ಇಂದು ಕಂಪ್ಯೂಟರ್, ಸ್ಮಾರ್ಟ್ಫೋನ್ಗಳಲ್ಲಿ (Smartphones) ಕೇವಲ ಇಂಗ್ಲಿಷ್ ಭಾಷೆ ಮಾತ್ರವಲ್ಲದೆ ಅನೇಕ ಉಪ ಭಾಷೆಗಳು ಕೂಡ ಲಭ್ಯವಿದೆ. ಆದರೆ, ಇವುಗಳ ಬಳಕೆ ಮಾತ್ರ ತೀರಾ ಕಡಿಮೆ. ಕರ್ನಾಟಕದಲ್ಲಿ ಕನ್ನಡ ಕೀಬೋರ್ಡ್ ಉಪಯೋಗಿಸಿ ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ನಲ್ಲಿ ಬರೆಯುವವರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ. ಕನ್ನಡ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡಕ್ಕೆ ಅಗ್ರಪಂಕ್ತಿ. ಇಷ್ಟೆಲ್ಲ ಇದ್ದರೂ ಭಾಷಾ ಸಂವಹನಕ್ಕೆ ಹೋಲಿಕೆ ಮಾಡಿದರೆ ಕನ್ನಡ ಮಾತನಾಡುವವರ ಸಂಖ್ಯೆ ಕೂಡ ಬಹಳ ವಿರಳ.
ವಿಶ್ವ ಮಾನವ ಕುವೆಂಪು ಹೇಳಿದಂತೆ, ಎಲ್ಲಾದರೂ ಇರು ಎಂತಾದರೂ ಇರು ನೀನು ಕನ್ನಡದ ಕಂದನಾಗಿರು. ಬಹುಶಃ ಇಂದಿಗೆ ಈ ಮಾತು ಅಪ್ರಸ್ತುತ. ಇತರೆ ಬಾಷಾ ಪ್ರಭಾವದಿಂದಾಗಿ ಕನ್ನಡದ ಅಚ್ಚ ಸೂಗಡಿನ ಭಾಷೆಗಳು ನೆಲಕಚ್ಚಿದೆ ಎಂದರೆ ತಪ್ಪಾಗಲಾರದು. ತಮಿಳು, ತೆಲುಗು ಅಥವಾ ಇತರೆ ಭಾಷೆಗಳಿಗೆ ಹೋಲಿಸಿದರೆ ಟೆಕ್ ಲೋಕದಲ್ಲೂ ಕನ್ನಡ ಮೂಲೆಗುಂಪಾಗಿದೆ.
ಇತರೆ ಭಾಷೆಗಳನ್ನು ಗೂಗಲ್ನಲ್ಲಿ ಕನ್ನಡಕ್ಕೆ ಭಾಷಾಂತರ ಮಾಡಿದರೆ ಅದು ಸಾಮಾನ್ಯ ಮನುಷ್ಯರಿಗೆ ಅರ್ಥವಾಗುವ ರೀತಿ ಇರುವುದಿಲ್ಲ. ಇಂದು ಸ್ಮಾರ್ಟ್ಫೋನ್ಗಳಲ್ಲಿ ಕನ್ನಡವನ್ನು ಬಳಸುವ ಕೀಬೋರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ ನಿಜ. ಆದರೆ, ಅದು ಸುಲಭವಾದ ರೀತಿಯಲ್ಲಿ ಇಲ್ಲ. ಕನ್ನಡ ಕೀ-ಬೋರ್ಡ್ ಬಳಸುವವರ ಸಂಖ್ಯೆ ತೀರಾ ಕಡಿಮೆ. ಕೆಲವರು ಇಂಗ್ಲಿಷ್ ಕೀ-ಬೋರ್ಡ್ನಲ್ಲಿಯೆ ಕನ್ನಡದ ಅಕ್ಷರವನ್ನು ಟೈಪ್ ಮಾಡುತ್ತಿದ್ದಾರೆ.
