Customer Alert: ಭಾರತದ ಬ್ಯಾಂಕ್ ಗ್ರಾಹಕರ ವಂಚಿಸುತ್ತಿರುವ ಸೈಬರ್ ದಾಳಿಕೋರರ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚನೆ
ಸೈಬರ್ ದಾಳಿಕೋರರು ಹೊಸ ಬಗೆಯಲ್ಲಿ ಭಾರತೀಯ ಬ್ಯಾಂಕಿಂಗ್ ಗ್ರಾಹಕರ ವಂಚನೆಯಲ್ಲಿ ತೊಡಗಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.
ಬ್ಯಾಂಕ್ ಗ್ರಾಹಕರೇ ಎಚ್ಚರ! ಭಾರತದ ಬ್ಯಾಂಕ್ ಗ್ರಾಹಕರನ್ನು ವಂಚಿಸುವ ಗುರಿಯೊಂದಿಗೆ ಮೋಸಗಾರರು ಹೊಸ ತಂತ್ರದೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ಇಂಟರ್ನೆಟ್ ಬ್ಯಾಂಕಿಂಗ್ ಕ್ರೆಡೆನ್ಷಿಯಲ್ಸ್, ಮೊಬೈಲ್ ಸಂಖ್ಯೆ ಮತ್ತು ಒಟಿಪಿಯಂಥ ಸೂಕ್ಷ್ಮ ಮಾಹಿತಿಯನ್ನು ಕಲೆಹಾಕಲು ವಂಚನೆಯ ವಹಿವಾಟುಗಳನ್ನು ನಡೆಸುತ್ತಿದ್ದಾರೆ ಎಂದು ಸೈಬರ್ ಭದ್ರತಾ ದಳದಿಂದ ಎಚ್ಚರಿಕೆಯನ್ನು ನೀಡಲಾಗಿದೆ. ವಿಶಿಷ್ಟ ವೆಬ್ ಅಪ್ಲಿಕೇಷನ್ ಬಳಸಿಕೊಂಡು, ವಂಚಕ ಪ್ಲಾಟ್ಫಾರ್ಮ್ ಮೂಲಕ ಈ ದುಷ್ಟ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. “ಭಾರತೀಯ ಬ್ಯಾಂಕಿಂಗ್ ಗ್ರಾಹಕರನ್ನು ಗುರಿ ಮಾಡಿಕೊಂಡು, ngrok ಪ್ಲಾಟ್ಫಾರ್ಮ್ ಬಳಸಿ, ಹೊಸ ಬಗೆಯ ವಂಚನೆ ದಾಳಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ.” ಭಾರತೀಯ ಬ್ಯಾಂಕ್ಗಳ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ಗಳಂತೆ ವೆಬ್ಸೈಟ್ಗಳನ್ನು ಮಾಡಿ, ngrok ಪ್ಲಾಟ್ಫಾರ್ಮ್ ಮೂಲಕ ದುಷ್ಕರ್ಮಿಗಳು ಬೆದರಿಕೆಯೊಡ್ಡುತ್ತಿದ್ದಾರೆ ಎಂಬುದು CERT- In ಮಂಗಳವಾರದಂದು ಹೊರಡಿಸಿದ ಎಚ್ಚರಿಕೆಯಿಂದ ತಿಳಿದುಬಂದಿದೆ.
