ವಾಟ್ಸಾಪ್ನಿಂದ ದೆಹಲಿಯಲ್ಲಿ ಭಾರತ ಸರ್ಕಾರದ ವಿರುದ್ಧವೇ ದಾವೆ ಹೂಡಲಾಗಿದೆ. ಬುಧವಾರದಿಂದ ಜಾರಿಗೆ ಬರುವ ತಡೆ ನಿಯಂತ್ರಣದ ವಿರುದ್ಧವಾಗಿ ಕೋರ್ಟ್ ಮೆಟ್ಟಿಲೇರಿದ್ದು, ತಜ್ಞರು ಹೇಳುವಂತೆ, ಕ್ಯಾಲಿಫೋರ್ನಿಯಾ ಮೂಲದ- ಫೇಸ್ಬುಕ್ನ ಘಟಕವಾದ ವಾಟ್ಸಾಪ್ನಿಂದ ಖಾಸಗಿತನ ಸುರಕ್ಷತೆಯನ್ನು ಮುರಿಯಲು ಬಲವಂತ ಮಾಡಲಾಗುತ್ತಿದೆ ಎಂದು ದೂರಿರುವುದಾಗಿ ಮೂಲಗಳು ಹೇಳಿವೆ. ಈ ಕಾನೂನು ದಾವೆ ಕುರಿತು ಯಾರಿಗೆ ಮಾಹಿತಿ ಇದೆಯೋ ಅವರೇ ರಾಯಿಟರ್ಸ್ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ್ದಾರೆ. ಮಾಹಿತಿಯ ಮೂಲವನ್ನು, ಅಂದರೆ ಒಂದು ಮಾಹಿತಿಯು ಎಲ್ಲಿಂದ ಬಂದಿದೆ ಎಂಬುದನ್ನು ತಿಳಿಯಲು ಅಧಿಕಾರಿಗಳು ಬೇಡಿಕೆ ಇಟ್ಟಾಗ ಸೋಷಿಯಲ್ ಮೀಡಿಯಾ ಕಂಪೆನಿಗಳು ಆ ವಿವರ ನೀಡಬೇಕು. ಇದು ಭಾರತೀಯ ಸಂವಿಧಾನ ರೀತಿಯಲ್ಲಿ ಖಾಸಗಿತನ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ವಾದ ಮಂಡಿಸಲಾಗಿದೆ.
ಯಾರು ತಪ್ಪು ಮಾಡಿರುತ್ತಾರೋ ಅಂಥವರ ಮಾಹಿತಿಯನ್ನು ಮಾತ್ರ ಬಹಿರಂಗಪಡಿಸುವುಕ್ಕೆ ಕಾನೂನು ತರಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಒಬ್ಬರಿಗೊಂದು ಮತ್ತೊಬ್ಬರಿಗೆ ಇನ್ನೊಂದು ಇಂಥ ಪದ್ಧತಿ ತರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಸಂದೇಶಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್. ಒಂದು ವೇಳೆ ಭಾರತ ಸರ್ಕಾರದ ಕಾನೂನು ಜಾರಿಗೆ ತರಬೇಕು ಅಂದರೆ ಸಂದೇಶ ಪಡೆದುಕೊಳ್ಳುವವರ ಎನ್ಕ್ರಿಪ್ಷನ್ ಮುರಿಯಬೇಕಾಗುತ್ತದೆ. ಅದೇ ರೀತಿ ಮಾಹಿತಿ ಮೂಲ ತಿಳಿಯುವುದಕ್ಕೂ ಅದೇ ಅನ್ವಯ ಆಗುತ್ತದೆ ಎನ್ನಲಾಗಿದೆ. ಇನ್ನು ಈ ದಾವೆ ವಿಚಾರವಾಗಿ ರಾಯಿಟರ್ಸ್ ಪ್ರತ್ಯೇಕವಾಗಿ ಯಾವುದೇ ದೃಢೀಕರಣ ಮಾಡಿಕೊಂಡಿಲ್ಲ.
ಭಾರತದಲ್ಲಿ ವಾಟ್ಸಾಪ್ಗೆ 40 ಕೋಟಿಯಷ್ಟು ಬಳಕೆದಾರರು
ಭಾರತದಲ್ಲಿ ವಾಟ್ಸಾಪ್ಗೆ 40 ಕೋಟಿಯಷ್ಟು ಬಳಕೆದಾರರಿದ್ದಾರೆ. ಈ ಬಗ್ಗೆ ಕೋರ್ಟ್ನಲ್ಲಿ ಪರಾಮರ್ಶೆ ಆಗಬಹುದು. ಈ ವಿಷಯ ಬಹಳ ಸೂಕ್ಷ್ಮ ಇರುವುದರಿಂದ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಮ್ಮ ಗುರುತನ್ನು ತಿಳಿಸುವುದಕ್ಕೆ ನಿರಾಕರಿಸಿದ್ದಾರೆ. ಅದೇ ರೀತಿ ವಾಟ್ಸಾಪ್ ವಕ್ತಾರರು ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ವಾಟ್ಸಾಪ್ ಕಾನೂನು ಸಮರಕ್ಕೆ ಮುಂದಾಗಿರುವುದೇ ಖಾತ್ರಿಯಾದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮತ್ತು ಫೇಸ್ಬುಕ್, ಗೂಗಲ್, ಟ್ವಿಟ್ಟರ್ನಂಥ ಟೆಕ್ ದೈತ್ಯ ಕಂಪೆನಿಗಳ ಜತೆಗೆ ತಿಕ್ಕಾಟ ಹೆಚ್ಚಾಗುತ್ತದೆ. ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಮತ್ತು ಇತರರ ಪೋಸ್ಟ್ಗೆ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ “ಮ್ಯಾನ್ಯುಪಲೇಟೆಡ್ ಮೀಡಿಯಾ” (ತಿರುಚಲಾದ ಮಾಹಿತಿ) ಎಂಬ ಲೇಬಲ್ ಹಾಕಿತ್ತು. ನಕಲಿ ಮಾಹಿತಿ ಎಂದಿತ್ತು. ಇದಾದ ಮೇಲೆ ಪೊಲೀಸರು ಕಳೆದ ವಾರ ಟ್ವಿಟ್ಟರ್ ಕಚೇರಿಗೆ ಪೊಲೀಸರು ಭೇಟಿ ನೀಡಿದ್ದರು. ಇದರಿಂದ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನ ಆಗಿತ್ತು.
ಫೆಬ್ರವರಿ 25ನೇ ತಾರೀಕಿನಂದು ಹೊಸ ಕಾನೂನಿನ ಘೋಷಣೆ
ಕೋವಿಡ್-19ಗೆ ಸಂಬಂಧಿಸಿದಂತೆ ತಪ್ಪಾದ ಮಾಹಿತಿಗಳಿವು ಎಂದು ಹೇಳಿದ್ದು ಮಾತ್ರವಲ್ಲ, ಅದರ ಜತೆಗೆ ಕೊರೊನಾ ಬಿಕ್ಕಟ್ಟಿಗೆ ಸರ್ಕಾರದ ಸ್ಪಂದನೆ ಹಾಗೂ ಅದರಿಂದ ಸಾವಿರಾರು ಜೀವಗಳು ಹೋದದ್ದರ ಬಗ್ಗೆ ಕೇಳಿಬರುತ್ತಿರುವ ವಿಮರ್ಶೆಯನ್ನು ಸಹ ತೆಗೆಯುವಂತೆ ಕೇಳಲಾಗಿತ್ತು. ಅಂದಹಾಗೆ ಫೆಬ್ರವರಿ 25ನೇ ತಾರೀಕಿನಂದು ಹೊಸ ಕಾನೂನಿನ ಬಗ್ಗೆ ಘೋಷಣೆ ಮಾಡಿ, ಅದರ ಜಾರಿಗಾಗಿ 90 ದಿನಗಳ ಕಾಲಾವಕಾಶ ನೀಡಲಾಗಿತ್ತು. ಭಾರತ ಸರ್ಕಾರದ ಹೊಸ ಕಾನೂನು ಪ್ರಕಾರ, ಒಂದು ವೇಳೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲಿ ಕಾನೂನು ದಾವೆ ಮತ್ತು ಕ್ರಿಮಿನಲ್ ಶಿಕ್ಷೆಯಿಂದ ಇರುವ ರಕ್ಷಣೆಯನ್ನು ಸೋಷಿಯಲ್ ಮೀಡಿಯಾ ಕಂಪೆನಿಗಳು ಕಳೆದುಕೊಳ್ಳುತ್ತವೆ.
ಹೊಸ ಕಾನೂನು ಪ್ರಕಾರ, ಸೋಷಿಯಲ್ ಮೀಡಿಯಾ ಕಂಪೆನಿಗಳು ಭಾರತೀಯ ನಾಗರಿಕರನ್ನು ಈ ನಿಯಮಾವಳಿಗಳ ನಿಗಾ ಮಾಡುವುದಕ್ಕೆ ನೇಮಿಸಬೇಕು. ಕಾನೂನು ಆದೇಶ ಬಂದಲ್ಲಿ 36 ಗಂಟೆಯೊಳಗೆ ಆ ಮಾಹಿತಿಯನ್ನು ತೆಗೆಯಬೇಕು. ಅಶ್ಲೀಲ ಸಂಗತಿಗಳನ್ನು ತಾನಾಗಿಯೇ ತೆಗೆದುಹಾಕುವಂಥ ಆಟೋಮೆಟೆಡ್ ಪ್ರಕ್ರಿಯೆ ಇರಬೇಕು. ಫೇಸ್ಬುಕ್ ಹೇಳುವಂತೆ, ಬಹುತೇಕ ನಿಯಮಗಳನ್ನು ಒಪ್ಪಿಕೊಳ್ಳಲಾಗಿದೆ. ಆದರೆ ಕೆಲವುಗಳ ಬಗ್ಗೆ ಆಕ್ಷೇಪ ಇದೆ. ಇನ್ನು ವಾಟ್ಸಾಪ್ ಮುಂದಿಟ್ಟಿರುವ ವಾದವನ್ನು ಅನೇಕ ತಜ್ಞರು ಬೆಂಬಲಿಸುತ್ತಿದ್ದಾರೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾ, ಒಟಿಟಿಗೆ ಹೊಸ ಕಾನೂನು; ಟ್ವಿಟ್ಟರ್, ಫೇಸ್ಬುಕ್ ಕೆಲಸ ಮಾಡೋದು ನಿಲ್ಲಿಸುತ್ತಾ?
( WhatsApp sues against Indian government regarding privacy policy in Delhi court, according to report)