ಇಡೀ ಜಗತ್ತಿನಲ್ಲಿ 2000 ಕ್ಕಿಂತಲೂ ಅಧಿಕ ಭಾಷೆಗಳಿವೆ ಆದರೆ ಒಂದು ಮಗು ಕನಿಷ್ಟ ಅಂದರೂ ಮಾತೃಭಾಷೆ, ವ್ಯವಹಾರಿಕ ಭಾಷೆಯಾಗಿ ಒಂದಿಷ್ಟು ಭಾಷೆಯನ್ನು ಅರಿಯುತ್ತದೆ. ನಿಜಕ್ಕೂ ಭಾಷೆ ಇರುವುದೇ ಭಾವನೆಯ ಅಭಿವ್ಯಕ್ತಿಗಾಗಿ, ಸಂವಹನ ಮಾದ್ಯಮಕ್ಕಾಗಿ. ಕಾಕತಾಳೀಯ ಎಂಬಂತೆ ನಮ್ಮಲ್ಲಿ ಆದಿವಾಸಿ ಸಮುದಾಯಗಳು ಇಂದಿಗೂ ಭಾಷೆ ಅರಿಯದೆ ಸಮಾಜದ ಮುನ್ನಲೆಗೆ ಬರುವಲ್ಲಿ ಸೋತಿವೆ. ಕನ್ನಡವನ್ನು ಮೊದಲು ಆಡಳಿತ ಭಾಷೆಯನ್ನಾಗಿ ಮಾಡಿದ್ದೇ ಕದಂಬರು. ಹಾಗದರೆ ಕನ್ನಡ ಇತಿಹಾಸದ ಬಗ್ಗೆ ಬೇರೆ ದಾಖಲೆಗಳು ತಡಕಾಡುವ ಅವಸರ ಅನಗತ್ಯ. ರಾಷ್ಟ್ರೀಯ ಭಾಷಾ ನೀತಿಯೂ ಮುಂದೂದು ದಿನ ಪ್ರಾದೇಶಿಕ ಭಾಷಾ ಸಂಪತ್ತಿಗೆ ಹಾನಿ ತರುವ ಸಾಧ್ಯತೆಗಳಿವೆ.
ಮೊಬೈಲ್ ಮತ್ತು ಕಂಪ್ಯೂಟರ್ನಲ್ಲಿ ಸುಲಭವಾಗಿ ಕನ್ನಡ ಟೈಪ್ ಮಾಡುವುದು ಹೇಗೆ?
ಕೆಲವು ವರ್ಷಗಳ ಹಿಂದೆ ಕನ್ನಡದಲ್ಲಿ ಏನು ಗೂಗಲಿಸಿದರೂ ಅದು ಹೋಗುತ್ತಿದ್ದುದು ಕನ್ನಡ ವಿಕಿಪಿಡಿಯಾದ ಪುಟಗಳಿಗೇ. ಹಾಗಂತ ಅಲ್ಲಿ ಇಂದುಕೂಡ ಮಾಹಿತಿಯ ಮಹಾಸಂಗ್ರಹವಿದೆ ಎಂದಲ್ಲ. ಅಂತರಜಾಲಾಡಿಗಳ ಗೂಗಲಾಟಕ್ಕೆ ಸಿಗುವಂತಿದ್ದ ಕನ್ನಡ ಪಠ್ಯ ಕನ್ನಡ ವಿಕಿಪಿಡಿಯಾದಲ್ಲಷ್ಟೇ ಇತ್ತು. ಸದ್ಯ ಹಿಂದಿ, ತಮಿಳು, ತೆಲುಗು, ಮಲೆಯಾಳ, ಮರಾಠಿ ಸೇರಿದಂತೆ ದೇಶದ 21 ಭಾಷೆಗಳಲ್ಲಿ ವಿಕಿಪಿಡಿಯಾ ಲಭ್ಯವಿದೆ. ಆದರೆ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಪ್ರಗತಿ ಉತ್ತಮವಾಗಿಲ್ಲ ಎಂಬುದು ಒಪ್ಪಿಕೊಳ್ಳಬೇಕು.
