Cyber Crime: ಸಾಮಾಜಿಕ ಜಾಲತಾಣದ ಮೂಲಕ ಮೋಸದ ಬಲೆ; ಎಚ್ಚರ ತಪ್ಪಿದರೆ ಅಪಾಯ ಖಚಿತ!

| Updated By: ganapathi bhat

Updated on: Oct 03, 2021 | 5:09 PM

Social Media: ಇತ್ತೀಚಿನ ಯುವಜನಾಂಗದ ಫೇಸ್‌ ಟು ಫೇಸ್ ಫೋನ್‌ ಕಾಲ್​ಗಳಿಂದ ಬಹಳ ದೊಡ್ಡ ಯಡವಟ್ಟುಗಳಾಗುತ್ತಿದೆ. ಯಾರದೋ ಕೈವಶದಲ್ಲಿ ಸಿಲುಕಿ ಆಟದ‌ ಬೊಂಬೆಗಳಂತಾಗುತ್ತಾರೆ ಜಾಲತಾಣ ಪ್ರಿಯರು.

Cyber Crime: ಸಾಮಾಜಿಕ ಜಾಲತಾಣದ ಮೂಲಕ ಮೋಸದ ಬಲೆ; ಎಚ್ಚರ ತಪ್ಪಿದರೆ ಅಪಾಯ ಖಚಿತ!
ಸೈಬರ್ ಕ್ರೈಂ
Follow us on

ಹಾಯ್‌.. ನಾನು ನಿಮ್ಮನ್ನು ನೋಡ್ಬೇಕು. ನಂಬರ್ ಕೊಡ್ತೀರ? ನಾನು ನಿಮಗೋಸ್ಕರ‌ ಏನು ಮಾಡೋಕು ರೆಡಿ ರೀ. ಹೌದ ಹಾಗಾದ್ರೆ ಬನ್ನಿ ವಿಡಿಯೋ ಕಾಲ್‌ಗೆ. ಹೀಗೆ‌ ಸಂಭಾಷಣೆಗಳು ಫೇಸ್‌ಬುಕ್‌, ಇಸ್ಟಾಗ್ರಾಂನಿಂದ‌ ವಾಟ್ಸಾಪ್‌ ವಿಡಿಯೋ ಫೋನಿಗೆ ತಿರುಗುತ್ತಿರುತ್ತವೆ. ಇದು ಜಗತ್ತಿನಾದ್ಯಂತ ಆಧುನಿಕವಾಗಿ ನಡೆಯುವ ಸಮಾಚಾರಗಳು. ಆದರೆ, ಇತ್ತೀಚಿನ ಯುವಜನಾಂಗದ ಫೇಸ್‌ ಟು ಫೇಸ್ ಫೋನ್‌ ಕಾಲ್​ಗಳಿಂದ ಬಹಳ ದೊಡ್ಡ ಯಡವಟ್ಟುಗಳಾಗುತ್ತಿದೆ. ಯಾರದೋ ಕೈವಶದಲ್ಲಿ ಸಿಲುಕಿ ಆಟದ‌ ಬೊಂಬೆಗಳಂತಾಗುತ್ತಾರೆ ಜಾಲತಾಣ ಪ್ರಿಯರು.

ಸಾಮಾನ್ಯವಾಗಿ ರೀಲ್ಸ್, ಟಿಕ್ ಟಾಕ್, ಮೋಜೊ ಇಂತಹ ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗುವವರು ಕೆಲವರಾದರೆ, ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್, ಇನ್ಸಾಸ್ಟಾಗ್ರಾಂ ಹೀಗೆ ಜಾಲತಾಣಗಳಿಗೆ ಹರಿಬಿಟ್ಟು ಫಾಲವರ್ಸ್ ಜಾಸ್ತಿ ಮಾಡುವವರು ಇನ್ನು ಕೆಲವರು. ಒಂದೆಡೆ ಜಾಲತಾಣಗಳು ಕಣ್ಣಿಗೆ‌ ಹಬ್ಬ ಎಣಿಸಿದರೂ, ಅದರಲ್ಲಿ ನಡೆಯುವ‌ ಅವಾಂತರಗಳು ಒಂದಲ್ಲ, ಎರಡಲ್ಲ.

