ಐಪಿಎಲ್​​ ಟಿಕೆಟ್ ಖರೀದಿಸಲು ಹೋಗಿ 86 ಸಾವಿರ ಕಳೆದುಕೊಂಡ ಮಹಿಳೆ, ಟಿಕೆಟ್​ ವಂಚನೆಗೆ ಇಲ್ವಾ ಕಡಿವಾಣ?

ಐಪಿಎಲ್ ಶುರುವಾಗಿದ್ದೇ ತಡ ಆರ್​ಸಿಬಿ ಫ್ಯಾನ್​ಗಳು ಟಿಕೆಟ್ ಎಷ್ಟೇ ಕಾಸ್ಟ್ಲಿ ಇರಲಿ ಟಿಕೆಟ್ ಖರೀದಿಸಿ ಸ್ಟೇಡಿಯಂನಲ್ಲೇ ಮ್ಯಾಚ್ ನೋಡ್ತೀವಿ ಎಂದು ಮುಗಿಬೀಳ್ತಾರೆ. ಸೋತರೂ-ಗೆದ್ದರೂ ಆರ್​ಸಿಬಿ ಕ್ರೇಜ್ ಮಾತ್ರ ಕೊಂಚವೂ ಇಳಿದಿಲ್ಲ. ಅದೇ ರೀತಿ ಇಲ್ಲೊಬ್ರು ಆರ್​ಸಿಬಿ ಅಭಿಮಾನಿ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಪಂದ್ಯ ನೋಡೋಣ ಎಂದು 20 ಟಿಕೆಟ್​ಗಳನ್ನು ಬುಕ್ ಮಾಡಲು ಹೋಗಿ 86 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.

ಐಪಿಎಲ್​​ ಟಿಕೆಟ್ ಖರೀದಿಸಲು ಹೋಗಿ 86 ಸಾವಿರ ಕಳೆದುಕೊಂಡ ಮಹಿಳೆ, ಟಿಕೆಟ್​ ವಂಚನೆಗೆ ಇಲ್ವಾ ಕಡಿವಾಣ?
ಐಪಿಎಲ್ ಟಿಕೆಟ್ಸ್
Follow us
|

Updated on: Apr 16, 2024 | 5:28 PM

ಡಿಜಿಟಲ್ ಯುಗ ಬಂದು ಕೈ ಬೆರಳಲ್ಲೇ ಎಲ್ಲವೂ ಸಿಗುವಂತಾಗಿದೆ. ಒಂದೇ ಒಂದು ಕ್ಲಿಕ್​ನಲ್ಲಿ ಅಡಗಿದೆ ಸಾವಿರಾರು ರೂಪಾಯಿಯ ವ್ಯವಹಾರ. ಹೌದು ಇದು ಡಿಜಿಟಲ್ ಯುಗ ಮನೆಗೆ ಸಾಮಾನು ತರುವುದರಿಂದ ಹಿಡಿದು ಕರೆಂಟ್ ಬಿಲ್, ವಾಟರ್ ಬಿಲ್, ಸಿನಿಮಾ ಟಿಕೆಟ್ ಅಷ್ಟೇ ಯಾಕೆ 5 ರೂ ಚಾಕಲೇಟ್​ಗೂ ಗೂಗಲ್ ಪೇ, ಫೂನ್ ಪೇ ಮೊರೆ ಹೋಗುವಂತಾಗಿದೆ. ನಗರಗಳಲ್ಲಿ 90 ಪರ್ಸೆಂಟ್ ಜನ ಹಣ ಡ್ರಾ ಮಾಡಲ್ಲ. ತೀರ ಮುಖ್ಯ ಅನಿಸಿದಾಗ ಮಾತ್ರ ಹಣ ಡ್ರಾ ಮಾಡ್ತಾರೆ. ಇಲ್ಲ, ಗೂಗಲ್ ಪೇ, ಫೂನ್ ಪೇ, ಕಾರ್ಡ್​ಗಳ ಮೂಲಕವೇ ಜೀವನ ನಡೆಸಿಬಿಡ್ತಾರೆ. ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಡಿಜಿಟಲ್ ಯುಗ ಬೆಳೆಯುತ್ತಿದ್ದಂತೆ ಸೈಬರ್ ಖದೀಮರು ಕೂಡ ಚುರುಕಾಗುತ್ತಿದ್ದಾರೆ. ಯಾವ ರೀತಿಯಲ್ಲೇ ವಂಚನೆ ಮಾಡಬಹುದು ಎಂದು ಹೊಂಚು ಹಾಕುತ್ತಿದ್ದಾರೆ. ದುನಿಯಾ ಸ್ಮಾರ್ಟ್​ ಆದಂತೆಲ್ಲ ವಂಚಕರ ಜಾಲ ದೊಡ್ಡದಾಗುತ್ತಿದೆ. ವಂಚಕರ ನಯವಾದ ಮಾತಿಗೆ ಸೋತು ಮೋಸ ಹೋಗುವವರು ಹೆಚ್ಚಾಗುತ್ತಿದ್ದಾರೆ. ಐಪಿಎಲ್ ಟಿಕೆಟ್, ಸಿನಿಮಾ ಟಿಕೆಟ್​ಗಳನ್ನು ಬುಕ್ ಮಾಡಲು ಹೋಗಿ ಪಂಗನಾಮ ಹಾಕಿಸಿಕೊಂಡ ಪ್ರಕರಣಗಳು ಸಾವಿರಾರು. ಹಾಗಾದ್ರೆ ಯಾಕೆ ಸಂಬಂಧಪಟ್ಟ ಸಂಸ್ಥೆಗಳು ಈ ಬಗ್ಗೆ ಎಚ್ಚರ ವಹಿಸುತ್ತಿಲ್ಲ. ಟಿಕೆಟ್​​ಗಳು ಕಾಳಸಂತೆಯಲ್ಲಿ ಮಾರಾಟವಾಗುವ ಅವಶ್ಯಕತೆಯಾದರೂ ಏನಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

