ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ 18ನೇ ಸ್ಥಾನ: ಇಲ್ಲಿದೆ ಪದಕ ಪಟ್ಟಿ
World Athletics Championships: ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ ನೀರಜ್ ಚೋಪ್ರಾ, ಡಿಪಿ ಮನು ಮತ್ತು ಕಿಶೋರ್ ಜೆನಾ ಕಾಣಿಸಿಕೊಂಡಿದ್ದರು. ಇವರಲ್ಲಿ ನೀರಜ್ ಚೋಪ್ರಾ 88.17 ಮೀಟರ್ ಭರ್ಜಿ ಎಸೆದು ಅಗ್ರಸ್ಥಾನ ಪಡೆದರೆ, ಕಿಶೋರ್ ಜೆನಾ (84.77 ಮೀ) ಹಾಗೂ ಡಿಪಿ ಮನು (84.14 ಮೀ) ಕ್ರಮವಾಗಿ 5ನೇ ಮತ್ತು 6ನೇ ಸ್ಥಾನ ಅಲಂಕರಿಸಿದರು.

ಹಂಗೇರಿಯಲ್ಲಿ ಆಗಸ್ಟ್ 19 ರಿಂದ ಶುರುವಾಗಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಭಾನುವಾರ ತೆರೆಬಿದ್ದಿದೆ. 200 ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಚಾಂಪಿಯನ್ಶಿಪ್ನಲ್ಲಿ ಅತ್ಯಧಿಕ ಪದಕಗಳನ್ನು ಗೆಲ್ಲುವ ಮೂಲಕ ಯುಎಸ್ಎ ಅಗ್ರಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದೆ. ಮತ್ತೊಂದೆಡೆ ಏಕೈಕ ಚಿನ್ನ ಗೆದ್ದ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನ ಅಲಂಕರಿಸಿದೆ.
ಭಾರತದಿಂದ 27 ಕ್ರೀಡಾಪಟು:
ಈ ಬಾರಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದಿಂದ ಒಟ್ಟು 27 ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ 23 ಪುರುಷರು ಮತ್ತು 4 ಮಹಿಳೆಯರು ಕಣಕ್ಕಿಳಿದಿದ್ದರು. ಆದರೆ ಅಂತಿಮ ದಿನದಾಟದಲ್ಲಿ ಫೈನಲ್ಗೆ ಪ್ರವೇಶಿಸಿರುವುದು ಕೇವಲ 8 ಮಂದಿ ಮಾತ್ರ. ಇಲ್ಲಿ ಅಂತಿಮ ಹಣಾಹಣಿಯಲ್ಲಿ ಕಾಣಿಸಿಕೊಂಡ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು. ಇನ್ನುಳಿದವರು ಫೈನಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅಗ್ರ ಮೂರರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
ಫೈನಲ್ ಫೈಟ್ನಲ್ಲಿ 8 ಮಂದಿ:
ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಫೈನಲ್ ಪೈಪೋಟಿಯಲ್ಲಿ ಭಾರತದ 8 ಕ್ರೀಡಾಪಟುಗಳು ಕಣದಲ್ಲಿದ್ದರು.
- ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ ನೀರಜ್ ಚೋಪ್ರಾ, ಡಿಪಿ ಮನು ಮತ್ತು ಕಿಶೋರ್ ಜೆನಾ ಕಾಣಿಸಿಕೊಂಡಿದ್ದರು. ಇವರಲ್ಲಿ ನೀರಜ್ ಚೋಪ್ರಾ 88.17 ಮೀಟರ್ ಭರ್ಜಿ ಎಸೆದು ಅಗ್ರಸ್ಥಾನ ಪಡೆದರೆ, ಕಿಶೋರ್ ಜೆನಾ (84.77 ಮೀ) ಹಾಗೂ ಡಿಪಿ ಮನು (84.14 ಮೀ) ಕ್ರಮವಾಗಿ 5ನೇ ಮತ್ತು 6ನೇ ಸ್ಥಾನ ಅಲಂಕರಿಸಿದರು.