ಇವುಗಳು ಮೋಜು ಮಸ್ತಿಗಾಗಿ ಇರುವಂತಹುದು ನಿಜ. ಆದರೆ ಅದರಲ್ಲಿ ಇರುವ‌ ಅಪಾಯ ಎಂಥವರನ್ನೂ ಸಾವಿನ ಅಂಚಿಗೆ ದೂಡುವ‌ ತಾಕತ್ತು ಹೊಂದಿರುತ್ತದೆ ಎಂದರೆ ಸುಳ್ಳಲ್ಲ. ಸಾಮಾಜಿಕ ಜಾಲತಾಣಗಳಿಂದಲೇ‌ ಹೆಣ್ಣು ಮಕ್ಕಳ ಅಶ್ಲೀಲ ಚಿತ್ರಗಳು ಬೇರೆ ಯಾರದೋ ಪಾಲಾಗುವ ಸಾಧ್ಯತೆಗಳು ಇತ್ತೀಚಿಗೆ‌ ಬಹಳಷ್ಟು ನಡೆದಿವೆ. ಅಲ್ಲಿರುವ‌ ಕ್ರಿಮಿನಲ್ಸ್‌ಗಳು ಅವರಿಗೆ ಬೇಕಾದ‌ ರೀತಿಯಲ್ಲಿ ಸಮಸ್ಯೆ ಹುಟ್ಟುಹಾಕಿಸಿದ‌ ನಿದರ್ಶನಗಳು ಕಾಲಕ್ಕೆ‌ ತಕ್ಕಂತೆ‌ ಹೆಚ್ಚಾಗುತ್ತಿವೆ. ಇಂತಹ ಕ್ರಿಮಿನಲ್ಸ್​ಗಳನ್ನು ಸೈಬರ್ ಕ್ರೈಮ್​ಗೆ ಒಳಪಡಿಸಲಾಗುತ್ತದೆ. ಸೈಬರ್ ಕ್ರೈಮ್​ಗಳು ಹೆಚ್ಚಾಗುವಂತೆ ಸಾಮಾಜಿಕ ಜಾಲತಾಣಗಳೂ ಹೆಚ್ಚಾಗುತ್ತಿವೆ. ವರ್ಷಕ್ಕೆ‌ 7 ಸಾವಿರದಂತೆ ಈ ಪ್ರಕರಣಗಳು ದಾಖಲಾಗುತ್ತಿವೆ.

ಮಾರಕವಾಗಿದೆ ಹನಿಟ್ರ್ಯಾಪ್
ಸಾಮಾಜಿಕ ಜಾಲತಾಣದಲ್ಲಿ ಒಂದು ಹೆಣ್ಣು ಅಥವಾ ಗಂಡು ಪರಸ್ಪರ ವೈಯಕ್ತಿಕ ಸಂಬಂಧಗಳನ್ನು ಇಟ್ಟುಕೊಳ್ಳುವ ಘಟನೆಗಳು ನಡೆದಿರುತ್ತದೆ. ಇಂತಹ ಸಮಯದಲ್ಲಿ ಹನಿಟ್ರ್ಯಾಪ್ ಎಂಬ ಮೋಸದ ಜಾಲ ಗರಿಗೆದರುವ ಅಪಾಯವೂ ಇದೆ. ಅಂತಹ ಸಂದರ್ಭಗಳಲ್ಲಿ ವ್ಯಕ್ತಿಗಳಿಗೆ ಬೆದರಿಕೆ ಒಡ್ಡಿ 50 ಸಾವಿರದಿಂದ 1 ಲಕ್ಷದ ವರೆಗೆ ಹಣ ಪಡೆದು ಸುಮ್ಮನಾಗುವವರೂ ಇದ್ದಾರೆ. ಇದರ ಜತೆಗೆ ಕೊಡದೆ ಹೋದಲ್ಲಿ ಎಡಿಟ್ ಮಾಡಿದ ವೀಡಿಯೋವನ್ನು ಬಳಸಿ ಬ್ಲಾಕ್‌ ಮೇಲ್‌ ಮಾಡುವವರೂ ಇದ್ದಾರೆ. ಇಂತಹ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ಧಮ್ಕಿ ಹಾಕಿ ಹೇಗಾದರೂ ಮಾಡಿ ಹಣ ವಸೂಲಿ ಮಾಡುತ್ತಾರೆ.

