ಪ್ಯಾರಿಸ್ ಒಲಿಂಪಿಕ್ಸ್ಗೆ ಕ್ಷಣಗಣನೆ ಆರಂಭವಾಗಿದೆ. ಒಲಿಂಪಿಕ್ಸ್ ಈ ವರ್ಷದ ಅತಿದೊಡ್ಡ ಕ್ರೀಡಾಕೂಟವಾಗಿದ್ದು, ಜುಲೈ 26 ರಿಂದ ಆಗಸ್ಟ್ 11 ರವರೆಗೆ ಫ್ರೆಂಚ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯಲಿದೆ. ಈ ಮಹಾ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಈ ಮೂಲಕ ಕಳೆದ ಒಲಿಂಪಿಕ್ಸ್ನಲ್ಲಿ ನಿರ್ಮಿಸಿದ್ದ ಇತಿಹಾಸವನ್ನು ಮುರಿಯುವ ಪಣತೊಟ್ಟಿದ್ದಾರೆ. ವಾಸ್ತವವಾಗಿ 2020ರಲ್ಲಿ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಭಾರತೀಯ ಆಟಗಾರರಿಂದ ಐತಿಹಾಸಿಕ ಪ್ರದರ್ಶನ ಕಂಡುಬಂದಿತ್ತು. ಈ ಆವೃತ್ತಿಯಲ್ಲಿ ಭಾರತ ಒಟ್ಟು 7 ಪದಕಗಳನ್ನು ಹೆದ್ದು ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯಧಿಕ ಪದಕ ಗೆದ್ದ ದಾಖಲೆ ನಿರ್ಮಿಸಿತ್ತು. ಇದರೊಂದಿಗೆ 2012 ರ ಲಂಡನ್ ಒಲಿಂಪಿಕ್ಸ್ನ ದಾಖಲೆಯನ್ನು ಮುರಿದಿತ್ತು. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತ 6 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಟೋಕಿಯೊ ಒಲಿಂಪಿಕ್ಸ್ನಲ್ಲಿ 7 ಪದಕಗಳನ್ನು ಗೆಲ್ಲುವ ಮೂಲಕ ಹಳೆಯ ದಾಖಲೆಯನ್ನು ಅಳಿಸಿ ಹಾಕಿತ್ತು.
2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕೀರ್ತಿ ತರುವ ಜವಾಬ್ದಾರಿ 126 ಆಟಗಾರರ ಮೇಲಿತ್ತು. ಇದರಲ್ಲಿ 71 ಪುರುಷರು ಮತ್ತು 55 ಮಹಿಳಾ ಸ್ಪರ್ದಿಗಳು ಸೇರಿದ್ದವು. ನಿರೀಕ್ಷೆಯಂತೆ ಭಾರತ ಮೊದಲ ದಿನವೇ ಇತಿಹಾಸ ಸೃಷ್ಟಿಸಿ ಪದಕ ಗೆದ್ದುಕೊಂಡಿತು. ಮೀರಾಬಾಯಿ ಚಾನು ಮೊದಲ ದಿನವೇ ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಮೊದಲ ದಿನವೇ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು.
ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದರೆ, ಲೊವ್ಲಿನಾ ಬೊರ್ಗೊಹೈನ್ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಡುವ ಮೂಲಕ ಪದಕಗಳ ಸಂಖ್ಯೆಯನ್ನು ಎರಡಕ್ಕೇರಿಸಿದರು. ನಂತರ ಪಿವಿ ಸಿಂಧು ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾದರು. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಕುಸ್ತಿಯಲ್ಲಿ ಎರಡು ಪದಕ ಗೆದ್ದಿದ್ದರು.
ಹುಡುಗಿಯರ ನಂತರ ಪದಕ ಭೇಟೆ ಮುಂದುವರೆಸಿದ ಹುಡುಗರು ಕುಸ್ತಿಯಲ್ಲಿ ಭಾರತಕ್ಕೆ 2 ಪದಕಗಳನ್ನು ತಂದುಕೊಟ್ಟಿದ್ದರು. ರವಿಕುಮಾರ್ ದಹಿಯಾ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರೆ, ಬಜರಂಗ್ ಪುನಿಯಾ ಕಂಚಿನ ಪದಕ ಗೆದ್ದರು.
ಇದಲ್ಲದೆ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದು 41 ವರ್ಷಗಳ ಪದಕಗಳ ಬರವನ್ನು ನೀಗಿಸಿತ್ತು. ಭಾರತ ಪುರುಷರ ಹಾಕಿ ತಂಡವು ಜರ್ಮನಿಯನ್ನು 5-4 ಅಂತರದಿಂದ ಸೋಲಿಸುವ ಮೂಲಕ ಈ ಐತಿಹಾಸಿಕ ಜಯ ಸಾಧಿಸಿತು. 1980 ರಲ್ಲಿ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನಂತರ ಇದು ಹಾಕಿ ತಂಡದ ಮೊದಲ ಪೋಡಿಯಂ ಫಿನಿಶ್ ಆಗಿತ್ತು. ಈ
2020 ರ ಟೋಕಿಯೊ ಒಲಿಂಪಿಕ್ಸ್ನ ಮೊದಲ ದಿನವೇ ಇತಿಹಾಸ ಸೃಷ್ಟಿಸಿದ್ದ ಭಾರತ, ಕೊನೆಯ ದಿನವೂ ಐತಿಹಾಸಿಕ ಸಾಧನೆ ಮಾಡಿತ್ತು. ಜಾವೆಲಿನ್ ಥ್ರೋನಲ್ಲಿ ಭಾರತದ ಭರವಸೆಯಾಗಿದ್ದ ನೀರಜ್ ಚೋಪ್ರಾ 87.58 ಮೀಟರ್ ದೂರ ಭರ್ಜಿ ಎಸೆದು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ನೀರಜ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ನಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