ನವದೆಹಲಿ: ಡಿಜಿಟಲ್ ಮಾಹಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳು ಇನ್ನೇನು ಜಾರಿಗೆ ಬರಲಿವೆ. ಡಿಜಿಟಲ್ ಮಾಹಿತಿಗೆ ನೀತಿ ಸಂಹಿತೆ ಮತ್ತು ಕುಂದುಕೊರತೆ ಪರಿಹಾರಕ್ಕೆ ಮೂರು ಹಂತದ ವ್ಯವಸ್ಥೆಯು ಸೋಷಿಯಲ್ ಮೀಡಿಯಾದ ಅತಿರಥ- ಮಹಾರಥ ಕಂಪೆನಿಗಳಲ್ಲಿ ಬರಲಿದೆ. ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಿಂದ ಈ ಪೈಕಿ ಯಾವುದಕ್ಕಾದರೂ ಬದ್ಧವಾಗಿರಬೇಕು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸುದ್ದಿ ಸೈಟ್ಗಳು ಹಾಗೂ ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಕಳೆದ ಫೆಬ್ರವರಿಯಲ್ಲಿ ನಿಯಮಾವಳಿಗಳನ್ನು ಘೋಷಣೆ ಮಾಡಲಾಯಿತು. ಅವುಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮೂರು ತಿಂಗಳು ಸಮಯ ಕೂಡ ನೀಡಲಾಯಿತು. ಮೂಲಗಳು ಹೇಳುವ ಪ್ರಕಾರ, ಕಂಪೆನಿಗಳೇನಾದರೂ ನಿಯಮಗಳನ್ನು ಅನುಸರಿಸುವುದಕ್ಕೆ ವಿಫಲವಾದಲ್ಲಿ ಅವುಗಳ ಮಧ್ಯವರ್ತಿ (ಇಂಟರ್ಮೀಡಿಯರಿ) ಸ್ಥಾನಮಾನ ಕೊನೆಯಾಗುತ್ತದೆ ಹಾಗೂ ಕಂಪೆನಿಗಳ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬಹುದು.
ಮಧ್ಯವರ್ತಿಗಳಾಗಿ ತಮ್ಮ ವಿವೇಚನೆಯನ್ನು ಬಳಸಿ, ಮಾರ್ಪಾಟು ಮಾಡಿಕೊಳ್ಳುವುದಕ್ಕೆ ಮತ್ತು ಮಾಹಿತಿ ಬಗ್ಗೆ ತೀರ್ಪು ತೆಗೆದುಕೊಳ್ಳುವ ಸಂಗತಿಗೆ ಸಂಬಂಧಿಸಿದಂತೆ ಸುರಕ್ಷತೆಯನ್ನು ಸಮರ್ಥಿಸಿಕೊಂಡರೂ ಭಾರತೀಯ ಸಂವಿಧಾನ ಮತ್ತು ಕಾನೂನು ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ತಂದಿರುವ ಹೊಸ ನಿಯಮದಲ್ಲಿ ಭಾರತ ಮೂಲದ ಅಧಿಕಾರಿಗಳ ನೇಮಕ, ಅವರ ಹೆಸರು ಮತ್ತು ಸಂಪರ್ಕ ವಿಳಾಸ, ದೂರು ವಿಲೇವಾರಿ, ಆಕ್ಷೇಪಾರ್ಹ ಮಾಹಿತಿಯ ನಿಗಾ, ನಿಯಮಾವಳಿಗಳ ವರದಿ ಮತ್ತು ಆಕ್ಷೇಪಾರ್ಹ ಮಾಹಿತಿಯನ್ನು ತೆಗೆದುಹಾಕುವುದು ಇವೆಲ್ಲವೂ ಸೇರಿಕೊಂಡಿದೆ.