ಅದೊಂದು ಕಾಲವಿತ್ತು. ಕಣ್ಣು ಕಾಣದ ಮನುಷ್ಯ ನೋಟನ್ನು ಕೈಯಲ್ಲಿಡಿದು ಸ್ಪರ್ಶಿಸಿದರೆ ಸಾಕು ಎಷ್ಟು ರೂಪಾಯಿ ಎಂದು ಹೇಳಿಬಿಡುತ್ತಿದ್ದ. ಆದರೆ ಈಗಿನ ಜನ ಹಣದ ಸ್ಪರ್ಶವನ್ನೇ ಮರೆತಿದ್ದಾರೆ. ಆನ್​ಲೈನ್​ ಪಾವತಿಯಿಂದಾಗಿ 10 ರೂಪಾಯಿಯ ನೋಟು ಹೇಗೆ ಕಾಣುತ್ತೆ ಎಂಬುವುದು ಕೂಡ ಅನೇಕರಿಗೆ ತಿಳಿದಿಲ್ಲ. ಮಾರ್ಚ್ 29 ರಂದು ಬೆಂಗಳೂರಿನ 43 ವರ್ಷದ ಮಹಿಳೆಯೊಬ್ಬಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಇದ್ದ ಐಪಿಎಲ್ ಪಂದ್ಯಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಹೋಗಿ ಬರೋಬ್ಬರಿ 86,000 ರೂ.ಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಇಂತಹ ವಂಚನೆಗಳು ಇದೇನು ಮೊದಲಲ್ಲ. ಹಾಗೂ ಅಧಿಕಾರಿಗಳು, ಪೊಲೀಸರು ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಸೈಬರ್ ಖದೀಮರನ್ನು ಕಟ್ಟಿ ಹಾಕಲು ಆಗುತ್ತಿಲ್ಲ. ಖಾತೆಗಳನ್ನು ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಲ್ಲಿದ್ದ ಅಷ್ಟೋ ಹಣವನ್ನು ಸೈಬರ್ ಖದೀಮರು ದೋಚುತ್ತಿದ್ದಾರೆ.

