ಟೊಕಿಯೋ ಒಲಂಪಿಕ್ಸ್ನಲ್ಲಿ ಶನಿವಾರ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದರು. 49 ಕೆಜಿ ವೇಟ್-ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಒಟ್ಟು 202 ಕೆಜಿ ಭಾರ ಎತ್ತುವ (87 ಕೆಜಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ 115 ಕೆಜಿ) ಮೂಲಕ ಇತಿಹಾಸ ನಿರ್ಮಿಸಿದ್ದರು. ಇದೇ ವೇಳೆ ಚೀನಾದ ಹೂ ಜಿಹುಯಿ ಒಟ್ಟು 210 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಪಡೆದುಕೊಂಡಿದ್ದರು. ಹಾಗೆಯೇ ಇಂಡೋನೇಷ್ಯಾದ ವಿಂಡಿ ಕೆಂಟಿಕಾ ಆಯೆಷಾ ಒಟ್ಟು 194 ಕೆಜಿ ತೂಕ ಎತ್ತಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
ಇತ್ತ 210 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಪಡೆದು ವಿಶ್ವದಾಖಲೆ ಬರೆದಿದ್ದ ಹೂ ಜಿಹುಯಿ ಮೇಲೆ ಇದೀಗ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನಲೆಯಲ್ಲಿ ಚೀನಾ ವೇಟ್ ಲಿಫ್ಟರ್ನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕಾಗಿ ಟೊಕಿಯೋದಲ್ಲೇ ಉಳಿಯುವಂತೆ ಹೂ ಜಿಹುಯಿಗೆ ಸೂಚಿಸಲಾಗಿದ್ದು, ಅದರಂತೆ ಜಿಹುಯಿ ಅವರಿಗೆ ಉದ್ದೀಪನ ಮದ್ದು ಸೇವಿಸಿದ್ದಾರೆಯೇ ಎಂಬ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಈ ಟೆಸ್ಟ್ನಲ್ಲಿ ಚೀನಾ ವೇಟ್ಲಿಫ್ಟರ್ ಉದ್ದೀಪನ ಮದ್ದು ತೆಗೆದುಕೊಂಡಿರುವುದು ದೃಢಪಟ್ಟರೆ, ಮೀರಾಬಾಯಿ ಚಾನುಗೆ ಚಿನ್ನದ ಪದಕ ಲಭಿಸಿದೆ. ಹಾಗೆಯೇ ಬೆಳ್ಳಿ ಪದಕ ಇಂಡೋನೇಷ್ಯಾದ ವಿಂಡಿ ಕೆಂಟಿಕಾ ಆಯೆಷಾ ಪಾಲಾಗಲಿದೆ.
ವರ್ಲ್ಡ್ ಅ್ಯಂಟಿ ಡೋಪಿಂಗ್ ಏಜೆನ್ಸಿ (ವಿಶ್ವ ಉದ್ದೀಪನ ನಿಗ್ರಹ ಘಟಕ), ಒಲಿಂಪಿಕ್ಸ್ನಲ್ಲಿ ಸುಮಾರು 5,000 ಕ್ರೀಡಾಪಟುಗಳನ್ನ ಹಲವು ಬಾರಿ ಉದ್ದೀಪನ ಪರೀಕ್ಷೆಗೆ ಒಳಪಡಿಸಿದ್ದಾರೆ. ಸ್ಪರ್ಧೆಯ ಒಳಗೆ ಮತ್ತು ಹೊರಗೆ ಕ್ರೀಡಾಪಟುಗಳ ರಕ್ತದ ಮಾದರಿಗಳನ್ನ ಸಂಗ್ರಹಿಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಅಥವಾ ನಿಷೇಧಿತ ವಸ್ತುಗಳ ಸೇವನೆ ಕಂಡು ಬಂದರೆ ಅವರನ್ನು ಒಲಿಂಪಿಕ್ ಕ್ರೀಡಾಕೂಟದಿಂದ ವಜಾಗೊಳಿಸಲಾಗುತ್ತದೆ.
ಇದೀಗ ಡೋಪಿಂಗ್ ಟೆಸ್ಟ್ಗಾಗಿ ಚಿನ್ನದ ಪದಕ ವಿಜೇತೆ ಹೂ ಜಿಹುಯಿ ಅವರನ್ನು ವಿಶ್ವ ಉದ್ದೀಪನ ನಿಗ್ರಹ ಘಟಕವು ಟೊಕಿಯೋದಲ್ಲೇ ಉಳಿಯುವಂತೆ ತಿಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ಚೀನಾ ವೇಟ್ ಲಿಫ್ಟರ್ ಉದ್ದೀಪನ ಔಷಧಿ ತೆಗೆದುಕೊಂಡಿರುವುದು ದೃಢಪಟ್ಟರೇ ಭಾರತದ ಮೀರಾಬಾಯಿ ಚಾನು ಅವರಿಗೆ ಚಿನ್ನದ ಪದಕ ನೀಡಲಾಗುತ್ತದೆ.
ಚಿನ್ನದ ಪದಕ ಸಿಕ್ಕರೆ ಹೊಸ ಇತಿಹಾಸ:
ಮೀರಾಬಾಯಿ ಚಾನು ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಪಡೆದ ಎಡನೇ ವೇಟ್ಲಿಫ್ಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಕರ್ಣಂ ಮಲ್ಲೇಶ್ವರಿ 2000 ಸಿಡ್ನಿ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅಂದರೆ, 21 ವರ್ಷಗಳ ನಂತರ ಭಾರತ ಒಲಿಂಪಿಕ್ಸ್ನಲ್ಲಿ ಮಹಿಳಾ ವೇಟ್ಲಿಫ್ಟಿಂಗ್ನಲ್ಲಿ ಈ ಬಾರಿ ಪದಕ ಗೆದ್ದಿದೆ. ಒಂದು ವೇಳೆ ಡೋಪಿಂಗ್ ಟೆಸ್ಟ್ನಲ್ಲಿ ಕಳ್ಳಾಟ ಸಾಬೀತಾಗಿ ಚಿನ್ನದ ಪದಕ ಗೆದ್ದ ಹೂ ಜಿಹುಯಿ ಅನರ್ಹಗೊಂಡರೆ ಮೀರಾಬಾಯಿ ಚಾನುಗೆ ಚಿನ್ನದ ಪದಕ ಲಭಿಸಲಿದೆ. ಇದು ನಡೆದರೆ ಭಾರತಕ್ಕಾಗಿ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಹಾಗೂ ವೇಟ್ಲಿಫ್ಟಿಂಗ್ನಲ್ಲಿ ಗೋಲ್ಡ್ ಮೆಡಲ್ ಪಡೆದ ಪ್ರಥಮ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮೀರಾಬಾಯಿ ಚಾನು ಪಾತ್ರರಾಗಲಿದ್ದಾರೆ.
ಇದನ್ನೂ ಓದಿ: Team India: ಟೀಮ್ ಇಂಡಿಯಾಗೆ ಮತ್ತಿಬ್ಬರು ಆಟಗಾರರ ಆಯ್ಕೆ
ಇದನ್ನೂ ಓದಿ: ಸೂರ್ಯಕುಮಾರ್ ಔಟ್ ಆಗುತ್ತಿದ್ದಂತೆ ಅಸಮಾಧಾನ ಹೊರಹಾಕಿದ ರಾಹುಲ್ ದ್ರಾವಿಡ್
(Tokyo Olympics 2020: Mirabai Chanu stands chance to get gold if Chinese weightlifter fails dope test)