ಇದು ಪ್ರಸ್ತುತ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಮಾನ ಮರ್ಯಾದೆಗೆ‌ ಅಂಜುವವರನ್ನು ಟಾರ್ಗೆಟ್ ಮಾಡಿ ವಾಟ್ಸಾಪ್, ಇನ್​ಸ್ಟಾಗ್ರಾಂ ಹೀಗೆ‌ ಅನೇಕ ಜಾಲತಾಣಗಳಲ್ಲಿ ಗುರುತಿಸಿ ಅವರಿಗೆ‌ ಮೆಸೇಜ್‌ ಕಳುಹಿಸಿ ಮರುಳು ಮಾಡುತ್ತಾರೆ. ಇಂತಹ‌ ಗ್ಯಾಂಗ್‌ಗಳಿಗೆ‌ ಅದೆಷ್ಟೋ ಜೀವಗಳು ಸಿಲುಕಿ ನಲುಗಿವೆ.

ಸಾಮಾಜಿಕ ಜಾಲತಾಣ ಎಂಬ ರಾಕ್ಷಸ
ಇದಕ್ಕೆಲ್ಲ ದಾರಿ ಮಾಡಿಕೊಡುವುದೇ ಇನ್​ಸ್ಟಾಗ್ರಾಂ, ಫೇಸ್‌ಬುಕ್‌ ನಂತಹ ಸಾಮಾಜಿಕ ಜಾಲತಾಣಗಳು. ಇವುಗಳಿಂದ ನಡೆಯುವ ಅವಾಂತರ ಅಷ್ಟಿಷ್ಟಲ್ಲ. ರೀಲ್ಸ್, ಸ್ಟೋರಿ, ಪೋಸ್ಟ್ ಹಾಕಿ ಹರಿಬಿಟ್ಟರೆ, ನೂರಾರು ಲೈಕ್ಸ್ ಮತ್ತು ಕಮೆಂಟುಗಳು. ಆದರೆ ಅಷ್ಟು ಮಾತ್ರವಲ್ಲ. ಹೀಗೆ ಫೋಟೋಗಳನ್ನು ಅಪ್ಡೇಟ್‌ ಮಾಡುವುದರಿಂದ ಕೆಲವೊಮ್ಮೆ ಸಮಸ್ಯೆಗಳು ಹುಡುಕಿ ಬರುವುದು ಕೂಡ ಇದೆ. ಏಕೆಂದರೆ‌ ಕೆಲವರು ಅವುಗಳನ್ನು ಪೋಸ್ಟ್ ಮಾಡಿದ‌ ಕೂಡಲೇ ಅವುಗಳನ್ನು ತೆಗೆದು ತಮಗೆ‌ ಇಷ್ಟ ಬಂದಹಾಗೆ ಚಿತ್ರ-ವಿಚಿತ್ರವಾಗಿ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡಲು ಶುರು ಮಾಡುತ್ತಾರೆ. ಅದರಲ್ಲೂ ಮಹಿಳೆಯರ ಫೋಟೋಗಳನ್ನು ಹಾಕಿ ಇನ್ನೊಬ್ಬರ ಜೊತೆ‌ ಬ್ಲ್ಯಾಕ್ ಮೇಲ್ ಗೆ‌ ಇಳಿಯುತ್ತಾರೆ. ಇಂತಹ ಸೈಬರ್‌ ಕೃತ್ಯಕ್ಕೆ‌ ಬಲಿಯಾಗುವ ಬಹುತೇಕರು ಮಹಿಳೆಯರು. ಮಹಿಳೆಯರ ಡೀಟೇಲ್ಸ್ ತೆಗೆದು ಅವರನ್ನು ಆಟವಾಡಿಸುತ್ತಾರೆ. ಈ ಅಪಾಯದ ಜಾಲಕ್ಕೂ ಸಿಗದಂತೆ ನಾವು ಎಚ್ಚರಿಕೆ ವಹಿಸಬೇಕಿದೆ.