- ಇನ್ನು ಮಹಿಳೆಯರ 3000ಮೀ ಸ್ಟೀಪಲ್‌ಚೇಸ್ ಫೈನಲ್ನಲ್ಲಿ ಕಾಣಿಸಿಕೊಂಡಿದ್ದ ಪಾರುಲ್ ಚೌಧರಿ 11ನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದರು.
- ಹಾಗೆಯೇ ಪುರುಷರ 4×400 ಮೀ. ರಿಲೇ ಫೈನಲ್ನಲ್ಲಿ ಭಾರತ ತಂಡವು (ಮುಹಮ್ಮದ್ ಅನಾಸ್ ಯಹಿಯಾ, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್, ರಾಜೇಶ್ ರಮೇಶ್) 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಪದಕ ಪಟ್ಟಿ:
- ಯುಎಸ್ಎ- 29 ಪದಕಗಳು (ಚಿನ್ನ 12, ಬೆಳ್ಳಿ 8, ಕಂಚು 9)
- ಕೆನಡಾ- 6 ಪದಕಗಳು (ಚಿನ್ನ 4, ಬೆಳ್ಳಿ 2, ಕಂಚು 0)
- ಸ್ಪೇನ್- 5 ಪದಕಗಳು (ಚಿನ್ನ 4, ಬೆಳ್ಳಿ 1, ಕಂಚು 0)
- ಜಮೈಕಾ- 12 ಪದಕಗಳು (ಚಿನ್ನ 3, ಬೆಳ್ಳಿ 5, ಕಂಚು 4)
- ಕೀನ್ಯಾ- 10 ಪದಕಗಳು (ಚಿನ್ನ 3, ಬೆಳ್ಳಿ 3, ಕಂಚು 4)
- ಇಥೋಪಿಯಾ- 9 ಪದಕಗಳು (ಚಿನ್ನ 2, ಬೆಳ್ಳಿ 4, ಕಂಚು 3)
- ಗ್ರೇಟ್ ಬ್ರಿಟನ್- 10 ಪದಕಗಳು (ಚಿನ್ನ 2, ಬೆಳ್ಳಿ 3, ಕಂಚು 5)
- ನೆದರ್ಲೆಂಡ್- 5 ಪದಕಗಳು (ಚಿನ್ನ 2, ಬೆಳ್ಳಿ 1, ಕಂಚು 2)
- ನಾರ್ವೆ- 4 ಪದಕಗಳು (ಚಿನ್ನ 2, ಬೆಳ್ಳಿ 1, ಕಂಚು 1)
- ಸ್ವೀಡನ್- 3 ಪದಕಗಳು (ಚಿನ್ನ 2, ಬೆಳ್ಳಿ 1, ಕಂಚು 0)
ಇದನ್ನೂ ಓದಿ: ಬರೋಬ್ಬರಿ 23 ಪದಕಗಳನ್ನು ಗೆದ್ದ ನೀರಜ್ ಚೋಪ್ರಾ: ಇಲ್ಲಿದೆ ಸಂಪೂರ್ಣ ಪಟ್ಟಿ
ಇನ್ನು ಜಾವೆಲಿನ್ ಥ್ರೋನಲ್ಲಿ ಏಕೈಕ ಚಿನ್ನದ ಪದಕ ಗೆದ್ದಿರುವ ಭಾರತ ಈ ಪಟ್ಟಿಯಲ್ಲಿ 18ನೇ ಸ್ಥಾನ ಅಲಂಕರಿಸಿದೆ. ಇದರೊಂದಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೂ ತೆರೆಬಿದ್ದಿದ್ದು, ಭಾರತೀಯ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ಗಾಗಿ ತಯಾರಿ ಆರಂಭಿಸಲಿದ್ದಾರೆ.
Published On - 3:17 pm, Mon, 28 August 23