ಬೇಗೂರಿನ ಡ್ಯುಯೊ ಹೈಟ್ಸ್ ಲೇಔಟ್‌ನಲ್ಲಿ ವಾಸಿಸುತ್ತಿರುವ ಖಾಸಗಿ ಸಂಸ್ಥೆಯ ಉದ್ಯೋಗಿ ಮಹಿಳೆಯೊಬ್ಬರು ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಐಪಿಎಲ್ ಮ್ಯಾಚ್​ ನೋಡಲು ಆನ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡಲು ಮುಂದಾಗಿದ್ದರು. ಅಂದು ಬೆಳಿಗ್ಗೆ ಫೇಸ್​ಬುಕ್ ನೋಡುವಾಗ ‘ಐಪಿಎಲ್ ಕ್ರಿಕೆಟ್ ಟಿಕೆಟ್’ ಹೆಸರಿನ ಲಿಂಕನ್ನು ನೋಡಿದರು. ಟಿಕೆಟ್ ಬುಕ್ಕಿಂಗ್ ಬಗ್ಗೆ ವಿವರಣೆ ನೋಡುವಾಗ 9257980672 ಸಂಖ್ಯೆ ಮೊಬೈಲ್ ನಂಬರ್ ಕಣ್ಣಿಗೆ ಬಿತ್ತು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ ಎಂದು ಇತ್ತು. ಹೀಗಾಗಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಹಿಳೆ ಆ ನಂಬರ್​ಗೆ ಕರೆ ಮಾಡಿ ವಿಚಾರಿಸಲು ಮುಂದಾದರು. ಆಗ ಕರೆ ಸ್ವೀಕರಿಸಿದ ಮತ್ತೊಬ್ಬ ವ್ಯಕ್ತಿ ಐಪಿಎಲ್ ಟಿಕೆಟ್‌ಗಳ ಮಾರಾಟಗಾರ ಎಂದು ಹೇಳಿಕೊಂಡಿದ್ದ. ಇದನ್ನು ನಂಬಿದ ಮಹಿಳೆ RCB vs KKR ಪಂದ್ಯಕ್ಕೆ ಟಿಕೆಟ್‌ಗಳು ಲಭ್ಯವಿವೆಯೇ ಎಂದು ಕೇಳಿದ್ದಾರೆ. ಮೇಡಮ್ ಕೆಲವು ಟಿಕೆಟ್‌ಗಳು ಮಾತ್ರ ಲಭ್ಯವಿವೆ. ಬೇಗ ಖರೀದಿಸಿದರೆ ನಿಮಗೆ ಸಿಗುತ್ತೆ, ಇಲ್ಲ ಬೇರೆಯವರ ಪಾಲಾಗುತ್ತೆ ಎಂದಿದ್ದಾನೆ. ಆಗ ಮಹಿಳೆ ತನ್ನ ಸ್ನೇಹಿತರು ಹಾಗೂ ಕುಟುಂಬದ ಜೊತೆ ಮ್ಯಾಚ್​ ನೋಡಲು ಹೋಗೋಣ ಎಂದು ನಿರ್ಧರಿಸಿ ಸುಮಾರು 20 ಟಿಕೆಟ್‌ಗಳು ಬೇಕು ಎಂದು ತಿಳಿಸಿದ್ದಾರೆ. ಆಗ ಹಣ ಪಾವತಿಸಿದೆ ಟಿಕೆಟ್​ಗಳನ್ನು ಈಗಲೇ ಬ್ಲಾಕ್ ಮಾಡುವುದಾಗಿ ವಂಚಕ ಹೇಳಿದ್ದಾನೆ.

ಇದಕ್ಕೆ ಒಪ್ಪಿದ ಮಹಿಳೆ ಆರಂಭದಲ್ಲಿ ಟಿಕೆಟ್ ಬ್ಲಾಕ್ ಮಾಡಲು ಆನ್​ಲೈನ್ ಮೂಲಕ ಮುಂಗಡವಾಗಿ 8,000 ರೂ. ಪಾವತಿಸಿದ್ದಾರೆ. ನಂತರ ವಂಚಕ ಮತ್ತೇನೋ ಹೇಳಿ ಮಹಿಳೆಯಿಂದ ಮತ್ತೆ 11,000 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾನೆ. ಇದೇ ರೀತಿ 14,999 ರೂ ಮತ್ತು 21,000 ರೂ.ಗಳನ್ನು ಪ್ರತ್ಯೇಕವಾಗಿ ವರ್ಗಾಹಿಸುವಂತೆ ಪುಸಲಾಯಿಸಿ ಮಹಿಳೆಯನ್ನು ವಂಚಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇಷ್ಟೆಲ್ಲಾ ಆದ ಬಳಿಕ ಅನುಮಾನ ಬಂದಿದ್ದು ಮಹಿಳೆ ಹಣವನ್ನು ವಾಪಸ್ ಕೊಡಿ ಇಲ್ಲ ಇ-ಟಿಕೆಟ್‌ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಆದರೆ ವಂಚಕ ನೀವು ವರ್ಗಾವಣೆ ಮಾಡಿದ ಹಣವನ್ನು ನಾವು ಸ್ವೀಕರಿಸುವಲ್ಲಿ ತಾಂತ್ರಿಕ ದೋಷ ಎದುರಾಗಿದ್ದು ನಮಗೆ ಹಣ ಬಂದಿಲ್ಲ. ಹಣ ನಮ್ಮ ಖಾತೆಗೆ ಬರುತ್ತಿದ್ದಂತೆ ಮರುಪಾವತಿ ಮಾಡುತ್ತೇವೆ ಎಂದು ಭರವಸೆ ನೀಡಿ ಸುಮ್ಮನಾಗಿದ್ದಾನೆ.

