ರೈಲು ಟಿಕೆಟ್ ಕನ್ಫರ್ಮ್ ಆಗಿಲ್ಲವೇ? ಈ ಆ್ಯಪ್ನಲ್ಲಿ ಉಚಿತವಾಗಿ ಸಿಗುತ್ತೆ ಫ್ಲೈಟ್ ಟಿಕೆಟ್!
ಟ್ರಿಪ್ ಅಶ್ಯೂರೆನ್ಸ್ ಅಥವಾ ಪ್ರಯಾಣದ ಖಾತರಿ ಎಂಬ ಹೊಸ ಆಯ್ಕೆಯನ್ನು ಟ್ರೈನ್ಮ್ಯಾನ್ ಆ್ಯಪ್ ಗ್ರಾಹಕರಿಗೆ ಒದಗಿಸುತ್ತಿದೆ. ವೈಟಿಂಗ್ಲಿಸ್ಟ್ನಲ್ಲಿರುವ ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ಬಗ್ಗೆ ಈ ಆಯ್ಕೆಯ ಮೂಲಕ ಆ್ಯಪ್ ಖಾತರಿ ನೀಡುತ್ತದೆ.
ರೈಲು ಪ್ರಯಾಣಕ್ಕೆ ಕಾಯ್ದಿರಿಸಿದ ಟಿಕೆಟ್ (Train Ticket) ವೇಟಿಂಗ್ ಲಿಸ್ಟ್ನಲ್ಲಿದ್ದರೆ (Waiting List) ಪ್ರಯಾಣಿಕರಿಗೆ ಆಗುವ ಆತಂಕ ಅಷ್ಟಿಷ್ಟಲ್ಲ. ವಾರಾಂತ್ಯದಲ್ಲಂತೂ ವೇಟಿಂಗ್ ಲಿಸ್ಟ್ನಲ್ಲಿರುವ ಟಿಕೆಟ್ ಕನ್ಫರ್ಮ್ ಆಗುತ್ತದೆ ಎಂಬ ಯಾವ ಖಾತರಿಯೂ ಇರುವುದಿಲ್ಲ. ದೂರ ಪ್ರಯಾಣಕ್ಕೆಂದು ಕಾಯ್ದಿರಿಸಿದ ಟಿಕೆಟ್ ಕೊನೆಯ ಕ್ಷಣದಲ್ಲಿ ರದ್ದಾದರೋ? ಎಲ್ಲ ಲೆಕ್ಕಾಚಾರಗಳು, ಯೋಜನೆಗಳು ತಲೆಕೆಳಗಾಗುತ್ತವೆ. ಕೊನೆಯ ಕ್ಷಣದಲ್ಲಿ ಆಗುವ ಈ ತೊಂದರೆಗೆ ಪರಿಹಾರವಾಗಿ ಉಚಿತವಾಗಿ ವಿಮಾನ ಪ್ರಯಾಣದ ಟಿಕೆಟ್ (Flight Ticket) ನೀಡುತ್ತಿದೆ ಟಿಕೆಟ್ ಬುಕಿಂಗ್ ಆ್ಯಪ್ ಟ್ರೈನ್ಮ್ಯಾನ್ (Trainman). ಈ ಆ್ಯಪ್ನ ಮೂಲಕ ಕಾಯ್ದಿರಿಸಿದ ರೈಲು ಟಿಕೆಟ್ ವೇಟಿಂಗ್ ಲಿಸ್ಟ್ನಲ್ಲಿದ್ದು ಕನ್ಫರ್ಮ್ ಆಗದಿದ್ದರೆ ಅಂಥ ಪ್ರಯಾಣಿಕರು ಉಚಿತವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.
