
ಜಪಾನ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಪುರುಷರ 4×200 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಭಾರತೀಯ ಈಜು ತಂಡವು ಕೂದಲೆಳೆ ಅಂತರದಲ್ಲಿ ಫೈನಲ್ ತಲುಪುವ ಅವಕಾಶವನ್ನು ಕೈಚೆಲ್ಲಿದೆ. ಖ್ಯಾತ ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ಒಳಗೊಂಡ ಭಾರತೀಯ ತಂಡವು ಕೇವಲ 0.22 ಸೆಕೆಂಡುಗಳ ವ್ಯತ್ಯಾಸದಲ್ಲಿ ಫೈನಲ್ ಪ್ರವೇಶಿಸುವ ಸುವರ್ಣ ಅವಕಾಶವನ್ನು ಕಳೆದುಕೊಂಡಿದೆ.
ವೇದಾಂತ್ ಮಾಧವನ್, ಸಜ್ಜನ್ ಪ್ರಕಾಶ್, ದಕ್ಷನ್ ಶಶಿಕುಮಾರ್ ಮತ್ತು ಅನೀಶ್ ಸುನಿಲ್ ಅವರನ್ನೊಳಗೊಂಡ ಭಾರತದ ನಾಲ್ವರ ತಂಡವು ಹೀಟ್ಸ್‌ನಲ್ಲಿ 7:24.32 ಸೆಕೆಂಡುಗಳಲ್ಲಿ ಗುರಿ ತಲುಪಿ 9ನೇ ಸ್ಥಾನ ಪಡೆಯಿತು. ಎಂಟನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಕತಾರ್ ತಂಡಕ್ಕಿಂತ (7:24.10 ಸೆಕೆಂಡ್) ಭಾರತ ಕೇವಲ 0.22 ಸೆಕೆಂಡುಗಳಷ್ಟು ಹಿನ್ನಡೆ ಅನುಭವಿಸಿತು.
ಹಿರಿಯರ ವಿಭಾಗದ ಚೊಚ್ಚಲ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾಗವಹಿಸಿರುವ 21 ವರ್ಷದ ವೇದಾಂತ್, ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೇಸರ ಹಂಚಿಕೊಂಡಿದ್ದರು. “ಕೇವಲ 0.2 ಸೆಕೆಂಡುಗಳಿಂದ ಫೈನಲ್ ಮಿಸ್ ಆಯಿತು, ಇನ್ನು ಎರಡು ದಿನಗಳಲ್ಲಿ 200 ಮೀಟರ್ ಫ್ರೀಸ್ಟೈಲ್ ಸ್ಪರ್ಧೆ ಇದೆ” ಎಂದು ಬರೆದುಕೊಂಡಿದ್ದರು.
ಮಗನ ಈ ಪೋಸ್ಟ್ ಅನ್ನು ಹೆಮ್ಮೆಯಿಂದ ಮರು-ಹಂಚಿಕೊಂಡಿರುವ ನಟ ಮಾಧವನ್, ಪ್ರೀತಿ ಮತ್ತು ಕೃತಜ್ಞತೆಯ ಎಮೋಜಿಗಳನ್ನು ಹಾಕುವ ಮೂಲಕ ಮಗನಿಗೆ ಧೈರ್ಯ ತುಂಬಿದ್ದಾರೆ. ಕ್ರೀಡೆಯಲ್ಲಿ ಸೋಲುಗಳನ್ನು ಕೇವಲ ‘ಅನುಭವ ಮತ್ತು ಮುಂದಿನ ಹಾದಿಯ ಪಾಠ’ ಎಂದು ಪರಿಗಣಿಸುವ ಮಾಧವನ್, ಮತ್ತೊಮ್ಮೆ ಮಗನಿಗೆ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ!
ರಿಲೇಯಲ್ಲಿ ಹಿನ್ನಡೆಯಾಗಿದ್ದರೂ ವೇದಾಂತ್ ಅವರ ಏಷ್ಯನ್ ಗೇಮ್ಸ್ ಪಯಣ ಇಲ್ಲಿಗೆ ಮುಗಿದಿಲ್ಲ. ಅವರು ಮುಂದಿನ ದಿನಗಳಲ್ಲಿ ವೈಯಕ್ತಿಕ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಅದರಂತೆ ವೈಯುಕ್ತಿಕ ವಿಭಾಗದಲ್ಲಿ ವೇದಾಂತ್ 200 ಮೀಟರ್ ಫ್ರೀಸ್ಟೈಲ್ ಹೀಟ್ಸ್ ಹಾಗೂ ಬ್ಯಾಕ್‌ಸ್ಟ್ರೋಕ್ ಹೀಟ್ಸ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಸ್ಪರ್ಧೆಗಳ ಮೂಲಕ ವೇದಾಂತ್ ಭಾರತಕ್ಕೆ ಪದಕ ಗೆದುಕೊಡಲಿದ್ದಾರಾ ಕಾದು ನೋಡಬೇಕಿದೆ.