ಹರಿದಾಡುವ ಪಾಸ್ ವರ್ಡ್ ಗಳು
ಯಾರಿಂದಲೇ ಆಗಲಿ ಸ್ವಲ್ಪ ಸಲಿಗೆ‌ ಸಿಕ್ಕಿದೆ‌ ಅಂದ‌ ಕೂಡಲೇ ಜನರು ಅವರತ್ತ ಬಾಗುವುದು ಸಹಜ. ಅವರ‌ ಮಾತಿಗೆ‌ ಮರುಳಾಗಿ ಎಲ್ಲಾ‌ ಮಾತುಗಳನ್ನು ಆಲಿಸುತ್ತಾರೆ, ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಆದರೆ ಅಪರಿಚಿತರೊಂದಿಗೆ ಅಥವಾ ಪರಿಚಿತರೊಂದಿಗೂ ಸಲುಗೆ ಹೆಚ್ಚು ಬೆಳೆಸಿಕೊಂಡು, ಫೇಸ್‌ಬುಕ್‌, ಇನ್ಸ್ಟಾಗ್ರಾಂ, ಇಮೇಲ್‌ ನ ಪಾಸ್​ವರ್ಡ್ ಗಳನ್ನು ಕೊಡುವುದು ಸೂಕ್ತವಲ್ಲ. ಎಷ್ಟೇ ಹತ್ತಿರದವರಾದರೂ ತಮ್ಮ ಮೊಬೈಲ್ ನ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಡಬಾರದು. ಇದರೊಂದಿಗೆ‌ ನಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು ಲಾಗಿನ್‌ ಮಾಡುವಾಗ ಎಚ್ಚರದಿಂದಿರಬೇಕು. ಸಿಕ್ಕ ಸಿಕ್ಕ ಕಂಪ್ಯೂಟರ್ ಗಳಲ್ಲಿ ತಮ್ಮ ಖಾತೆಗೆ ಲಾಗ್ ಇನ್‌ ಮಾಡಿ, ನಂತರ ಲಾಗ್ ಔಟ್ ಆಗದೆ ಕಷ್ಟಕ್ಕೆ‌ ಸಿಲುಕಿದವರೂ ಕೂಡ ಇದ್ದಾರೆ. ಇಂತಹ ತಪ್ಪುಗಳನ್ನು ಮಾಡುವ‌ ಮೊದಲು, ಮುಂದಾಲೋಚನೆ ಇದ್ದರೆ ಮುಂಬರುವ ಅನಾಹುತಗಳನ್ನು ತಪ್ಪಿಸಬಹುದು.

ಸಾಲ, ಬಡ್ಡಿ ಎಂದು ಮೋಸ
ಸಾಮಾಜಿಕ ಜಾಲತಾಣಗಳಲ್ಲಿ ಸಾಲ-ಬಡ್ಡಿ ಕೇಳುವವರೂ ಹೆಚ್ಚು. ಸಾಲ-ಬಡ್ಡಿಯ ಬಗ್ಗೆ‌ ಮಾತನಾಡಿ ಜನರನ್ನು ಆಮಿಷಕ್ಕೆ‌ ಸಿಲುಕಿಸುತ್ತಾರೆ. ಇದು ಬ್ಯಾಂಕ್ ನವರಿಂದ‌ ನಡೆಯುವ‌ ವ್ಯವಹಾರವಲ್ಲ. ಬದಲಾಗಿ ಅನಾಮಿಕರಿಂದ‌ ನಡೆಯುವ‌ ವಸೂಲಿ. ಸಾಲ-ಬಡ್ಡಿ ಹೆಸರಲ್ಲಿ ಎಷ್ಟೋ ಮಂದಿ ಮೋಸ ಹೋದವರಿದ್ದಾರೆ. ಯಾವುದೋ ಮೂಲದಿಂದ ಫೋನ್‌ ನಂಬರ್‌ ಪಡೆದು ಕರೆ ಮಾಡುತ್ತಾರೆ. ನಂತರ‌ ಅವರಲ್ಲಿ ನಂಬಿಕೆ‌ ಹುಟ್ಟಿಸುವಂತೆ‌ಯೂ ಮಾತನಾಡುತ್ತಾರೆ‌. ಆ ಸಮಯದಲ್ಲಿ ಬ್ಯಾಂಕ್ ಪುಸ್ತಕ, ಆಧಾರ್‌ ಕಾರ್ಡ್ ಮತ್ತು ಎಟಿಎಂ ಇದ್ದಲ್ಲಿ ಅವುಗಳ ಎಲ್ಲಾ ವಿವರಗಳನ್ನು ಪಡೆದು ದೊಡ್ಡ ಮಟ್ಟದಲ್ಲಿ ಲೂಟಿ ಮಾಡುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿನ ಗೆಳೆಯ-ಗೆಳತಿಯರಿಗೆ ಯಾವುದೇ ರೀತಿಯ ವೀಡಿಯೋಗಳನ್ನು ಅಥವಾ ವಿಡಿಯೋ‌ ಕಾಲ್ ಗಳನ್ನು ಹಂಚದೆ‌ ಉಳಿಯುವುದು ಉತ್ತಮ. ಯಾರದೋ ಮಾತು ಕೇಳಿ ವೀಡಿಯೋಗಳನ್ನು ಮಾಡಿ ಕಳುಹಿಸಿದರೆ‌ ಅಥವಾ ವಿಡಿಯೋ ಕಾಲ್ ಮಾಡಿದರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವ‌ ಸಾಧ್ಯತೆಗಳು ತುಂಬಾ ಹೆಚ್ಚಿವೆ. ಈ ಜಾಲದಲ್ಲಿ ಒಮ್ಮೆ‌ ಸಿಲುಕಿದರೆ‌ ಆಚೆ‌ ಬರುವ‌ ಸಾಧ್ಯತೆ ತುಂಬಾ‌ ಕಷ್ಟ.