ಕನ್ನಡ ವಿಕಿಪಿಡಿಯಾ 2003ರ ಜೂನ್ ತಿಂಗಳಲ್ಲಿ ಆರಂಭವಾಯಿತು. ಆದರೆ, ಅಧಿಕೃತವಾಗಿ ಜನರ ಬಳಕೆಗೆ ಮುಕ್ತವಾಗಿದ್ದು 2004ರ ಸೆಪ್ಟೆಂಬರ್‌ನಲ್ಲಿ. ಈಗ ಕನ್ನಡ ವಿಕಿಪಿಡಿಯದ ಒಡಲಲ್ಲಿ ಅನೇಕ ಲೇಖನಗಳಿವೆ. ಆದರೆ, ಈ ಪೈಕಿ ಅನೇಕ ಲೇಖನಗಳು ಗೂಗಲ್ ಟ್ರಾನ್ಸಲೇಟ್ ಮಾದರಿಯಲ್ಲಿದ್ದು, ಓದುಗರಿಗೆ ಪರಿಪೂರ್ಣ ಮಾಹಿತಿ ನೀಡುತ್ತಿಲ್ಲ. ಅದರಲ್ಲಿರುವ ಪದಗಳು, ಸಾಲುಗಳು ಗಟ್ಟಿತನವನ್ನು ಹೊಂದಿಲ್ಲ ಎಂದೇ ಹೇಳಬಹುದು.
ಟೆಕ್ ಲೋಕದಲ್ಲಿ ಕನ್ನಡ ಅಭಿವೃದ್ದಿ ಆಗಬೇಕು ಎಂದು ಇಂದು ಅನೇಕರು ಹೋರಾಡುತ್ತಿದ್ದಾರೆ. ಈ ಪೈಕಿ ಯುಬಿ ಪವನಜ ಕೂಡ ಒಬ್ಬರು. ಇವರು ತೆರೆದ ವಿಶ್ವಕನ್ನಡ.ಕಾಮ್ ವೆಬ್‌ಸೈಟ್ ಕನ್ನಡ ಅಕ್ಷರಗಳನ್ನು ಪ್ರದರ್ಶಿಸಿದ ಮೊದಲ ವೆಬ್‌ಸೈಟ್‌ಗಳಲ್ಲಿ ಒಂದಾಗಿದೆ. ಇದು ಕನ್ನಡದ ಮೊದಲ ಅಂತರ್ಜಾಲ ನಿಯತಕಾಲಿಕವಾಗಿದೆ. ಮತ್ತು ಡೈನಾಮಿಕ್ ಫಾಂಟ್‌ಗಳನ್ನು ಬಳಸಿದ ಭಾರತೀಯ ಭಾಷೆಯ ಮೊದಲ ವೆಬ್‌ಸೈಟ್.
ಇಂದು ನಾವಷ್ಟೇ ಅಲ್ಲ ಕೋಟ್ಯಾಂತರ ಮಂದಿ ಅಂತರ್ಜಾಲದಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇವೆ. ನಮಗೆ ಸ್ಪಷ್ಟವಾದ ಉತ್ತಮ ಮಾಹಿತಿ ಸಿಗಲಿ ಎಂದು ಅನೇಕರು ತೆರೆಹಿಂದೆ ಶ್ರಮಿಸುತ್ತಿದ್ದಾರೆ ಕೂಡ. ಅದರಂತೆ ಕನ್ನಡ ಕಲಿಯುವವರಿಗೆ, ಭಾಷಾಭಿಮಾನಿಗಳಿಗೆ ಹಾಗೂ ಅಗತ್ಯ ಮಾಹಿತಿ ಹುಡುಕುವವರಿಗೆ ಕನ್ನಡ ಸಾಹಿತ್ಯ ಸೃಷ್ಟಿ ಮಾಡಬೇಕು. ಜನರಿಂದ ಜನರಿಗಾಗಿ ಜನರೇ ನಡೆಸುವ ವಿಕಿಪಿಡಿಯಾಕ್ಕೂ ಅಗತ್ಯ ಮಾಹಿತಿಗಳನ್ನು ಅಳವಡಿಕೆ ಮಾಡಬೇಕು. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ, ಸರ್ಕಾರ ಗಮನಹರಿಸಬೇಕಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Tue, 31 October 23