ಟ್ರೈನ್ಮ್ಯಾನ್ ಆ್ಯಪ್ನಿಂದ ಟ್ರಿಪ್ ಅಶ್ಯೂರೆನ್ಸ್
ಟ್ರಿಪ್ ಅಶ್ಯೂರೆನ್ಸ್ ಅಥವಾ ಪ್ರಯಾಣದ ಖಾತರಿ ಎಂಬ ಹೊಸ ಆಯ್ಕೆಯನ್ನು ಟ್ರೈನ್ಮ್ಯಾನ್ ಆ್ಯಪ್ ಗ್ರಾಹಕರಿಗೆ ಒದಗಿಸುತ್ತಿದೆ. ವೈಟಿಂಗ್ಲಿಸ್ಟ್ನಲ್ಲಿರುವ ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ಬಗ್ಗೆ ಈ ಆಯ್ಕೆಯ ಮೂಲಕ ಆ್ಯಪ್ ಖಾತರಿ ನೀಡುತ್ತದೆ. ಕಾಯ್ದಿರಿಸಿದ ಟಿಕೆಟ್ನ ಸ್ಥಿತಿಗತಿ ಏನಿದೆ ಎಂಬುದನ್ನು ಪರಿಶೀಲಿಸುವ ಆಯ್ಕೆಯೂ ಈ ಆ್ಯಪ್ನಲ್ಲಿದೆ. ವೈಟಿಂಗ್ ಲಿಸ್ಟ್ನಲ್ಲಿರುವ ಟಿಕೆಟ್ ಸಿಗುವ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು ತೋರಿಸುವ ‘ಪ್ರೆಡಿಕ್ಷನ್ ಮೀಟರ್’ ಆ್ಯಪ್ನಲ್ಲಿದೆ. ಚಾರ್ಟ್ ಸಿದ್ಧಪಡಿಸಿದ ಬಳಿಕವೂ ಟಿಕೆಟ್ ಕನ್ಫರ್ಮ್ ಆಗಿಲ್ಲವೆಂದಾದರೆ ಆಗ ‘ಟ್ರಿಪ್ ಅಶ್ಯೂರೆನ್ಸ್’ ಆಯ್ಕೆಯು ಪ್ರಯಾಣಿಕರ ನೆರವಿಗೆ ಬರುತ್ತದೆ. ಕೊನೆಯ ಕ್ಷಣದ ಪರ್ಯಾಯ ಪ್ರಯಾಣದ ಆಯ್ಕೆಯನ್ನು ಪ್ರಯಾಣಿಕರಿಗೆ ಅದು ನೀಡುತ್ತದೆ.
ಪ್ರಯಾಣಿಕರ ಟಿಕೆಟ್ ಕನ್ಫರ್ಮ್ ಆಗುವ ಬಗ್ಗೆ ‘ಪ್ರೆಡಿಕ್ಷನ್ ಮೀಟರ್’ ಶೇಕಡಾ 90 ಅಥವಾ ಅದಕ್ಕಿಂತ ಹೆಚ್ಚಿನ ಸಾಧ್ಯತೆ ತೋರಿಸುತ್ತಿದ್ದರೆ ‘ಟ್ರಿಪ್ ಅಶ್ಯೂರೆನ್ಸ್ ಶುಲ್ಕ’ವೆಂದು 1 ರೂಪಾಯಿಯನ್ನು ಪ್ರಯಾಣಿಕರು ಪಾವತಿಸಬೇಕಾಗುತ್ತದೆ. ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆ ಶೇಕಡಾ 90ಕ್ಕಿಂತ ಕಡಿಮೆ ಇದ್ದರೆ ಟಿಕೆಟ್ನ ಶ್ರೇಣಿಗೆ ಅನುಗುಣವಾಗಿ ಸಾಮಾನ್ಯ ಶುಲ್ಕ ಪಾವತಿಸಬೇಕಾಗುತ್ತದೆ. ಚಾರ್ಟ್ ಸಿದ್ಧವಾಗುವ ವೇಳೆಗೆ ಟಿಕೆಟ್ ಕನ್ಫರ್ಮ್ ಆದರೆ ಈ ಶುಲ್ಕ ಪ್ರಯಾಣಿಕರ ಖಾತೆಗೆ ರಿಫಂಡ್ ಆಗುತ್ತದೆ. ಒಂದು ವೇಳೆ ಟಿಕೆಟ್ ಕನ್ಫರ್ಮ್ ಆಗದಿದ್ದರೆ ‘ಟ್ರೈನ್ಮ್ಯಾನ್’ ಉಚಿತವಾಗಿ ವಿಮಾನ ಪ್ರಯಾಣದ ಟಿಕೆಟ್ ನೀಡುತ್ತದೆ.