ವಂಚಕನು ಇನ್ನೂ 16,000 ರೂ. ಕೇಳಿದಾಗ ಮಹಿಳೆ ಹಣ ಹಾಕಲು ನಿರಾಕರಿಸಿದ್ರು. ಆಗ ವಂಚಕ ನೀವು ಹಣ ಹಾಕಲಿಲ್ಲವೆಂದರೆ ನಾವು ಇ-ಟಿಕೆಟ್ ಕಳಿಸಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಆಗ ಮಹಿಳೆಗೆ ವಂಚನೆಯಾಗುತ್ತಿರುವುದು ಅರಿವಾಗಿದೆ. ನಾನು ನಿಮಗೆ ಕೊಟ್ಟ ಹಣವನ್ನು ವಾಪಸ್ ನೀಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾರೆ. ವಂಚಕನು ಯಾರಿಗೆ ಬೇಕಾದ್ರು ದೂರು ನೀಡಿ ಎಂದು ಆಹಂಕಾರದಿಂದ ಮಾತಾಡಿ ಕಾಲ್ ಕಟ್ ಮಾಡಿದ್ದಾನೆ. ಮರುದಿನ ಮಹಿಳೆ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆ) ಮತ್ತು 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣ ಸಂಬಂದ ಎಫ್​ಐಆರ್​ ಆಗಿದೆ. ಸೈಬರ್ ಕ್ರೈಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಂಚಕರನ್ನು ಆದಷ್ಟು ಬೇಗ ಪತ್ತೆ ಹಚ್ಚಲಾಗುತ್ತೆ ಎಂದು ಬೇಗೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವ ಕುಮಾರ್ ಟಿವಿ9 ಪ್ರೀಮಿಯಂ ನ್ಯೂಸ್​ ಆ್ಯಪ್​ಗೆ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಪಂದ್ಯಕ್ಕೆ 2-3 ದಿನಗಳ ಮೊದಲೇ RCB ಯ ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್‌ನಲ್ಲಿ ಮೈದಾನದ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ನೀಡಲಾಗುತ್ತೆ. ಇವುಗಳಲ್ಲಿ ಟಿಕೆಟ್ ಖರೀದಿಸಬಹುದು. ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿಕೊಳ್ಳುವ ವಂಚಕರು ಅಥವಾ ನಕಲಿ ವೆಬ್‌ಸೈಟ್‌ಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ ಎಂದು ಕೆಎಸ್​ಸಿಎ ತಿಳಿಸಿದೆ.

ಟಿಕೆಟ್​​ಗಳು ಕಾಳಸಂತೆಯಲ್ಲಿ ಮಾರಾಟವಾಗುವುದು ಹೇಗೆ?

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟ ಮಾಡುತ್ತೆ. ಈ ಬಾರಿ ಐಪಿಎಲ್ ಪಂದ್ಯಗಳ ಟಿಕೆಟ್ ಮಾರಾಟ ಆರಂಭವಾಗಿದ್ದು ಮಾರ್ಚ್‌ನ ಮೊದಲ ವಾರದಲ್ಲಿ. ಒಂದು ತಿಂಗಳು ಇರುವಾಗಲೇ ಟಿಕೆಟ್ ಮಾರಾಟ ಆರಂಭವಾಗುತ್ತೆ. 500ರೂ ಯಿಂದ 50 ಸಾವಿರದ ವರೆಗೂ ಟಿಕೆಟ್ ದರ ಇರುತ್ತೆ.

