
ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದರೂ ಡೆಲ್ಟಾ ಪ್ಲಸ್ ರೂಪಾಂತರಿ ಕಾಣಿಸಿಕೊಂಡಿರುವುದರಿಂದ ಹಾಗೂ ಅನೇಕ ತಜ್ಞರು ಮೂರನೇ ಅಲೆಯ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿರುವುದರಿಂದ ಲಸಿಕೆ ವಿತರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ದೇಶದ ಎಲ್ಲಾ ಜನರಿಗೆ ಲಸಿಕೆ ತಲುಪಿಸಬೇಕೆಂಬ ಕಾರಣಕ್ಕೆ ಭಾರತ ಸರ್ಕಾರ ಆನ್ಲೈನ್ ನೋಂದಣಿ ಮಾಡಿಕೊಳ್ಳದವರಿಗೂ, ಸೂಕ್ತ ದಾಖಲೆಗಳನ್ನು ಹೊಂದಿಲ್ಲದವರಿಗೂ ಲಸಿಕೆ ನೀಡಲು ಕ್ರಮಕೈಗೊಂಡಿದೆ. ಆದರೆ, ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆದವರಿಗೆ ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವೊಂದು ಕಾಣುತ್ತದೆ. ಒಂದುವೇಳೆ ಅದರಲ್ಲಿ ಹೆಸರು, ವಯಸ್ಸು, ಲಿಂಗ ಇತ್ಯಾದಿ ವಿವರಗಳೇನಾದರೂ ತಪ್ಪಾಗಿ ನಮೂದಿಸಲ್ಪಟ್ಟರೆ ಏನು ಮಾಡಬೇಕು? ಅದನ್ನು ಕೊವಿನ್ ಪೋರ್ಟಲ್ ಮೂಲಕ ಸರಿಪಡಿಸಬಹುದೇ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಏನೇ ತಪ್ಪುಗಳಿದ್ದರೂ ನೀವು ಚಿಂತೆ ಮಾಡಬೇಕಿಲ್ಲ. ಏಕೆಂದರೆ ಅದನ್ನು ಸುಲಭವಾಗಿ ಸರಿಪಡಿಸಿಕೊಳ್ಳಬಹುದು ಎಂದು ಭಾರತ ಸರ್ಕಾರವೇ ತಿಳಿಸಿದೆ. ಹೆಸರು, ಭಾವಚಿತ್ರ, ಗುರುತಿನ ಚೀಟಿ ಸಂಖ್ಯೆ, ಜನ್ಮ ದಿನಾಂಕ ಹಾಗೂ ಲಿಂಗದ ಕುರಿತಾದ ವಿವರಗಳನ್ನು ಕೊವಿನ್ ಪೋರ್ಟಲ್ನಲ್ಲೇ ಸರಿಪಡಿಸಬಹುದಾಗಿದೆ. ಇದನ್ನು ಆರೋಗ್ಯ ಸೇತುವಿನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿ ತಿಳಿಸಲಾಗಿದೆ.
ವಿವರಗಳನ್ನು ಸರಿಪಡಿಸಲು ಏನು ಮಾಡಬೇಕು?
ಹಂತ 1: ಕೊವಿನ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಹಂತ 2: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಓಟಿಪಿ ಸಹಾಯದಿಂದ ಲಾಗಿನ್ ಆಗಿ
ಹಂತ 3: ವೆಬ್ಸೈಟ್ನ ಮೇಲ್ಭಾಗದ ಬಲತುದಿಯಲ್ಲಿ ರೈಸ್ ಆ್ಯನ್ ಇಶ್ಯೂ ಎಂಬ ಆಯ್ಕೆ ಕಾಣುತ್ತದೆ
ಹಂತ 4: ಅದರಲ್ಲಿ ಕರೆಕ್ಷನ್ ಇನ್ ವ್ಯಾಕ್ಸಿನ್ ಸರ್ಟಿಫಿಕೇಟ್ ಆಯ್ಕೆಯನ್ನು ಆರಿಸಿ
ಹಂತ 5: ಸರಿಪಡಿಸಬೇಕಾದ ವಿಷಯಗಳನ್ನೆಲ್ಲಾ ಸರಿ ಮಾಡಿ ಮುಂದುವರೆಯಿರಿ
ಹಂತ 6: ನೀವು ಏನೇನು ಬದಲಾವಣೆ ಮಾಡಿದ್ದೀರಿ ಎನ್ನುವುದು ಕಾಣಲಿದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಿ ಖಚಿತಪಡಿಸಿ.
ವಿ.ಸೂ: ಪ್ರಮಾಣಪತ್ರದಲ್ಲಿನ ಬದಲಾವಣೆಗಳನ್ನು ಕೇವಲ ಒಂದು ಬಾರಿ ಮಾತ್ರ ಮಾಡಬಹುದಾದ್ದರಿಂದ ಜಾಗರೂಕತೆಯಿಂದ ವಿವರಗಳನ್ನು ಸರಿಪಡಿಸಿ. ಕೊವಿನ್ ಪೋರ್ಟಲ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:
Corona Vaccine: ಎರಡು ಡೋಸ್ ಕೊರೊನಾ ಲಸಿಕೆ ಪಡೆದವರಿಗೆ ಶುಭಸುದ್ದಿ: ಐಸಿಎಂಆರ್ ಅಧ್ಯಯನದ ಪ್ರಾಥಮಿಕ ವರದಿ
ಲಸಿಕೆ ಪ್ರಮಾಣಪತ್ರದ ಮೇಲೆ ಡಿಜಿಟಲ್ ಐಡಿ ನಮೂದು? ಸಮಾಜದಲ್ಲಿ ಮೂಡಿದೆ ಪ್ರಶ್ನೆ