ಯಾವೆಲ್ಲ ರೈಲುಗಳ ಟಿಕೆಟ್ ಕಾಯ್ದಿರಿಸುವಿಕೆಗೆ ಅನ್ವಯ?
ಸದ್ಯ ರಾಜಧಾನಿ ರೈಲುಗಳು ಮತ್ತು ಇತರ 130 ರೈಲುಗಳ ಟಿಕೆಟ್ ಕಾಯ್ದಿರಿಸುವಿಕೆಗೆ ‘ಟ್ರೈನ್ಮ್ಯಾನ್’ ಉಚಿತ ವಿಮಾನ ಪ್ರಯಾಣದ ಟಿಕೆಟ್ ಆಫರ್ ನೀಡುತ್ತಿದೆ. ಭಾರತೀಯ ರೈಲ್ವೆಯ ಅಧಿಕೃತ ಆ್ಯಪ್ ಐಆರ್ಸಿಟಿಸಿಯಂತೆಯೇ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಯಾಣಿಕರಿಗೆ ಪ್ರಯಾಸರಹಿತ ಪ್ರಯಾಣದ ಅನುಭವವನ್ನು ನೀಡುವುದೇ ಸದ್ಯದ ಗುರಿಯಾಗಿದೆ ಎಂದು ‘ಟ್ರೈನ್ಮ್ಯಾನ್’ ಹೇಳಿದೆ. ‘ಪ್ರೆಡಿಕ್ಷನ್ ಮೀಟರ್’ ಶೇಕಡಾ 94ರಷ್ಟು ನಿಖರ ಮತ್ತು ಕರಾರುವಕ್ಕಾದ ಮಾಹಿತಿ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಇಷ್ಟಾಗಿಯೂ ಟಿಕೆಟ್ ಕನ್ಫರ್ಮ್ ಆಗದಿದ್ದರೆ ‘ಟ್ರಿಪ್ ಅಶ್ಯೂರೆನ್ಸ್’ ಸೇವೆ ಪ್ರಯಾಣಿಕರಿಗೆ ಸದಾ ಸಿದ್ಧವಿದೆ.
ವಿಮಾನ ನಿಲ್ದಾಣ ಇರುವ ನಗರಗಳಿಗೆ ಮಾತ್ರ ಅನ್ವಯ
ವಿಮಾನ ನಿಲ್ದಾಣ ಇರುವ ನಗರಗಳಿಗೆ ಮಾತ್ರ ‘ಟ್ರಿಪ್ ಅಶ್ಯೂರೆನ್ಸ್’ ಸೇವೆಯಡಿ ಉಚಿತ ವಿಮಾನ ಪ್ರಯಾಣದ ಟಿಕೆಟ್ ದೊರೆಯುತ್ತದೆ. ದೇಶದಾದ್ಯಂತ ಇತರ ನಗರಗಳಿಗೆ ಪರ್ಯಾಯ ಪ್ರಯಾಣದ ವ್ಯವಸ್ಥೆ ಒದಗಿಸಲು ಕಂಪನಿ ಪ್ರಯತ್ನಿಸುತ್ತಿದೆ. ಆ ಮೂಲಕ ಪ್ರಯಾಸರಹಿತ ಪ್ರಯಾಣಕ್ಕೆ ಅನುವು ಮಾಡಿಕೊಡಲು ಮುಂದಾಗುತ್ತಿದೆ ಎಂದು ‘ಟ್ರೈನ್ಮ್ಯಾನ್’ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೀತ್ ಚಿರಾನಿಯಾ ತಿಳಿಸಿದ್ದಾರೆ.
Published On - 6:09 pm, Fri, 25 November 22