ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡದ ಮುಂದೆ ಮಂಡಿಯೂರಿದ ಭಾರತ ಮುಂದಿನ ದಿನಗಳಲ್ಲಿ ತಂಡದೊಳಗೆ ಮಹತ್ತರ ಬದಲಾವಣೆಗಳನ್ನು ಮಾಡಬೇಕಾದ ಅವಶ್ಯಕತೆ ಇದೆ ಎಂಬರ್ಥದಲ್ಲಿ ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ. ವೈಟ್ಬಾಲ್ ಕ್ರಿಕೆಟ್ನಲ್ಲಿ ಎಂತಹ ಕಠಿಣ ಪರಿಸ್ಥಿತಿಯಲ್ಲೂ ತಂಡಕ್ಕೆ ಹೆಗಲಾಗಬಲ್ಲ ಆಟಗಾರರು ಇರುವಂತೆಯೇ ಟೆಸ್ಟ್ ಪಂದ್ಯಾವಳಿಗಳಲ್ಲೂ ದೃಢವಾಗಿ ನಿಂತು ತಂಡಕ್ಕೆ ಆಸರೆಯಾಗಬಲ್ಲ ಆಟಗಾರರು ಬೇಕು. ಹೀಗಾಗಿ ಇದಕ್ಕೆ ಸೂಕ್ತ ಮನಸ್ಥಿತಿಯುಳ್ಳ ಆಟಗಾರರನ್ನು ಆರಿಸಬೇಕು ಎನ್ನುವ ಮೂಲಕ ಬದಲಾವಣೆಯ ಸುಳಿವನ್ನು ನೀಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬೆನ್ನಲ್ಲೇ ನಾಯಕ ಕೊಹ್ಲಿ ಹೀಗೆ ಹೇಳಿರುವುದು ಹುಬ್ಬೇರಿಸುವಂತೆ ಮಾಡಿದೆ. ಭಾರತ ತಂಡದ ಗೆಲುವಿನ ನಿರೀಕ್ಷೆಯಲ್ಲಿದ್ದವರಿಗೆ ಈ ಸೋಲು ಸಹಜವಾಗಿಯೇ ಕಹಿಯಾಗಿದ್ದು, ಇದೀಗ ಸೋಲಿಗೆ ಕಾರಣವೇನು? ಯಾರ ಬದಲು ಯಾರಿದ್ದರೆ ಸೋಲಿನ ದವಡೆಯಿಂದ ಪಾರಾಗಬಹುದಿತ್ತು ಎಂಬ ಲೆಕ್ಕಾಚಾರಗಳೂ ಕೇಳಿಬರುತ್ತಿವೆ. ಇದೇ ಹೊತ್ತಿನಲ್ಲಿ ಬದಲಾವಣೆಯ ಮಾತುಗಳನ್ನಾಡಿರುವ ನಾಯಕ ಕೊಹ್ಲಿ ಸಮಚಿತ್ತದಿಂದ ಆಡಬಲ್ಲ ಸಮರ್ಥ ಆಟಗಾರರು ಬೇಕು ಎಂದು ಹೇಳಿರುವುದನ್ನು ನೋಡಿದರೆ ಯಾರೆಲ್ಲಾ ತಂಡಂದಿಂದ ಹೊರದಬ್ಬಿಸಿಕೊಳ್ಳಲಿದ್ದಾರೆ ಎಂದು ಕ್ರಿಕೆಟ್ ಪ್ರೇಮಿಗಳು ಯೋಚನೆ ಮಾಡಲಾರಂಭಿಸಿದ್ದಾರೆ.
