Tokyo Olympics 2020: ಐತಿಹಾಸಿಕ ಸಾಧನೆ ಗೈದು ಒಲಿಂಪಿಕ್ಸ್ ಟೂರ್ನಿಯಿಂದ ಹೊರಬಿದ್ದ ಸುಮಿತ್ ನಗಾಲ್
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಎರಡನೇ ಸುತ್ತಿನ ಹಣಾಹಣಿಯಲ್ಲಿ ನಗಾಲ್ ಅವರು ವಿಶ್ವ ನಂ. 2 ರ್ಯಾಂಕಿನ ರಷ್ಯಾದ ಡೇನಿಯಲ್ ಮಡ್ವೆಡೆವ್ ವಿರುದ್ಧ 6-2 6-1ರ ಅಂತರದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನ (Tokyo Olympics 2020) ನಾಲ್ಕನೇ ದಿನವೂ ಭಾರತೀಯರ ಸೋಲಿನ ಆಟ ಮುಂದುವರೆದಿದೆ. ಆದರೆ, ಕೆಲ ಕ್ರೀಡಾಪಟುಗಳು ವಿಶೇಷ ಸಾಧನೆ ಮಾಡಿ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂಬುದು ಸಮಾಧಾನಕರ ವಿಚಾರ. ಟೋಕಿಯೋ ಒಲಿಂಪಿಕ್ಸ್ ಭಾರತದ ಪುರುಷರ ಟೆನಿಸ್ನಲ್ಲಿ ಲಿಯಾಂಡರ್ ಪೇಸ್ ಬಳಿಕ ಎರಡನೇ ಸುತ್ತಿಗೇರಿದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆಯನ್ನು ಸುಮಿತ್ ನಗಾಲ್ (Sumit Nagal) ಮಾಡಿದರು.
ಆದರೆ, ಸುಮಿತ್ಗೆ ಇದೇ ಶ್ರೇಷ್ಠ ಪ್ರದರ್ಶನ ಅಂತಿಮ ಹಂತದವರೆಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಎರಡನೇ ಸುತ್ತಿನ ಹಣಾಹಣಿಯಲ್ಲಿ ನಗಾಲ್ ಅವರು ವಿಶ್ವ ನಂ. 2 ರ್ಯಾಂಕಿನ ರಷ್ಯಾದ ಡೇನಿಯಲ್ ಮಡ್ವೆಡೆವ್ ವಿರುದ್ಧ 6-2 6-1ರ ಅಂತರದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆಕ್ರಮಣಕಾರಿ ಆಟ ಪ್ರದರ್ಶಿಸಿದ ಡೇನಿಯಲ್ ಮುಂದೆ ನಗಾಲ್ ಅವರಿಗೆ ಪಂದ್ಯದ ಯಾವ ಹಂತದಲ್ಲೂ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಇತ್ತ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲೂ ಭಾರತಕ್ಕೆ ನಿರಾಸೆಯಾಗಿದೆ. ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಎರಡನೇ ಪಂದ್ಯದಲ್ಲಿ ಭಾರತೀಯ ಜೋಡಿ ಸಾತ್ವಿಕ್‌ಸಾಯ್‌ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೋತಿದ್ದಾರೆ.
ವಿಶ್ವ ನಂ.1 ಇಂಡೋನೇಶಿಯನ್ ಜೋಡಿ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ಎದುರು ಭಾರತೀಯ ಜೋಡಿ ಸೋತಿದೆ. ದಂತಕತೆಗಳಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ವಿರುದ್ಧ 13-21, 12-21ರ ನೇರ ಸೆಟ್ ಸೋಲನುಭವಿಸಿದ್ದಾರೆ.
ಇನ್ನೂ ಆರ್ಚರಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಭಾರತದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ದಕ್ಷಿಣ ಕೊರಿಯಾ ವಿರುದ್ಧ ಸೋಲುಕಂಡು ಪದಕದ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಇಂದು ಮುಂಜಾನೆ ಭಾರತದ ತ್ರಿಮೂರ್ತಿಗಳಾದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಕಜಕಿಸ್ತಾನದ ವಿರುದ್ಧ 6-2 ಅಂತರದಿಂದ ಜಯಭೇರಿ ಬಾರಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದರು. ಇವರಿಂದ ಪದಕದ ನಿರೀಕ್ಷೆಯಿತ್ತು.
ಆದರೆ, ಕ್ವಾರ್ಟರ್ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಕಿಮ್ ವೂಜಿನ್, ಕಿಮ್ ಜೆ ಡೊಕ್ ಮತ್ತು ಒ ಜಿನ್ಹೆಕ್ ವಿರುದ್ಧ 0-6 ಅಂತರದಲ್ಲಿ ಹೀನಾಯ ಸೋಲು ಕಂಡರು. ದ. ಕೊರಿಯಾ ಸೆಮಿ ಫೈನಲ್ಗೆ ಪ್ರವೇಶ ಪಡೆದಿದೆ.
Tokyo Olympics: ಆರ್ಚರಿಯಲ್ಲಿ ಮತ್ತೆ ನಿರಾಸೆ: ಭಾರತದ ಪದಕದ ಆಸೆಗೆ ತಣ್ಣೀರೆರಚಿದ ದ. ಕೊರಿಯಾ
IND vs SL: ಸ್ಟಂಪ್ ಹಿಂದೆ ಒಂದುಕ್ಷಣ ಎಂಎಸ್ ಧೋನಿಯನ್ನು ನೆನೆಯುವಂತೆ ಮಾಡಿದ ಇಶಾನ್ ಕಿಶನ್-ವಿಡಿಯೋ
(Tokyo Olympics 2020 Sumit Nagal hammered out by world number two Daniil Medvedev)