ಸೈಬರ್ ದಾಳಿ ಹಾಗೂ ಹ್ಯಾಕಿಂಗ್ ವಿರುದ್ಧ ರಕ್ಷಣೆ ಮಾಡುವ ಸರ್ಕಾರದ ಅಂಗ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ಟೀಮ್ ಅಥವಾ CERT-In. ಫಿಶಿಂಗ್ ಅಂದರೆ ನಂಬಿಕಸ್ತ ಸಂಸ್ಥೆ ಎಂಬ ರೀತಿ ಬಿಂಬಿಸಿಕೊಂಡು, ದಾಳಿಕೋರರು ವಂಚನೆ ಮಾಡುತ್ತಾರೆ. ಸಂತ್ರಸ್ತರು ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ನೋಡಿಕೊಂಡು, ಪಾಸ್ವರ್ಡ್ಗಳು, ಲಾಗ್ಇನ್, ಕ್ರೆಡೆನ್ಷಿಯಲ್ಸ್, ಒನ್-ಟೈಮ್ ಪಾಸ್ವರ್ಡ್ಗಳಿಗೆ ಕನ್ನ ಹಾಕಲಾಗುತ್ತದೆ. ಆದ್ದರಿಂದ ತಜ್ಞರು ನೀಡುವ ಸಲಹೆ ಏನೆಂದರೆ, ಅನುಮಾನ ಮೂಡಿಸುವಂಥ ಮೊಬೈಲ್ ಸಂಖ್ಯೆಗಳಿಂದ ಯಾವುದಾದರೂ ಎಸ್ಸೆಮ್ಮೆಸ್ ಬಂದಲ್ಲಿ ಅದರೊಳಗಿನ ಲಿಂಕ್ ಕ್ಲಿಕ್ ಮಾಡಬಾರದು. ಸರಿಯಾಗಿ ಬ್ಯಾಂಕ್ನಿಂದಲೇ ಬಂದಂಥ ಎಸ್ಸೆಮ್ಮೆಸ್ಗಳಿಗೆ ಕಳುಹಿಸಿದವರ ಐ.ಡಿ. (ಬ್ಯಾಂಕ್ನ ಹೆಸರು ಚಿಕ್ಕದಾಗಿಯಾದರೂ) ಇರುತ್ತದೆ. ಇನ್ನೂ ಮುಂದುವರಿದು, ವೆಬ್ಸೈಟ್ ಡೊಮೈನ್ ಸ್ಪಷ್ಟವಾಗಿ ಇದ್ದಲ್ಲಿ ಮಾತ್ರ ಯುಆರ್ಎಲ್ ಮೇಲೆ ಕ್ಲಿಕ್ ಮಾಡುವಂತೆ ಸಲಹೆ ನೀಡಲಾಗುತ್ತಿದೆ. ಒಂದು ವೇಳೆ ಅನುಮಾನ ಬಂದಲ್ಲಿ ಆ ಸಂಸ್ಥೆಯ ವೆಬ್ಸೈಟ್ ಅನ್ನು ಸರ್ಚ್ ಎಂಜಿನ್ನಲ್ಲಿ ಹುಡುಕುವುದು ಉತ್ತಮ.
bit.ly ಹಾಗೂ ಸಣ್ಣ ಯುಆರ್ಎಲ್ಗಳು ಇದ್ದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಇನ್ನು ವೆಬ್ಸೈಟ್ಗಳನ್ನು ಬ್ರೌಸ್ ಮಾಡುವಾಗ ಅವುಗಳ ಅಕ್ಷರಗಳನ್ನು ಸರಿಯಾಗಿ ಗಮನಿಸಬೇಕು. ತಪ್ಪಾದ ಅಕ್ಷರಗಳು ಅಥವಾ ಯುಆರ್ಎಲ್ನ ಅಕ್ಷರಗಳಲ್ಲಿ ತಪ್ಪಾಗಿರುವುದು… ಇಂಥವುಗಳ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇನ್ನು ಯಾವಾಗಲೂ ಹೇಳುವ ಮಾತೆಂದರೆ, ಇಂಟರ್ನೆಟ್ ಸಂಪರ್ಕ ಬಳಸುವಾಗ, ಬ್ರೌಸ್ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕು. ಆ್ಯಂಟಿ-ವೈರಸ್, ಆ್ಯಂಟಿ-ಸ್ಪೈವೇರ್ ಸಾಫ್ಟ್ವೇರ್ಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ಗ್ರಾಹಕರಿಗೆ ತಮ್ಮ ಖಾತೆಯಲ್ಲಿ ಅನುಮಾನಾಸ್ಪದವಾದ ಚಟುವಟಿಕೆ ನಡೆಯುತ್ತಿದೆ ಎಂದಾದಲ್ಲಿ ಕೂಡಲೇ ಆಯಾ ಬ್ಯಾಂಕ್ಗೆ ಮಾಹಿತಿ ನೀಡಬೇಕು.
ಇದನ್ನೂ ಓದಿ: How To: ಕೊರೊನಾ ಕಾಲದಲ್ಲಿ ಹೆಚ್ಚುತ್ತಿದೆ ಸೈಬರ್ ದಾಳಿ; ಸುರಕ್ಷಿತ ಆನ್ಲೈನ್ ಶಾಪಿಂಗ್ ಹೇಗೆ?
ಇದನ್ನೂ ಓದಿ: ಸೈಬರ್ ಕ್ರೈಂ ತಡೆಯಲು ಬೆಂಗಳೂರು ಪೊಲೀಸರು ಯಶಸ್ವಿ; ವಂಚಕರ ಖಾತೆಗೆ ಹೋಗಬೇಕಿದ್ದ 48 ಕೋಟಿ ರೂಪಾಯಿ ವಾಪಸ್!
(Customer Alert: About New Way Of Phishing Attack On Indian Banking Customers)
Published On - 10:15 pm, Wed, 11 August 21