ನವದೆಹಲಿ: ಟ್ವಿಟರ್ (Twitter), ಫೇಸ್ಬುಕ್ (Facebook) ಸೇರಿದಂತೆ ಸಾಮಾಜಿಕ ಮಾಧ್ಯಮ (Social Media) ವೇದಿಕೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳ ಮೇಲ್ಮನವಿ ವಿಚಾರಣೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ‘ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ’ಗಳನ್ನು ರಚಿಸಲಿದೆ. ಬಳಕೆದಾರರು ತಮ್ಮ ಸಮಸ್ಯೆಗಳಿಗೆ ಸಾಮಾಜಿಕ ಮಾಧ್ಯಮಗಳ ಕುಂದುಕೊರತೆ ವೇದಿಕೆಗಳಲ್ಲಿ ಪರಿಹಾರ ಸಿಗದಿದ್ದಲ್ಲಿ ಅಥವಾ ಅವುಗಳ ಪರಿಹಾರದಿಂದ ಸಮಾಧಾನ ಹೊಂದಿರದಿದ್ದಲ್ಲಿ ಈ ಮೇಲ್ಮನವಿ ಸಮಿತಿ’ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟಾ (ಫೇಸ್ಬುಕ್, ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಕಂಪನಿ) ಹಾಗೂ ಮೈಕ್ರೋಬ್ಲಾಗಿಂಗ್ ವೇದಿಕೆ ಟ್ವಿಟರ್ ಸ್ವಯಂ ನಿಯಂತ್ರಿತ ಕುಂದುಕೊರತೆ ಪರಿಹಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿರುವ ಸಂದರ್ಭದಲ್ಲೇ, ಮೂವರು ಸದಸ್ಯರನ್ನೊಳಗೊಂಡ ‘ಕುಂದುಕೊರತೆ ಮೇಲ್ಮನವಿ ಸಮಿತಿ’ಗಳನ್ನು ರಚಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಉದ್ದೇಶಿಸಿದೆ.
ಇದನ್ನೂ ಓದಿ: WhatsApp: ವಾಟ್ಸ್ಆ್ಯಪ್ನಲ್ಲಿ ಹೊಸ ಫೀಚರ್: ಫೋಟೋ, ವಿಡಿಯೋ ಫಾರ್ವರ್ಡ್ ಮಾಡೋವಾಗ ಸಿಗುತ್ತೆ ಈ ಆಯ್ಕೆ
ಈ ವಿಚಾರವಾಗಿ ‘2021ರ ಮಾಹಿತಿ ತಂತ್ರಜ್ಞಾನ ಕಾಯ್ದೆ’ಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಕರಡು ಪ್ರತಿಯನ್ನು ಈಗಾಗಲೇ ಅಂತಿಮಗೊಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾವೆಲ್ಲ ದೂರುಗಳ ಮೇಲೆ ಕ್ರಮ?
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಚಾರಗಳು, ಪೇಟೆಂಟ್ ಉಲ್ಲಂಘನೆ, ತಪ್ಪು ಮಾಹಿತಿ, ದೇಶದ ಸಮಗ್ರತೆ ಹಾಗೂ ಭದ್ರತೆಗೆ ಧಕ್ಕೆ ತರುವಂಥ ಸಂದೇಶ ಪ್ರಕಟಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ಪರಿಹರಿಸಬೇಕಿದೆ. ಇದರಿಂದ ದೊರೆತ ಪರಿಹಾರದ ಬಗ್ಗೆ ಬಳಕೆದಾರರಿಗೆ ಅಸಮಾಧಾನವಿದ್ದಲ್ಲಿ ಅಥವಾ ತೃಪ್ತಿ ಇಲ್ಲದಿದ್ದಲ್ಲಿ ‘ಕುಂದುಕೊರತೆ ಮೇಲ್ಮನವಿ ಸಮಿತಿ’ಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.
30 ದಿನಗಳ ಒಳಗೆ ಪರಿಹಾರ
ಬಳಕೆದಾರರು ಸಲ್ಲಿಸಿರುವ ಮೇಲ್ಮನವಿ ದೂರುಗಳನ್ನು, ಆ ದೂರು ಸ್ವೀಕರಿಸಿದ 30 ದಿನಗಳ ಒಳಗಾಗಿ ಮೇಲ್ಮನವಿ ಸಮಿತಿ ಇತ್ಯರ್ಥಪಡಿಸಬೇಕು. ಈ ಸಮಿತಿ ನೀಡುವ ತೀರ್ಪಿಗೆ ಸಾಮಾಜಿಕ ಮಾಧ್ಯಮ ಕಂಪನಿಗಳು, ಮಧ್ಯವರ್ತಿಗಳು ಹಾಗೂ ಬಳಕೆದಾರರು ಬದ್ಧರಾಗಿರಬೇಕು ಎಂಬುದನ್ನು ಕರಡು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳ ಕುಂದುಕೊರತೆ ಅಧಿಕಾರಿಯ ತೀರ್ಮಾನದ ಮೇಲೆ ಅಸಮಾಧಾನವಿದ್ದರೆ ಅವರು ನೀಡಿದ ತೀರ್ಪು ಆದೇಶದ ಪ್ರತಿ ಕೈಸೇರಿದ ಬಳಿಕ 30 ದಿನಗಳ ಒಳಗಾಗಿ ಬಳಕೆದಾರರು ಮೇಲ್ಮನವಿ ಸಮಿತಿಗೆ ಮನವಿ ಸಲ್ಲಿಸಬಹುದು. ಒಂದು ಅಥವಾ ಅದಕ್ಕಿಂತ ಹೆಚ್ಚು ಮೇಲ್ಮನವಿ ಸಮಿತಿಗಳನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಕರಡು ತಿದ್ದುಪಡಿಯಲ್ಲಿ ಹೇಳಲಾಗಿದೆ.