18 ತಿಂಗಳಲ್ಲಿ ದೇಶದಾದ್ಯಂತ 3,17,439 ಸೈಬರ್ ಅಪರಾಧಗಳು ವರದಿ
ಇಂತಹ‌ ಹಲವಾರು ದುಷ್ಕೃತ್ಯಗಳು ನಡೆಯುವುದು ಸಾಮಾಜಿಕ ಜಾಲತಾಣದಲ್ಲಿಯೇ ಎಂದರೆ ನಂಬಲೇಬೇಕು. ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಇಂತಹ ಸೈಬರ್‌ ಕಳ್ಳರು ಉತ್ತರ ಭಾರತ ಮತ್ತು ವಿದೇಶದಲ್ಲಿ ಕುಳಿತು ತಮ್ಮ ಯಾವುದೇ ವಿವರ ಬಿಟ್ಟುಕೊಡದೆ ಲಕ್ಷಾಂತರ ರೂಪಾಯಿಗಳನ್ನು ದೋಚುತ್ತಾರೆ.

ಕಳೆದ 18 ತಿಂಗಳಲ್ಲಿ ದೇಶದಾದ್ಯಂತ 3,17,439 ಸೈಬರ್ ಅಪರಾಧಗಳು ವರದಿಯಾಗಿವೆ. ಅದರಲ್ಲೂ ಕರ್ನಾಟಕದಲ್ಲಿ 21,562 ಪ್ರಕರಣ ದಾಖಲಾಗಿವೆ. ದೇಶದಲ್ಲಿ ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿಗಳು ಸೈಬರ್‌ ಕಳ್ಳರ‌ ಪಾಲಾಗುತ್ತಿವೆ. ಪ್ರತೀ ವರ್ಷ 7ರಿಂದ 10 ಸಾವಿರ ಕೇಸ್ ಗಳು ಪೋಲಿಸ್ ಠಾಣೆ ಮೆಟ್ಟಿಲೇರುತ್ತವೆ. ಈ ಕ್ರೈಂಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿ ನಿಂತಿದೆ. ಕೆಲವೊಂದೆ‌ಡೆ ಸಮಸ್ಯೆಗಳನ್ನು ಬೇಧಿಸಲಾಗದೆ ಆತ್ಮಹತ್ಯೆ ಮಾಡುವವರೂ ಸಾಕಷ್ಟು ಜನರು. ಸೈಬರ್ ಪೋಲಿಸರ ವ್ಯವಸ್ಥೆ ಕಡಿಮೆ‌ ಪರಿಣಾಮಕಾರಿ ಆಗಿರುವುದೇ ಒಂದು ರೀತಿಯಲ್ಲಿ ಈ ಕೃತ್ಯಗಳಿಗೆ ಕಾರಣವಾಗಿದೆ. ಇನ್ನೊಂದೆಡೆ ಅದಕ್ಕೆ‌ ಬೇಕಾಗಿರುವ‌ ಉಪಕರಣಗಳು ಮತ್ತು ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ.

ಬರಹ: ವೈಶಾಲಿ ಶೆಟ್ಟಿ, ಪೂವಾಳ

ಇದನ್ನೂ ಓದಿ: ಸೈಬರ್ ಕ್ರೈಂ ವಿಭಾಗ ಬಲಪಡಿಸಲು ಇನ್ಫೋಸಿಸ್​ ನೆರವು: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಇದನ್ನೂ ಓದಿ: Customer Alert: ಭಾರತದ ಬ್ಯಾಂಕ್ ಗ್ರಾಹಕರ ವಂಚಿಸುತ್ತಿರುವ ಸೈಬರ್ ದಾಳಿಕೋರರ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚನೆ