸ್ಥಾನ ಸಂಪಾದಿಸಿದ್ದಾರೆ.
ಜಪಾನ್‌ನ ಟೋಕಿಯೋ ನಗರ ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟದ ಆಯೋಜನೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಇಂದು ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಆದರೆ, ಮೊನ್ನೆಯೇ ಕೆಲ ಕ್ರೀಡೆಗಳ ಆಟ ಆರಂಭವಾಗಿದೆ. ಇಂದಿನ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಭಾರತದ ಕ್ರೀಡಾಪಟುಗಳು ಆರ್ಚರಿ ಶ್ರೇಯಾಂಕ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಮೊದಲ ದಿನವಾದ ಇಂದು ಬಿಲ್ಲುಗಾರಿಕೆ (ಆರ್ಚರಿ), ಈಕ್ವೆಸ್ಟ್ರಿಯನ್, ರೋವಿಂಗ್ (ದೋಣಿ ಸ್ಪರ್ಧೆ) ಮತ್ತು ಶೂಟಿಂಗ್ ಸ್ಪರ್ಧೆಗಳು ನಡೆದಿವೆ. ಈ ನಾಲ್ಕೂ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಿದ್ದು, ಪುರುಷರು ಭಾರೀ ನಿರಾಸೆ ಅನುಭವಿಸಿದ್ದಾರೆ.
ಪುರುಷರ ಆರ್ಚರಿಯಲ್ಲಿ ಪ್ರವೀಣ್ ಜಾಧವ್ 31ನೇ ಸ್ಥಾನ ಪಡೆದುಕೊಂಡಿದ್ದರೆ, ಭರವಸೆ ಮೂಡಿಸಿದ್ದ ಅತನು ದಾಸ್ 35ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇನ್ನೂ ತರುಣ್‌ದೀಪ್ ರಾಯ್ 37ನೇ ಸ್ಥಾನ ಸಂಪಾದಿಸಿದ್ದಾರೆ.
ಆದರೆ, ಇತ್ತ ಮಹಿಳಾ ಆರ್ಷರಿಯಲ್ಲಿ ಭಾರತದ ದೀಪಿಕಾ ಕುಮಾರಿಗೆ ಮಿಶ್ರಫಲ ಸಿಕ್ಕಿತು. 64 ಮಂದಿ ಇದ್ದ ಸ್ಪರ್ಧಾಕಣದಲ್ಲಿ ಅಗ್ರಶ್ರೇಯಾಂಕದ ದೀಪಿಕಾ ಕುಮಾರಿ ಹಲವು ಏರಿಳಿತಗಳನ್ನ ಕಂಡು ಅಂತಿಮವಾಗಿ 9ನೇ ಸ್ಥಾನ ಕಂಡುಕೊಂಡರು. ಇದು ರ್ಯಾಂಕಿಂಗ್ ಸುತ್ತು ಮಾತ್ರ ಆಗಿದೆ. ಮುಂದೆ ನಾಕೌಟ್ ಹಂತಗಳಿವೆ. ಮೊದಲ ಸ್ಥಾನ ಪಡೆದವರು ಈ ಸುತ್ತಿನಲ್ಲಿ 64ನೇ ಸ್ಥಾನ ಗಳಿಸಿದವರನ್ನ ಎದುರಿಸುತ್ತಾರೆ. ಅದರಂತೆ 9ನೇ ಸ್ಥಾನ ಗಳಿಸಿದ ದೀಪಿಕಾ ಕುಮಾರಿ ಅವರು ಈ ಹಂತದಲ್ಲಿ ಭೂತಾನ್ ದೇಶದ ಆಟಗಾರ್ತಿ ಕರ್ಮಾ ಅವರನ್ನ ಎದುರಿಸಲಿದ್ದಾರೆ. ಈ ನಾಕೌಟ್ ಹಂತಗಳು ನಾಳೆ ನಡೆಯಲಿವೆ.
ವಿಶೇಷ ಎಂದರೆ ಮೊದಲ ದಿನವೇ ಮಹಿಳಾ ವೈಯಕ್ತಿಕ ವಿಭಾಗದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ನಾಲ್ವರು ಬಿಲ್ಲುಗಾರ್ತಿಯರು ಒಲಿಂಪಿಕ್ ದಾಖಲೆ ಮುರಿದರು. ಮೊದಲ ನಾಲ್ಕು ಸ್ಥಾನ ಪಡೆದ ಆಟಗಾರ್ತಿಯರು 24 ವರ್ಷಗಳ ಹಿಂದಿನ ದಾಖಲೆಯನ್ನ ಮುರಿದುಹಾಕಿದರು. 1996ರ ಅಟ್ಲಾಂಟಾ ಒಲಿಂಪಿಕ್ಸ್ನಲ್ಲಿ ಉಕ್ರೇನ್ ದೇಶದ ಲೀನಾ ಹೆರಾಸಿಮೆಂಕೋ ಅವರು 673 ಅಂಕ ಗಳಿಸಿದ್ದರು. ಇಂದು ಕೊರಿಯಾದ ಆನ್ ಸಾನ್, ಮಿನ್ಹೀ ಜಾಂಗ್ ಮತ್ತು ಚೇಯಂಗ್ ಕಾಂಗ್ ಹಾಗೂ ಮೆಕ್ಸಿಕೋದ ವೇಲೆನ್ಷಿಯಾ ಅಲೆಜಾಂಡ್ರಾ ಅವರು ಕ್ರಮವಾಗಿ 680, 677, 675 ಮತ್ತು 674 ಪಾಯಿಂಟ್ಸ್ ಗಳಿಸಿದರು.
Live Tokyo Olympics 2020 Live: ಬಹುನಿರೀಕ್ಷಿತ ಒಲಿಂಪಿಕ್ಸ್ ಕ್ರೀಡಾಕೂಟ ಉದ್ಘಾಟನೆಗೆ ಕ್ಷಣಗಣನೆ
Published On - 2:03 pm, Fri, 23 July 21