ಮೊದಲಿಗೆ ಐಪಿಎಲ್​ ಟಿಕೆಟ್ ಮಾರಾಟಕ್ಕೆ ಟೆಂಡರ್​ ಕರೆಯಲಾಗುತ್ತೆ. ಬಳಿಕ ಅವುಗಳಲ್ಲಿ ಕೆಲವು ಕಂಪನಿಗಳನ್ನು ಆಯ್ಕೆ ಮಾಡಿ ಟಿಕೆಟ್​ಗೆ ಇಷ್ಟು ದರ ಎಂದು ನಿಗದಿ ಮಾಡಿ ಅವುಗಳಿಂದ ಮಾತ್ರ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತೆ. ಐಪಿಎಲ್‌ನ ಅಧಿಕೃತ ವೆಬ್‌ ಸೈಟ್‌, ಬುಕ್‌ಮೈಶೋ, ಪೇಟಿಯಂ ನಂತಹ ನಂಬಿಕಾರ್ಹ ಆನ್‌ಲೈನ್‌ ವೇದಿಕೆಗಳಲ್ಲಿ ಮಾತ್ರ ಐಪಿಎಲ್‌ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತೆ. ಜೊತೆಗೆ ಪಂದ್ಯ ಆರಂಭಕ್ಕೂ 2-3 ದಿನಗಳ ಮೊದಲು ಕ್ರೀಡಾಂಗಣದ ಹೊರಗಿನ ಕೌಂಟರ್‌ಗಳಲ್ಲಿ ಆಫ್‌ಲೈನ್‌ ಟಿಕೆಟ್‌ಗಳ ಮಾರಾಟ ಮಾಡಲಾಗುತ್ತೆ. ಆದರೆ ಕೆಲ ಖದೀಮರು ಸಂದರ್ಭ ಬಳಸಿಕೊಂಡು ನಕಲಿ ಲಿಂಕ್​ಗಳನ್ನು ಗೂಗಲ್​ನಲ್ಲಿ ಸಿಗುವಂತೆ ಮಾಡಿ ವಂಚನೆ ಮಾಡ್ತಾರೆ. ಫೇಸ್​ಬುಕ್, ವಾಟ್ಸ್ ಆ್ಯಪ್​ಗಳಲ್ಲಿ ಟಿಕೆಟ್​ಗೆ ವಿನಾಯಿತಿ ಎಂಬಂತೆ ಆಫರ್​ ನೀಡುವ ಸಂದೇಶ ಹರಿಬಿಟ್ಟು ಮೋಸ ಮಾಡ್ತಾರೆ. ಈ ರೀತಿ ಮೋಸ ಹೋಗುವವರು ಪೊಲೀಸ್ ಠಾಣೆಗಳಲ್ಲಿ ದೂರು ನೀಡಬಹುದು. ಆದರೆ ಈ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ತಲೆ ಹಾಕಲ್ಲ. ಐಪಿಎಲ್​ ಪದ್ಯಗಳ ಜನಪ್ರಿಯತೆ ಹೆಚ್ಚಿರುವ ಕಾರಣ ಜನ ಮುಗಿಬಿದ್ದು ಬಂದು ಪಂದ್ಯ ನೋಡ್ತಾರೆ. ಅಲ್ಲದೆ ಆರ್​ಸಿಬಿಗೆ ಅಪ್ಪಟ ಅಭಿಮಾನಿಗಳು ಹೆಚ್ಚು. ಹೀಗಾಗಿ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಿಂದ ಆರ್​ಸಿಬಿ ಪದ್ಯ ನೋಡಲು ಜನ ಬರ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಖದೀಮರು ಟಿಕೆಟ್ ಇದೆ ಎಂದು ನಂಬಿಸಿ ವಂಚನೆ ಮಾಡ್ತಾರೆ.

ಕೆಎಸ್​ಸಿಎ ತಾನು ಒಪ್ಪಂದ ಮಾಡಿಕೊಂಡ ಆನ್​ಲೈನ್ ವೇದಿಕೆಗಳಿಂದ ಮೋಸವಾದರೆ ಮಾತ್ರ ಜವಾಬ್ದಾರಿ ತೆಗೆದುಕೊಳ್ಳುತ್ತೆ. ಹೀಗಾಗಿಯೇ ಆನ್​ಲೈನ್ ಬುಕ್ಕಿಂಗ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಜಾಹಿರಾತುಗಳಲ್ಲಿ ತಿಳಿಸಲಾಗುತ್ತೆ.

ತಾಜಾ ಸುದ್ದಿ