ಆದರೆ, ಈ ತೆರನಾದ ಹೇಳಿಕೆ ನೀಡಿರುವ ಕೊಹ್ಲಿ ಎಲ್ಲಿಯೂ ಯಾವ ಆಟಗಾರನ ಹೆಸರನ್ನು ಉದ್ದೇಶಿಸದೇ ಒಂದು ಉತ್ತಮ ತಂಡದ ಅವಶ್ಯಕತೆ ಇದೆ ಎಂಬಂತೆ ಮಾತನಾಡಿದ್ದಾರೆ. ಹಾಗಿದ್ದರೂ ಅವರ ಮಾತಿನಲ್ಲಿ ಕೆಲ ಆಟಗಾರರ ಪ್ರದರ್ಶನದ ಕುರಿತಾದ ಅಸಮಾಧಾನ ಇದೆ ಎನ್ನುವುದನ್ನು ನಿರಾಕರಿಸಲಾಗದು. ಉದಾಹರಣೆಗೆ ಚೇತೇಶ್ವರ ಪೂಜಾರ ಅವರನ್ನೇ ತೆಗೆದುಕೊಂಡರೂ ಮೊದಲ ರನ್ ಗಳಿಸಲು 35 ಬಾಲ್ ತೆಗೆದುಕೊಂಡ ಅವರು ನಂತರ ಒಟ್ಟು 54 ಬಾಲ್ಗಳಿಂದ 8 ರನ್ ಗಳಿಸಲಷ್ಟೇ ಶಕ್ತರಾದರು. ಅಲ್ಲದೇ ಎರಡನೇ ಬಾರಿಗೂ ಒಟ್ಟು 80 ಬಾಲ್ಗಳಿಗೆ 15 ರನ್ಗಳನ್ನಷ್ಟೇ ಗಳಿಸಿ ಬ್ಯಾಟಿಂಗ್ ವಿಭಾಗದ ಮೇಲೆ ಒತ್ತಡ ಹೆಚ್ಚಾಗಲು ಕಾರಣರಾದರು. ಈಗ ಕೊಹ್ಲಿ ಹೇಳಿರುವ ಮಾತಿನ ಹಿಂದೆ ಈ ತೆರನಾದ ಪ್ರದರ್ಶನ ನೀಡಿದ ಆಟಗಾರರಿಗೆ ಪರ್ಯಾಯವಾಗಿ ಬೇರೆಯರನ್ನು ಸೇರಿಸಿಕೊಳ್ಳಬೇಕು ಎಂಬ ಉದ್ದೇಶವೂ ಇದ್ದಂತಿದೆ.
ತಂಡದ ಬಲ ಹೆಚ್ಚಿಸುವ ಬಗ್ಗೆ ಮಾತನಾಡಿರುವ ಕೊಹ್ಲಿ, ನಾವು ತಂಡದ ಅವಶ್ಯಕತೆಗಳೇನು ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇನ್ನಷ್ಟು ಚರ್ಚಿಸುತ್ತೇವೆ. ಜತೆಗೆ, ಒಂದಷ್ಟು ಬದಲಾವಣೆಗಳನ್ನು ನಿರೀಕ್ಷಿಸುತ್ತೇವೆ. ಯಾವ ಕಾರಣಕ್ಕೂ ನಿರ್ದಿಷ್ಟ ನಿಯಮಕ್ಕೇ ಜೋತುಬಿದ್ದು ಅದನ್ನೇ ಕಣ್ಣುಮುಚ್ಚಿ ಪಾಲಿಸಬೇಕು ಎಂದು ಹೇಳುವುದಿಲ್ಲ ಎಂದು ವರ್ಚುಯಲ್ ಸುದ್ದಿಗೋಷ್ಠಿ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ತಂಡದ ಸಾಮರ್ಥ್ಯ ಹೆಚ್ಚಿಸಲು ಏನೆಲ್ಲಾ ಬದಲಾವಣೆ ಮಾಡಬಹುದು ಎಂದು ಗಮನ ಹರಿಸುವುದು ಅವಶ್ಯಕವಾಗಿದೆ. ಎದುರಾಳಿಗಳನ್ನು ಹಿಮ್ಮೆಟ್ಟಸಲು ಹಾಗೂ ಹೆದರದೇ ಆಟವಾಡಲು ಸಿದ್ಧರಿರುವವರನ್ನು ಕಣಕ್ಕಿಳಿಸಬೇಕು. ಸೂಕ್ತ ಸ್ಥಿತಿಯಲ್ಲಿ ಸೂಕ್ತ ಮನಸ್ಥಿತಿಯೊಂದಿಗೆ ಆಡುವುದು ಮುಖ್ಯ. ನಮ್ಮ ವೈಟ್ಬಾಲ್ ತಂಡವನ್ನೇ ಗಮನಿಸಿದರೆ ಅದು ಎಷ್ಟು ಪ್ರಬಲವಾಗಿದೆ ಎನ್ನುವುದು ಅರ್ಥವಾಗುತ್ತದೆ. ಅಲ್ಲಿ ತಂಡದ ಪ್ರತಿಯೊಬ್ಬರೂ ಅಚಲರಾಗಿ ನಿಲ್ಲಬಲ್ಲರು ಹಾಗೂ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಸೆಣೆಸಬಲ್ಲರು. ಇಲ್ಲಿಯೂ ಅದೇ ಮನೋಭಾವ ಬೇಕಾಗಿದೆ. ಹೀಗಾಗಿ ಬದಲಾವಣೆ ಜಾರಿ ಮಾಡಲು ಇನ್ನೂ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಎಂದೆಲ್ಲಾ ಕಾಯುವುದಿಲ್ಲ. ಅತಿ ಶೀಘ್ರದಲ್ಲೇ ಕೊರತೆಗಳನ್ನು ನೀಗಿಸುವತ್ತ ಹೆಜ್ಜೆ ಹಾಕುತ್ತೇವೆ ಎಂದು ಹೇಳಿದ್ದಾರೆ.
ರನ್ ಗಳಿಕೆ ಬಗ್ಗೆಯೂ ಮಾತನಾಡಿರುವ ನಾಯಕ ಕೊಹ್ಲಿ, ನಾವು ಮೊದಲ ಇನ್ನಿಂಗ್ಸ್ನಲ್ಲಿ 217ರನ್ ಗಳಿಸಲಷ್ಟೇ ಸಾಧ್ಯವಾಯಿತು. ಎರಡನೇ ಪ್ರಯತ್ನದಲ್ಲಿ 170 ಗಳಿಸುವಷ್ಟರಲ್ಲಿ ಕೈ ಚೆಲ್ಲುವಂತಾಯಿತು. ಈ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಿದೆ. ಆಟವನ್ನು ಸಮರ್ಪಕವಾಗಿ ನಿಭಾಯಿಸುವುದು ಮುಖ್ಯವಾಗಿರುವುದರಿಂದ ಅದು ನಮ್ಮ ಕೈ ತಪ್ಪಿ ಹೋಗಲು ಬಿಡಬಾರದು. ಇವೆಲ್ಲಾ ನಮಗೆ ಅಸಾಧ್ಯವಾದ ವಿಚಾರಗಳೇನಲ್ಲ. ಆದರೆ, ಒಂದಷ್ಟು ಅವಲೋಕಿಸುವುದು ಅವಶ್ಯಕತೆ ಇದೆಯಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೌಲರ್ಗಳನ್ನು ಕಟ್ಟಿಹಾಕುವತ್ತ ನಾವು ಎಚ್ಚರ ವಹಿಸಬೇಕು. ಒಂದೇ ಕಡೆಗೆ ಅವರು ಹೆಚ್ಚು ಹೊತ್ತು ಬಾಲ್ ಎಸೆಯಲು ಅವಕಾಶ ಕೊಡಬಾರದು. ಅವರ ಮೇಲೆ ಒತ್ತಡ ತರುವಂತೆ ಪದೇ ಪದೇ ಉತ್ತಮ ಆಟ ಪ್ರದರ್ಶಿಸಿದರೆ ಎದುರಾಳಿ ತಂಡದ ಬೌಲರ್ಗಳನ್ನು ನಿಯಂತ್ರಿಸಬಹುದು. ಕೆಲವೊಂದು ಸಂದರ್ಭದಲ್ಲಿ ಔಟ್ ಆಗದೇ ನಿಲ್ಲುವುದು ಎಷ್ಟು ಮುಖ್ಯವೆನಿಸುತ್ತದೋ ಅಷ್ಟೇ ಮುಖ್ಯ ನ್ಯೂಜಿಲೆಂಡ್ನಂತಹ ತಂಡಗಳ ವಿರುದ್ಧ ಔಟ್ ಆಗುವುದರ ಬಗ್ಗೆ ಚಿಂತಿಸದೇ ಆಡುವುದೂ ಆಗಿರುತ್ತದೆ. ಪರಿಸ್ಥಿತಿ ನಮಗೆ ಪೂರಕವಾಗಬೇಕೆಂದರೆ ಲೆಕ್ಕಾಚಾರ ಹಾಕಿ ಕೆಲ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರಬೇಕು ಎಂದು ಕೊಹ್ಲಿ ಸಲಹೆ ನೀಡಿದ್ದಾರೆ. ಈ ಮೂಲಕ ಭಾರತ ಟೆಸ್ಟ್ ತಂಡವು ಮುಂದಿನ ದಿನಗಳಲ್ಲಿ ಮಹತ್ತರ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎನ್ನುವ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:
WTC Final: ನಾಯಕನ ಜವಾಬ್ದಾರಿ ಮರೆತ ಕೊಹ್ಲಿ, ಕೈಕೊಟ್ಟ ಬ್ಯಾಟ್ಸ್ಮನ್ಗಳು, ಭಾರತದ ಸೋಲಿಗೆ 5 ಕಾರಣಗಳಿವು
WTC Final: ಭಾರತದ ಸೋಲಿಗೆ ಕಿವೀಸ್ನ ಈ ಬೌಲರ್ ಪ್ರಮುಖ ಕಾರಣ! ಸೋಲಿನಲ್ಲೂ ಕೊಹ್ಲಿ ಕೊಂಚ ನಿರಾಳರಾಗಿದ್ಯಾಕೆ?