ಹೊಸ ಕಾನೂನು ಪ್ರಕಾರ, ಮೇಲುಸ್ತುವಾರಿ ಸಮಿತಿಯಲ್ಲಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರ, ಗೃಹ, ಮಾಹಿತಿ ಮತ್ತು ಪ್ರಸಾರ, ಕಾನೂನು, ಮಾಹಿತಿ ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸದಸ್ಯರಿರುತ್ತಾರೆ. ಯಾವುದಾದರೂ ಕಂಪೆನಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲಿ ಈ ಸಮಿತಿಯು ಸ್ವಯಂಪ್ರೇರಿತವಾಗಿ ದೂರು ತೆಗೆದುಕೊಂಡು, ವಿಚಾರಣೆ ನಡೆಸಬಹುದು. ಸರ್ಕಾರದಿಂದ ಜಂಟಿ ಕಾರ್ಯದರ್ಶಿ ಅಥವಾ ಮೇಲ್ಪಟ್ಟ ದರ್ಜೆಯವರನ್ನು ನೇಮಕ ಮಾಡುತ್ತದೆ. ಅವರಿಗೆ ಮಾಹಿತಿಯನ್ನು ತಡೆಹಿಡಿಯುವ ಅಧಿಕಾರ ಇರುತ್ತದೆ. ಮೇಲ್ಮನವಿ ಸಮಿತಿಗೆ ಯಾವುದೇ ಸೋಷಿಯಲ್ ಮೀಡಿಯಾ ಕಂಪೆನಿಯು ಮಾಹಿತಿ ವಿಚಾರದಲ್ಲಿ ಕಾನೂನು ಮೀರುತ್ತಿರುವುದು ಕಂಡುಬಂದಲ್ಲಿ ಅಂಥದ್ದನ್ನು ತಡೆಹಿಡಿಯುವಂತೆ ಸರ್ಕಾರದ ನಿಯಂತ್ರಣದಲ್ಲಿರುವ ಸಮಿತಿಗೆ ಕೇಳಬಹುದು.
ಫೆಬ್ರವರಿ 25, 2021ರಂದು ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಸಚಿವಾಲಯವು ನಿಯಮಾವಳಿಗಳ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ಈ ನಿಯಮಾವಳಿಗೆ ಬದ್ಧವಾಗುವಂತೆ, ಮೇ 25ನೇ ತಾರೀಕಿಗೆ ಕೊನೆಯಾಗುವಂತೆ ಮೂರು ತಿಂಗಳ ಗಡುವು ಕೂಡ ನೀಡಿತ್ತು. ಈ ತನಕ ಒಂದು ಕಂಪೆನಿಯನ್ನು ಹೊರತುಪಡಿಸಿ, ಉಳಿದ ಯಾವುದೂ ಅಧಿಕಾರಿಗಳನ್ನು ನೇಮಕ ಮಾಡಿಲ್ಲ ಎಂದು ಕಂಪೆನಿ ಹೇಳಿದೆ. ಪ್ಲಾಟ್ಫಾರ್ಮ್ಗಳು ಆರು ತಿಂಗಳ ಗಡುವು ಕೇಳಿವೆ. ಕಂಪೆನಿಯ ಕೇಂದ್ರ ಇರುವ ಅಮೆರಿಕದಿಂದ ಆದೇಶ ಬರುವುದಕ್ಕೆ ಎದುರು ನೋಡುತ್ತಿವೆ. “ಈ ಕಂಪೆನಿಗಳು ಭಾರತದಲ್ಲಿ ಕೆಲಸ ಮಾಡುತ್ತಿವೆ. ಇಲ್ಲೇ ಲಾಭ ಮಾಡುತ್ತಿದ್ದು, ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವುದಕ್ಕೆ ಕೇಂದ್ರ ಕಚೇರಿಯಿಂದ ಹಸಿರು ನಿಶಾನೆ ತೋರಿಸಬೇಕು,” ಎಂದು ಮೂಲಗಳು ಹೇಳಿವೆ. ಟ್ವಿಟ್ಟರ್ನಂಥ ಕಂಪೆನಿಗಳು ತನ್ನದೇ ಫ್ಯಾಕ್ಟ್ ಚೆಕರ್ಗಳನ್ನು ನೇಮಿಸಿಕೊಂಡಿದೆ. ಆದರೆ ಅದರ ಪರೀಕ್ಷೆ ಹೇಗೆ ಮಾಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಜತೆಗೆ ಸಮಸ್ಯೆಯಾದರೆ ಎಲ್ಲಿ ದೂರಬೇಕು ಮತ್ತು ಅದಕ್ಕೆ ಎಲ್ಲಿ ಪರಿಹಾರ ಸಿಗುತ್ತದೆ ಎಂಬುದು ಕೂಡ ಸೋಷಿಯಲ್ ಮೀಡಿಯಾ ಬಳಕೆ ಮಾಡುವವರಿಗೆ ಗೊತ್ತಿಲ್ಲ ಎಂದು ಸೇರಿಸಲಾಗಿದೆ.
(May 25, 2021 deadline to comply with central government new rule regarding OTT platform and digital content. If not followed what will happen?)